ಹುಟ್ಟಲು ಕಷ್ಟವಿದೆ
ಹುಟ್ಟಲು ಕಷ್ಟವಿದೆ
ಮೆಟ್ಟದೇ ಮೋಡಗಳ
ತಟ್ಟಿಬಿಡೊ ಕೋಪವಿದೆ ತಾರೆಗಳಲಿ
ಮುಟ್ಟಲಾರದೆ ಹೋದ್ರು
ಗಟ್ಟಿಯಾಗೊಮ್ಮೆ ಕಣ್
ಕಟ್ಟಬಾರದೆ ಹಣತೆ ಬೊಮ್ಮಲಿಂಗ
ಮಾಡಿನೊಳ ನಕ್ಷತ್ರ
ಮೂಡುವುದ ನೋಡಿಬಿಡೆ
ಜಾಡು ಹಿಡಿಯಲು ಬಿಡದು ಮೋಡನೋಡಿ
ಕೋಡು ಬಂದಂತೆ
ಪಾಡು ಕೆಡಿಸುತ್ತಿದೆಯೆ
ಹಾಡುತ್ತ ಸುರಿವಮಳೆ ಬೊಮ್ಮಲಿಂಗ
ಬೆಚ್ಚದಿರಿ ಮಳೆಗೆಂದು
ಹೊಚ್ಚುತಿದೆ ಕಳೆದುದನು
ಬೆಚ್ಚನೆಯ ಹೊದಿಕೆಯನು ಹೊದ್ದು ಮಲಗಿ
ನಿಚ್ಚಳದಿ ಮಳೆಸುರಿದು
ಪಚ್ಚೆಗಿದು ಕಳೆ ನೀಡಿ
ಹೆಚ್ಚಿಸುವ ಕಾಯಕವು ಬೊಮ್ಮಲಿಂಗ
ಹಚ್ಚಿಬಿಡಿ ಹಣತೆಗಳ
ಕೆಚ್ಚೆದೆಯ ನುಡಿಯಿರಲಿ
ಹಚ್ಚಲಾರೆವು ನಾವು ಮದ್ದು ಬತ್ತಿ
ಕಚ್ಚಲಾರದ ಜೀವ
ಪೆಚ್ಚು ಮೋರೆಯ ತೋರಿ
ಪಿಚ್ಚೆಂದು ಮಡಿಯುತಿವೆ ಬೊಮ್ಮಲಿಂಗ
Comments
Post a Comment