ಯೋಧರು ಲಾವಣಿ

ಯೋಧರ ಲಾವಣಿ
~~~~~~~~~~
ಕೇಳಿರಿ ಸೋದರ ಕೇಳಿ ಸೋದರಿ
ಪೇಳುವೆ ಯೋಧರ ಲಾವಣಿಯಾ
ಕೇಳಿಯ ತೋರುತ ದೇಶವ ಕಾಯುತ-
ಲೇಳಿಗೆ ಹೊಂದಿದ ಲಾವಣಿಯಾ

ಭಾರತ ದೇಶವ ಕಾಯುವ ಯೋಧರೆ
ತೋರುವೆ ಗೌರವ ನಿಮಗಿಂದು
ದೂರದ ಗಡಿಯಲಿ ನಿಂತಿಹ ದೇವನೆ
ಯಾರದೆ ಹಂಗದು 

ದೋಷವನೆಣಿಸದೆ ಕರುಣೆಯನೀಯದೆ
ಮಾಸದ ನೆನಪನು ಜೊತೆಗಿರಿಸಿ
ದೇಶದ ಸೇವೆಗಧೀಶನು ನಿಮ್ಮನು
ವೇಷವ ಮರೆಯಿಸಿ ಕಳುಹಿಸಿದ

ಬೇರ್ಗಳ ನೆನಪಿನ ಹಾಡದು ನಿಮ್ಮಯ
ಮಾರ್ಗವ ತೋರುತ ಕೆಣಕುತಿರೆ
ಕಾರ್ಗಿಲ್ ಮೇಲ್ಗಡೆ ನುಸುಳುವ ಚೋರಗೆ
ನೀರ್ಗಲ್ ಮೇಲೆಯೆ ಕಾದಿರುವೆ

ತನುಮನವೆಲ್ಲವನತಿಸುಖ ಬಯಸದೆ
ಘನತರ ಕಾರ್ಯಕೆ ಬಳಸಿದಿರಿ
ಮನೆ ಮಠವೆನ್ನುತ ಸಿರಿತನ ಮೆರೆದಿಹ
ಮನಗಳು ನಿಮಗದು ಸಮವೇನು

ಕೆಡುಕಿನ ಲೋಗರು ದೇಶಕೆ ಮೋಸವ
ನಡುರಾತ್ರಿಯಲೂ ಮಾಡುವರು
ಬಡತನ ಸಿರಿತನವೆನ್ನದೆ ಬದುಕನು
ಕಡುಗಾವಲಿನಲಿ ಕಳೆಯುವಿರಿ

ಇಷ್ಟದ ಕಾಯಕ ಪಡೆದಿಹ ನೀವದು
ದುಷ್ಡರ ಶಿಕ್ಷೆಯ ಮಾಡುವಿರಿ
ಕಷ್ಟದ ಸಮಯದಿ ಭೇಧವ ತೋರದೆ
ಶಿಷ್ಟರ ರಕ್ಷಣೆಗಿಳಿಯುವಿರಿ

ಗಡಿಯಲಿ ಕಾಯುತ ಕುಳಿತಿರೆ ನೀವ್ಗಳು
ದುಡಿಯಲು ನಾವ್ಗಳು ಹೊರಡುವೆವು
ದುಡಿತದ ಫಲವದು ಬೆಳೆವುದು ದೇಶವು
ದುಡಿಮೆಯೆ ದೇವರದೆನ್ನುವೆವು

ಅಮ್ಮನ ಕಣ್ಣಿನ ನೀರಿಗೆ ಹೆದರದೆ
ಬಿಮ್ಮನೆ ಗಡಿಯೆಡೆ ನಡೆಯುವಿರಿ
ನಿಮ್ಮಯ ತ್ಯಾಗಕೆ ಸರಿಸಮವಿರುವುದೆ
ಸುಮ್ಮನೆ ನುಡಿದರೆ ಸಾಲುವುದೆ

ಭೈರವನಾಣೆಗು ತಪ್ಪದೆಯೆಲ್ಲರು
ಗೌರವ ನಿಮಗದು ನೀಡುತಿರೆ
ರೌರವ ನರಕವ ತಪ್ಪಿಸಿ ದೇಶದ
ಗೌರವ ಹೆಚ್ಚಿಸಿ ಬೆಳಗುವಿರಿ

ಪಿ.ಎಸ್.ವೈ.
೨೮/೭/೨೦೧೯


Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು