ಮುಕ್ತಕ ಮಾಲೆ


ಮುಕ್ತಕ ಕುಸುಮ ೧೧೧

ಗಲ್ಲಿ ಗಲ್ಲಿಗಳಲ್ಲಿ ಲಿಲ್ಲಿ ಹೂಗಳು ಬೆಳೆದು
ನಿಲ್ಲಲಲ್ಲಿಯೆ ಮಹಿಳೆ ಮೆರೆಯುತಿಹಳು.|
ಮಳ್ಳಿ ಸುಮವದು ಮೆಲ್ಲ ಮೆಲ್ಲನೆನುತ ಮನದೊಳ-
ಗಿಳಿಯುತಲಿ ನಡೆಯುತಿದೆ ಬೊಮ್ಮಲಿಂಗ||

ಗಲ್ಲಿ ಗಲ್ಲಿಗಳಲ್ಲಿ
ಲಿಲ್ಲಿ ಹೂಗಳು ಬೆಳೆದು
ನಿಲ್ಲಲಲ್ಲಿಯೆ ಮಹಿಳೆ ಮೆರೆಯುತಿಹಳು.|
ಮಳ್ಳಿ ಸುಮವದು ಮೆಲ್ಲ
ಮೆಲ್ಲನೆನುತ ಮನದೊಳ-
ಗಿಳಿಯುತಲಿ ನಡೆಯುತಿದೆ ಬೊಮ್ಮಲಿಂಗ||

ಮುಕ್ತಕ ಕುಸುಮ ೧೧೨

ಬಾಲಕರ ನಡೆನುಡಿಯ ಪಾಲಕರು ನಿರುಕಿಸುತ
ಕಾಲನಿಯಮದ ಮಹಿಮೆ ತಿಳಿಸಬೇಕು
ಬಾಲಿಕೆಯ ವೇಷದಲಿಪಾಲಿಸಲು ಸಂಯಮದ
ಕೋಲಿರಲಿ ಹರೆಯದೊಳು ಬೊಮ್ಮಲಿಂಗ

ಬಾಲಕರ ನಡೆನುಡಿಯ
ಪಾಲಕರು ನಿರುಕಿಸುತ
ಕಾಲನಿಯಮದ ಮಹಿಮೆ ತಿಳಿಸಬೇಕು
ಬಾಲಿಕೆಯ ವೇಷದಲಿ
ಪಾಲಿಸಲು ಸಂಯಮದ
ಕೋಲಿರಲಿ ಹರೆಯದೊಳು ಬೊಮ್ಮಲಿಂಗ

ಮುಕ್ತಕ ಕುಸುಮ ೧೧೩

ರಾಹುಗಳ ಮೋಸದೊಳು ಬಾಹುಗಳ ಬಂಧನಕೆ
ಮೋಹದಲಿ ಸಿಲುಕಿರಲು ದಾರಿ ತಪ್ಪು
ದೇಹದಿಹ ವಸ್ತ್ರವನು ಮಾಹೆಯಲಿ ವೀಕ್ಷಿಸಿರೆ
ದಾಹಗಳು ಮುಚ್ಚುವುದೆ ಬೊಮ್ಮಲಿಂಗ

ರಾಹುಗಳ ಮೋಸದೊಳು
ಬಾಹುಗಳ ಬಂಧನಕೆ
ಮೋಹದಲಿ ಸಿಲುಕಿರಲು ದಾರಿ ತಪ್ಪು
ದೇಹದಿಹ ವಸ್ತ್ರವನು
ಮಾಹೆಯಲಿ ವೀಕ್ಷಿಸಿರೆ
ದಾಹಗಳು ಮುಚ್ಚುವುದೆ ಬೊಮ್ಮಲಿಂಗ

ಮುಕ್ತಕ ಕುಸುಮ ೧೧೪

ಅಧಿಕದಲಿ ದೇಹವನು ಹೊದಿಸಿರಲು ಮನಸಿನೊಳ-
ಗುದಿಸಿರುವ ವಾಂಛೆಗಳ ತಡೆಯಲಹುದೇ
ಗದಗುಡುವ ಚಳಿಯಲ್ಲು ಬೆದರಿಸುವ ಬಿಸಿಯೇರಿ
ನದಿಯಾಗಿ ಹರಿಯುವುದು ಬೊಮ್ಮಲಿಂಗ

ಅಧಿಕದಲಿ ದೇಹವನು
ಹೊದಿಸಿರಲು ಮನಸಿನೊಳ-
ಗುದಿಸಿರುವ ವಾಂಛೆಗಳ ತಡೆಯಲಹುದೇ
ಗದಗುಡುವ ಚಳಿಯಲ್ಲು
ಬೆದರಿಸುವ ಬಿಸಿಯೇರಿ
ನದಿಯಾಗಿ ಹರಿಯುವುದು ಬೊಮ್ಮಲಿಂಗ

ಮುಕ್ತಕ ಕುಸುಮ ೧೧೫

ಅರಸುತನ ಬಯಸುತಲಿ
ಗೊರಸುಗಳು ಹರಿದೊಯ್ವ
ತೆರದಿವರು ಹರಿದಾಡಿ ನಡೆದರೆತ್ತ
ತುರುಕರುಗಳಂತೆಮ್ಮ
ಸರಕಂತೆ ಮತಗಳನು
ಹರಕತ್ತಿಗಿಟ್ಟಿಹರು ಬೊಮ್ಮಲಿಂಗ

ಅರಸುತನ ಬಯಸುತಲಿ ಗೊರಸುಗಳು ಹರಿದೊಯ್ವ
ತೆರದಿವರು ಹರಿದಾಡಿ ನಡೆದರೆತ್ತ
ತುರುಕರುಗಳಂತೆಮ್ಮ ಸರಕಂತೆ ಮತಗಳನು
ಹರಕತ್ತಿಗಿಟ್ಟಿಹರು ಬೊಮ್ಮಲಿಂಗ

ಮುಕ್ತಕ ಕುಸುಮ ೧೧೬

ಬೆರಸುವರೆ ತಂಡಗಳ
ವಿರಮಿಸದೆ ಕಲೆತಿರುತ
ಸುರಪಾನ ಮಾಡುತಲಿ ಕಾಲಕಳೆಯೆ
ಅರಸುತನ ಅಡರುವರೆ
ಪರನಿಂದೆ ಪರಧನವ
ಪರಭಾರೆ ಮಾಡುತಿರೆ ಬೊಮ್ಮಲಿಂಗ

ಬೆರಸುವರೆ ತಂಡಗಳ ವಿರಮಿಸದೆ ಕಲೆತಿರುತ
ಸುರಪಾನ ಮಾಡುತಲಿ ಕಾಲಕಳೆಯೆ
ಅರಸುತನ ಅಡರುವರೆ ಪರನಿಂದೆ ಪರಧನವ
ಪರಭಾರೆ ಮಾಡುತಿರೆ ಬೊಮ್ಮಲಿಂಗ

ಮುಕ್ತಕ ಕುಸುಮ ೧೧೭

ರಾಜಕೀಯದಲಿ ಸಾ-
ಮಾಜಿಕದ ಕಳಕಳಿಯು
ಮೇಜಿನಡಿ ಕಾಯುತ್ತಾ ಕುಳಿತಿರುವುದು
ಗೋಜಲದು ಮೂಡಿಸುತ
ಮೋಜು ಮಸ್ತಿಗಳಲ್ಲಿ
ಮೇಜವಾನಿ ನಡೆದಿದೆ ಬೊಮ್ಮಲಿಂಗ

ರಾಜಕೀಯದಲಿ ಸಾಮಾಜಿಕದ ಕಳಕಳಿಯು
ಮೇಜಿನಡಿ ಕಾಯುತ್ತಾ ಕುಳಿತಿರುವುದು
ಗೋಜಲದು ಮೂಡಿಸುತ ಮೋಜು ಮಸ್ತಿಗಳಲ್ಲಿ
ಮೇಜವಾನಿ ನಡೆದಿದೆ ಬೊಮ್ಮಲಿಂಗ

