ಹಣತೆ ಹಚ್ಚೋಣ ಬನ್ನಿ

ಹಣತೆ ಹಚ್ಚೋಣ‌‌ ಬನ್ನಿ
~~~~~~~~~~~~

ದೀಪಾವಳಿ ಬಗ್ಗೆ ಲೇಖನ ಬರೆಯಬೇಕು ಏನೆಂದು ಬರೆಯಲಿ.‌ ಕಳೆದೆರಡು ವರ್ಷಗಳಲ್ಲಿ ಮನೆಗೆ ದುಡಿದು ತಂದು ಸಂಸಾರದ ಜವಾಬ್ದಾರಿ ಹೊತ್ತಿದ್ದ ಮನೆಯ ಯಜಮಾನನನ್ನು ಕಳೆದುಕೊಂಡ ನಂತರ ಮನೆಯ ನಿತ್ಯದ ದೇವರ ದೀಪ ಹಚ್ಚಲು ಎಣ್ಣೆ ಬತ್ತಿ ಇರದ ಮನೆ ಮನಗಳ ಕಷ್ಟವನ್ನು ಬರೆಯಲೇ?. ದೇಶದ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ದಿವಾಳಿತನವನ್ನು ಕಂಡು ಸಂಭ್ರಮಿಸುತ್ತಾ ಕೋಟಿ ಕೋಟಿ ಲೂಟಿಗೈದ ಮೇಟಿಗಳು ಜೈಲುವಾಸ ಅನುಭವಿಸಿ ಹೊರಬಂದ ನಂತರ ತಲೆಯ ಮೇಲೆ ಹೊತ್ತು ಹೊಗಳುವ ಆ ಮೂಲಕ ಏನಾದರೂ ಸಿಗಬಹುದು ಎಂಬಾಸೆ ಹೊತ್ತ ನಮ್ಮದೇ ಬಂಧುಗಳ ಹೀನ ಸ್ಥಿತಿಯನ್ನು ಕಂಡು ಮನಕ್ಕೆ ತೋರಿದ ಅಳಲು ನೋಡಿಕೊಳ್ಳಲೇ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಸಮಯ ಮಳೆ ಬರುವುದೋ ಇಲ್ಲವೋ ಎಂಬುದನ್ನು ತಿಳಿಸುವ ಹವಾಮಾನ ಇಲಾಖೆಯ ಕಾರ್ಯವೈಖರಿಯನ್ನು ಏನೆಂದು ಬಣ್ಣಿಸಲಿ. ಬೆಳಗೆದ್ದು ನಮ್ಮ ಮನ ಸಂತೋಷಗೊಳಿಸುವ ಜ್ಯೋತಿಷ್ಯಿಗಳನ್ನು ಹಾಡಿ ಹೊಗಳಲೇ ನೀವೇ ಹೇಳಿ. 

ಕಾಲವನ್ನು ತಡೆಯೋರು ಯಾರೂ ಇಲ್ಲ. ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ. ರೇಡಿಯೋ ತನ್ನ ಪಾಡಿಗೆ ತಾನು ಹಾಡುತ್ತಿದೆ ಯಾರು ಕೇಳಲಿ ಬಿಡಲಿ ಬ್ಯಾಟರಿ ಮುಗಿಯುವವರೆಗೂ ಅಥವಾ ಅದನ್ನು ನಿಲ್ಲಿಸುವವರೆಗೂ.ಹೌದು ನಿನ್ನೆ ಮೊನ್ನೆಯಂತೆ ಇದೆ ಜನವರಿ ೨೦೧೯ ರಂದು ಹೊಸವರ್ಷದ ಸಂತಸವನ್ನು ಹಂಚಿಕೊಂಡ ಸಂಭ್ರಮ. ಇಂದಾಗಲೇ ದೀಪಾವಳಿ ಕಣ್ಣೆದುರು ನಿಂತಿದೆ. ಈಗಾಗಲೇ ಪಟಾಕಿಗಳ ಅಂಗಡಿಯಲ್ಲಿ ಪಟಾಕಿ ಪ್ರದರ್ಶನಕ್ಕೆ ಇಡಲಾಗಿದೆ ವ್ಯಾಪಾರಸ್ಥರು ಆತಂಕದ ಮೋರೆ ಹೊತ್ತು ಹಾಕಿದ ಬಂಡವಾಳ ಜೊತೆಗೆ ಲಾಭಾಂಶ ಪಡೆಯಲು ಕ್ಷಣಗಳನ್ನು ಎಣಿಸುತ್ತಿದ್ದರೆ ಅತ್ತ ಪ್ರಕೃತಿ ಪ್ರೇಮಿಗಳು ಎಂದುಕೊಂಡವರು ವಾಯು ಮಾಲಿನ್ಯ ಶಬ್ದ ಮಾಲಿನ್ಯ ಇತ್ಯಾದಿ ನೆಪವೊಡ್ಡಿ‌ ಹಬ್ಬದ ಸಂದರ್ಭದಲ್ಲಿ ಅವಘಡಗಳು ಸಂಭವಿಸದ ಹಾಗೆ ಕಾಪಾಡುವರೋ ಅಥವಾ ಅದೇ ನೆಪದಲ್ಲಿ ಒಂದಷ್ಟು ಬಾಚಿಕೊಳ್ಳುವ ತಯಾರಿಯಲ್ಲಿ ಇರುವರೋ ಅರಿಯದಾಗಿದೆ. ಆದರೆ ಕಾಲಚಕ್ರ ಉರುಳಿ ಚಳಿಗಾಲದ ಕಡೆಗೆ ನಡೆದರೂ ಮಳೆ ಮಾತ್ರ ಅಲ್ಲಿಷ್ಟು ಇಲ್ಲಿಷ್ಟು ಇಷ್ಟ ಬಂದಷ್ಟು ಸುರಿಸಿ ಇಷ್ಟವಿದ್ದರೂ ಇಲ್ಲದಿದ್ದರೂ ಕಷ್ಟಪಟ್ಟು ದುಡಿದು ಬೆಳೆದ ಬೆಳೆಯ ಜೊತೆಗೆ ಮನೆ ಮಾರು ತೋಟ ಗದ್ದೆಗಳೊಡನೆ ಪ್ರಾಣದ ಜೊತೆಗೆ ಮಾನವನ್ನು ಹಾರಾಜು ಹಾಕುತ್ತಿದೆ. ಸರಕಾರವನ್ನು ನಿಂದಿಸುವವರಿಗೆ ಸುಗ್ರಾಸ ಭೋಜನ ನೀಡುತ್ತಿದೆ. ಗೆಬರಿಕೊಳ್ಳಲು ಕಾತುರದಿಂದ ಕಾಯುತ್ತಿರುವವರು ಕೋಟಿಗಳ ಲೆಕ್ಕದಲ್ಲಿ ಕನಸು ಕಾಣುತ್ತಾ ಬೇಡಿಕೆ ಇಡುತ್ತಿದ್ದಾರೆ. ನಿಜವಾದ ಸಂತ್ರಸ್ತರು ಅಳಿದುಳಿದ ಮೂಲ ಕಚ್ಚಾ ವಸ್ತುಗಳನ್ನು ಮತ್ತೆ ಕ್ರೋಢೀಕರಿಸಿ ಎದ್ದುನಿಲ್ಲುವ ಪ್ರಯತ್ನವನ್ನು ಬಿದ್ದ ಮರುಗಳಿಗೆಯೇ ಆರಂಭಿಸಿದ್ದಾರೆ.  ಮತ್ತು ಅದರಲ್ಲಿಯೇ ಮುಳುಗಿ ಗೆಲುವು ಕಾಣುತ್ತಾರೆ
ಹುಸಿ ನಿರೀಕ್ಷೆಗಳನ್ನು ಹಾಸಿ ಹೊದ್ದು ಮಲಗಿದ ಭೂಪ ಆಗಾಗ ಎದ್ದು ಯಾರಾದರೂ ಬಂದರೋ ನನಗಾಗಿ ಏನಾದರೂ ತಂದರೋ ಎಂದು ಮಲಗಿ ಮಲಗಿ ಇನ್ನು ಮತ್ತೇಳದಂತೆ ಮಲಗಿಯೇ ಬಿಟ್ಟಿದ್ದಾನೆ. ಆತನನ್ನು ಚಿತ್ರೀಕರಿಸಿದ ಒಂದಷ್ಟು ಚಾನೆಲ್‌ಗಳು ನಿಜವಾದ ಸಂತ್ರಸ್ತರು ಸ್ವತಂತ್ರವಾಗಿ ಎದ್ದು ನಿಲ್ಲುವ ಪ್ರಯತ್ನ ಮಾಡಿದವರನ್ನು ಕಡೆಗಣಿಸಿ ಮುಂದೆ ಸಾಗುತ್ತಾ ಟಿ ಆರ್ ಪಿ ತಡಕಾಡುತ್ತಿವೆ. "ದೀಪದಿಂದ ದೀಪ ಹಚ್ಚೆ ದೀಪಾವಳಿ" ಎಂಬುದು ಎಲ್ಲರೂ ಬಲ್ಲ ವಿಷಯ ಆದರೆ ಕತ್ತಲೆಯಲ್ಲಿ ಬೆಳಕು ಚೆಲ್ಲುವ ಬದಲಿಗೆ ಬೆಳಕಿನಿಂದ ಕತ್ತಲೆಯ ಕಡೆಗೆ ಬಲಾತ್ಕಾರವಾಗಿ ದೂಡುತ್ತಿರುವುದಿಂದು ವಿಪರ್ಯಾಸವೇ ಸರಿ. ಅಗತ್ಯ ವಿಷಯಗಳ ಬಗ್ಗೆ ಮಾಹಿತಿ ನೀಡಬೇಕಾದವರು ಹಣದ ಹಿಂದೆ ನಡೆಯುತ್ತಾ ತಮ್ಮ ಜವಾಬ್ದಾರಿ ಮರೆತು ಹಣ ಸಂಪಾದನೆಗೆ ಆಧ್ಯತೆ ನೀಡಿರುವುದು ಉತ್ತಮ ನಾಗರೀಕತೆಯ ಲಕ್ಷಣಗಳನ್ನು ಹೊಂದಿರುವ ಸಾಧ್ಯತೆ ಇದೆ ಎನಿಸುವುದಿಲ್ಲ. 

ವಿಷ್ಣುವಿನ ದಶಾವತಾರದ ಅಂತಿಮ ಅವತಾರ ಎನಿಸುವ ಕಲ್ಕಿ ಭಗವಾನ್ ಹೆಸರು ಹೇಳುವ ಧರ್ಮಗುರು? ಅಧರ್ಮವಾಗಿ ಸಂಪಾದಿಸಿದ ಕೋಟಿ ಕೋಟಿಯಷ್ಟು ಹಣವನ್ನು ಹೊಂದಿದ್ದರೂ ಕೂಡ ತನ್ನ ಭಕ್ತರಿಗೆ ನಿಮ್ಮ ಏಳಿಗೆಗಾಗಿ ನಾವು ತರಗತಿಗಳನ್ನು ನಡೆಸುತ್ತಿದ್ದೇವೆ ನಿಮ್ಮ ಶ್ರೇಯಸ್ಸಿಗಾಗಿ ಪೂಜೆ ಹವನ ಹೋಮಗಳನ್ನು ನಡೆಸಲಾಗುತ್ತಿದೆ ಬನ್ನಿ ಎಂಬ ಆಹ್ವಾನವನ್ನು ಪತ್ರಿಕೆಯ ಮೂಲಕ ಇಂಟರ್ನೆಟ್ ಮೂಲಕ ಹರಿಯಬಿಡುತ್ತಿರುವುದು ಕಂಡು ಯಾರು ಯಾರನ್ನು ರಕ್ಷಣೆ ಯಾ ಭಕ್ಷಣೆ ಮಾಡುತ್ತಿದ್ದಾರೆ ಎಂದು ಅರಿವಾಗದಂತಿದೆ. ದೀಪಾವಳಿ ಕೂಡ ವಿಷ್ಣುವಿನ ಅವತಾರವಾದ ವಾಮನನ ಕಥೆಯನ್ನು ಹೇಳುತ್ತದೆ ಎಂಬುದನ್ನು ನಾವೆಲ್ಲರೂ ಬಲ್ಲೆವು. ಈಗ ನಡೆಯುತ್ತಿರುವ ಅನಾಚಾರಗಳನ್ನು ಅಧರ್ಮವನ್ನು ನಿಗ್ರಹಿಸಲು ಸಾಕ್ಷಾತ್ ಹರಿಯೇ ಬಂದರೂ ದುಷ್ಟ ದುರುಳರನ್ನು ಸೆದೆಬಡಿಯಲು ಬಾಲಂಗೋಂಚಿಗಳು ಬಿಡುವರೋ ಎಂಬ ಸಂಶಯವನ್ನು ಮನ ಕೇಳುತ್ತಿದೆ. ಇನ್ನು ಹಬ್ಬದ ವಾತಾವರಣ ನಿರ್ಮಿಸಲು ಗುಡುಗು ಮಿಂಚುಗಳು ಪಡುತ್ತಿರುವ ಶ್ರಮವನ್ನು ಕಣ್ತುಂಬಿಕೊಳ್ಳುವುದರ ಹೊರತಾಗಿ ಬಡರೈತರು ಕೂಲಿ ಕಾರ್ಮಿಕರಿಗೆ ಬೇರೆ ಮಾರ್ಗ ತೋರುತ್ತಿಲ್ಲವೆನ್ನಬಹುದು. ಹಾಗಾದರೆ ಉಳ್ಳವರು ಎಂದೆನ್ನಬೇಡಿ ಅವರಿಗೆಲ್ಲ ಇಡಿ ಇಡಿಯಾಗಿ ರಾತ್ರೋರಾತ್ರಿ ನುಗ್ಗಿಬಿಡುವ ಐಟಿ, ಇಡಿಯವರದೇ ಕನಸು. ಅದರ ನಿವಾರಣೆಗಾಗಿ ಎದುರು ನಿಂತಿರುವ ಅತ್ಯಂತ ದೊಡ್ಡ ದೊಡ್ಡ ಕುಳಗಳ ಹಗರಣಗಳ, ಆಸ್ತಿಗಳ ವಿವರಣೆ ಸಂಗ್ರಹಿಸುವ ಮೂಲಕ ತಮ್ಮ ರಕ್ಷಣಾ ಕಾರ್ಯವನ್ನು ವಿಶಿಷ್ಟವಾದ ರೀತಿಯಲ್ಲಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವರು ಎಂಬುದನ್ನು ಸೂಚಿಸುತ್ತದೆ. ಕೊಡಗಿನ ಮೂಲ ನಿವಾಸಿಗಳಿಗೆ ದೀಪಾವಳಿ ಎಂಬುದು ಒಂದು ಸಾಂಕೇತಿಕವಾದ ಹಬ್ಬವಷ್ಟೇ ಆದರೆ ಮೊನ್ನೆ ಮೊನ್ನೆ ತಾನೆ ತುಲಾ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕೊಡಗಿನ ಮೂಲ ನಿವಾಸಿಗಳು ಕೂಡ ಎಲ್ಲಾ ರೀತಿಯ ಹಬ್ಬಗಳನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುತ್ತಾರೆ ಎನ್ನಬಹುದು. ಇನ್ನು ಕೇರಳ ಮೂಲದ ಕೊಡಗಿನ ನಿವಾಸಿಗಳು ತಮ್ಮ ತಮ್ಮ ಹಬ್ಬಗಳನ್ನು ಆಚರಿಸುವ ಜೊತೆಗೆ ಸ್ಥಳೀಯ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಕೊಡಗಿನ ಆಜುಬಾಜು ಜಿಲ್ಲೆಗಳಿಂದ ನಾನಾ ಕಾರಣಕ್ಕೆ ಮಹಾರಾಜರ ಕಾಲದಿಂದಲೂ ವಲಸೆ ಬಂದಿರುವವರು ಅತ್ತ ಕೊಡಗಿನ ಮೂಲ ನಿವಾಸಿಗಳ ಜೊತೆಗೆ ಕೊಡಗಿನ ಮೂಲ ಹಬ್ಬಗಳನ್ನು ಆಚರಿಸುತ್ತಾ ಯುಗಾದಿ ದೀಪಾವಳಿ ಕೂಡ ಆಚರಿಸುವ ಮೂಲಕ ಕೊಡಗಿನ ನಿವಾಸಿಗಳು ಯಾವುದೇ ತಾರತಮ್ಯವನ್ನು ತೋರದೆ ಎಲ್ಲರೊಂದಿಗೆ ಬೆರೆತು ಬಾಳುತ್ತಿರುವ ಹೆಮ್ಮೆಯ ಜಿಲ್ಲೆ ಎಂಬುದನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. 

ಪಶಿವೈ 
ಪಿ ಎಸ್ ವೈಲೇಶ ಕೊಡಗು 
೨೭/೧೦/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು