ಗಝಲ್
ಮುಖಕಮಲ ಕಾಣದಿದ್ದರೂ ಸರಿಯೇ ಹೊಗಳುತಿಹರು ನೋಡು ಸಖಿ
ಮುಖಾಮುಖಿಯಾದರೂ ಗುರುತು ಹಿಡಿಯಲಾರರಿವರು ನೋಡು ಸಖಿ
ನಿನ್ನದೊಂದು ಮುಖಧರೆಯ ಚಿತ್ರಕ್ಕೆ ಸಾವಿರಗಟ್ಟಲೇ ಲೈಕು ಕಾಮೆಂಟು
ಹೊನ್ನಿನಂತ ಸುವಿಚಾರ ಮಂಡನೆಯೆಡೆ ತಿರುಗಿ ನೋಡರು ನೋಡು ಸಖಿ
ಅಂಗಾಂಗ ಹೊಗಳುತ ಮಂಗಗಳಂತಾಡುವರ ಒಳಗಿಣುಕ ಬಿಡುವೆಯೇನು
ಸಂಗಸುಖವ ದೋಚುವರೆ ಸಾಲುಗಟ್ಟಿ ನಿಂತಿರುವರಿಲ್ಲಿಹರು ನೋಡು ಸಖಿ
ಒಳಪೆಟ್ಟಿಗೆಯ ಒಳ ಪೆಟ್ಟಿಗೆ ಒಳತೋಟಿಯದು ಹೊರಗಿಡಲಾಗದೇ ಕೊರಗಿದೆ
ತಳ ಒಡೆದ ದೋಣಿಯಲಿ ನಿಂದು ದ್ವಿ ನಾವೆಯೊಳು ಸಾಗಿಹರು ನೋಡು ಸಖಿ
ಅತ್ತ ಇತ್ತ ನೋಡಿ ತತ್ತಿಯಿಡುವ ಕೋಗಿಲೆಯ ರಾಗಗಳಿಗೆ ಪ್ರಶಸ್ತಿಗಳಿವೆ ಕೇಳು
ಚಿತ್ತದೊಳಗಿಹ ತತ್ತಿಯ ಭಿತ್ತಿಗೊಳಿಸಿದೊಡೆ ಕತ್ತಿಯಂತಾಡುವರು ನೋಡು ಸಖಿ
ಕಂಡುದು ಕಂಡ ಹಾಗೆ ನುಡಿಯುವುದು ಸಿಡಿಲನ ಮಾತಿನ ಮರ್ಮವೆಂಬೆನು
ಕೆಂಡದಂತಾಡಿ ಕಂಡವರ ಕರೆದು ಬರಿದೇ ಕೆರಳಿ ಬರುತಿಹರು ನೋಡು ಸಖಿ.
Comments
Post a Comment