ಆಟಿ ಲಾವಣಿ

ಆಟಿ ಲಾವಣಿ
~~~~~~~

ಶ್ರಾವಣ ಮಾಸದಿ ಹಬ್ಬದ ಸಡಗರ
ಲಾವಣಿ ಹಾಡಿಗೆ ಸಂತಸವು
ಧಾವಣಿ ಧರಿಸಿಹ ತರುಣಿಯ ಜತೆಯಲಿ
ಛಾವಣಿ ಹಾರಿಸೆ ಹಾಡುವೆವು||ಪಲ್ಲವಿ||

ಆಟಿಯ ಹಬ್ಬವು ಬಂದಿದೆ ನೋಡಿರಿ
ನಾಟಿಯ ಕೆಲಸದ ನಡುವಿನಲಿ
ದಾಟುವ ಮುನ್ನವೆ ಕಕ್ಕಡ ಮಾಸವು
ಲೋಟದಿ ಕುಡಿಯಿರಿ ಪಾಯಸವ||೧||

ಬಡತನವೆಂದಿಗು ಬಾರದು ಧರೆಯೊಳು
ಬೆಡಗನು ಕಾಯುವ ವನದೊಳಗೆ
ಕೊಡಗಿನ ಜನರಿಗೆ ಸಂಸ್ಕೃತಿಯಾಗಿದೆ
ಕೊಡುಗೆಯು ವನದೊಳಗೌಷದಿಗೆ||೨||

ಎಳೆಯೆಳೆ ಮದ್ದಿನ ಸೊಪ್ಪದು ಸೋಂಪಲಿ
ಬೆಳೆದಿದೆ ಕಾಡಿಗೆಯಂದದಲಿ
ಬೆಳೆಸಿಹ ಬೇಲಿಯ ನಡುವೆಯ ಚಿಗುರನು
ಗಳಿಸಿರಿ ಹರುಷದಿ ಗಾಳಿಸುತ||೩||

ಮಧುವನ ಸೊಪ್ಪಿನ ರಸದಲಿ ಬೇಯಿಸಿ
ಮಧುವಿನ ಜೊತೆಯಲಿ ರವೆಯನ್ನ
ಮುದದಲಿ ಬೆಲ್ಲದ ಕಣಕವ ಕಲಕುತ
ಹದದಲಿ ತುಂಬಿಸಿ ಹರಿವಾಣ||೪||

ನಿದಿರೆಯ ಮುಗಿಯಲು ಬೆಳಗಿನ ಜಾವದಿ
ಕುದಿಸಿದ ಹಾಲನು ಸೇರಿಸಿರಿ
ಹದವನು ಮೀರದೆ ಬಗೆಬಗೆ ರುಚಿಯನು
ಕದಡುತ ಸೇವಿಸಿ ಚಪ್ಪರಿಸಿ ||೫||

ವರುಷದಲಿಯೊಮ್ಮೆ ಬರುವುದು ಹಬ್ಬವು
ಹರುಷವ ಬಣ್ಣಿಸೆ ನಮಗೆಂದು
ಕರಗಿದ ಸೌಷ್ಠವ ಮೆರೆಸಲು ಬದುಕಲಿ 
ಮರಳಿಸಿ ತರುವುದು ಮದ್ದುಗುಳಿ||೬||

ಪ.ಶಿ.ವೈ.
೩/೮/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು