ಮಕ್ಕಳ ಪೋಷಣೆ ನಮ್ಮ ಹೊಣೆ

ಮಕ್ಕಳ ಪೋಷಣೆ ನಮ್ಮ ಹೊಣೆ

 ಈಗಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎಂಬುದು ಅರಿವಾಗುತ್ತಿಲ್ಲ. ಆದರೆ ಇದರಲ್ಲಿ ಅವರ ತಪ್ಪೇನು ಇಲ್ಲ. ಮಕ್ಕಳು ಎಂದರೆ ಮೃದು ಮಣ್ಣಿನ ಉಂಡೆಯಂತೆ ಅದನ್ನು ನಾವು ಯಾವುದೇ ಆಕೃತಿಗೆ ನಮ್ಮಿಚ್ಚೆಯಂತೆ ಅವರು ಬಲಿಯುವ ಮುನ್ನ ಬೆಳೆಯುವ ಮುನ್ನ ತಿದ್ದಿ ತಂದು ಉತ್ತಮ ಪ್ರಜೆಯಾಗಿ ನಿಲ್ಲಿಸಬಹುದೆಂದು ಈ ಹಿಂದೆ ಇದೇ ಪತ್ರಿಕೆಯಲ್ಲಿ ಬರೆದಿದ್ದೆ ಅದನ್ನು ಮತ್ತೊಮ್ಮೆ ಪುನರುಚ್ಚರಿಸುವಂತೆ ಕೆಲವು ವಿದ್ಯಮಾನಗಳು ನಡೆದಿವೆ ಎಂದರೆ ತಪ್ಪಾಗಲಾರದು. ಮಗು ಎಂಬ ಮೃದು ಮಣ್ಣಿನ ಉಂಡೆಯನ್ನು ಸರಿಯಾದ ಮೂರ್ತರೂಪ ಕೊಟ್ಟು ( ದೈಹಿಕವಾಗಿ ಅಲ್ಲ) ಬೆಳೆಸಬೇಕಾದ ತಂದೆ ತಾಯಿಗಳಿಗೆ ಆ ನಿಟ್ಟಿನಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲವೇಕೆ ಎಂಬುದು ನನ್ನ ಬಹುದಿನಗಳ ಪ್ರಶ್ನೆ ಪ್ರಶ್ನೆಯಾಗಿ ಉಳಿಯದೆ ಉತ್ತರ ದೊರಕಿದ ಅನುಭವವನ್ನು ತಮ್ಮ ಜೊತೆಗೆ ಹಂಚಿಕೊಳ್ಳುವೆ. ಮಾನವ ಬಹು ದೊಡ್ಡ ಗಾತ್ರದ ಆನೆಯನ್ನು ಸಹ ಪುಟ್ಟ ಅಂಕುಶದ ಸಹಾಯದಿಂದ ನಿಯಂತ್ರಿಸಬಲ್ಲ. ನಾಯಿ ನರಿ ಹುಲಿ ಸಿಂಹ ಕರಡಿ ಕೋತಿಗಳಂತಹ ಛಾತಿಯಿರುವ  ಕಾಡಾಡಿ ಬೀಡಾಡಿಗಳನ್ನು ಸಹ ತನ್ನ ಕಿರುಬೆರಳ ತುದಿಯಲ್ಲಿ ಕುಣಿಸಬಲ್ಲ. ಅದಕ್ಕಾಗಿ ಮೂಕಪ್ರಾಣಿಗಳಿಗೆ ಎಂತಹ ಕಠಿಣ ಶಿಕ್ಷೆಯನ್ನೂ ನೀಡಬಲ್ಲ. ಹೀಗೆಯೇ ನಮ್ಮ ಹಿರಿಯರು ನಮಗೆ ಸಾಮ ಧಾನ ಬೇಧ ದಂಡ ಎಂಬ ಬೇರೆ ಬೇರೆ ಆಯುಧಗಳ ಸಹಾಯದಿಂದ ನಮ್ಮನ್ನು ಕೂಡ ತಿದ್ದಿರುತ್ತಾರೆ ಎಂದರೆ ನಮ್ಮ ಪೀಳಿಗೆಯ ಎಲ್ಲರೂ ಒಪ್ಪುವಂತಹ ಮಾತು. ಆಗ ನಾವಿಬ್ಬರು ನಮಗಿಬ್ಬರು ಎಂಬ ಸರಕಾರಿ ವಾಕ್ಯ ಜಾರಿಯಲ್ಲಿ ಇದ್ದಂತಹ ಸಮಯ.

ಆದರೆ ಈಗ ಗಂಡೊ ಹೆಣ್ಣೊ ಒಂದೇ ಮಗು ಸಾಕು ಈಗಿನ ಜೀವನ ವೆಚ್ಚದಲ್ಲಿ ವಿದ್ಯಾಭ್ಯಾಸದ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಅನುಕೂಲ ಎಂಬುದರ ಜೊತೆಗೆ ಹೆರಿಗೆ ಹಾಲೂಡಿಸುವುದು ಇನ್ನಿತರ ಚಟುವಟಿಕೆಗಳಿಂದ ದೇಹದ ಸೌಂದರ್ಯ ಮಾಸಿಹೋಗುವುದು ಎಂಬ ಚಿಂತನೆಯ ಮಾಡರ್ನ್‌ ತಂದೆತಾಯಿಗಳ ಸ್ವಯಂ ಘೋಷವಾಕ್ಯ. ಆದರೆ ಒಂದು ಕಣ್ಣು ಕಣ್ಣಲ್ಲ ಒಂದು ಮಗು ಮಗುವಲ್ಲ ಎಂಬ ಮಾತು ಪಾಪ ಇವರಿಗೆ ಗೊತ್ತಿದ್ದರೂ ಈಗೇನೂ ಮಾಡುವಂತಿಲ್ಲ. ಒಂದು ಮಗುವಿನ ಜನನದ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ದಂಪತಿಗಳ ಏಕಮಾತ್ರ ಕೂಸನ್ನು ಅನಿವಾರ್ಯವಾಗಿ ಕಳೆದುಕೊಂಡು ಬದುಕಿನ ಉತ್ಸಾಹವನ್ನು ಕಳೆದುಕೊಂಡು ಜೀವಂತ ಶವಗಳಂತೆ ಬದುಕುತ್ತಿರುವ ಅದೆಷ್ಟೋ ಜನರು ಈ ಜಗತ್ತಿನಲ್ಲಿ ಇದ್ದಾರೆ. ತಮ್ಮದೇ ತಪ್ಪಿನಿಂದಾಗಿ ಹೆತ್ತ ಮಕ್ಕಳು ಆತ್ಮಹತ್ಯೆಯಂಥ ಹೀನ ಕೃತ್ಯಗಳನ್ನು ಮಾಡಿಕೊಂಡ ಮಕ್ಕಳ ಪೋಷಕರು ದಿನದಿಕ್ಕೂ ಕೊರಗುತ್ತಾ ಸತ್ತಂತೆ ಬದುಕುತ್ತಿರುವರು ಸಹ ಈ ಜಗತ್ತಿನಲ್ಲಿ ಇದ್ದಾರೆ. ಅವರನ್ನು ನೋಡಿದ ಕೆಲವರು ನಾವು ನಮ್ಮ ಮಕ್ಕಳನ್ನು ದಂಡಿಸಿದರೆ ಎಲ್ಲಿ ನಮ್ಮ ಮಗು ನಮ್ಮ ಕೈತಪ್ಪಿ ಹೋಗುವುದೋ ಎಂದು ಮಕ್ಕಳನ್ನು ತಿದ್ದಿ ತೀಡದೆ ಬಾಲವೇ ನಾಯಿಯನ್ನು ಅಲ್ಲಾಡಿಸುವ ರೀತಿಯಲ್ಲಿ ಮಕ್ಕಳ ತಾಳಕ್ಕೆ ಕುಣಿಯುವ ಪೋಷಕರು ಇತ್ತೀಚೆಗೆ ಹೆಚ್ಚಾಗಿದ್ದಾರೆ.

ಇತ್ತೀಚೆಗೆ ನಮ್ಮ ಬಸ್ಸಿನಲ್ಲಿ ಒಂದು ಕುಟುಂಬ ಪಯಣಿಸುತ್ತಿತ್ತು. ಕೇವಲ ಮೂರ್ನಾಲ್ಕು ವರ್ಷದ ಗಂಡು ಮಗುವಿನ ಕೈಯಲ್ಲಿ ಸ್ಮಾರ್ಟ್ ಫೋನು ಅದನ್ನು ಹಿಡಿದ ಮಗು ಅದರಲ್ಲಿ ಇರುವ ಎಲ್ಲಾ ಕಿಟಕಿಗಳನ್ನು ತೆರೆದು ನೋಡಿ ಆನಂದಿಸುತ್ತಿತ್ತು. ಚಾಲಕನ ಎಡಗಡೆಯ ಆಸನದಲ್ಲಿ ತಂದೆ ಮತ್ತು ಮಗ ಕುಳಿತಿದ್ದರು ಬಸ್ಸಿನೊಳಗೆ ಎಲ್ಲರೂ ಮಲಗಿದ್ದರೂ ಸಹ ಈ ಮಗು ಮಲಗುವ ಲಕ್ಷಣವಿರಲಿಲ್ಲ. ತಾಯಿ ಹಿಂಬದಿಯ ಆಸನದಲ್ಲಿ ಕುಳಿತಿದ್ದರು ಆ ತಂದೆ ತಾಯಿಗಳು ಮಗುವಿನ ಚಟುವಟಿಕೆಗಳನ್ನು ನೋಡಿ ಹಿರಿ ಹಿರಿ ಹಿಗ್ಗುತ್ತಿದ್ದರು.  ಸಮಯ ಸರಿದಂತೆ ಬಸ್ಸಿನಲ್ಲಿ ಎಲ್ಲರೂ ಮಲಗಿದರು ಆದರೆ ಚಾಲಕನಾಗಿ ಮಲಗುವಂತಿಲ್ಲ ಅಲ್ಲವೇ ಹಾಗಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೆ. ಈ ಮಗು ಮಾತ್ರ ಆಗಾಗ್ಗೆ ಮೊಬೈಲ್ ಫೋನ್ ತೆರೆದು ನೋಡುವುದು ಮಾಡುತ್ತಿತ್ತು. ಮುಂದಿನ ಬಸ್ ನಿಲ್ದಾಣದಲ್ಲಿ ಆ ಪೋಷಕರನ್ನು ಈ ಬಗ್ಗೆ ವಿಚಾರಿಸಿದೆ ಅಯ್ಯೋ ಸರ್ ಅವನು ಮೊಬೈಲ್ ಫೋನ್ ನಮಗೆ ಕೊಡುವುದೇ ಇಲ್ಲ ಬಲಾತ್ಕಾರವಾಗಿ ಕಿತ್ತುಕೊಂಡರೆ ಅತ್ತು ಕರೆದು ರಂಪ ಮಾಡುತ್ತಾನೆ ಜೊತೆಗೆ ಇರುವುದು ಒಬ್ಬನೇ ಮಗ ಎಂದು ಅಲವತ್ತುಕೊಂಡರು. ಬಿಡಿ ಅವರ ಮೊಬೈಲ್ ಅವರ ಮಗ ನನಗೇನು ಎಂದು ಸುಮ್ಮನೆ ನನ್ನ ಕರ್ತವ್ಯ ನಿರ್ವಹಿಸತೊಡಗಿದೆ. ಆದರೆ ಮುಂದೆ ಆ ಹುಡುಗನ ಕಣ್ಣಿನ ಗತಿ ಏನು ಆತ ಮುಂದಿನ ದಿನಗಳಲ್ಲಿ ಏನಾಗಬಹುದು. ಆತನ ತಂದೆ ತಾಯಿಗಳು ಅವರಿಗಿರುವ ಒಬ್ಬನೇ ಮಗನನ್ನು ದಂಡಿಸದೆ ಅವನ ಇಷ್ಟದಂತೆ ಬೆಳಸಿದರೆ ಮುಂದೆ ಆತ ಸಮಾಜದ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದು ಎಂದು ನನ್ನ ಆಲೋಚನೆಯ ಧಾಟಿ ಸಾಗಿತ್ತು.

ಇನ್ನೊಂದು ಘಟನೆ ನನ್ನ ಮನ ಕಲಕಿತು. ಇತ್ತೀಚಿಗೆ ಒಂದು ದಿನ ಒಬ್ಬರ ಮನೆಗೆ ಹೋಗುವ ಅನಿವಾರ್ಯ ಸಂದರ್ಭ ಒದಗಿಬಂತು. ನನಗೆ ಯಾರದೇ ಮನೆಗೆ ಹೋಗುವ ಬಗ್ಗೆ ಅಂತಹ ಆಸಕ್ತಿ ಇರುವುದಿಲ್ಲ  ಆದರೆ ಆ ದಿನದ  ಸಂದರ್ಭ ಕೂಡ ಹೋಗುವ ಹಾಗಿತ್ತು. ನನ್ನ ಮನೆಯಾಕೆ ಕೂಡ ಜೊತೆಯಲ್ಲಿ ಇದ್ದರು ಅವರ ಮನೆಯಲ್ಲಿ ಒಂದೆರಡು ವರ್ಷದ ಮಗುವನ್ನು ಆಟ ಆಡಲು ಬಿಟ್ಟು ನಮಗೆ ಆತಿಥ್ಯವನ್ನು ನೀಡುವ ಕಾರಣದಿಂದಾಗಿ ಅವರು ತಮ್ಮ ಗಮನವನ್ನು ಬೇರೆ ಕಡೆಗೆ ಹರಿಸಬೇಕಾಯಿತು. ಆ ಮಗು ಅಲ್ಲಿಯೇ ಇದ್ದ ಒಂದಷ್ಟು ಆಟದ ಸಾಮಾನುಗಳೊಂದಿಗೆ ತನ್ನ ಬಾಲಲೀಲೆಗಳನ್ನು ತೋರಿಸತೊಡಗಿತು ಮೊದ ಮೊದಲು ಸಹ್ಯವಾಗಿದ್ದ ಆಟ ಬರು ಬರುತ್ತಾ ಆಟ ಅಟಾಟೋಪವಾಗತೊಡಗಿತು. ಆತಿಥೇಯ ಮಹಿಳೆ ಏನು ಹೇಳಿದರು ಸಹ ಆ ಚಿಕ್ಕ ಮಗು ತನ್ನ ಹಠ ಬಿಡುತ್ತಿಲ್ಲ. ಅತಿಥಿಗಳ ಮುಂದೆ ಮಗುವಿಗೆ ಗದರಿಸುವುದು ಹೀಗೆಂದು ಸಂಕೋಚದಿಂದ ಸುಮ್ಮನಿರುವರೆಂದು ನಾವು ತಿಳಿದು ಸುಮ್ಮನಾದೆವು. ಅಲ್ಲಿಯೇ ಇದ್ದ ಆಕೆಯ ಸಂಬಂಧಿಯೋರ್ವರು ಆ ಮಗು ಆಕೆಯದಲ್ಲ ಅದನ್ನು ತಮ್ಮ ಸ್ವಂತದ ಬಂಧುಗಳ ಬಳಿ ಚಿಕ್ಕಂದಿನಿಂದಲೇ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಹಾಗಾಗಿ ಆ ಮಗುವಿಗೆ ಖಂಡಿಸಿ ದಂಡಿಸಿ ಬುದ್ಧಿ ಕಲಿಸಲು ಅವಳಿಗೆ ಸಾಧ್ಯವಾಗುತ್ತಿಲ್ಲ ಎಂದರು. ನಾವಾಗ ಸಹಜವಾಗಿ ಬಂಧುಗಳ ಮಗುವನ್ನು ದತ್ತು ತೆಗೆದುಕೊಳ್ಳುವ ಬದಲು ಅನಾಥ ಮಗುವನ್ನು ಪಡೆದಿದ್ದರೆ ಒಂದು ಅನಾಥ ಮಗುವಿನ ಪೋಷಣೆ ಮಾಡುವ ಅವಕಾಶ ಸಿಗುತ್ತಿತ್ತಲ್ಲವೇ ಎಂದು ಕೇಳಿದೆವು. ಅದಕ್ಕೆ ಅವರು ಬೇಕಾದಷ್ಟು ಆಸ್ತಿ ಇದೆ ಅವರ ಮನೆಯವರಿಗೆ ಆಸ್ತಿ ಹೊರಗೆ ಹೋಗುವುದು ಇಷ್ಟವಿಲ್ಲ ಹಾಗಾಗಿ ಬಂಧುಗಳ ಮಗುವನ್ನು ದತ್ತು ಪಡೆದಿದ್ದಾರೆ ಎಂದರು. ಅಂದರೆ ಇಲ್ಲಿ ಆಸ್ತಿ ಪಾಸ್ತಿ ಹೊರಗಡೆ ಹೋಗಬಾರದು. ದತ್ತು ತೆಗೆದುಕೊಳ್ಳುವ ಮಗು ಕೂಡ ನಮ್ಮದೇ ಜಾತಿಯದಾಗಿರಬೇಕು ಇವೆಲ್ಲ ಚಿಂತನೆಯ ವಿಚಾರ ಅಲ್ವೇ. ಗಿಡವಾಗಿ ಬಗ್ಗದ ಬಗ್ಗಿಸಲಾಗದ ಮಗುವಿನ ಬದುಕು ಮುಂದೆ ಹೇಗಿರಬಹುದು ಯಾರಿಗೆ ಗೊತ್ತು ಹೋಗಲಿ ಬಿಡಿ.

ಈಗಿನ ಕಾಲದ ಮಕ್ಕಳಿಗೆ ಹೆಬ್ಬೆರಳಿನ ತುದಿಯಲ್ಲಿ ಯೋಗ್ಯ ಅಯೋಗ್ಯ ವಿಚಾರ ವಸ್ತುಗಳು ಮೊಬೈಲ್ ಇಂಟರ್ನೆಟ್ ವಾಟ್ಸ್ ಆಪ್ ಕಂಪ್ಯೂಟರ್ ಮುಖಾಂತರ ಅತ್ಯಂತ ಸುಲಭವಾಗಿ ದೊರೆಯುತ್ತಿರುವುದರ ಜೊತೆಗೆ ಪ್ರಯೋಗಶೀಲತೆ ಎಂಬುದು ಕಾಲೇಜಿನ ಪ್ರಯೋಗಶಾಲೆಯಂತಾಗಿರುವುದು ಇಂದಿನ ಅತ್ಯಾಚಾರ ಅನಾಚಾರದ ದುರಂತಗಳಿಗೆ ಹೆಬ್ಬಾಗಿಲು ತೆರೆದಂತಾಗಿದೆ ಎಂದರೆ ಅತಿಶಯವಾದ ಮಾತಲ್ಲವೆನ್ನಬಹುದು ಅಲ್ಲವೆ. ಹಾಗೂ ಪ್ರಯೋಗ ಮಾಡಲು ಅತ್ಯಂತ ಗುಪ್ತ ವಿಚಾರಗಳಾದ ಲೈಂಗಿಕ ಚಟುವಟಿಕೆಗಳನ್ನು ಸಹ ಆರಿಸಿಕೊಂಡು ಜೊತೆಗೆ ಅದನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಯಬಿಡುವುದು ಇವೆಲ್ಲವೂ ಅದೆಷ್ಟು ಸೂಕ್ತವಾಗಿದೆ ಎಂಬುದು ಅರಿಯದಾಗಿದೆ. ಒಂದೇ ಮಗುವೆಂದು ನಿಂದಿಸಿ ಖಂಡಿಸಿ ಕಲಿಸದೇ ಅವರಾಡಿದ್ದೇ ಆಟವೆಂಬಂತೆ ಮಕ್ಕಳ ಚಟುವಟಿಕೆಗಳನ್ನು ಕುರುಡರಂತೆ ಪ್ರೋತ್ಸಾಹಿಸುತ್ತಿರುವ ಪೋಷಕರು. ಕಂಡವರ ಮಕ್ಕಳನ್ನು ನಮ್ಮದೇ ಮಕ್ಕಳೆಂದು ತಿಳಿದು ಆಕ್ಷೇಪಿಸುವ ಪ್ರೊಫೆಸರ್ ಶಿಕ್ಷಕರನ್ನು ಕೇವಲವಾಗಿ ಕಾಣುವ ಕೆಲವು ಪೋಷಕರು, ಮಕ್ಕಳನ್ನು ತಮ್ಮ ಸ್ವಂತ ತೆವಲಿಗೆ ಬಳಸಿಕೊಳ್ಳುವ ಬೆರಳೆಣಿಕೆಯಷ್ಟು ಶಿಕ್ಷಾರ್ಹ ಶಿಕ್ಷಕರು ಧನಾರ್ಜನೆಯ ಜೊತೆಗೆ ದೈಹಿಕ ವಾಂಚೆಗಳನ್ನು ಪೂರೈಸಿಕೊಳ್ಳುವ ಉದ್ದೇಶವಷ್ಟೇ ಹೊಂದಿರುವ ಸಮಾಜದ ದುರ್ಬುದ್ಧಿ ತುಂಬಿದ ಜನಗಳು ತಾನೂ ಕೆಟ್ಟು ಪರರನ್ನು ಕೆಡಿಸುವ ಕಿಡಿಗೇಡಿಗಳು ತುಂಬಿರುವ ಈ ಜಗತ್ತಿನಲ್ಲಿ ಅತ್ಯಾಚಾರ ಅನಾಚಾರವಲ್ಲದೇ ಮತ್ತೇನು ತಾನೇ ಕಾಣಸಿಗಲು ಸಾಧ್ಯ ಅಲ್ಲವೇ.
ಗಿಡವಾಗಿ ಬಗ್ಗದೇ ಇರುವುದು ಮರವಾಗಿ ಬಗ್ಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿತು ಇನ್ನಾದರೂ ತಮ್ಮ ಮಕ್ಕಳನ್ನು ಸಮಯಕ್ಕೆ ತಕ್ಕಂತೆ ಪ್ರೀತಿಸಿ ಮುದ್ದಿಸಿ ತಿದ್ದಿ ಬುದ್ಧಿ ಕಲಿಸಲು ಸಾಧ್ಯವಾದರೆ ಪೋಷಕರಿಗೆ ಅದಕ್ಕಿಂತ ಹೆಚ್ಚಿನ ಸೌಭಾಗ್ಯ ಬೇರೆ ಯಾವುದೂ ಇಲ್ಲ ಎಂದು ನನ್ನ ಅಭಿಪ್ರಾಯ.
ಯಾರದೋ ಮರ್ಜಿಗೆ ಮಕ್ಕಳನ್ನು ಉದಾಸೀನ ಮನೋಭಾವದಿಂದ ದಯವಿಟ್ಟು ಬೆಳೆಸಬೇಡಿ. ಜೀವನವೆಂದರೆ ಕೇವಲ ಶಿಸ್ತು ಸಂಯಮ ತುಂಬಿದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗುವುದಷ್ಟೇ ಅಲ್ಲ  ಬಾಳೆಂಬ ಪಯಣದಲ್ಲಿ ಗುರುಹಿರಿಯರ ಮನೆ ಮನ ಗೆದ್ದು ಹತ್ತು ಜನ ಮೆಚ್ಚಿ ಹೊಗಳುವ ಮಕ್ಕಳಾದರೆ ಸಾಕು ಎಂಬುದನ್ನು ಮಕ್ಕಳಿಗೆ ಕಲಿಸುವ.

ತಮ್ಮವ
ವೈ.ಕೊ.
ವೈಲೇಶ ಪಿ ಎಸ್ ಕೊಡಗು
೧೨/೭/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು