ಕಲಿಯುಗದ ಮಳೆರಾಯನ ಲಾವಣಿ

ಕಲಿಯುಗದ ಮಳೆರಾಯ (ಲಾವಣಿ)
~~~~~~~~~~~~~~~~~~~
ಬಲಿತಿಹ ಕವಿಗಳ ನೆನೆಯುತ ಪಾಡುವೆ
ಕಲಿತಿಹ ನುಡಿಗಳ ನಿಮ್ಮೊಡನೆ
ಕಲಿಯುಗವೆನ್ನದೆ ಕುಣಿಯುತ ಬರುವೆನು
ಕಲಿಯಲು ಗುರುವೇ ನಮಿಸುತಲಿ

ಒಲಿಯದೆ ಹೋದನು ಕಲಿಯುಗವೆಂದನು
ಬಲಿತರು ಋತುಗಳು ಮಹರಾಯ
ಕುಳಿತಿಹ ತಾಣದಿ ಕಳಿತೇ ಹೋದರು
ಬೆಳೆಗಳ ಬೆಳೆಯಲು ನೀರಿಲ್ಲ

ಹಾಡಿನ ರಾಗಕೆ ತಾಳವ ನೀಡದೆ
ಕಾಡಿದ ವರುಣನು ತಾನಂದು
ಕಾಡಿನ ಮಿಗಗಳ ಕಾಣದೆ ಸುರಿದನು
ನೋಡದೆ ಪಾಡನು ತಾನೆಂದು

ಬರದಲಿ ಕರೆಯುತ ಕೊರಗುತಲಿದ್ದರು
ಕರದಲಿಯಾಗಸ ದಿಟ್ಟಿಸುತ
ಬರದೆಲೆ ನೋಯಿಸಿ ಬರವನು ಹೆಚ್ಚಿಸಿ
ಮರವನು ಕಡಿದಿರಿ ನೀವೆಂದು

ಒಡವೆಯು ಕಳೆಯಿತು ಮನೆಯದು ಮುರಿಯಿತು
ತಡವಿದ ಸಕಲವ ಮೆಲ್ಲುತಲೀ
ಅಡವಿಯ ಕಡಿದಿಹ ಕೆಡುಗರ ಬದಲಿಗೆ
ಕೆಡವಿದ ಮೆತ್ತನೆ ಲೋಗರನು

ಬಡವನ ಬವಣೆಯ ಕೇಳಲು ತೋಚದೆ
ಬಡಿಯುತ ತಿನ್ನಲು ಕಾದಿಹರು
ನುಡಿವುದ ನಡೆಯದೆ ಕೊಡುವುದನರಿಯದೆ
ಪಡೆಯಲು ಸಾಧ್ಯವೆ ನೋಡಿಹರು

ಕೇಳದೆ ನೀಡುವ ಮನವದು ಹಲರಿಗೆ
ಹೇಳಿರಿ ನೀವೇ ಬಲ್ಲವರ
ಕೂಳಿನ ಜೊತೆಯಲಿ ಮುಂದಿನ ದಿನಗಳ
ಕಾಳನು ಮರೆಯದೆ ನೀಡಿದರು

ಜಗದಲಿ ಮಾನವ ಮಾತ್ರವದಲ್ಲದೆ
ಖಗಮಿಗಗಳಿಗೂ ನೋವುಂಟು
ಹಗಲಲಿ ಕೊರಗುತ ವಿರುಳಲಿ ಮರುಗುತ
ರಗಳೆಯ ಮಳೆಯಲಿ ನೊಂದಿಹವ

ಅಗುಳಿನ ಶತ್ರುವು ಮಿತ್ರನ ಜೊತೆಯಲಿ
ಹೆಗಲಿಗೆ ಹೆಗಲನು ನೀಡುವನು
ಹಗಲಿರುಳಲಿ ಗಳಿಸಿಹ ಹಣ ಚಿತೆಯಲಿ
ಬಗಲಿಗೆ ತಾನೂ ಬರಲಿಲ್ಲಾ

ಅಣ್ಣರು ತಮ್ಮರು ಆಸ್ತಿಗೆ ನಿಲ್ಲುತ
ಸುಣ್ಣವ ಬಳಿದರು ಮೊಗಕ್ಕೆಲ್ಲಾ
ತಣ್ಣನೆ ಚಿತೆಯಲಿ ಮಲಗಿಹ ವೇಳೆಗೆ
ಬಣ್ಣವದೆಲ್ಲವು ಬದಲಾಯ್ತು

ಅಕ್ಕನು ತಂಗಿಯು ಪಕ್ಕವದಿದ್ದರು
ಲೆಕ್ಕಕೆ ಸಿಗದೇ ಹೊಗಿಹರು
ಉಕ್ಕಲು ನದಿಯದು ಪಕ್ಕನೆ ಬಂದರು
ಬಿಕ್ಕುತ ಕರವನು ಜೋಡಿಸಲು

ಪಶಿವೈ
ಪಿ ಎಸ್ ವೈಲೇಶ
೧೩/೮/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು