ಮುಕ್ತಕ ಕುಸುಮ ಮಾಲೆ ೨


ಮುಕ್ತಕ ಕುಸುಮ ೫೧

ಹದವರಿತ ಮಾತುಗಳು ಮುದವನ್ನು ನೀಡುವವು
ಮದದಿಂದ ನುಡಿಯುತಿರೆ ತಿರುವು ಮುರುವು|
ಮೃದುವಾಗಿ ನುಡಿದಿರಲು ವದೆಗೆಂದು ನಿಂದವರ
ಗದೆಯದುವೆ ಬಾಗುವುದು ಬೊಮ್ಮಲಿಂಗ||

ಹದವರಿತ ಮಾತುಗಳು
ಮುದವನ್ನು ನೀಡುವವು
ಮದದಿಂದ ನುಡಿಯುತಿರೆ ತಿರುವು ಮುರುವು|
ಮೃದುವಾಗಿ ನುಡಿದಿರಲು
ವದೆಗೆಂದು ನಿಂದವರ
ಗದೆಯದುವೆ ಬಾಗುವುದು ಬೊಮ್ಮಲಿಂಗ||

ಮುಕ್ತಕ ಕುಸುಮ ೫೨

ಕಿಸಿಯಲಾಗದಿರೇನು ಕಸಿವುದಕೆ ಕೊನೆಯಿರದೆ
ಹುಸಿಯ ನಡೆಯಲಿ ನಾವು ಬದುಕಲೇಕೆ
ಹಸಿಹಸಿಯ ಸುಳ್ಳುಗಳ ಮಸಿಯಂತೆ ಬಳಿಯುತಲಿ
ಕುಸಿವಂತೆ ಮಾಡುವರು ಬೊಮ್ಮಲಿಂಗ

ಕಿಸಿಯಲಾಗದಿರೇನು
ಕಸಿವುದಕೆ ಕೊನೆಯಿರದೆ
ಹುಸಿಯ ನಡೆಯಲಿ ನಾವು ಬದುಕಲೇಕೆ
ಹಸಿಹಸಿಯ ಸುಳ್ಳುಗಳ
ಮಸಿಯಂತೆ ಬಳಿಯುತಲಿ
ಕುಸಿವಂತೆ ಮಾಡುವರು ಬೊಮ್ಮಲಿಂಗ

ಮುಕ್ತಕ ಕುಸುಮ ೫೩

ಚಾಡಿ ನುಡಿಯದು ಕಿವಿಗೆ ಮೋಡಿಯನು ಮಾಡುತಲಿ
ರಾಡಿಯನು ಹೆಚ್ಚಿಸಿತು ನಮಗರಿಯದೆ
ಕೋಡುಗಳ ಬಯಸಿರುವ ಹೇಡಿಗಳು ಹೂಡಿರುವ
ವಾಡಿಕೆಯ ನುಡಿಗಳಿವು ಬೊಮ್ಮಲಿಂಗ

ಚಾಡಿ ನುಡಿಯದು ಕಿವಿಗೆ
ಮೋಡಿಯನು ಮಾಡುತಲಿ
ರಾಡಿಯನು ಹೆಚ್ಚಿಸಿತು ನಮಗರಿಯದೆ
ಕೋಡುಗಳ ಬಯಸಿರುವ
ಹೇಡಿಗಳು ಹೂಡಿರುವ
ವಾಡಿಕೆಯ ನುಡಿಗಳಿವು ಬೊಮ್ಮಲಿಂಗ

ಮುಕ್ತಕ ಕುಸುಮ ೫೪

ಬರೆದಿಹೆನು ನಾನೆನುತ ಹರೆಯವನು ಕಳೆಯದಿರು
ಹೆರವರದು ಹೊಗಳುತಿರೆ ಭಾರ ನಿನಗೆ
ಬರಿದೆ ನೀ ನುಡಿಯುತಿರೆ ಬರೆಗಳನ್ನೆಳಯುತಲಿ
ಸರಸತಿಯು ದೂಡುವಳು ಬೊಮ್ಮಲಿಂಗ

ಬರೆದಿಹೆನು ನಾನೆನುತ
ಹರೆಯವನು ಕಳೆಯದಿರು
ಹೆರವರದು ಹೊಗಳುತಿರೆ ಭಾರ ನಿನಗೆ
ಬರಿದೆ ನೀ ನುಡಿಯುತಿರೆ
ಬರೆನಳನ್ನೆಳಯುತಲಿ
ಸರಸತಿಯು ದೂಡುವಳು ಬೊಮ್ಮಲಿಂಗ

ಮುಕ್ತಕ ಕುಸುಮ ೫೫

ಯಾರಿತ್ತರೀ ನಭಕೆ ತಾರೆಗಳ ತೋಟವನು
ಮಾರು ಹೋಗಿದೆ ಜಗವು ಸೊಬಗ ಪರಿಗೆ
ಭಾರಿ ಚೆಲುವಿನ ಬಾನ ದಾರಿಯಲಿ ಸೂರಿಯನ
ಮೋರೆ ಬೆಳಗಿದ ಫಲವು ಬೊಮ್ಮಲಿಂಗ

ಯಾರಿತ್ತರೀ ನಭಕೆ
ತಾರೆಗಳ ತೋಟವನು
ಮಾರು ಹೋಗಿದೆ ಜಗವು ಸೊಬಗ ಪರಿಗೆ
ಭಾರಿ ಚೆಲುವಿನ ಬಾನ
ದಾರಿಯಲಿ ಸೂರಿಯನ
ಮೋರೆ ಬೆಳಗಿದ ಫಲವು ಬೊಮ್ಮಲಿಂಗ

ಮುಕ್ತಕ ಕುಸುಮ ೫೬

ಬಾನಿನಂಗಳದಲ್ಲಿ ಯಾನದಿಹ ಮೋಡಗಳು
ಗಾನವಂ ಪಾಡುತಿವೆ ನೀವು ಕೇಳಿ
ತಾನನದಿ ತಾ ಗುಡುಗಿ ಹಾನಿಯನು ತಾರದಿರೆ
ಮಾನವನು ಸುಖಿಯಿಲ್ಲಿ ಬೊಮ್ಮಲಿಂಗ

ಬಾನಿನಂಗಳದಲ್ಲಿ
ಯಾನದಿಹ ಮೋಡಗಳು
ಗಾನವಂ ಪಾಡುತಿವೆ ನೀವು ಕೇಳಿ
ತಾನನದಿ ಗುಡುಗುತಲಿ
ಹಾನಿಯನು ತಾರದಿರೆ
ಮಾನವನು ಸುಖಿಯಿಲ್ಲಿ ಬೊಮ್ಮಲಿಂಗ

