ಭಾಮಿನೀ ಷಟ್ಪದಿ ನಾಡ ಸಂಸ್ಕೃತಿ
ನಾಡ ಸಂಸ್ಕೃತಿಯನುಳಿಸೋಣ
~~~~~~~~~~~~~~~~~
ಭಾಮಿನೀ ಷಟ್ಪದಿ
ನುಡಿದು ನಲಿಯಲು ನಾವು ಕನ್ನಡ
ಹಡೆದ ಮಾತೆಯ ಕಾವ ತೆರದಲಿ
ನಡೆದು ಬಾಳುತ ಭಾಷೆ ಬೆಳೆಸುವ ರೀತಿ ಮರೆಯದಿರಿ
ಬಿಡದೆ ನುಡಿಯಲು ಬೇರೆ ಮಾತನು
ಪಡೆಯೆ ಸಾಧ್ಯವೆ ತಾಯ ಮಮತೆಯ
ಕಡೆಗೆ ನಮ್ಮಯ ನಾಡ ಸಂಸ್ಕೃತಿಯಳಿಯಿತೆನ್ನುವಿರಿ||
ಬೇರೆ ಲೋಗರ ರೀತಿ ನೀತಿಯ
ತಾರೆಯಂದದಿ ಹೊಗಳಿ ಹಾಡುತ
ಯಾರೆ ಬಂದರು ನುಡಿಯುತವರದೆ ಭಾಷೆ ಬೆಳೆಸದಿರಿ
ವೀರರಂದದಿ ಸಾರಬೇಕಿದೆ
ಸಾರ ತುಂಬಿದ ನಮ್ಮ ನುಡಿಯನು
ಧೀರತನದಲಿ ಕಲಿಸಿ ಕನ್ನಡ ಹೆಮ್ಮೆಯೆನಿಸುತಿರಿ
ಅಚ್ಚುಕಟ್ಟಿನ ನಮ್ಮ ನುಡಿಯನು
ಮೆಚ್ಚುವಂತೆಯೆ ನಾವು ನುಡಿಯುತ
ಕಿಚ್ಚು ಹಚ್ಚುತ ನಾಡ ದೇವಿಯ ಹೆಸರನುಳಿಸೋಣ
ಬಿಚ್ಚು ಮನಸಿನ ಜನರೆ ಕೇಳಿರಿ
ಹುಚ್ಚುತನವನು ಬಿಟ್ಟು ಭಾಷೆಯ
ಕೆಚ್ಚು ತುಂಬುತ ಸಕಲ ಜನರೊಳು ಸೇರಿ ಬಾಳೋಣ
ಬನ್ನಿ ಗೆಳೆಯರೆ ಗೆಳತಿ ಸೋದರಿ
ಕನ್ನಡಾಂಬೆಯ ರಥವನೆಳೆಯಲು
ಹೊನ್ನಮನದಲಿ ಸೇರಿ ನಲಿಯುತ ನಾವು ಬೆರೆಯೋಣ
ಚಿನ್ನ ಬೆಳೆಯುವ ನಾಡು ನಮ್ಮದು
ರನ್ನ ಪಂಪರು ಬರೆದು ಬೆಳಗಿದ
ಜೊನ್ನ ಕವಿತೆಯ ಹಾಡಿ ಹೊಗಳುತ ಬದುಕು ಸವೆಸೋಣ
ಪಶಿವೈ
ಪಿ ಎಸ್ ವೈಲೇಶ ಕೊಡಗು
೧೪/೧೦/೨೦೧೯
Comments
Post a Comment