ಮುಕ್ತಕ ಕುಸುಮ ೧೧೮

ಅನುಭವದ ತಿಳಿಯನ್ನು
ಮನತೆರೆದು ಬರೆಯುತಿರೆ
ಮನಮುಟ್ಟಿ ಜನಮನವು ನಲಿಯುತಿರಲಿ
ತನುವೀಗ ಸಹಕರಿಸಿ
ಮನದರಿವನೋದಿರಲು
ನನಗಾಗ ಸಂತಸವು ಬೊಮ್ಮಲಿಂಗ

೧೧೯

ಅವನಿಯಲಿ ಬದುಕಿರಲು
ಭವಭಯದ ಕೊರತೆಯಿರೆ
ತವ ನಡೆಯು ಸರಿಯೇನು ಮರುಳೆನಿಮಗೆ
ಅವನಿಹನು ಮೇಲೆಂಬ
ತವದರಿವದಿರಲೆಂದು 
ಭವ ಭಕುತಿ ತುಂಬಿರಲಿ ಬೊಮ್ಮಲಿಂಗ.

೧೨೦

ಲಲನಮಣಿ ಲಲಿತಮಣಿ
ಕುಲುಕುಲುಕಿ ಬಳುಕುತಲಿ
ನಲಿನಲಿದು ಬಾಳುವೆಯ ಮಾಡಲಹುದೆ
ಲಲಿತಕಲೆ ಸಾರವನು
ಕಲಿಸುತಲಿ ಕೂಸುಗಳ
ಕಿಲಕಿಲನೆ ನಗಿಸುತಿರು ಬೊಮ್ಮಲಿಂಗ

೧೨೧

ಗುರು ಹರಿಯು ಗುರು ಹರನು
ಗುರು ಬೊಮ್ಮ ಗುರುವೆಲ್ಲ
ಗುರುತಿಸುತ ಮೊದಲೆಮ್ಮ ವರವತರುವ
ತುರುಕರುವಿಗಿಲ್ಲದಿಹ
ಮರೆಯಲಾಗದ ಭಾಗ್ಯ
ಮೆರೆಯಿಸಿರಿ ಗುರುವೆಂದು ಬೊಮ್ಮಲಿಂಗ

೧೨೨

ತರತರದ ವಿದ್ಯೆಯನು
ತರುಲತೆಯ ಮೊಗ್ಗಂಥ
ತರಹಾವರಿಯ ಕೂಸುಗಳಿಗುಣಿಸುತ
ತರಗತಿಯ ನಡೆಸುತಲೆ
ತರಬೇತಿ ಪಡೆಯುತಿಹ
ಸುರಗುರುವು ಇವರಂತೆ ಬೊಮ್ಮಲಿಂಗ

೧೨೩

ಬಲಿಯದಿಹ ಕೂಸುಗಳ
ಬಲಿಯನ್ನು ಬೇಡುತಿಹ
ಬಲಿತಜನಗಳ ನಡುವೆ ಹೆಮ್ಮೆಯಿವರು
ಬಲಿಕೊಟ್ಟು ಬಯಕೆಗಳ
ಬಲಿಪಡೆದು ತಮವನ್ನು
ಬಲಿತವರ ಮಾಡಿದರು ಬೊಮ್ಮಲಿಂಗ

೧೨೪

ಇವರಿಗಿಂ ಮಿಗಿಲಾರು
ಧವಳದೊಳು ಕುಳಿತಂತೆ
ಪವಳ ಮುತ್ತಿಗೆ ಮೆರಗು ಕೊಟ್ಟರಂತೆ
ಅವನಿಯೊಳು ತಾವಿಂದು
ಭವಭಕುತಿಯನು ಬೆಳೆದ
ಬುವಿಯ ಮಕ್ಕಳ ಹರಸಿ ಬೊಮ್ಮಲಿಂಗ

೧೨೫

ನೀಡಿ ಪಡೆಯಬೇಕೋ
ಕಾಡಿ ಹೊಡೆಯಬೇಕೋ
ಬೇಡಿ ಗಳಿಸಬೇಕೋ ತಿಳಿಯದಾಯ್ತೆ
ಕೋಡಿ ಹರಿವಂತತ್ತು
ಬೇಡಿ ತೊಡಗಿಸಿಕೊಂಡು
ಬೀಡಾಡಿಯಾದರೋ ಬೊಮ್ಮಲಿಂಗ.

೧೨೬

ಹಡೆದ ತಾಯಿಯಂದದಿ
ಪಡೆದ ಗೌರವವನ್ನು
ಕೆಡುಕುಗಳ ಮೂಡಿಸುತ ಕೆಡಿಸಬಹುದೆ
ದುಡುಕುಗಳ ಬದಿಗಿರಿಸಿ
ಹುಡುಕದೆ ದೊರಕುವುದ
ಕೆಡಿಸಿಕೊಳ್ಳದಿಲೆಂತು ಬೊಮ್ಮಲಿಂಗ

೧೨೭

ತನ್ನವರ ಬಾಳಿನಲಿ
ಕನ್ನವನು ಹಾಕುತಿಹ
ಕುನ್ನಿಗಳ ನಿವಾರಿಸಿ ಬದುಕಬೇಕು
ಬೆಣ್ಣೆಯೆಂದರಿಯುತಲಿ
ಸುಣ್ಣದೊಳು ಕರವಿಕ್ಕಿ
ತಣ್ಣನೆಯಾದರೇನು ಬೊಮ್ಮಲಿಂಗ

೧೨೮

ಸೂತ್ರಧಾರನೆ ನಮಿಪೆ
ಪಾತ್ರಧಾರಿಯು ನಾನು
ನೇತ್ರವನು ತೆರೆದೊಮ್ಮೆ ನೋಡುಬಾರ
ಗಾತ್ರಗಳನರಿಯದೇ
ಮಾತ್ರವದು ನೆನೆಯುತಲಿ
ಯಾತ್ರೆಯಲಿ ಮುಳುಗಿರುವೆ ಬೊಮ್ಮಲಿಂಗ

ಮುಕ್ತಕ ಕುಸುಮ ೧೨೯

ವೃತ್ತಿಯದು ಗೃಹಿಣಿಯಾ- ಗುತ್ತಿರಲು ಬಾಳೆಷ್ಟು
ಗತ್ತಿನಲಿ ನಡೆಯುವುದು ಕೇಳಿ ನೀವು
ಮೃತ್ತಿಕೆಯ ಋಣಭಾರ ಕತ್ತಿನಲ್ಲಿರುವನಕ
ಮತ್ತೇನು ಬೇಕಿಲ್ಲ ಬೊಮ್ಮಲಿಂಗ

ವೃತ್ತಿಯದು ಗೃಹಿಣಿಯಾ-
ಗುತ್ತಿರಲು ಬಾಳೆಷ್ಟು
ಗತ್ತಿನಲಿ ನಡೆಯುವುದು ಕೇಳಿ ನೀವು
ಮೃತ್ತಿಕೆಯ ಋಣಭಾರ
ಕತ್ತಿನಲ್ಲಿರುವನಕ
ಮತ್ತೇನು ಬೇಕಿಲ್ಲ ಬೊಮ್ಮಲಿಂಗ

ಮುಕ್ತಕ ಕುಸುಮ ೧೩೦

ಕದ್ದು ಬರೆವುದು ಬೇಡ ಬುದ್ಧಿ ಬಲದಲಿ ಬರೆಯ-
ಲೆದ್ದು ಬರುವಳು ಬಮ್ಮ ಸತಿಯು ಸತ್ಯ
ಎದ್ದು ಹೋಗದಿರಮ್ಮ ಬಿದ್ದು ಬೇಡುವೆ ಪಾದ
ಗೆದ್ದುಬಾರೆಂದೆನುವ ಬೊಮ್ಮಲಿಂಗ

ಕದ್ದು ಬರೆವುದು ಬೇಡ
ಬುದ್ಧಿ ಬಲದಲಿ ಬರೆಯ-
ಲೆದ್ದು ಬರುವಳು ಬಮ್ಮ ಸತಿಯು ಸತ್ಯ
ಎದ್ದು ಹೋಗದಿರಮ್ಮ
ಬಿದ್ದು ಬೇಡುವೆ ಪಾದ
ಗೆದ್ದು ಬಾರೆಂದೆನುವ ಬೊಮ್ಮಲಿಂಗ

೧೩೧

ಇರುವನಕ ತಿರೆಯೊಳಗೆ
ಗುರುಗಳನು ವಂದಿಸಿರೆ
ಗುರಿಯೇರೆ ಬಾಳನಲಿ ಭಂಗವಿಲ್ಲ
ಗುರುವಿರಲು ಬೆನ್ಹಿಂದೆ
ಗುರಿಯಿರಲು ಕಣ್ಮುಂದೆ
ಶಿರಕದುವೆ ಮುಕುಟಮಣಿ ಬೊಮ್ಮಲಿಂಗ

೧೩೨

ಹರಸತಿಯೆ ಪಾರ್ವತಿಯೆ
ಹರಸುತಿರು ದಿನದಿನವು
ಹರಕೆಯನು ಹೊತ್ತಿಹೆವು ಹರನಬೇಡಿ
ಅರಸುತನ ಬೇಕಿಲ್ಲ
ಸರಸದಲಿ ದಿನವೆಲ್ಲ
ಧರಣಿಯಲಿ ಬದುಕಿಸಲಿ ಬೊಮ್ಮಲಿಂಗ

೧೩೩

ಸೂರಿಯನ ಕಿರಣದಿಂ
ಬೇರಿಳಿವ ಪುಣ್ಯವಿದು
ನಾರಿಕುಲದಲಿ ಮೊದಲು ಭೂಮಿದೇವಿ
ಯಾರ ಹಂಗಿರದೆ ಸಿಂ-
ಧೂರ ತಿಲಕದಲಿ ಸಿಂ
ಗಾರ ಮಾಡಿದನಣ್ಣ ಬೊಮ್ಮಲಿಂಗ

೧೩೪

ನಾರಿಮಣಿ ನೀಕೇಳೆ
ದಾರಿಯನು ಪೇಳುವೆನು
ಬೇರೇನು ಚಿಂತಿಸದೆ ಬಾಳುನೀನು
ಶೂರ ಪತಿ ತಾನಿರಲು
ಯಾರ ಹಂಗದು ಬೇಕೆ
ದೂರ ನಡೆಯುವುದೇಕೆ ಬೊಮ್ಮಲಿಂಗ

೧೩೫

ಬೆದರದೆಯೆ ಬಚ್ಚದೆಯೆ
ಹದವಾದ ಬರಹದಿಂ-
ದುದಿಸಿದರದೋರ್ವ ಕವಯತ್ರಿ ಕಾಣಿ
ಉದಯಿಸಿಲಿ ದಿನದಿನವು
ಹದವರಿತು ಬೆಳೆಯುತಿರೆ
ಮುದಗೊಳಲಿ ಕವಿಗಣವು ಬೊಮ್ಮಲಿಂಗ

೧೩೬

ಪ್ರಾಸವಿರದಿಹ ಕವಿತೆ
ತಾಸುಗಟ್ಟಲೆಯೆ ಬರೆಯೆ
ಕೂಸಿಲ್ಲದ ಮನೆಯಂತೆ ಕೇಳಿರಣ್ಣ
ತ್ರಾಸವಾದರು ಸರಿಯೆ
ಪ್ರಾಸ ಬೆರೆಸುತ ಬರೆಯೆ
ಕೂಸಿನಂತೆಯೆ ಸೊಗಸು ಬೊಮ್ಮಲಿಂಗ

೧೩೭

ಅಂದದಾ ಕವನದೊಳು
ಛಂದಸ್ಸು ತುಂಬಿರಲು
ಚಂದನದ ತುಂಡಂತೆ ಘಮಲು ನೋಡಿ
ಚಂದಿರನ ಹೊಂಬೆಳಕು
ಮಿಂದಿರುವ ಹೂಗಳದು
ಕಂದನಾ ಮೊಗದಂತೆ ಬೊಮ್ಮಲಿಂಗ

೧೩೮

ತಾಳಿದವ ಸೋಲನವ
ಬಾಳಿನಲಿ ಗೆಲುವೊಂದೆ
ತಾಳದಿರೆ ಜಗದೊಳಗೆ ಬೆಲೆಯು ಸಿಗದು
ಗೋಳೆಂದು ಜರಿಯುತಲಿ
ತಾಳಿಯನು ಬಿಚ್ಚಿಟ್ಟು
ಗೂಳಿಯೊಡನಾಡದಿರಿ ಬೊಮ್ಮಲಿಂಗ

೧೩೯

ಮರಕುಂಟು ಮರಹಿರಿದು
ಮೆರೆಯುತಿರೆ ಬೆಟ್ಟವದು
ಬೆರಗಿನೊಳು ಕಂಡಿತ್ತ ತನಗು ಹಿರಿದ
ಹಿರಿಯ‌ವನು ನಾನೆಂದು
ಬೆರೆಯದೆಲೆ ಸರಿಯುದಿರಿ
ಬೆರೆಯುತಿರೆ ಸಗ್ಗವದು ಬೊಮ್ಮಲಿಂಗ.

೧೪೦

ಅರಿವು ಮೂಡಲು ಜಗದ
ಗುರು ಕಾರಣವು ನಮಗೆ
ಧರೆ ಹತ್ತಿಯುರಿವಂತೆ ಕೋಪಿಸದಿರಿ
ತಿರೆಯೊಳಗೆ ಗುರುವಿರದೆ
ಬರಿದೆಲ್ಲವನು ಕಲಿತ-
ವರಿರುವರೆ ತಿಳಿಸಿಬಿಡಿ ಬೊಮ್ಮಲಿಂಗ.

೧೪೧

ಸಾಲವದು ಹಿರಿದಣ್ಣ
ಕಾಲದೊಳು ಕಟ್ಟದಿರೆ
ಶೂಲದಲಿ ಹೇಳದೆಲೆ ತಿವಿಯುತಿಹುದು
ಸೋಲುವುದು ತಿಳಿದಿರಲು
ಸಾಲಿನಲಿ ನಿಂತಿರುತ
ದಾಳಕ್ಕೆ ಸಿಲುಕುವೆವು ಬೊಮ್ಮಲಿಂಗ

೧೪೨

ಸತಿಯಿರಲು ಜೊತೆಯಲ್ಲಿ
ಮತಿಯೇನು ಬೇಕಿಲ್ಲ
ಗತಿಯನ್ನು ಕಾಣಿಸದೆ ಬಿಡುವಳಲ್ಲ
ಚ್ಯುತಿಯಿರದೆ ಬದುಕುತಿರೆ
ಸತಿಸುತರ ಸಲಹುತಿರೆ
ಗತಿಸುತಿದೆ ಕಾಲವದು ಬೊಮ್ಮಲಿಂಗ

೧೪೩

ಬರುವಾಗ ಲೇನೇನು
ತರಲಿಲ್ಲ  ಹೋಗುತಿರೆ
ಬರಿದೇ ನಡೆಯುವೆವು ನಾವು ನೀವು
ಇರುವಾಗ ಸಕಲರೊಳು
ವಿರಸ ವಿಪರೀತದಲಿ
ಸರಸವನು ಮರೆತಿಹೆವು ಬೊಮ್ಮಲಿಂಗ
.
೧೪೪

ಚಾಲಕರು ಸರಿಯಿರಲು
ಮಾಲಕರು ಮೆರೆಯುವರು
ಕಾಲಕಾಲಕೆ ದುಡಿದು ಧನವಗಳಸಿ
ಪಾಲಿಸುತ ಸತಿಸುತರ
ಲಾಲಿಸುತ ವಾಹನವ
ಗೋಲವನು ಸುತ್ತುತಿರೆ ಬೊಮ್ಮಲಿಂಗ

೧೪೫

ಬಾಲಕರು ನೆಟ್ಟಗಿರೆ
ಪಾಲಕರ ಹಿರಿಮೆಯದು
ಚಾಲಕರು ತಾವಾಗಿ ಹರುಷಪಡಲು
ಲೋಲಾಕು ಧರಿಸಿರುವ
ಬಾಲಿಕೆಯ ನಮಗಿರಲು
ಮೇಲಕ್ಕೆ ದಾರಿಯದು ಬೊಮ್ಮಲಿಂಗ

೧೪೬

ಅತಿಸುಖವ ಬಯಸದೆಲೆ
ಸತಿಸುತರ ಸಲಹುವರೆ
ಮತಿಯರಿತು ನಡೆಯುತಿರೆ ಬದುಕು ನಾಕ
ಅತಿಯಾಸೆ ನಮದಾಗೆ
ಗತಿಕೇಡು ಮೂಡುವುದು
ಮತಿಹೀನ ಮನುಜರಿಗೆ ಬೊಮ್ಮಲಿಂಗ

೧೪೭

ಲೋಕದೊಳು ಸಕಲವನು
ನಾಕವೆಂದೆನುತಲಿರೆ
ಕಾಕು ತಾನಳಿಯುವುದು ಸಹಜವಾಗಿ
ಬೇಕು ಬೇಕೆನ್ನುತಲಿ
ನಾಕವನು ತೊರೆಯುತಿರೆ
ಸಾಕಾಗದೀ ಬದುಕು ಬೊಮ್ಮಲಿಂಗ

೧೪೮

ಏನೆಂದು ತಿಳಿಯದೆಯೆ
ನಾನಿಂದು ಕಾದಿಹೆನು
ನೀನೆಂದು ಬರುವೆಯೋ ಮಳೆಯರಾಯ
ನಾ ನೊಂದು ತೀರದಲಿ
ನೀ ನೊಂದು ದೂರದಲಿ
ಬಾನಿಂದ ಸುರಿಸಿಬಿಡು ಬೊಮ್ಮಲಿಂಗ

೧೪೯

ನಾನಿಂದು ನೆನಕೊಂಡೆ
ನೀನಂದು ಕೆನೆಯಂತೆ
ಕಾನಿಂದ ಬಂದಿರುವ ಬೊಂಬೆಯೇನು
ಬಾನಿಂದ ಜಾರಿರುವ
ಜೇನಂದ ತಂದಿರುವ
ನೀನಿಂದು ಕಮಲಮುಖಿ ಬೊಮ್ಮಲಿಂಗ

ಮುಕ್ತಕ ಕುಸುಮ ೧೫೦

ನಾವಿಕರು ನಾವಾಗಿ ನಾವೆಯನು ಹೊರಡಿಸುತ
ನಾವೆಲ್ಲ ಸಾಗುತಿರೆ ಚಿತ್ತವೆತ್ತ
ನಾವಿರಲು ಹರುಷದಲಿ ನಾವೆಯದು ದಡಸೇರೆ
ಕಾವಲದು ಬೇಕೇನು ಬೊಮ್ಮಲಿಂಗ.

ನಾವಿಕರು ನಾವಾಗಿ
ನಾವೆಯನು ಹೊರಡಿಸುತ
ನಾವೆಲ್ಲ ಸಾಗುತಿರೆ ಚಿತ್ತವೆತ್ತ
ನಾವಿರಲು ಹರುಷದಲಿ
ನಾವೆಯದು ದಡಸೇರೆ
ಕಾವಲದು ಬೇಕೇನು ಬೊಮ್ಮಲಿಂಗ.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು