ಮಾನವ ಮಿತ್ರ ಜೇನ್ನೊಣಗಳು
ಮಾನವ ಮಿತ್ರ ಜೇನ್ನೊಣಗಳು
~~~~~~~~~~~~~~~~
"ಎಲ್ಲ ಕೆಲಸವನ್ನು ನಾನೊಬ್ಬನೇ ಮಾಡಬಲ್ಲೆ" ಎನ್ನುವ ಮಾತುಗಳು ಅಪ್ಪಟ ಸುಳ್ಳು ಅಲ್ವೇ. ಯಾವುದೇ ಕೆಲಸವನ್ನು ಮಾಡಬೇಕಾದರೂ ಮತ್ತೊಬ್ಬರ ಸಹಾಯ ಬೇಕೇ ಬೇಕು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಜಗತ್ತಿನಲ್ಲಿ ಹಲವಾರು ಪ್ರಕ್ರಿಯೆಗಳು ನಮಗರಿವಿಲ್ಲದೇ ನಡೆಯುತ್ತಿವೆ ಅಷ್ಟೇಕೆ ನಾವು ಕೂಡ ನಮಗರಿವಿಲ್ಲದೇ ಪ್ರಕೃತಿಯ ಉನ್ನತಿಗೆ ಕಾರಣವಾಗಿರುತ್ತೇವೆ. ನಾವು ನಡೆವ ಹಾದಿಯಲ್ಲಿ ನಮ್ಮ ಪಾದದ ಸ್ಪರ್ಶದಿಂದ ಒಂದಷ್ಟು ಸಾವು ಒಂದಷ್ಟು ಹುಟ್ಟಿಗೆ ಕಾರಣವಾಗಬಹುದು ಮತ್ತು ಅದು ನಮ್ಮ ಕಣ್ಣಿಗೆ ಕಾಣದೇ ಇರಬಹುದು. ಅದು ಸೂಕ್ಷಜೀವಿಗಳ ರೂಪಾಂತರ ಇರಬಹುದು ಬಹುಗಾತ್ರ ಜೀವಿಗಳ ಇನ್ನೇನೋ ಆಗಬಹುದು. ಉದಾಹರಣೆಗೆ ನಾವೆಲ್ಲರೂ ಚಪ್ಪರಿಸಿ ತಿನ್ನುವ ಸಿಹಿಯಾದ ಜೇನಿನ ಬಗ್ಗೆ ಆಲೋಚಿಸುವ ಬನ್ನಿ. ನಿಮಗೆ ಗೊತ್ತೇ ಇದೆ ಬಿಡಿ ಜೇನುನೊಣಗಳ ಸಂಘಟನೆಯ ಬಗ್ಗೆ ಅವುಗಳ ಕೆಲಸಕಾರ್ಯಗಳ ಬಗ್ಗೆ ನಾವೆಲ್ಲರೂ ಪ್ರಾಥಮಿಕ ಶಾಲಾ ಶಿಕ್ಷಣದ ಸಮಯದಲ್ಲಿಯೇ ತಿಳಿದುಕೊಂಡಿದ್ದೇವೆ. ಆದರೂ ಮರೆತಿರುವ ಕೆಲವು ವಿಚಾರಗಳನ್ನು ಮತ್ತೆ ಮೆಲುಕು ಹಾಕಿ ಕುಲು ಕುಲು ನಕ್ಕು ಮತ್ತೊಮ್ಮೆ ಜೇನನ್ನು ಚಪ್ಪರಿಸಿಬಿಡುವ ಜೊತೆಗೂಡಿ.ಜೇನುನೊಣಗಳಲ್ಲಿ ಹಲವು ವಿಧಗಳಿವೆ ಹಾಗೆಯೇ ಜೇನಿನ ರುಚಿ ಕೂಡ ಹಲವು ವಿಧಗಳಲ್ಲಿ ಇರುತ್ತವೆ. ಅದರ ಕಾರಣಗಳನ್ನು ಹುಡುಕುವ ಮುನ್ನ.
ಈ ಜಗತ್ತನ್ನು ಸೃಷ್ಟಿಸಿದವರು ಯಾರೇ ಆಗಿರಲಿ ಅದರ ಬಗ್ಗೆ ಜನರು ತಲಾ ನೂರಾರು ಮಾತುಗಳನ್ನು ಆಡುತ್ತಾರೆ ಅದರ ಬಗ್ಗೆ ಚಿಂತನೆ ಮಾಡುವವರು ಮಾಡಲಿ ಬಿಡಿ. ಆದರೆ ಈ ಸೃಷ್ಟಿ ಎಂಬುದು ಬೆಳೆಯಲು ಪ್ರತಿ ಜೀವಿಗಳ ಹಸಿವು ಕಾರಣ ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ ಹಸಿವಿನ ಜೊತೆಗೆ ದಾಹವೂ ಸೇರಿಬಹುದೇನೋ ಅದು ಶಾರೀರಿಕ ದಾಹ ಇರಬಹುದು ಜ್ಞಾನದಾಹ ಇರಬಹುದು ಅಧಿಕಾರ ದಾಹ ಇರಬಹುದು. ಆಧ್ಯಾತ್ಮಿಕ ದಾಹವಿರಬಹುದು ಧನದಾಹವೂ ಇರಬಹುದು. ಈ ಸೃಷ್ಟಿಯ ಮೂಲ ಮಂತ್ರ ಒಂದು ಅಳಿದರೆ ಮೂರು ಬೆಳೆಯುವ ಗುಣ ಅದಕ್ಕೆ ಸೂರ್ಯನ ಬೆಳಕು ಗಾಳಿ ನೀರು ಇವಷ್ಟೇ ಅಗತ್ಯ.
ಬೇಕಿದ್ದರೆ ನಿಮ್ಮ ಮನೆಯ ಅಕ್ಕಪಕ್ಕದ ಒಂದು ಪುಟ್ಟ ಸಸ್ಯದ ಪುಟ್ಟ ರೆಕ್ಕೆಯನ್ನು ನಿಮ್ಮ ಉಗುರಿನಿಂದ ಚಿವುಟಿಬಿಡಿ ನಾಳೆ ಅದೇ ಸಮಯದಲ್ಲಿ ಹೋಗಿ ನೋಡಿ ನೀವು ಚಿವುಟಿದ ಭಾಗ ಬಾಡುತ್ತಿರುತ್ತದೆ. ಆ ಭಾಗವು ಬಾಡಿ ಬೆಂಡಾಗಿ ಬೀಳುವ ಮುನ್ನ ಆ ರೆಕ್ಕೆಯ ಬುಡದಲ್ಲಿ ಕನಿಷ್ಠ ಮೂರು ರೆಕ್ಕೆಗಳು ಟಿಸಿಲೊಡೆದಿರುತ್ತವೆ. ಆದರೆ ಮನುಷ್ಯರು ಎನಿಸಿಕೊಂಡ ನಾವು ನಮ್ಮ ಅತಿಯಾದ ಬಳಸುವ ಹಾಗೂ ಕೂಡಿಡುವ ಗುಣಗಳನ್ನು ರೂಢಿಸಿಕೊಳ್ಳುವ ಜೊತೆಗೆ ಆಧುನಿಕ ಯಂತ್ರೋಪಕರಣಗಳು ನವ ನವೀನ ತಂತ್ರಜ್ಞಾನ ರಾಸಾಯನಿಕಗಳ ಬಳಕೆಯಿಂದ ಪ್ರಕೃತಿಯ ಅನೇಕ ಕ್ರಿಯೆಗಳಿಗೆ ಕಂಟಕಪ್ರಾಯರಾಗಿದ್ದೇವೆ ಎಂದರೆ ಅತಿಶಯೋಕ್ತಿಯಲ್ಲ.
ಕಳೆದ ಎರಡು ಸಂಚಿಕೆಯಲ್ಲಿ ಮರಗಿಡಗಳ ಉಳಿವಿಗಾಗಿ ಅಳಿಲಿನ ವನ್ಯಜೀವಿಗಳ ಪಾತ್ರವನ್ನು ಓದಿದೆವು. ಈಗ ಪ್ರಕೃತಿಯ ರಕ್ಷಣೆಗಾಗಿ ಜೇನುನೊಣಗಳ ಕೊಡುಗೆಯನ್ನು ತಿಳಿಯೋಣ. ಕೂಡಿ ಬಾಳಿದರೆ ಸ್ವರ್ಗವೀ ಧರೆ ಎನ್ನುವ ಮಾತಿನ ಜೊತೆಗೆ ಜೇನುನೊಣಗಳ ಸಂಘಟಿತ ಕೆಲಸಗಳಿಂದ ಮಾನವರು ಕಲಿಯುವುದು ಬಹಳಷ್ಟು ಇದೆ. ಇಂದು ನಾವು ಯಾವುದೇ ಗಿಡಮರಗಳನ್ನು ಬೆಳೆಸಬೇಕಾದರೆ ಬೀಜ ಬಿತ್ತಿ ಬೆಳೆಯುವುದು ಸಹಜ. ಆ ಬೀಜ ನಮಗೆ ದೊರಕುವುದು ಅದೇ ಜಾತಿಯ ಸಸ್ಯಗಳು ಅಥವಾ ಮರಗಳಿಂದ. ಆದರೆ ಬೀಜ ದೊರಕಲು ಮರಗಿಡಗಳು ಬಲಿಯಬೇಕು ಬೆಳೆಯಬೇಕು ಮೊಗ್ಗುಗಳು ಅರಳಿ ದುಂಬಿಗಳು ಅಥವಾ ಜೇನ್ನೊಣಗಳು ಹೂವಿಂದ ಹೂವಿಗೆ ಹಾರಿ ಕುಳಿತು ತಾನರಿಯದೆ ಪರಾಗಸ್ಪರ್ಶ ಮಾಡಬೇಕು. ಇಲ್ಲಿ ದುಂಬಿಗಳು ಅಥವಾ ಜೇನ್ನೊಣಗಳು ಕೇವಲ ಹಸಿವು ತೀರಿಸಿಕೊಳ್ಳುವ ಉದ್ದೇಶದಿಂದ ಹೂವಿನ ಮೇಲೆ ಕುಳಿತು ಹೂವಿನಲ್ಲಿರಬಹುದಾದ ಮಕರಂದವನ್ನು ಹೀರುತ್ತವೆ. ಪ್ರಕೃತಿಯಲ್ಲಿನ ಹೂಗಳು ಕಾಯಿಗಟ್ಟಲು ಪರಾಗಸ್ಪರ್ಶ ಮಾಡುತ್ತಿರುವ ಅರಿವು ಅವುಗಳಗಿಲ್ಲ. ಹಿಂದೆ ಎಲ್ಲೋ ಓದಿದ ನೆನಪನ್ನು ನಿಮ್ಮ ಮುಂದೆ ಬಿಚ್ಚಿಡುವೆ. ಒಬ್ಬರು ಒಂದು ವಿಶೇಷವಾದ ಮರವನ್ನು ದೂರ ದೇಶದಿಂದ ತರಿಸಿ ನೆಡಿಸಿದರು. ಗಿಡ ಬೆಳೆದು ಮರವಾಯ್ತು ಹೂಗಳು ಕೂಡ ಅರಳಿದವು ಆದರೆ ಕಾಯಿಗಟ್ಟುವುದಿಲ್ಲ ಇವರಿಗೆ ತಲೆಬಿಸಿ ಏರಿತು. ಏನೇನು ಮಾಡಿದರೂ ಕಾರಣ ತಿಳಿಯುತ್ತಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಸಸ್ಯಶಾಸ್ತ್ರ ತಜ್ಞರನ್ನು ಭೇಟಿ ಮಾಡಿದರು. ಅವರು ಹೇಳಿದ ವಿಚಾರ ನೋಡಿ ಹೇಗಿದೆ. ಕೇವಲ ಗಂಡಿನಿಂದ ಅಥವಾ ಹೆಣ್ಣಿನಿಂದ ಮರು ಸೃಷ್ಟಿ ಅಸಾಧ್ಯ. ಅದೇ ಜಾತಿಯ ಇನ್ನೊಂದು ಮರವನ್ನು ತಂದು ಅಕ್ಕಪಕ್ಕದಲ್ಲಿ ನೆಡುವವರೆಗೂ ಅದರ ಹೂವಿನ ಪರಾಗಸ್ಪರ್ಶ ನಡೆವವರೆಗೂ ಈಗಿರುವ ಮರವು ಹಣ್ಣು ಬಿಡುವುದು ಅಸಾಧ್ಯ ಎಂದರು.
"ಕಲ್ಲಿನಲಿ ಜನಿಸಿದ ಕಪ್ಪೆಗಲ್ಲೇ ಆಹಾರವನು ಇಟ್ಟವನಾರು " ಎನ್ನುವ ದಾಸರ ಪದವನ್ನು ನೆನಪಿಸಿಕೊಳ್ಳುವ ಎಂತಹ ವಿಚಿತ್ರ ಅಲ್ಲವೇ
ಈ ಪ್ರಕೃತಿ. ಕಲ್ಲು ಬಂಡೆಗಳ ಸಂಧಿಯಲ್ಲಿ ಮಳೆಬಂದಾಗ ನಿಂತ ನೀರಿನಲ್ಲಿ ಕ್ರಿಮಿಕೀಟಗಳು ಜನಿಸಿ ಕಪ್ಪೆಗೆ ನೀರು ಆಹಾರವನ್ನು ಒದಗಿಸುತ್ತವೆ ಅಲ್ಲಿ ಎಲ್ಲಿಯೋ ವಾಸಿಸುವ ಹಾವಿಗೆ ಕಪ್ಪೆ ಆಹಾರವಾಗುತ್ತದೆ. ಬೆಟ್ಟದ ಮೇಲಿರುವ ಹದ್ದಿಗೆ ಹಾವು ಆಹಾರವಾಗುತ್ತದೆ. ಇದರ ಬಗ್ಗೆ ಇನ್ನೊಮ್ಮೆ ಬರೆಯುವೆ. ಆದರೆ ಇದೇ ರೀತಿಯಲ್ಲಿ ಸಸ್ಯಗಳ ಪ್ರಕಾರಗಳಿಗೆ ತಕ್ಕಂತೆ ಜೇನ್ನೊಣಗಳು ಸರ್ವಕಾಲಿಕವಾಗಿ ಮತ್ತು ಬೆಳೆಗಳ ಅಗತ್ಯಕ್ಕೆ ಅನುಗುಣವಾಗಿ ದುಂಬಿಗಳು ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಪ್ರಭೇದಗಳ ಸೃಷ್ಟಿಯಾಗಿದೆ ಎನ್ನಬಹುದು. ಉದಾಹರಣೆಗೆ ಮೂಲೆಜೇನು, ಸಾದಾರಣ ಜೇನು, ಹೆಜ್ಜೇನು ಇವೆಲ್ಲವೂ ವಾಸಿಸುವುದು ಕೂಡ ತಮ್ಮ ಆಹಾರದ ಹುಡುಕಾಟಕ್ಕೆ ಅನುಕೂಲವಾಗುವಂತಹ ಸ್ಥಳಗಳಲ್ಲಿ ಎಂಬುದು ನಾವು ನೀವೆಲ್ಲರು ಕಂಡುಕೊಂಡ ಸತ್ಯ ಅಲ್ವೇ. ಚಿಕ್ಕ ಪುಟ್ಟ ಸಸ್ಯಗಳ ಮಕರಂದ ಹೀರಿ ತಯಾರಿಸಿದ ಜೇನಿನ ರುಚಿಗೂ ದೊಡ್ಡ ದೊಡ್ಡ ಮರಗಿಡಗಳ ಹೂವಿನ ಮಕರಂದವನ್ನು ಕಲೆಹಾಕಿ ತಯಾರಾದ ಜೇನಿನ ರುಚಿಗೂ ವ್ಯತ್ಯಾಸ ಇರಲೇಬೇಕಲ್ಲವೆ.
ಆದರೆ ಈಗ ನಾವು ನಮ್ಮ ಸ್ವಾರ್ಥಕ್ಕಾಗಿ ಈ ಜಗತ್ತಿನ ಎಲ್ಲವನ್ನೂ ಪಡೆಯುವ ಕಾತರದಲ್ಲಿ ಜಗದ ಜೀವಜಾಲಗಳಿಗೆ ವಿಷವಿಕ್ಕುತ್ತಿದ್ದೇವೆ. ಮೊದಲೇ ತಿಳಿಸಿದಂತೆ ಈ ಜಗದ ಎಲ್ಲವೂ ನಮ್ಮ ಸೊತ್ತಲ್ಲ ಬೇಕಾದರೆ ನಾವು ಒಬ್ಬ ಮೀನು ಹಿಡಿಯುವ ಬೆಸ್ತನನ್ನು ಕೇಳುವ ಬಲೆಗೆ ಬಿದ್ದ ಎಲ್ಲ ಮೀನುಗಳನ್ನು ಆತನ ಕೈಗೆ ಸಿಗಲಾರವು ಕನಿಷ್ಠ ಒಂದಾದರೂ ತಪ್ಪಿಸಿಕೊಂಡು ಹೋಗುತ್ತದೆ. ಅಥವಾ ಆತ ಕೂಡ ಹಿಡಿದ ಎಲ್ಲ ಮೀನುಗಳ ಪೈಕಿ ಒಂದು ಮೀನನ್ನಾದರೂ ತನ್ನ ಕೈ ತಪ್ಪಿಯೋ ಅಥವಾ ಉದ್ದೇಶ ಪೂರ್ವಕವಾಗಿಯೋ ಮತ್ತೆ ಕಡಲಿಗೆ ಬಿಡುತ್ತಾನೆ. ಇಂದು ನಾವು ಪ್ರಕೃತಿಯ ಸಹಾಯದಿಂದ ಬೆಳೆಯುವ ಎಲ್ಲ ಬೆಳೆಗಳನ್ನು ಒಂದಗುಳು ಬಿಡದಂತೆ ನಾವೇ ಉಪಯೋಗಿಸಲು ಅಸಾಧ್ಯ ಏಕೆಂದರೆ ಪ್ರಕೃತಿ ನಿಯಮವೇ ಹಾಗೆ. ನಾವು ಅಂದುಕೊಳ್ಳುತ್ತೇವೆ ನಮ್ಮಪ್ಪನ ಅಜ್ಜನ ಆಸ್ತಿ ನಾನು ಬೇಲಿ ಹಾಕಿದೆ ನಾವು ಗಿಡ ನೆಟ್ಟೆವು ಗೊಬ್ಬರ ಹಾಕಿದೆವು ಫಸಲು ಬರುವ ಕಾಲದಲ್ಲಿ ಇವುಗಳ ಕಾಟವೆಂದು ಎಲ್ಲ ಜೀವಿಗಳನ್ನು ವಿಷವಿಕ್ಕಿ ಕೊಲ್ಲುತ್ತಿದ್ದೇವೆ ಆ ನಿಟ್ಟಿನಲ್ಲಿ ನಮ್ಮ ಸರ್ವನಾಶಕ್ಕೆ ನಾವೇ ನಾಂದಿ ಹಾಡಿಕೊಳ್ಳುತ್ತಿದ್ದೇವೆ. ನಾವು ನೀವೆಲ್ಲರು ಕೇವಲ ಎಂದುಕೊಳ್ಳಬಹುದಾದ ದುಂಬಿಗಳು ಜೇನ್ನೊಣಗಳು ಇಲ್ಲದೇ ಹೋದರೆ ಪರಾಗಸ್ಪರ್ಶ ನಡೆಯದೇ ಹೋದರೆ ಇಲ್ಯಾವ ಹೂಗಳು ಹಣ್ಣಾಗಲಾರವು. ಹೂಗಳು ಹಣ್ಣಾಗದಿದ್ದರೆ ಯಾವ ಆಹಾರಗಳು ನಮಗೆ ದೊರಕಲಾರದು.
ಆದ್ದರಿಂದ ಸ್ನೇಹಿತರೇ ತಮ್ಮೆಲ್ಲರಲ್ಲಿ ಒಂದು ಮನವಿ ಈ ಪ್ರಕೃತಿಯ ಮಡಿಲಲ್ಲಿ ಇರುವ ಎಲ್ಲ ರೀತಿಯ ಜೀವಿಗಳು ಸರ್ವ ಸ್ವತಂತ್ರವಾಗಿ ಬದುಕುವ ಅರ್ಹತೆ ಹೊಂದಿವೆ. ಮತ್ತು ಅವುಗಳ ಬದುಕು ಒಂದಲ್ಲಾ ಒಂದು ರೀತಿಯಲ್ಲಿ ಇನ್ನೊಂದು ಜೀವಿಗಳ ಜೀವನಕ್ಕೆ ಪೂರಕವಾಗಿ ಇರುತ್ತದೆ. ಈಗಾಗಲೇ ನಾವುಗಳು ಬಳಸಿಕೊಂಡು ಬಂದಿರುವ ವಿಷ ಪದಾರ್ಥಗಳಿಂದ ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಜೀವಿಗಳು ಕಣ್ಮರೆಯಾಗಿವೆ. ಆದ ಕಾರಣ ಇನ್ನಾದರೂ ಪ್ರಕೃತಿಯ ಯಾವುದೇ ಜೀವಿಗಳ ಮೇಲೆ ವಿಷ ಪ್ರಯೋಗ ಮಾಡದೆ ಎಲ್ಲ ಜೀವಿಗಳು ನಮ್ಮಂತೆ ಎಂದು ಹೊಂದಿಕೊಳ್ಳುವ ಗುಣ ಬೆಳಸಿಕೊಳ್ಳುವ ಎನ್ನುವೆ.
ತಮ್ಮವ
ಪಿ.ಎಸ್.ವೈಲೇಶ ಕೊಡಗು
೧೩/೧೦/೨೦೧೯
Comments
Post a Comment