ಬೊಮ್ಮಲಿಂಗ

ಜನಕನನು ನೆನೆಯುತಲಿ
ಕನವರಿಸಿ ಸತಿಮಣಿಯು
ಧನಕನಕ ಬೇಡೆನಗೆ ತವರು ಬೇಕು
ಎನುತಿರಲು ಪತಿರಾಯ
ಜನನಿಯಿರೆ ಮನೆಹಿರಿದು
ತನುಜೆಯಂತ್ಹೋಗಿ ಬಾರೆಂದನವನು 

ಬಣ್ಣದಲಿ ಗಣಪತಿಗೆ
ಸುಣ್ಣವನು ಬೆರೆಸುತಲಿ
ಗಿಣ್ಣದಂತೆ ಮೆತ್ತಿಹರು ಕಾಣಿರೀಗ
ಎಣ್ಣೆಯನು ಹಚ್ಚಿದರು
ಕಣ್ಣಿನಲಿ ಕಾಣದಿಹ
ಮಣ್ಣಿನಾ ಗಜಮುಖನು ಬೊಮ್ಮಲಿಂಗ

ಪರಿಸರವನುಳಿಸುವರೆ
ಪರಿಕರವು ಸಾಸಿರವು
ಸರಿಕರೊಡಗೂಡುತ ಜಗವತಡಕೆ
ಧರೆಯೊಳಗ ತಪ್ಪುಗಳ
ಸರಿಪಡಿಸಿ ನಡೆಯುತಿರೆ
ಮೆರೆಯುವುದು ಮನುಜಕುಲ ಬೊಮ್ಮಲಿಂಗ

ಬಣ್ಣವದು ಮಾರಕವು
ಸುಣ್ಣದಲಿ ಮಿಂದಂತೆ
ಕಣ್ಣಿಗರಿಯದೆ ಜೀವ ನರಳಿಸುತವೆ
ಸಣ್ಣದಾದರು ಸರಿಯೆ
ಮಣ್ಣಿನಿಂ ಹೊಳೆಯುತಿಹ
ಬೆಣ್ಣೆ ಗಣಪನ ತಂದು ಕೂರಿಸೋಣ


ಒಲವ ತೋರುವ ಗೆಳತಿ

ಬಲವ ತೋರುವೆಯೇಕೆ
ಸಲುಗೆಯಲಿ ನುಲಿದಿದ್ದ ಚೆಲುವೆ ನೀನು
ಕಿಲಕಿಲನೆ ನಗುತಿದ್ದ
ಲಲನಾಮಣಿಯೆ ಕೇಳು 
ಗೆಲುವು ನಿನದಾಗಿರಲಿ ಬೊಮ್ಮಲಿಂಗ

ಬಳ್ಳಿಯೊಲು ಬಳುಕಿದ್ದ
ಮಳ್ಳಿ ಗೆಳತಿಯೆ ಹೇಳು 
ಸುಳ್ಳು ಸುಳ್ಳೇ ನರಳಿ ಕೊರಗಲೇಕೆ 
ಕಳ್ಳಮನ ತುಡಿಯುತಿದೆ
ರೊಳ್ಳೆಯನು ತೆರೆಯುತಿದೆ
ಬಳ್ಳ ಬೇಡಿಕೆಯೇಕೆ ಬೊಮ್ಮಲಿಂಗ  

ಹೆಣ್ಣು ಮಕ್ಕಳ ಕಂಡು
ಹುಣ್ಣೆಂದು ಜರಿಯದಿರಿ
ಹಣ್ಣೆಂದು ನಿಮ್ಮೊಳಗೆ ತಿಳಿದುಕೊಳ್ಳಿ
ಅಣ್ಣತಮ್ಮರೆ ಕೇಳಿ
ಬೆಣ್ಣೆ ಮಾತಿನ ಚೆಲುವೆ
ಕಣ್ಣು ಸಂಸಾರದಲಿ ಬೊಮ್ಮಲಿಂಗ

ಮುಕ್ತಕ ಕುಸುಮ

ಮುಕ್ತಕ

ಜನನಿಯನು ನೆನೆದೊಡನೆ ‌ಕನಲಿಹೋದಳು ತನುಜೆ 
ತನುವ ಕಸುವನ್ನೆಲ್ಲ ಕಳೆದುಕೊಂಡು
ಮನನ ಮಾಡಿದರೇನು ಕನವರಿಕೆ ಬಿಡಲಿಲ್ಲ
ನೆನೆಯುತಲಿ ಬಿಕ್ಕುವಳು ಬೊಮ್ಮಲಿಂಗ 

ಕುಸುಮ

ಜನನಿಯನು ನೆನೆದೊಡನೆ 
ಕನಲಿಹೋದಳು ತನುಜೆ 
ತನುವ ಕಸುವನ್ನೆಲ್ಲ ಕಳೆದುಕೊಂಡು
ಮನನ ಮಾಡಿದರೇನು
ಕನವರಿಕೆ ಬಿಡಲಿಲ್ಲ
ನೆನೆಯುತಲಿ ಬಿಕ್ಕುವಳು ಬೊಮ್ಮಲಿಂಗ 


ಸ್ವಸ್ಥಮನವಿರದವನು
ಶಸ್ತ್ರವಾದನು ತಾನು
ಕುಸ್ತಿಯಲಿ ನಿಂದವರ ಗೆಲಿಸಲೆಂದು 
ಹಸ್ತ ನೀಡುವ ಮುನ್ನ 
ಮಸ್ತಕವನರಿಯದೆಲೆ 
ಬೆಸ್ತನಂತಾದನೇ ಬೊಮ್ಮಲಿಂಗ.

ಮುಕ್ತಕ ಕುಸುಮ

ಮುಕ್ತಕ
ನಾವರಿಯದಿಹ ಶಕ್ತಿ ಭಾವಗಳನುಕ್ಕಿಸುತ
ಸಾವು ಹುಟ್ಟುಗಳ ನಡೆಸುತಿದೆ ಕಾಣಿ
ಆವ ಹಂಬಲವಿರದೆ ಕಾವ ಪರಿಕಲ್ಪನೆಯ
ದೈವವದೆನಲಹುದೇ ಬೊಮ್ಮಲಿಂಗ

ಕುಸುಮ

ನಾವರಿಯದಿಹ ಶಕ್ತಿ
ಭಾವಗಳನುಕ್ಕಿಸುತ
ಸಾವು ಹುಟ್ಟುಗಳ ನಡೆಸುತಿದೆ ಕಾಣಿ
ಆವ ಹಂಬಲವಿರದೆ
ಕಾವ ಪರಿಕಲ್ಪನೆಯ
ದೈವವದೆನಲಹುದೇ ಬೊಮ್ಮಲಿಂಗ

ಪಶಿವೈ 
ಪಿಎಸ್ ವೈಲೇಶ ಕೊಡಗು
೭/೧೧/೨೦೧೯





Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು