ಮಕ್ಕಳಿಗೆ ಪರಿಸರ ಜ್ಞಾನ ಹೆಚ್ಚಿಸಿ

ಮಕ್ಕಳಿಗೆ ಪರಿಸರ ಜ್ಞಾನ ಹೆಚ್ಚಿಸಿ
~~~~~~~~~~~~~~~~~
ಕಳೆದ ಸಂಚಿಕೆಯಲ್ಲಿ ನಾವು ಕಾಡು ಬೆಳೆಸಿದವರಾರು ಎಂಬ ಬಗ್ಗೆ ಪುಟ್ಟ ಲೇಖನವನ್ನು ಓದಿದೆವು. ಈಗ ನಾವು ಬಳಸಿದ ಬಳಸುತ್ತಿರುವ ಕಾಡುಗಳನ್ನು ಬೆಳೆಸಿದವರ ಮನದೊಳಗೆ ಇದ್ದ ಭಾವಗಳೇನೆಂದು ಅರಿಯುವ ಬನ್ನಿ.  ಹಿಂದೆ ನಾವುಗಳು ಶಾಲೆಗೆ ಹೋಗುವ ಸಮಯದಲ್ಲಿ ಒಂದು ಪಾಠವನ್ನು ನಾವುಗಳು ಅಂದರೆ ಐವತ್ತರ ಆಸುಪಾಸಿನ ವಯಸ್ಸಿನ ಚಂದಮಾಮ ಅಥವಾ ಬೊಂಬೆಮನೆಯಂತಹ ಪುಸ್ತಕಗಳನ್ನು ಓದಿದವರಿಗೆ ಈ ಕಥೆಯನ್ನು ಜ್ಞಾಪಿಸಿಕೊಳ್ಳುವ ಅವಕಾಶವನ್ನು ಮತ್ತೊಮ್ಮೆ ಒದಗಿಸುತ್ತೇನೆ. ಮತ್ತು ಇಂದಿನ ಪೀಳಿಗೆಯ ಸಕಲರಿಗೂ ಉಡುಗೊರೆಯಾಗಿ ಈ ಕಥೆಯನ್ನು ನೀಡಲು ಮನವು ಹಾತೊರೆಯುತ್ತಿದೆ.  ಹಿಂದೆ ತೊಂಬತ್ತರ ಇಳಿವಯಸ್ಸಿನಲ್ಲೂ ಒಬ್ಬರು ತಮ್ಮ ತೋಟದಲ್ಲಿ ಒಂದಷ್ಟು ಹಣ್ಣಿನ ಮರಗಳನ್ನು ನೆಡಲು  ಪ್ರಯತ್ನಿಸುತ್ತಿದ್ದರು. ಆಗ ದಾರಿಯಲ್ಲಿ ಸಾಗುವ ಪ್ರಯಾಣಿಕರಲ್ಲಿ ಯಾರೋ ಕಿಡಿಗೇಡಿಯೊಬ್ಬ ಏ ಮುದುಕ ಇಂದೊ ನಾಳೆಯೊ ಸಾಯುವವನಂತೆ‌ ನೀನಿದ್ದೀಯಾ ನೀನು ನೆಡುತ್ತಿರುವ ಮರಗಳ ಹಣ್ಣುಗಳನ್ನು ತಿನ್ನಲು ನೀನು ಬದುಕಿರುವುದು ಅಸಾಧ್ಯ ಹಾಗಿದ್ದರೂ ಸಹ ಹಣ್ಣಿನ ಗಿಡಗಳನ್ನು ನೆಡುವ ಪ್ರಯತ್ನ ನಿನಗೇಕೆ ಎಂದು ಕೇಳಿದನು.

ಆಗ ಆ ವೃದ್ಧರು ಆತನನ್ನು ಅನುನಯದ ಮಾತಿನಿಂದ ಬಳಿಗೆ ಕರೆದು ನೀನು ಹುಟ್ಟಿದಂದಿನಿಂದ ನಿನ್ನ ಬುದ್ದಿ ಬೆಳವಣಿಗೆಯ ಮುನ್ನವೇ ಹಣ್ಣುಗಳನ್ನು ಇಲ್ಲಿಯವರೆಗೆ ಸೇವಿಸುತ್ತಿದ್ದಿಯಲ್ಲವೇ ಎಂದು ಕೇಳಿದರು. ಅದಕ್ಕೆ ಆತ‌ ಹೌದು ಎಂದನು. ನೀನು ಇಲ್ಲಿಯವರೆಗೆ ತಿಂದಿರುವ ಹಣ್ಣಿನ ಮರಗಳನ್ನು ನೀನೇ ಬೆಳೆಸಿರುವೆಯಾ ಎಂದು ಕೇಳಿದನು. ಅದಕ್ಕೆ ಆತ ಇಲ್ಲವೆಂದನು ಆಗ ವೃದ್ಧರು ನಾನು ಕೂಡ ಯಾರೋ ನೆಟ್ಟ ಮರದಿಂದ ಹಣ್ಣುಗಳನ್ನು ಕಿತ್ತು ತಿಂದಿರುವೆನು ನಾನು ತಿನ್ನಲೆಂದು ಹಣ್ಣಿನ ಮರವನ್ನು ನೆಟ್ಟವರು ಯಾರೆಂದು ತಿಳಿದಿರಲಿಲ್ಲ ಮತ್ತು ಇಂದು ನಾನು ನೆಡುತ್ತಿರುವ ಮರಗಳ ಹಣ್ಣುಗಳನ್ನು ಯಾರು ತಿನ್ನುತ್ತಾರೆ ಎಂಬುದು ಕೂಡ ನನಗೆ ತಿಳಿದಿಲ್ಲ. ಆದರೂ ನನಗೆ ನನ್ನ ಹಿಂದಿನವರು ಹಣ್ಣಿನ ಮರವನ್ನು ಬೆಳಸಿಟ್ಟ ಹಾಗೆ ನನ್ನ ಮುಂದಿನ ಪೀಳಿಗೆಯ ಜನಗಳಿಗಾಗಿ ನಾನು ಕೂಡ ಮರವನ್ನು ನೆಡುತ್ತಿರುವೆನು ಎಂದು ತಿಳಿಸಿದರು.  ಅದೇ ರೀತಿಯಲ್ಲಿ ಅಲ್ಪಾಯುಷಿಗಳಾದ ಪ್ರಾಣಿಗಳು ಪಕ್ಷಿಗಳು ವಿಶೇಷವಾಗಿ ಅಳಿಲುಗಳು ತಮ್ಮ ಆಹಾರಕ್ಕಾಗಿ ತಮಗೆ ಅರಿಯದೆ ನಾನಾ ವಿಧಾನಗಳಿಂದ ಈ ಜಗದಲ್ಲಿ ವೃಕ್ಷ ಸಂಕುಲವನ್ನು ಬಿತ್ತಿ ಬೆಳೆದವು ಎಂಬುದನ್ನು ನಾವೆಲ್ಲರೂ ಬಲ್ಲೆವು.

ಆದರೆ ನಮ್ಮ ಮಧ್ಯೆ ಕೆಲವರು ಈ ಪ್ರಕೃತಿಯ ಬಹುತೇಕ ಎಲ್ಲ ವಸ್ತುಗಳು ಮಾನವನ ಉಪಯೋಗಕ್ಕೆ ಮಾತ್ರವಿದೆ ಎಂದು ನಂಬಿರುತ್ತಾರೆ. ಅದು ಸಾಲದು ಎಂಬಂತೆ ಈ ಸೃಷ್ಟಿಯ ಸಕಲ ಜೀವರಾಶಿಗಳು ಸಹ  ಮಾನವನ ಆಹಾರಕ್ಕಾಗಿ ಮಾತ್ರ ಎಂದುಕೊಂಡವರು ಈ‌ ಜಗತ್ತಿನ ಒಂದಷ್ಟು ಶೇಕಡ ಜನರಿದ್ದಾರೆ ಎನ್ನಬಹುದು. ತಮಗೆ ಮಾತ್ರವೇ ಅಲ್ಲದೇ ತಮ್ಮ ಮಕ್ಕಳು ಮರಿ ಮಕ್ಕಳು ಕುಂತು ಉಂಡರೂ ಕರಗದಷ್ಟು ಆಸ್ತಿ ಪಾಸ್ತಿ ಮಾಡಿ ಇಡುತ್ತಿದ್ದಾರೆ. ಆದರೆ ಈ ಪ್ರಾಣಿ ಪಕ್ಷಿಗಳು ಮುಂದಿನ ಪೀಳಿಗೆಗೆ ಎಂದು ಮರಗಿಡಗಳನ್ನು  ತಾವರಿಯದೇ ಬೆಳೆಸುತ್ತವೆ. ಅವುಗಳ ಗುರಿ ಏನಿದ್ದರೂ ಆ ಕ್ಷಣದಲ್ಲಿ ಹೊಟ್ಟೆ ತುಂಬಿದರಷ್ಟೇ ಸಾಕು. ಮತ್ತೆ ಹಸಿವಾದಾಗ ಹುಡುಕಿಕೊಂಡು ಬರುತ್ತವೆ. ಆದರೆ ನಾವು ಮನುಜರು ಹಣ ಆಸ್ತಿ ಪಾಸ್ತಿ ಕೂಡಿಡಲು ತೊಡಗಿದ ಮರುಕ್ಷಣವೇ ಈ ಪ್ರಕೃತಿ ಪರಿಸರದ ನಾಶಕ್ಕೆ ನಾಂದಿ ಹಾಡಿದೆವು.

ನೂರಾರು ಸಾವಿರಾರು ವರ್ಷಗಳಿಂದ ಸತತವಾಗಿ ಪ್ರಾಣಿ ಪಕ್ಷಿಗಳು ನೆಟ್ಟ ಗಿಡಮರಗಳನ್ನು ನಮ್ಮ ಸ್ವಾರ್ಥಕ್ಕೆ ಕಡಿದು ಬಳಸುವುದು ಸಾಲದೆಂದು ಹೊರದೇಶಗಳಿಗೆ ಹೆಚ್ಚುಹೆಚ್ಚಾಗಿ ನಮ್ಮದೇ ಮಣ್ಣು, ಕಲ್ಲು, ಮರಳು, ಮರ, ( ಇವುಗಳ ಇಂದಿನ ರೂಪ ಏನೇ ಇರಲಿ ಮೂಲ ಈ ನಾಲ್ಕು ವಸ್ತುಗಳಿಂದ ತಯಾರಿಸಿದವು ಆಗಿವೆ.) ಹಾಗಾದರೆ ಹೊರದೇಶಗಳಲ್ಲಿ ಕಲ್ಲು ಮಣ್ಣು ಮರಳು ಮರ ಇಲ್ಲವೇ ಎಂದು ನಾವು ಯೋಚಿಸಿದಾಗ ಹೊರದೇಶಗಳಲ್ಲಿ ಮಣ್ಣು ಮರಳು ಶಿಲೆ ಮರಗಳೆಲ್ಲವೂ ಇವೆ. ಆದರೆ ಹೊರದೇಶಿಗರ ಕಣ್ಣಿನಲ್ಲಿ, ಹೃದಯದಲ್ಲಿ, ಕಾನೂನಿನಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಮನದಲ್ಲಿ ದೇಶಭಕ್ತಿ,‌ಮುಂದಾಲೋಚನೆ, ಪ್ರಕೃತಿಯ ಬಗ್ಗೆ ಅರಿವು ಇದೆ. ನಮ್ಮವರಿಗೆ ಹಣದ ಮೋಹದಲ್ಲಿ  ಕಲ್ಲು ಮಣ್ಣು ಮರಳು ಭೂಮಿಯಲ್ಲಿ ಮಾತ್ರವಲ್ಲದೆ ತಲೆಯ ಮಿದುಳಿನಲ್ಲಿ ಸಹ ತುಂಬಿದೆ. ಮಾಡಿದ ಪಾಪಕ್ಕೆ ಯಾವುದೋ ದೇಗುಲಕ್ಕೆ ಹರಕೆ ಒಪ್ಪಿಸಿದರೆ ಸಾಕು ಎಂಬ ಭಾವನೆಯು ಸಹ ಇಲ್ಲಿದೆ. ಆದರೆ ನಾವು ಮಾಡಿದ ಮಾಡುತ್ತಿರುವ ತಪ್ಪುಗಳು ನಮ್ಮ ಮುಂದಿನ ಪೀಳಿಗೆಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಅರಿವಿನ ಕೊರತೆ ನಮ್ಮದಾಗಿದೆ.

ನೆನಪಿಡಲೇ ಬೇಕಾದ ಒಂದು ತಮಾಷೆಯ ಪ್ರಸಂಗ ಒಂದು ಚಲನಚಿತ್ರದ ಮೂಲಕ ನಮ್ಮ ಕಣ್ಣನ್ನು ತೆರೆಸುವ ಪ್ರಯತ್ನವನ್ನು ಚಿತ್ರರಂಗ ಮಾಡಿದೆ. ನಾವು ಬುದ್ಧಿವಂತರು ಅದನ್ನು ಕೇವಲ ತಮಾಷೆಯಾಗಿ ಪರಿಗಣಿಸಿ ಮರೆತು ಬಿಟ್ಟಿದ್ದೇವೆ. ನೋಡಿ ಹೇಗಿದೆ ತಮಾಷೆ ಬಾಳೆಹಣ್ಣನ್ನು ಹೇಗೆ ಮಾಡುತ್ತಾರೆ? ಎಂಬುದು ಅಲ್ಲಿ ವಿಕಟನಟನ ಅನಿಸಿಕೆ. ನಿಜ ಅಲ್ವೇ ಬಾಳೆಹಣ್ಣನ್ನು ನಾವು ಬೇಕೆಂದಾಗ ತಯಾರಿಸಿಕೊಂಡು ತಿನ್ನಲು ಸಾಧ್ಯವಿಲ್ಲ. ಅದನ್ನು ಸ್ವಾಭಾವಿಕವಾಗಿಯೇ ಬೆಳೆದು ತಿನ್ನಬೇಕು ಬಾಳೆಗಿಡವನ್ನು ನೆಟ್ಟು ಫಸಲು ಬಿಡುವವರೆಗೆ ಕಾಯಬೇಕು. ಅಂತೆಯೇ ಇಂದು ನಾವು ಕಡಿದುರುಳಿಸಿದ ಮರಗಳನ್ನು ತಿನ್ನಲು ಹಣ್ಣುಗಳನ್ನು ಕೊಡುವ ಮರಗಳನ್ನು ಹಿಂದೆ ಯಾರೋ ನೆಟ್ಟಿರುತ್ತಾರೆ. ಇಂದು ನಾವು ಉಪಯೋಗಿಸುವ ವನ್ಯ ಜನ್ಯ ಉತ್ಪನ್ನಗಳನ್ನು ನಮಗೆ ದೊರಕಲು ಅದೆಷ್ಟು ಪ್ರಾಣಿ ಪಕ್ಷಿಗಳು ಕೀಟ ಪ್ರಭೇದಗಳು ಸತ್ತು ಹುಟ್ಟಿವೆಯೋ ಬಲ್ಲವರು ಯಾರು.‌

ಆಹಾ ಎಷ್ಟು ಚೆಂದದ ಅನಿಸಿಕೆ ಕೆಲವರದು. ಮರಗಳನ್ನು ಕಡಿದರು‌ ಸಸಿಗಳನ್ನು ನೆಟ್ಟರು ಎಷ್ಟು ಸುಲಭ ಅಲ್ವೇ. ಸಾವಿರಾರು ವರ್ಷಗಳಿಂದ ನಿಂತಿದ್ದ ಮರವನ್ನು ಕತ್ತರಿಸಿದಾಗ ಅದರ ಆಮ್ಲಜನಕದ ಉತ್ಪಾದನಾ ಸಾಮರ್ಥ್ಯ ಬಿಡಿ ಅದನ್ನು ಸರಿಪಡಿಸಲು ಹುಲುಮಾನವನಿಂದ ಸಾಧ್ಯವಿಲ್ಲ. ಆ ಮರವನ್ನು ಅವಲಂಬಿಸಿದ ಅದೆಷ್ಟೋ ಖಗಮಿಗಗಳ ಅನಾನುಕೂಲಗಳನ್ನು ಸರಿಪಡಿಸುವವರಾರು. ಬೃಹತ್ ಗಾತ್ರದ ಮರವನ್ನು ಕಡಿದು ಸಾಗಿಸಿ ಅದನ್ನು ವಿವಿಧ ಬಗೆಯ ವಸ್ತುಗಳನ್ನಾಗಿ ಮಾಡುವವರೆಗೆ ಅದೆಷ್ಟು ಇನ್ನಿತರ ಗಿಡಮರಗಳು ಅಳಿಯುತ್ತವೆ ಎಂಬ ಬಗ್ಗೆ ಸುಮ್ಮನೆ ಆಲೋಚನೆ ಮಾಡಿದ್ದೀವ.  ಹೋಗಲಿ ನಾವಿಂದು ನೆಟ್ಟ ಸಸಿಗಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡುತ್ತಿದ್ದೇವ. ಒಂದು ವೇಳೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರು ನಾವು ಕಡಿದ ಮರಗಳಿಗೆ ಸರಿಸಮಾನವಾಗಿ ನಾವು ನೆಟ್ಟ ಸಸಿಗಳನ್ನು ಬೆಳೆಸಲು ಮತ್ತೆ ಅದೆಷ್ಟು ವರ್ಷಗಳ ಸಮಯ ಬೇಕು ಆಲೋಚನೆ ಮಾಡಿದ್ದೇವೆಯೇ.

ಸಾಧ್ಯವಿದ್ದಷ್ಟು ಮಟ್ಟಿಗೆ ಮರಗಳನ್ನು ಕಡಿಯದೆ ಇರಲು ಪ್ರಯತ್ನಿಸಬೇಕಾಗಿದೆ. ನಮ್ಮ ಯಾವುದೇ ಕೆಲಸವನ್ನು ಮಾಡುವಾಗ ಪ್ರಕೃತಿಯಲ್ಲಿ ಇರುವ ಯಾವುದೇ ರೀತಿಯ ಸ್ವಾಭಾವಿಕವಾಗಿ ಬೆಳೆಯುವ ಯಾವುದೇ ಜೀವಿಗಳಿಗೆ ಹಾನಿ ಉಂಟಾಗದ ಹಾಗೆ ‌ನಾವು ಬಹು ಎಚ್ಚರಿಕೆಯಿಂದ ಇರಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ 'ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ" ಎಂಬುದನ್ನು ಅರಿತು ಕೂಡಿಡುವ ಬುದ್ಧಿಯನ್ನು ಬಿಡಬೇಕಿದೆ. ನಾವು ನಮ್ಮ ಮಕ್ಕಳಿಗೆ ಆಸ್ತಿ ಮಾಡಿಡದೆ ಮಕ್ಕಳನ್ನು ಈ ದೇಶದ ಆಸ್ತಿಯಾಗಿ ಮಾಡಬೇಕಿದೆ. ಸುಳ್ಳು ಮೋಸ ವಂಚನೆ ಮುಂತಾದವುಗಳನ್ನು ತೊರೆದು ದುರಾಸೆ ಅಧಿಕಾರದ ದಾಹಕ್ಕಾಗಿ ಮಾಡುವ ಹೇಯ ಕೃತ್ಯಗಳನ್ನು ನಿಲ್ಲಿಸಬೇಕಾಗಿದೆ. ಇರುವುದು ಕೆಲವೇ ವರ್ಷಗಳ ಅವಧಿಯಷ್ಟೇ ಅಲ್ಲಿಯವರೆಗೆ ನೆಮ್ಮದಿಯ ಜೀವನ ನಡೆಸಬೇಕಾದ ಅಗತ್ಯವಿದೆ. ನಾವು ವಾಮ ಮಾರ್ಗದಲ್ಲಿ ಸಂಪಾದನೆ ಮಾಡಿದ ಆಸ್ತಿ ಪಾಸ್ತಿಗಳನ್ನು
ನಮ್ಮ ಮಕ್ಕಳು ವಿನೋದಕ್ಕಾಗಿ ವಿನಿಯೋಗ ಮಾಡಿ ಅದು ಮುಗಿದ ನಂತರ ಬಿಕ್ಷೆ ಬೇಡುವ ಹಾಗಾಗಬಾರದು ಎಂಬ ಕಾರಣಕ್ಕೆ ಮಕ್ಕಳಿಗೆ ಹಣದ ಮಹತ್ವ ಹಾಗೂ ನೌಕರಿಯ ಮಹತ್ವ ಪರಿಸರದ ಮಹತ್ವವನ್ನು ಕಲಿಸಲೇಬೇಕಿದೆ.

ಪಶಿವೈ
ಪಿ ಎಸ್ ವೈಲೇಶ ಕೊಡಗು
೧೨/೯/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು