ಮನುಕುಲಕೆ ಭಾಮಿನಿ ಷಟ್ಪದಿ
ಮಳೆಯು ಸುರಿಯದೆಲೆ
~~~~~~~~~~~~~
ಸರಿವ ಬುದ್ಧಿಯ ಮೆರೆವ ಜನಗಳೆ
ತರಿದು ಮರವನು ಮಾರಿ ಜೀವಿಸೆ
ನರರು ಬದುಕಲು ವಾಯು ಸೇವನೆಗೇನು ಮಾಡುವಿರಿ
ಬರಿದು ಮಾಡುತ ವನವ ಮಾನವ
ಬರಿದೆ ಹೊಗಳುವ ನುಡಿಗೆ ದೇವನು
ಬಿರಿದ ಹೂಗಳ ತೆರದಿ ನಿಮ್ಮನು ತೆಗೆದು ಮಡುಗುವನೆ
ಕಾಣದಾಗಿದೆ ಯಾವ ತಿನಿಸದು
ಕಾನನದೊಳಗ ನೀರು ಮಾಯವೆ
ಬೇನೆ ತುಂಬಿದ ಬಾಳು ನಮ್ಮದು ಬೇಡವಾಗಿಹುದು
ಮಾನವಂತರೆ ನೀವು ಕೇಳಿರಿ
ನಾನುತನವನು ಬಿಟ್ಟು ನಡೆಯುತ
ಕಾನನದಳಿದುಳಿದಿಹ ಜೀವಿಗೆ ರಕ್ಷೆಯಾಗುವಿರೆ
ತಾನು ಒಣಗುತ ಕೆರೆಯು ನಲುಗಿದೆ
ಭಾನು ತಂದಿಹ ಬಿಸಿಲಿನಂದಕ-
ದೇನು ಮಾಡಲು ತಂಪು ಬರುವುದೊ ಕಾಣದಾಗಿಹುದು
ಜೇನು ನೊಣಗಳು ಹಸಿದು ನಿಂತಿವೆ
ತಾನ ಕಾಣದೆ ಹೂವ ಬನದಲಿ
ಬಾನಿನೆಡೆಯಲಿ ಮೋಡ ಕರಗಿಸಿ ಮಳೆಯು ಸುರಿಯದೆಲೆ
ಬಲ್ಲ ದೇವನದೆಲ್ಲಿ ಕುಳಿತಿಹ
ಸಲ್ಲದ ಕೆಲಸ ಮುದದಿ ಮಾಡಿರು-
ವೆಲ್ಲ ಲೋಗರ ಬಿಟ್ಟು ಸುಮ್ಮನೆ ಮೋಡಿ ಮಾಡುವನೆ
ಗಲ್ಲಿ ಗಲ್ಲಿಗೆ ಕುಳಿತ ದೇವರೆ
ನಿಲ್ಲಿ ನಮ್ಮನು ಬದುಕಗೊಳಿಸಲು
ಸಲ್ಲಿಸುತಿರುವ ಹರಕೆ ನಿಮಗದು ಸೇರದಾಗಿದೆಯೆ
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೫/೭/೨೦೧೯
Comments
Post a Comment