ಮುಕ್ತಕ ಕುಸುಮ ೫೭

ಅದಟುತನಕೆದುರಾಗಿ ಮೆದುತನವು ನಡೆಯುವುದೆ
ಹದವಿರುವ ಮಾತಿನಲಿ ನಡೆಯದೇನು
ಭೋದನೆಯ ಬದಿಗಿರಿಸಿ ಭೇಧವನು ತೋರದೆಲೆ
ನಾದಿದೊಡೆ ಸಮವೆನುವ ಬೊಮ್ಮಲಿಂಗ

ಅದಟುತನಕೆದುರಾಗಿ
ಮೆದುತನವು ನಡೆಯುವುದೆ
ಹದವಿರುವ ಮಾತಿನಲಿ ನಡೆಯದೇನು
ಬದಿಗಿರಿಸಿ ಬೋಧನೆಯ
ಭೇಧವನು ತೋರದೆಲೆ
ನಾದಿದೊಡೆ ಸಮವೆನುವ ಬೊಮ್ಮಲಿಂಗ

ಮುಕ್ತಕ ಕುಸುಮ ೫೮

ಅತಿಶಯದ ಮಾತಲ್ಲ ಕಥೆಗಳಲಿ ನುಡಿದಿಲ್ಲ
ಸತಿಯ ಮಾತನು ಕೇಳೆ ಬಾಳು ಹೊನ್ನು
ಪತಿಯ ಮನದಿಂಗಿತವ ಸತಿಸುತರು ತಿಳಿದಿರಲು
ರಥವೆಂಬ ಜೀವನವು ಬೊಮ್ಮಲಿಂಗ

ಅತಿಶಯದ ಮಾತಲ್ಲ
ಕಥೆಗಳಲಿ ನುಡಿದಿಲ್ಲ
ಸತಿಯ ಮಾತನು ಕೇಳೆ ಬಾಳು ಹೊನ್ನು
ಪತಿಯ ಮನದಿಂಗಿತವ
ಸತಿಸುತರು ತಿಳಿದಿರಲು
ರಥವೆಂಬ ಜೀವನವು ಬೊಮ್ಮಲಿಂಗ

ಮುಕ್ತಕ ಕುಸುಮ ೫೯

ಲಕ್ಷಿಸುತ ಬಾರಮ್ಮ ಲಕ್ಷ್ಯವನು ತಾರಮ್ಮ
ರಕ್ಷಿಸುತ ಬಡತನವ ನೀಗಿಸಮ್ಮ
ಲಕ್ಷ್ಯ ಕೋಟಿಯದಲ್ಲ ಬಿಕ್ಷೆ ಬೇಡುವುದಿಲ್ಲ
ರಕ್ಷಿಪಳು ನೀನೆಂಬ ಬೊಮ್ಮಲಿಂಗ

ಲಕ್ಷಿಸುತ ಬಾರಮ್ಮ
ಲಕ್ಷ್ಯವನು ತಾರಮ್ಮ
ರಕ್ಷಿಸುತ ಬಡತನವ ನೀಗಿಸಮ್ಮ
ಲಕ್ಷ್ಯ ಕೋಟಿಯದಲ್ಲ
ಬಿಕ್ಷೆ ಬೇಡುವುದಿಲ್ಲ
ರಕ್ಷಿಪಳು ನೀನೆಂಬ ಬೊಮ್ಮಲಿಂಗ

ಮುಕ್ತಕ ಕುಸುಮ ೬೦

ನಾನೆಂದು ನುಡಿಯುತಲಿ ನೀನೆಂದು ನುಡಿಯದೆಲೆ
ಕಾನನಕೆ ನಡೆದಿಹರು ನೀವು ಕಾಣಿ
ಬಾನಿನಲಿ ಸದ್ದಿರದೆ ಭಾನುವವ ಜೀವಿಗಳ
ಬೋನಕ್ಕೆ ಬೆಳಕೀವ ಬೊಮ್ಮಲಿಂಗ

ನಾನೆಂದು ನುಡಿಯುತಲಿ
ನೀನೆಂದು ನುಡಿಯದೆಲೆ
ಕಾನನಕೆ ನಡೆದಿಹರು ನೀವು ಕಾಣಿ
ಬಾನಿನಲಿ ಸದ್ದಿರದೆ
ಭಾನುವವ ಜೀವಿಗಳ
ಬೋನಕ್ಕೆ ಬೆಳಕೀವ ಬೊಮ್ಮಲಿಂಗ

ಮುಕ್ತಕ ಕುಸುಮ ೬೧

ಮಳೆಗಾಲ ಬಂದಾಗ ಕಳೆಯೆಲ್ಲ ಜತೆಗೂಡಿ
ಹೊಳೆಯಂತೆ ಗುಡಿಸಲದು ಕೊಚ್ಚಿಹೋಯ್ತು
ಬಳಿಬರದ ನೀವುಗಳು ಕಳೇಬರ ತರಹದವ-
ಗೊಳಿತು ಮಾಡುವಿರೇನು ಬೊಮ್ಮಲಿಂಗ

ಮಳೆಗಾಲ ಬಂದಾಗ
ಕಳೆಯೆಲ್ಲ ಜತೆಗೂಡಿ
ಹೊಳೆಯಂತೆ ಗುಡಿಸಲದು ಕೊಚ್ಚಿಹೋಯ್ತು
ಬಳಿಬರದ ನೀವುಗಳು
ಕಳೇಬರ ತರಹದವ
ಗೊಳಿತು ಮಾಡುವಿರೇನು ಬೊಮ್ಮಲಿಂಗ

ಮುಕ್ತಕ ಕುಸುಮ ೬೨

ಅಪ್ಪನನು ಮರೆಯದಿರಿ ತಪ್ಪುಗಳ ನೆನೆಯದಿರಿ
ತುಪ್ಪ ತಿನಿಸುವ ನಿಮಗೆ ಮರೆಯಬೇಡಿ
ಒಪ್ಪದೋರಣವ ಮಿಗೆ ತಪ್ಪದೇ ತರಲೆಂದು
ಸಪ್ಪಗಿರದೆ ದುಡಿದಿಹನು ಬೊಮ್ಮಲಿಂಗ

ಅಪ್ಪನನು ಮರೆಯದಿರಿ
ತಪ್ಪುಗಳ ನೆನೆಯದಿರಿ
ತುಪ್ಪ ತಿನಿಸುವ ನಿಮಗೆ ಮರೆಯಬೇಡಿ
ಒಪ್ಪದೋರಣವ ಮಿಗೆ
ತಪ್ಪದೇ ತರಲೆಂದು
ಸಪ್ಪಗಿರದೆ ದುಡಿದಿಹನು ಬೊಮ್ಮಲಿಂಗ

ಮುಕ್ತಕ ಕುಸುಮ ೬೩

ಅಪ್ಪನೇ ಮೊದಲಾಗಿ ತೆಪ್ಪವನು ನಡೆಸುತಿರೆ
ತಪ್ಪಿಸದೆ ತುತ್ತನಿಡುತಿರುವಳಮ್ಮ
ಒಪ್ಪುವುದು ಜಗವಿಂದು ಮುಪ್ಪುದುವೆ ಬರಲೇನು
ತಪ್ಪದೆಲೆ ಕಾಯುವನು ಬೊಮ್ಮಲಿಂಗ

ಅಪ್ಪನೇ ಮೊದಲಾಗಿ
ತೆಪ್ಪವನು ನಡೆಸುತಿರೆ
ತಪ್ಪಿಸದೆ ತುತ್ತನಿಡುತಿರುವಳಮ್ಮ
ಒಪ್ಪುವುದು ಜಗವಿಂದು
ಮುಪ್ಪುದುವೆ ಬರಲೇನು
ತಪ್ಪದೆಲೆ ಕಾಯುವನು ಬೊಮ್ಮಲಿಂಗ

ಮುಕ್ತಕ ಕುಸುಮ ೬೪

ದಾರದೊಳು ತಾಳಿಯನು ತೂರಿಸುತ ವಧುವಿವಳು
ಭಾರವೆಂದು ತಾಳದಲೆ ಕಟ್ಟಿಸಿದರು
ಹಾರಹಾಕಿಸಿ ಬೇಗ ಹಾರೆಂದು ಸಾಗರಕೆ
ದಾರೆಯೆರೆದರು ಕಾಣಿ ಬೊಮ್ಮಲಿಂಗ

ದಾರದೊಳು ತಾಳಿಯನು
ತೂರಿಸುತ ವಧುವಿವಳು
ಭಾರವೆಂದು ತಾಳದಲೆ ಕಟ್ಟಿಸಿದರು
ಹಾರಹಾಕಿಸಿ ಬೇಗ
ಹಾರೆಂದು ಸಾಗರಕೆ
ದಾರೆಯೆರೆದರು ಕಾಣಿ ಬೊಮ್ಮಲಿಂಗ

ಮುಕ್ತಕ ಕುಸುಮ ೬೫

ಪರರಾಸ್ತಿ ನಮದೆನದೆ  ಪರಸತಿಯ ತಾಯೆಂದು
ಪರಿಗಣಿಸಿ ನಡೆಯುತಿರೆ ನಾಕಬದುಕು
ಹರನವನು ಬಲವೀಯೆ ಪರಿಪರಿಯ ವಿಧದಲ್ಲಿ
ಪರೀಕ್ಷೆಯ ಮಾಡುವನು ಬೊಮ್ಮಲಿಂಗ

ಪರರಾಸ್ತಿ ನಮದೆನದೆ 
ಪರಸತಿಯ ತಾಯೆಂದು
ಪರಿಗಣಿಸಿ ನಡೆಯುತಿರೆ ನಾಕಬದುಕು
ಹರನವನು ಬಲವೀಯೆ
ಪರಿಪರಿಯ ವಿಧದಲ್ಲಿ
ಪರೀಕ್ಷೆಯ ಮಾಡುವನು ಬೊಮ್ಮಲಿಂಗ

ಮುಕ್ತಕ ಕುಸುಮ ೬೬

ಹರಸತಿಯೆ ಪಾರ್ವತಿಯೆ ಹರಸುತಿರು ದಿನದಿನವು
ಹರಕೆಯನು ಹೊತ್ತಿಹೆವು ಹರನಬೇಡಿ
ಅರಸುತನ ಬೇಕಿಲ್ಲ ಸರಸದಲಿ ದಿನವೆಲ್ಲ
ಧರಣಿಯಲಿ ಬದುಕಿಸಲಿ ಬೊಮ್ಮಲಿಂಗ

ಹರಸತಿಯೆ ಪಾರ್ವತಿಯೆ
ಹರಸುತಿರು ದಿನದಿನವು
ಹರಕೆಯನು ಹೊತ್ತಿಹೆವು ಹರನಬೇಡಿ
ಅರಸುತನ ಬೇಕಿಲ್ಲ
ಸರಸದಲಿ ದಿನವೆಲ್ಲ
ಧರಣಿಯಲಿ ಬದುಕಿಸಲಿ ಬೊಮ್ಮಲಿಂಗ

ಮುಕ್ತಕ ಕುಸುಮ ೬೭

ಪರನಾರಿ ದೇನಿಸುತ ನರಿಮತಿಯ ಸಾಧಿಸುತ
ಮಿರಮಿರನೆ ಮಿಂಚುವುದು ತರವೆ ನಿನಗೆ
ಪರಿಚಯವು ಬೇಕಿಲ್ಲಪರಸತಿಯ ಸೋದರತೆ
ಪರಧರ್ಮವದುಕೇಳು ಬೊಮ್ಮಲಿಂಗ

ಪರನಾರಿ ದೇನಿಸುತ
ನರಿಮತಿಯ ಸಾಧಿಸುತ
ಮಿರಮಿರನೆ ಮಿಂಚುವುದು ತರವೆ ನಿನಗೆ
ಪರಿಚಯವು ಬೇಕಿಲ್ಲ
ಪರಸತಿಯ ಸೋದರತೆ
ಪರಧರ್ಮವದುಕೇಳು ಬೊಮ್ಮಲಿಂಗ

ಮುಕ್ತಕ ಕುಸುಮ೬೮

ನಾರಿ ನೀ ಕೇಳಮ್ಮ ದಾರಿ ನಾ ಪೇಳುವೆನು
ಮೀರಿ ನಡೆಯದೆ ತಾಳಿ ಬಾಳಬೇಕು
ಮಾರಿ ನೀನಾಗಿ ಮನೆ ಬೇರೆ ಮಾಡದೆ ತುಡುಗು
ಹೋರಿಯನು ಮೇಯಿಸುತ ಬೊಮ್ಮಲಿಂಗ

ನಾರಿ ನೀ ಕೇಳಮ್ಮ
ದಾರಿ ನಾ ಪೇಳುವೆನು
ಮೀರಿ ನಡೆಯದೆ ತಾಳಿ ಬಾಳಬೇಕು
ಮಾರಿ ನೀನಾಗಿ ಮನೆ
ಬೇರೆ ಮಾಡದೆ ತುಡುಗು
ಹೋರಿಯನು ಮೇಯಿಸುತ ಬೊಮ್ಮಲಿಂಗ

ಮುಕ್ತಕ ಕುಸುಮ ೬೯

ನಮ್ಮವರು ಶೋಭಕ್ಕ ಹೆಮ್ಮೆಯಿಂ ಬರೆದಿಹರು
ಘಮ್ಮೆಂದು ಪಸರಿಸುವ ರಾಮಗೀತೆ||
ಒಮ್ಮನದಿ ನಮ್ಮೊಳಗೆ ಹೊಮ್ಮುತಿರೆ ಬಾವಗಳು
ಚಿಮ್ಮುತಲಿಯೋದಿದೆವು ಬೊಮ್ಮಲಿಂಗ||

ನಮ್ಮವರು ಶೋಭಕ್ಕ
ಹೆಮ್ಮೆಯಿಂ ಬರೆದಿಹರು
ಘಮ್ಮೆಂದು ಪಸರಿಸುವ ರಾಮಗೀತೆ||
ಒಮ್ಮನದಿ ನಮ್ಮೊಳಗೆ
ಹೊಮ್ಮುತಿರೆ ಬಾವಗಳು
ಚಿಮ್ಮುತಲಿಯೋದಿದೆವು ಬೊಮ್ಮಲಿಂಗ||

ಮುಕ್ತಕ ಕುಸುಮ ೭೦

ಶೋಭಿಸುವ ಗೀತೆಯನು ಶೋಭಕ್ಕ ವಿನಯದಲಿ
ಲಾಭಿಯನು ಮಾಡದೆಲೆ ಬರೆದಿರುವರು|
ಶೋಭಿತದ ಸೋದರಿಯು ಲೋಭವನು ತೋರದೆಲೆ
ನಾಭಿಯಿಂ ಪಾಡಿದರು ಬೊಮ್ಮಲಿಂಗ||

ಶೋಭಿಸುವ ಗೀತೆಯನು
ಶೋಭಕ್ಕ ವಿನಯದಲಿ
ಲಾಭಿಯನು ಮಾಡದೆಲೆ ಬರೆದಿರುವರು|
ಶೋಭಿತದ ಸೋದರಿಯು
ಲಾಭವನು ಬಯಸದೆಲೆ
ನಾಭಿಯಿಂ ಪಾಡಿದರು ಬೊಮ್ಮಲಿಂಗ||

ಮುಕ್ತಕ ಕುಸುಮ ೭೧

ನರರಾಗಿ ಬದುಕುವರೆ ನಿರೀಕ್ಷೆಗೆ ಮಿತಿಯಿರಲಿ
ನರಿಬುದ್ಧಿ ಬಿಡಿರೆನುವ ದೇವಕೇಳಿ|
ಹರನವನು ಜಗವೆಲ್ಲ ತಿರುಗುವರೆ ತನಗೆಂದು
ತುರುವದುವೆ  ಸಾಕೆಂದ ಬೊಮ್ಮಲಿಂಗ||

ನರರಾಗಿ ಬದುಕುವರೆ
ನಿರೀಕ್ಷೆಗೆ ಮಿತಿಯಿರಲಿ
ನರಿಬುದ್ಧಿ ಬಿಡಿರೆನುವ ದೇವಕೇಳಿ|
ಹರನವನು ಜಗವೆಲ್ಲ 
ತಿರುಗುವರೆ ತನಗೆಂದು
ತುರುವದುವೆ  ಸಾಕೆಂದ ಬೊಮ್ಮಲಿಂಗ||

ಮುಕ್ತಕ ಕುಸುಮ ೭೨

ದಟ್ಟಡವಿಯೆಂದವರು ಕಟ್ಟಕಡೆಯದಾಗಿಯು
ಕುಟ್ಟಿ ಕೆಡವಿದರು ಹಸಿ ಮರಗಳನ್ನು
ಇಟ್ಟಂಗಿರಲಾರದ ಭಟ್ಟಂಗಿಗಳಿಗಿವರು
ಕೊಟ್ಟಿಹರು ಹುಸಿ ಭಾಷೆ ಬೊಮ್ಮಲಿಂಗ

ದಟ್ಟಡವಿಯೆಂದವರು
ಕಟ್ಟಕಡೆಯದಾಗಿಯು
ಕುಟ್ಟಿ ಕೆಡವಿದರು ಹಸಿ ಮರಗಳನ್ನು
ಇಟ್ಟಂಗಿರಲಾರದ
ಭಟ್ಟಂಗಿಗಳಿಗಿವರು
ಕೊಟ್ಟಿಹರು ಹುಸಿ ಭಾಷೆ ಬೊಮ್ಮಲಿಂಗ

ಮುಕ್ತಕ ಕುಸುಮ ೭೩

ತಟ್ಟೆಯಲಿ ಬಿದ್ದಿರುವ ತುಟ್ಟಿಯದೆ ವಸ್ತುಗಳ
ತಟ್ಟಿಡುತ ಕಾಪುವುದು ಮನುಜಮತವೆ
ಅಟ್ಟಿಡುವ ಶಿವನವನು ಕಟ್ಟಿಟ್ಟ ಬುತ್ತಿಗಳ
ಮೆಟ್ಟುವುದು ಸಾಧ್ಯವೇ ಬೊಮ್ಮಲಿಂಗ

ತಟ್ಟೆಯಲಿ ಬಿದ್ದಿರುವ
ತುಟ್ಟಿಯದೆ ವಸ್ತುಗಳ
ತಟ್ಟಿಡುತ ಕಾಪುವುದು ಮನುಜಮತವೆ
ಅಟ್ಟಿಡುವ ಶಿವನವನು
ಕಟ್ಟಿಟ್ಟ ಬುತ್ತಿಗಳ
ಮೆಟ್ಟುವುದು ಸಾಧ್ಯವೇ ಬೊಮ್ಮಲಿಂಗ

ಮುಕ್ತಕ ಕುಸುಮ ೭೪

ನೀಡುತಲೆ ಪಡೆಯತಿರೆ ಕಾಡದೆಲೆ ನಡೆಯುತಿರೆ
ಕೂಡಿ ಬಾಳುವ ಮನ ಮಾಡಿರುವರು
ಮೂಡಿಸುತ ಸದ್ಬಾವ ನಾಡಿಮಿಡಿತವ ನೋಡಿ
ಪಾಡುತಿದೆ ಜಗವಿಂದು ಬೊಮ್ಮಲಿಂಗ

ನೀಡುತಲೆ ಪಡೆಯತಿರೆ
ಕಾಡದೆಲೆ ನಡೆಯುತಿರೆ
ಕೂಡಿ ಬಾಳುವ ಮನ ಮಾಡಿರುವರು
ಮೂಡಿಸುತ ಸದ್ಬಾವ
ನಾಡಿಮಿಡಿತವ ನೋಡಿ
ಪಾಡುತಿದೆ ಜಗವಿಂದು ಬೊಮ್ಮಲಿಂಗ

ಮುಕ್ತಕ ಕುಸುಮ ೭೫

ಪುರಜನರೆ ಬೇಡುವೆನು ಸುರಪಾನ ಸುಖತರದು
ಸರಿಸಿದರೆ ನೀವದನು ಸುಖದ ಬಾಳ್ವೆ
ಸುರಿಯಿತಲಿ ಬಟ್ಟಲಲಿ ಬೆರೆಸುತಲಿ ಕೆನ್ನೀರು
ಸರಿಯುವಿರಿ ಸಾವಿನೆಡೆ ಬೊಮ್ಮಲಿಂಗ

ಪುರಜನರೆ ಬೇಡುವೆನು
ಸುರಪಾನ ಸುಖತರದು
ಸರಿಸಿದರೆ ನೀವದನು ಸುಖದ ಬಾಳ್ವೆ
ಸುರಿಯಿತಲಿ ಬಟ್ಟಲಲಿ
ಬೆರೆಸುತಲಿ ಕೆನ್ನೀರು
ಸರಿಯುವಿರಿ ಸಾವಿನೆಡೆ ಬೊಮ್ಮಲಿಂಗ

ಮುಕ್ತಕ ಕುಸುಮ ೭೬

ಯೋಗವನು ಮಾಡುತಿಹ ಲೋಗರನು ನೋಡಿದೊಡೆ
ರೋಗವದು ಕಾಣದೆಲೆ ಮಾಯವಾಯ್ತು
ಯೋಗದಾ ಹಾದಿಯೊಳು ಭಾಗ್ಯವನು ಪಡೆಯಲದು
ಭಾಗಿಯಾಗಿರಿ ನೀವು ಬೊಮ್ಮಲಿಂಗ

ಯೋಗವನು ಮಾಡುತಿಹ
ಲೋಗರನು ನೋಡಿದೊಡೆ
ರೋಗವದು ಕಾಣದೆಲೆ ಮಾಯವಾಯ್ತು
ಯೋಗದಾ ಹಾದಿಯೊಳು
ಭಾಗ್ಯವನು ಪಡೆಯಲದು
ಭಾಗಿಯಾಗಿರಿ ನೀವು ಬೊಮ್ಮಲಿಂಗ

ಮುಕ್ತಕ ಕುಸುಮ ೭೭

ಭಾವಗಳ ಬದುಕಿನಲಿ ನೋವುಗಳ ಸಹಿಸುವರೆ
ನೀವೇನು ಮಾಡದಿರಿ ಪುರದಜನರೆ
ಸಾವ ತರುತಿರಲವನು ದೇವ ತಾ ರಕ್ಷಿಪನೆ
ನಾವೇನ ಮಾಡುವುದು ಬೊಮ್ಮಲಿಂಗ

ಭಾವಗಳ ಬದುಕಿನಲಿ
ನೋವುಗಳ ಸಹಿಸುವರೆ
ನೀವೇನು ಮಾಡದಿರಿ ಪುರದಜನರೆ
ಸಾವ ತರುತಿರಲವನು
ದೇವ ತಾ ರಕ್ಷಿಪನೆ
ನಾವೇನ ಮಾಡುವುದು ಬೊಮ್ಮಲಿಂಗ

ಮುಕ್ತಕ ಕುಸುಮ ೭೮

ಮಾವಿನೆಲೆ ತೋರಣವ ಮಾವನದೆ ಮನೆಯೆನುತ
ಭಾವಗಳ ಜೊತೆಗೂಡಿ ಕಟ್ಟುತಿಹಳು
ಭಾವಣಿಸೆ ಮಗಳೊಂದು ಜೀವಿತಕೆ ಮಗನೊಬ್ಬ
ಯಾವುದಕೆ ಕೊರೆಹೇಳು ಬೊಮ್ಮಲಿಂಗ

ಮಾವಿನೆಲೆ ತೋರಣವ
ಮಾವನದೆ ಮನೆಯೆನುತ
ಭಾವಗಳ ಜೊತೆಗೂಡಿ ಕಟ್ಟುತಿಹಳು
ಭಾವಣಿಸೆ ಮಗಳೊಂದು
ಜೀವಿತಕೆ ಮಗನೊಬ್ಬ
ಯಾವುದಕೆ ಕೊರೆಹೇಳು ಬೊಮ್ಮಲಿಂಗ

ಮುಕ್ತಕ ಕುಸುಮ ೭೯

ಅತ್ತೆಯಾ ಮನೆಯಲ್ಲಿ ಮುತ್ತಂತೆ ನುಡಿಬೇಕು
ಹೊತ್ತಾಗಿ ನೀಡಿದರು ಹೊಗಳಬೇಕು
ಮತ್ತೇನೂ ನುಡಿಯದೆಲೆ ಕತ್ತೆಯನು ಹೋಲುತಲೆ
ಸೊತ್ತಾಗಿ ದುಡಿಬೇಕು ಬೊಮ್ಮಲಿಂಗ

ಅತ್ತೆಯಾ ಮನೆಯಲ್ಲಿ
ಮುತ್ತಂತೆ ನುಡಿಬೇಕು
ಹೊತ್ತಾಗಿ ನೀಡಿದರು ಹೊಗಳಬೇಕು
ಮತ್ತೇನೂ ನುಡಿಯದೆಲೆ
ಕತ್ತೆಯನು ಹೋಲುತಲೆ
ಸೊತ್ತಾಗಿ ದುಡಿಬೇಕು ಬೊಮ್ಮಲಿಂಗ

ಮುಕ್ತಕ ಕುಸುಮ ೮೦

ಹತ್ತು ಜನ ಹಡೆವಂತೆ ಹೆತ್ತಿಹಳು ನಮ್ಮಮ್ಮ
ಹೊತ್ತಿಹಳು ಭೂದೇವಿ ಬೇಧವಿರದೆ
ಮತ್ತೇನೂ ಬೆಳೆಯದೆಲೆ ಹೊತ್ತು ಹೊತ್ತಿಗೆ ಕವಳ
ಕತ್ತರಿಸಿ ಸತ್ತುಬಿಡು ಬೊಮ್ಮಲಿಂಗ

ಹತ್ತು ಜನ ಹಡೆವಂತೆ
ಹೆತ್ತಿಹಳು ನಮ್ಮಮ್ಮ
ಹೊತ್ತಿಹಳು ಭೂದೇವಿ ಬೇಧವಿರದೆ
ಮತ್ತೇನೂ ಬೆಳೆಯದೆಲೆ
ಹೊತ್ತು ಹೊತ್ತಿಗೆ ಕವಳ
ಕತ್ತರಿಸಿ ಸತ್ತುಬಿಡು ಬೊಮ್ಮಲಿಂಗ

ಮುಕ್ತಕ ಕುಸುಮ ೮೧

ಸಾಸಿರದ ಲೋಗರೊಳು ಕಾಸಿನದೆ ಬೇಳೆಯನು
ಬೇಸಿಗೆಯ ಮಳೆಯಂತೆ ನೋಡಬೇಡಿ
ವೇಷಗಳ ತಾಳದೊಳು ದಾಸರಾಗದೆ ನಾವು
ದೋಷಗಳ ಮರೆತಿರುವ ಬೊಮ್ಮಲಿಂಗ.

ಸಾಸಿರದ ಲೋಗರೊಳು
ಕಾಸಿನದೆ ಬೇಳೆಯನು
ಬೇಸಿಗೆಯ ಮಳೆಯಂತೆ ನೋಡಬೇಡಿ
ವೇಷಗಳ ತಾಳದೊಳು
ದಾಸರಾಗದೆ ನಾವು
ದೋಷಗಳ ಮರೆತಿರುವ ಬೊಮ್ಮಲಿಂಗ.

ಮುಕ್ತಕ ಕುಸುಮ ೮೨

ಕನಸಿನಲಿ ಕಂಡುದನು ಮನಸಿನಲಿ ಮೂಡಿಸುತ
ನನಸಾಗಿ ಮಾಡುವರೆ ಶಕ್ತಿ ಬೇಕು
ಅನವರತ ದುಡಿಮೆಯಲಿ ಕನವರಿಸಿ ಕನಸುಗಳ
ಮನವರಿಕೆ ಮಾಡಿಬಿಡಿ ಬೊಮ್ಮಲಿಂಗ

ಕನಸಿನಲಿ ಕಂಡುದನು
ಮನಸಿನಲಿ ಮೂಡಿಸುತ
ನನಸಾಗಿ ಮಾಡುವರೆ ಶಕ್ತಿ ಬೇಕು
ಅನವರತ ದುಡಿಮೆಯಲಿ
ಕನವರಿಸಿ ಕನಸುಗಳ
ಮನವರಿಕೆ ಮಾಡಿಬಿಡಿ ಬೊಮ್ಮಲಿಂಗ

ಮುಕ್ತಕ ಕುಸುಮ ೮೩

ದೇಹದೊಳು ನೆತ್ತರನು ದೇಹಕಿದು ಜೀವವನು
ದೇಹಿಯೆನ್ನದೆಯೀದ ನಮ್ಮ ಬಂಧು
ದೋಹವನು ತೋರದೆಲೆ ದಾಹ ನೀಗಿದ ತಾಯ
ದೇಹಿಯೆನಿಸಲೆಬೇಡಿ ಬೊಮ್ಮಲಿಂಗ

ದೇಹದೊಳು ನೆತ್ತರನು
ದೇಹಕಿದು ಜೀವವನು
ದೇಹಿಯೆನ್ನದೆಯೀದ ನಮ್ಮ ಬಂಧು
ದೋಹವನು ತೋರದೆಲೆ
ದಾಹ ನೀಗಿದ ತಾಯ
ದೇಹಿಯೆನಿಸಲೆಬೇಡಿ ಬೊಮ್ಮಲಿಂಗ

ಮುಕ್ತಕ ಕುಸುಮ ೮೪

ಆದಿಮಾನವನಾಗೆ ಸಾಧಿಸುವ ಛಲವಿರಲು
ಭೋಧನೆಯು ಬೇಕಿಲ್ಲ ಮನುಜಮನಕೆ
ಬಾದಿಸುತ ಗುರುಗಳನು ಬೇದವನು ಬಗೆಯುತಲಿ
ಬೀದಿಯಲಿ ನಿಲಿಸದಿರು ಬೊಮ್ಮಲಿಂಗ

ಆದಿಮಾನವನಾಗೆ
ಸಾಧಿಸುವ ಛಲವಿರಲು
ಭೋಧನೆಯು ಬೇಕಿಲ್ಲ ಮನುಜಮನಕೆ
ಬಾದಿಸುತ ಗುರುಗಳನು
ಬೇದವನು ಬಗೆಯುತಲಿ
ಬೀದಿಯಲಿ ನಿಲಿಸದಿರು ಬೊಮ್ಮಲಿಂಗ

ಮುಕ್ತಕ ಕುಸುಮ ೮೫

ಅವನಿಯದು ಚಿರಯುವತಿ ನವಯುವಕ ರವಿಯೊಡನೆ
ಸವೆಯದಿಹ ಮೋಹದಲಿ ಕಾಯುತಿಹರು|
ಅವಗಣನೆ ಯಾಕಯ್ಯ ಬುವಿಗಿಳಿಯೆ ಮಳೆರಾಯ
ಸವಿಯುವೆವು ನಾವೆಂದು ಬೊಮ್ಮಲಿಂಗ||

ಅವನಿಯದು ಚಿರಯುವತಿ
ನವಯುವಕ ರವಿಯೊಡನೆ
ಸವೆಯದಿಹ ಮೋಹದಲಿ ಕಾಯುತಿಹರು|
ಅವಗಣನೆ ಯಾಕಯ್ಯ
ಬುವಿಗಿಳಿಯೆ ಮಳೆರಾಯ
ಸವಿಯುವೆವು ನಾವೆಂದು ಬೊಮ್ಮಲಿಂಗ||

ಮುಕ್ತಕ ಕುಸುಮ ೮೬

ನುಡಿಯುತಿರೆ ಮತ್ತೊಂದು ನಡೆಯುವುದು ಮಗದೊಂದು
ಹಿಡಿಯುತಲಿ ತನಗಾಗಿ ಕತ್ತೆಕಾಲು|
ಕೆಡವುತಲಿ ಪರರಮನ ಬಡಿಯುತಿರೆ ಮನದೊಳಗೆ
ಪಡೆಯುವುದದೇನೆಂಬ ಬೊಮ್ಮಲಿಂಗ||

ನುಡಿಯುತಿರೆ ಮತ್ತೊಂದು
ನಡೆಯುವುದು ಮಗದೊಂದು
ಹಿಡಿಯುತಲಿ ತನಗಾಗಿ ಕತ್ತೆಕಾಲು|
ಕೆಡವುತಲಿ ಪರರಮನ
ಬಡಿಯುತಿರೆ ಮನದೊಳಗೆ
ಪಡೆಯುವುದದೇನೆಂಬ ಬೊಮ್ಮಲಿಂಗ||

ಮುಕ್ತಕ ಕುಸುಮ-೮೭

ಮಂಡೆಯಲಿ ಹುಳವಿಟ್ಟು ಮಂಡಿಸುತ ಹಿರಿತನವ
ಮಂಡಿಯನು ಮುರಕೊಂಬ ಬಾಳದೇಕೆ
ಮಂಡಿಯೊಳು ತಾ ಕುಳಿತು ಮಂಡಕವ ಮೆಲ್ಲುತಲಿ
ಮಂಡಳಿಯ ದೂರುವುದೆ ಬೊಮ್ಮಲಿಂಗ

ಮಂಡೆಯಲಿ ಹುಳವಿಟ್ಟು
ಮಂಡಿಸುತ ಹಿರಿತನವ
ಮಂಡಿಯನು ಮುರಕೊಂಬ ಬಾಳದೇಕೆ
ಮಂಡಿಯೊಳು ತಾ ಕುಳಿತು
ಮಂಡಕವ ಮೆಲ್ಲುತಲಿ
ಮಂಡಳಿಯ ದೂರುವುದೆ ಬೊಮ್ಮಲಿಂಗ

ಮುಕ್ತಕ ಕುಸುಮ ೮೮

ಕಾಡುತಿವೆ ನೆನಪಾಗಿ ಕಾಡುಗಳು ಕನಸಿನಲಿ
ಹಾಡುತಲಿ ಹಾರುತಿಹ ಹಕ್ಕಿಯಂತೆ
ಗೂಡುಗಳ ಕಟ್ಟದಿರೆ ಹಾಡೆಂತು ಮೂಡುವುದು
ಕಾಡಿಂದು ಕಾಣದಿರೆ ಬೊಮ್ಮಲಿಂಗ

ಕಾಡುತಿವೆ ನೆನಪಾಗಿ
ಕಾಡುಗಳು ಕನಸಿನಲಿ
ಹಾಡುತಲಿ ಹಾರುತಿಹ ಹಕ್ಕಿಯಂತೆ
ಗೂಡುಗಳ ಕಟ್ಟದಿರೆ
ಹಾಡೆಂತು ಮೂಡುವುದು
ಕಾಡಿಂದು ಕಾಣದಿರೆ ಬೊಮ್ಮಲಿಂಗ

ಮುಕ್ತಕ ಕುಸುಮ ೮೯

ಮಾತೆಯರ ಪೂಜಿಸುವ ಜಾತರದು ನೀವಾಗೆ
ಯಾತರದು ನೋವುಗಳು ಬಾರದೆಂಬೆ
ಮಾತಿನಲಿ ಜಾಡಿಸುತ ದಾತರನು ನೋಯಿಸೆ ವಿ-
ದಾತನೂ ಮನ್ನಿಸನು ಬೊಮ್ಮಲಿಂಗ

ಮಾತೆಯರ ಪೂಜಿಸುವ
ಜಾತರದು ನೀವಾಗೆ
ಯಾತರದು ನೋವುಗಳು ಬಾರದೆಂಬೆ
ಮಾತಿನಲಿ ಜಾಡಿಸುತ
ದಾತರನು ನೋಯಿಸೆ ವಿ-
ದಾತನೂ ಮನ್ನಿಸನು ಬೊಮ್ಮಲಿಂಗ

ಮುಕ್ತಕ ಕುಸುಮ ೯೦

ಸೋದರನು ಸಕಲರಿಗು ಬೇದವನು ಮಾಡದೆಲೆ
ವೇದವಾಕುಗಳನ್ನು ಹಂಚುತಿಹನು
ಬೋಧಿಸುವ ಮನದೊಳಗೆ ಶೋಧಿಸಲು ಬರಿಮಾತು
ಖೇದವದು ಮೂಡಿಸಿತು ಬೊಮ್ಮಲಿಂಗ

ಸೋದರನು ಸಕಲರಿಗು
ಬೇದವನು ಮಾಡದೆಲೆ
ವೇದವಾಕುಗಳನ್ನು ಹಂಚುತಿಹನು
ಬೋಧಿಸುವ ಮನದೊಳಗೆ
ಶೋಧಿಸಲು ಬರಿಮಾತು
ಖೇದವದು ಮೂಡಿಸಿತು ಬೊಮ್ಮಲಿಂಗ

ಮುಕ್ತಕ ಕುಸುಮ ೯೧

ಬಾಳಿಸುವೆ ನಾನೆನುತ ಗೋಳುಗಟ್ಟಿಸಿ ಜೀವ
ಹಾಳುಗೆಡುವುದದೇಕೆ  ಮಾನವಂತ
ಪಾಳುಮನೆಯದು ನಿನದು ಬೀಳುವುದನರಿಯದೆಲೆ
ಗೀಳಿನೊಳು ಬೀಳದಿರು ಬೊಮ್ಮಲಿಂಗ

ಬಾಳಿಸುವೆ ನಾನೆನುತ
ಗೋಳುಗಟ್ಟಿಸಿ ಜೀವ
ಹಾಳುಗೆಡುವುದದೇಕೆ  ಮಾನವಂತ
ಪಾಳುಮನೆಯದು ನಿನದು
ಬೀಳುವುದನರಿಯದೆಲೆ
ಗೀಳಿನೊಳು ಬೀಳದಿರು ಬೊಮ್ಮಲಿಂಗ

ಮುಕ್ತಕ ಕುಸುಮ ೯೨

ಏಳುಬೀಳದು ಸಹಜ ಗಾಳಿಮಾತಿಗೆ ಸಿಲುಕಿ
ದಾಳಿಯನು ಮಾಡದಿರಿ ಪುರದಜನರೆ
ಏಳೇಳು ಲೋಕದಲಿ ಗಾಳಿ ಗಂಟುಗಳುಂಟು
ದೂಳಾಗಿ ಹೋಗದಿರಿ ಬೊಮ್ಮಲಿಂಗ

ಏಳುಬೀಳದು ಸಹಜ
ಗಾಳಿಮಾತಿಗೆ ಸಿಲುಕಿ
ದಾಳಿಯನು ಮಾಡದಿರಿ ಪುರದಜನರೆ
ಏಳೇಳು ಲೋಕದಲಿ
ಗಾಳಿ ಗಂಟುಗಳುಂಟು
ದೂಳಾಗಿ ಹೋಗದಿರಿ ಬೊಮ್ಮಲಿಂಗ

ಮುಕ್ತಕ ಕುಸುಮ ೯೩

ಅವನಿಯೊಳು ಬೆಳೆಯುವರು
ದವಸಗಳ ಬಹುವಿಧದಿ
ಹವಳಗಳು ಮೊಳೆಯುವುದು ಕಡಲಿನಲ್ಲಿ
ಅವರಿವರ ಛೇಡಿಸುತ
ಭವದೊಳಗೆ ಕೇಡಿಗರು
ತವರೊಳಗೆ ಮಡಿಯುವರು ಬೊಮ್ಮಲಿಂಗ

ಅವನಿಯೊಳು ಬೆಳೆಯುವರು
ದವಸಗಳ ಬಹುವಿಧದಿ
ಹವಳಗಳು ಮೊಳೆಯುವುದು ಕಡಲಿನಲ್ಲಿ
ಅವರಿವರ ಛೇಡಿಸುತ
ಭವದೊಳಗೆ ಕೇಡಿಗರು
ತವರೊಳಗೆ ಮಡಿಯುವರು ಬೊಮ್ಮಲಿಂಗ

ಮುಕ್ತಕ ಕುಸುಮ ೯೪

ಅನುಗಾಲ ಮಳೆರಾಯ ತನುವಾಗಿ ಸುರಿದಿರಲು
ತನನನನ ಪಾಡುವರು ಲೋಗರೆಲ್ಲ
ಮನತುಂಬಿ ಸಂತೋಷ ತನಿಯಾಗಿ ಮೆರೆದಿರಲು
ನೆನೆಯವರೆ ದೇವರನು ಬೊಮ್ಮಲಿಂಗ 

ಅನುಗಾಲ ಮಳೆರಾಯ
ತನುವಾಗಿ ಸುರಿದಿರಲು
ತನನನನ ಪಾಡುವರು ಲೋಗರೆಲ್ಲ
ಮನತುಂಬಿ ಸಂತೋಷ
ತನಿಯಾಗಿ ಮೆರೆದಿರಲು
ನೆನೆಯವರೆ ದೇವರನು ಬೊಮ್ಮಲಿಂಗ 

ಮುಕ್ತಕ ಕುಸುಮ ೯೫

ಇಂದಿಗದು ನಮದಲ್ಲ ಮುಂದೆಮನು ಬಿಡದಲ್ಲ
ಮಂದಿಯೊಳು ಕುರಿಮಂದೆ ಹಿಂದೆ ಮುಂದೆ
ಎಂದಿಗೋ ಬರುವುದಕೆ ನಿಂದಳುತ ಮರುಗಿರುವೆ
ಮಂದಮತಿ ನೀನಾಗಿ ಬೊಮ್ಮಲಿಂಗ 

ಇಂದಿಗದು ನಮದಲ್ಲ
ಮುಂದೆಮನು ಬಿಡದಲ್ಲ
ಮಂದಿಯೊಳು ಕುರಿಮಂದೆ ಹಿಂದೆ ಮುಂದೆ
ಎಂದಿಗೋ ಬರುವುದಕೆ
ನಿಂದಳುತ ಮರುಗಿರುವೆ
ಮಂದಮತಿ ನೀನಾಗಿ ಬೊಮ್ಮಲಿಂಗ 

ಮುಕ್ತಕ ಕುಸುಮ ೯೬

ಬಂದಾರೆ ಬರಲಣ್ಣ ನಿಂದಾರೆ ನಿಲಲಣ್ಣ
ತಂದಾರೆ ಭಾಗ್ಯವನು ತಾರೆಯೇನು
ಒಂದಾದ ಮನಗಳನುಮುಂದಿಟ್ಟು ನೀನಿಂದು
ನಂದಾಗಿ ಬಾಳಿಸಲಿ ಬೊಮ್ಮಲಿಂಗ

ಬಂದಾರೆ ಬರಲಣ್ಣ
ನಿಂದಾರೆ ನಿಲಲಣ್ಣ
ತಂದಾರೆ ಭಾಗ್ಯವನು ತಾರೆಯೇನು
ಒಂದಾದ ಮನಗಳನು
ಮುಂದಿಟ್ಟು ನೀನಿಂದು
ನಂದಾಗಿ ಬಾಳಿಸಲಿ ಬೊಮ್ಮಲಿಂಗ

ಮುಕ್ತಕ ಕುಸುಮ ೯೮

ಬಂಧಗಳು ಬೇಕಿಲ್ಲ ಬಂಧುಗಳ ಹಾಗಿರಲು
ಬಂಧನವಿರದೆಲೆ ನಾವ್ ಬಾಳಬಹುದು
ಅಂದ ತುಂಬಿದ ಮನವದೆಂದಿಗೂ ಘಮಿಸುತಿಹ
ಚಂದನದ ತುಂಡಂತೆ ಬೊಮ್ಮಲಿಂಗ

ಬಂಧಗಳು ಬೇಕಿಲ್ಲ
ಬಂಧುಗಳ ಹಾಗಿರಲು
ಬಂಧನವಿರದೆಲೆ ನಾವ್ ಬಾಳಬಹುದು
ಅಂದ ತುಂಬಿದ ಮನವ-
ದೆಂದಿಗೂ ಘಮಿಸುತಿಹ
ಚಂದನದ ತುಂಡಂತೆ ಬೊಮ್ಮಲಿಂಗ

ಮುಕ್ತಕ ಕುಸುಮ ೯೯

ದಂಡಿನಂದದಿ ನಿಂದ ಬಂಡೆದುಂಬಿದ ಬೆಟ್ಟ-
ದುಂಡೆಗಳ ನಡುವೆ ರವಿ ಮೂಡುತಿಹನು|
ದಂಡು ದಂಡಲಿ ನಡೆದುದುಂಡಗಾಗಲು ದುಡಿಯೆ
ದಂಡನೆಯ ಭಯವಿರದು ಬೊಮ್ಮಲಿಂಗ||

ದಂಡಿನಂದದಿ ನಿಂದ
ಬಂಡೆದುಂಬಿದ ಬೆಟ್ಟ-
ದುಂಡೆಗಳ ನಡುವೆ ರವಿ ಮೂಡುತಿಹನು|
ದಂಡು ದಂಡಲಿ ನಡೆದು
ದುಂಡಗಾಗಲು ದುಡಿಯೆ
ದಂಡನೆಯ ಭಯವಿರದು ಬೊಮ್ಮಲಿಂಗ||

ಮುಕ್ತಕ ಕುಸುಮ ೧೦೦

ಬರಗಾಲ ಮೂಡಿಹುದು ಬರಿದಾದ ನಾಡಿನಲಿ
ಬರಗೆಟ್ಟ ನಾಯಕರ ಬವಣೆಗಾಗಿ|
ಬರಬಹುದು ಗಂಟುಗಳು ತೆರಳುತಲಿ ನಂಟುಗಳು
ತರಹದೀ ವೇಷದಲಿ ಬೊಮ್ಮಲಿಂಗ||

ಬರಗಾಲ ಮೂಡಿಹುದು
ಬರಿದಾದ ನಾಡಿನಲಿ
ಬರಗೆಟ್ಟ ನಾಯಕರ ಬವಣೆಗಾಗಿ|
ಬರಬಹುದು ಗಂಟುಗಳು
ತೆರಳುತಲಿ ನಂಟುಗಳು
ತರಹದೀ ವೇಷದಲಿ ಬೊಮ್ಮಲಿಂಗ||

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು