ಎಲ್ಲೋ ಹುಡುಕಿದೆ
"ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲುಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸಲಾಗದೆ ನಮ್ಮೊಳಗೆ"
ಇದು ಪೂರ್ವಸೂರಿಗಳ ಮುತ್ತಿನಂಥ ಮಾತುಗಳು ಹಾಡಾಗಿ ಈ ಜಗದೆಲ್ಲರಿಗೂ ತಲುಪಿದೆ. ನಾವೆಲ್ಲರೂ ಈ ಕಿವಿಯಿಂದ ಕೇಳಿ ಸಂತೋಷಪಟ್ಟು ಆ ಕಿವಿಯಂದ ಹೊರಗೆ ಕಳುಹಿಸಿ ಆರಾಮವಾಗಿ ಇದ್ದುಬಿಡುತ್ತೇವೆ. ಅದೇಕೋ ನಮ್ಮ ಮನದೊಳಗೆ ಬಿಟ್ಟುಕೊಳ್ಳಲೆ ಇಲ್ಲವೆನಿಸುತ್ತದೆ. ನಿಜ ಹೇಳಬೇಕೆಂದರೆ ನಾವ್ಯಾರೂ ಇದರಿಂದ ಹೊರತಾಗಿಲ್ಲ ಎನ್ನಬಹುದು. ಇಂದಿನ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಯೊಬ್ಬರೂ ತಾವು ಉನ್ನತ ಮಟ್ಟಕ್ಕೆ ಏರಬೇಕೆನ್ನುವುದು ವಿಹಿತ ಆದರೆ ತಾನು ಉನ್ನತಿಗೆ ಏರುವ ಭರದಲ್ಲಿ ಅನ್ಯರನ್ನು ತುಳಿಯುತ್ತಿರುವುದು ಅನಾಹುತ. ಇತ್ತೀಚೆಗೆ ಬಂದ ಫೇಸ್ ಬುಕ್ ವಾಟ್ಸ್ ಆಪ್ ಗಳಿಂದ ಅಥವಾ ಅಂತರ್ಜಾಲದ ಪರಿಣಾಮವಾಗಿ ಅನೇಕ ವರ್ಷಗಳಿಂದ ಸಾಧ್ಯವೇ ಇಲ್ಲ ಎಂದು ತಿಳಿದಿದ್ದ ಪರಸ್ಪರ ಸಂಪರ್ಕದ ವೇಗದ ಪರಿಣಾಮವಾಗಿ ಉನ್ನತವಾದ ಅಶಯ ಹೊಂದಿ ತಮ್ಮ ಕಾರ್ಯವೈಖರಿಯನ್ನು ನಡೆಸಿಕೊಂಡು ಹೋಗುವವರ ವಿವರಗಳನ್ನು ಅತ್ಯಂತ ಶೀಘ್ರವಾಗಿ ಜಗದಗಲ ಅರಿಯಬಹುದಾಗಿದೆ. ಇದನ್ನು ಸ್ವಕಾರ್ಯಗಳಿಗೆ ಸುಕಾರ್ಯಗಳಿಗೆ ಸರ್ವರ ಕಾರ್ಯಗಳಿಗೆ ಬಳಸುತ್ತಾ ಸುತ್ತಮುತ್ತಲಿನ ಜನರೊಂದಿಗೆ ಸಾಗುವವರು ಅನಂತಾನಂತಜೊತೆಗೆ ನಾವೇನೋ ಮಹತ್ಕಾರ್ಯಗಳನ್ನು ಮಾಡಿದಂತೆ ಜಗದಗಲ ಸುಖಾಸುಮ್ಮನೆ ತಮ್ಮನ್ನು ತಾವೇ ಹೊಗಳಿಕೊಳ್ಳುವವರಿಗೇನೂ ಕೊರತೆಯಿಲ್ಲ.
ಅದರಲ್ಲೂ ಕೆಲವರು ತಮ್ಮನ್ನು ತಾವು ಶ್ರೇಷ್ಠರೆಂದು ಸ್ವಯಂ ನಿರ್ಧಾರ ಮಾಡಿಕೊಂಡು ತಮ್ಮ ಕೆಲಸ ಕಾರ್ಯಗಳನ್ನು ಹೊಗಳದ ಅಥವಾ ಪುರಸ್ಕರಿಸದ ಅಥವಾ ಅವರ ತಾಳಕ್ಕೆ ತಕ್ಕಂತೆ ಕುಣಿಯದ ಜನಗಳನ್ನು ಹಣಿಯುವ ಕೆಲಸಕ್ಕೆಂದೇ ಟೊಂಕ ಕಟ್ಟಿ ನಿಂತುಬಿಡುತ್ತಾರೆ. ಅದು ಕೂಡ ಸೋಲಿಸಲು ಎಷ್ಟು ಹೀನಾಯವಾಗಿ ಮಾತನಾಡುವ ಸಾಧ್ಯತೆ ಇದೆಯೋ ಅಷ್ಟನ್ನೂ ಪ್ರಯೋಗಿಸಿ ಬಿಡುತ್ತಾರೆ. ತಾವು ತಮ್ಮ ಬರಹದ ಮೂಲಕ ಜಾಲತಾಣದಲ್ಲಿ ಅಣಕಿಸುತ್ತಾ ಅಹಂಕಾರದ ಪರಮಾವಧಿ ಎಂಬಂತೆ ತಮ್ಮ ನಡೆ ನುಡಿಗಳನ್ನು ಅಂತರ್ಜಾಲದ ಮೂಲಕ ಹಂಚಿಕೊಳ್ಳುತ್ತಾ ಅನ್ಯರನ್ನು ಕತ್ತಲೆಗೆ ದೂಡಲು ಹೋಗಿ ತಾವೇ ಜಗತ್ತಿನೆದುರು ಬತ್ತಲಾಗಿ ಬಿಡುತ್ತಾರೆ. ಹಾಗೆಂದು ಇವರು ದಡ್ಡರೇನಲ್ಲ ಅತ್ಯಂತ ಬುದ್ಧಿಮತ್ತೆಯನ್ನು ಹೊಂದಿದ್ದರೂ ಸಹ ಅನ್ಯರ ಏಳಿಗೆಯ ಬಗ್ಗೆ ಅಸಹಿಷ್ಣುತೆಯನ್ನು ತಮ್ಮ ಉದ್ದಗಲಕ್ಕೂ ಬೆಳಸಿಕೊಂಡವರು. ಕೆಲವರಿಗೆ ಸುತ್ತಮುತ್ತಲಿನ ಜನರಿಗೆ ಕಲಿಸುವ ಜೊತೆಗೆ ತಾವೂ ಕೂಡ ಕಲಿಯುವ ಇರಾದೆ ಇರುತ್ತದೆ. ಹಾಗೂ ಕೆಲವು ವಿಚಾರದಲ್ಲಿ ಅತ್ಯಂತ ನಿಪುಣರೂ ಆಗಿರುತ್ತಾರೆ. ಆದರೆ ಹೊಟ್ಟೆಕಿಚ್ಚೆಂಬ ಗೃಹಿಣಿ ರೋಗವೊಂದು ಅವರಿಗೆ ಅರಿಯದೆ ಅವರ ಜೊತೆಗೆ ನಡೆದು ಸಮಾಜದಲ್ಲಿ ಅವರ ಸ್ಥಾನಮಾನವನ್ನು ಕತ್ತಲೆಯಲ್ಲಿ ಮುಳುಗಿಸಿಬಿಡುತ್ತದೆ.
"ಕೊಡಲಿ ಕಾವು ಕುಲಕ್ಕೆ ಮೃತ್ಯು" ಅನ್ಯರ ಮೇಲೆ ದ್ವೇಷವನ್ನು ಸಾಧಿಸಲು ಹೋಗಿ ತಾವು ನೈಜವಾಗಿ ಸಾಧಿಸಬೇಕಾದುದನ್ನು ಬದಿಗೊತ್ತಿ ಬಿಡುತ್ತಾರೆ. ಇನ್ನೂ ಕೆಲವರು ಕಲಿಸುವ ಗುಣ ಹೊಂದಿರುತ್ತಾರೆ ಆದರೆ ನಮ್ಮಿಂದ ಕಲಿತವರು ಸ್ವತಂತ್ರವಾಗಿ ಏನನ್ನೂ ಮಾಡಬಾರದು ಎಂಬ ಒಂದು ರೀತಿಯ ಭಾವನೆಗಳನ್ನು ಹೊಂದಿರುತ್ತಾರೆ. ಅಂತಹವರಿಗೆ ಮನದಟ್ಟಾಗಬೇಕಾದ ವಿಚಾರ ಒಂದಿದೆ. ತಮ್ಮ ಮಕ್ಕಳಾದರೂ ಸಹ ತಮ್ಮ ಕಲಿಯುವಿಕೆಯ ಒಂದು ಹಂತವನ್ನು ತಲುಪಿದ ನಂತರ ತಮ್ಮ ಕಾಲ ಮೇಲೆ ತಾವೇ ಸ್ವತಃ ನಿಲ್ಲುವ ಕುರಿತು ಆಲೋಚನೆ ಮಾಡಲೇಬೇಕು ಮತ್ತು ಮಾಡುತ್ತಾರೆ. ಇನ್ನೂ ತಮ್ಮ ಸಾಧನೆಯ ಹಾದಿಯ ಮೆಟ್ಟಿಲುಗಳಲ್ಲಿ ನೀವು ಕೂಡ ಒಂದು ಮೆಟ್ಟಿಲು ಅಷ್ಟೇ ಎಂದು ತಿಳಿದಿರುವವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲವೆಂದು ಮತ್ತು ಅವರ ಸಾಧನೆಯ ಹಾದಿಯಲ್ಲಿ ನಾವು ತೊಡಕಾಗಬಾರದೆಂಬ ಅರಿವನ್ನು ಸ್ವತಃ ಅರಿತುಕೊಳ್ಳುವುದು ಅಗತ್ಯವಿದೆ. ಈ ಜಗತ್ತಿನಲ್ಲಿ ಯಾರು ಕೂಡ ಹುಟ್ಟುವಾಗಲೆ ಎಲ್ಲವನ್ನೂ ಕಲಿತು ಬಂದಿರುವುದಿಲ್ಲ ನಾವು ಕೂಡ ಅದರಿಂದ ಹೊರತೇನಲ್ಲ ಎಂಬ ಭಾವನೆಗಳು ಎಲ್ಲರಲ್ಲೂ ಮೂಡಬೇಕಾದ ಅಗತ್ಯವಿದೆ ಎನಿಸುತ್ತದೆ. ಇನ್ನೂ ಕೆಲವರು ಇದ್ದಾರೆ ಹತ್ತಿದ ಏಣಿಯನ್ನು ಒದ್ದು ನಡೆವವರು ಇವರೆಂದು ಹೇಳಬಹುದು. ಆದರೆ ಹತ್ತಿದ ಏಣಿಯನ್ನು ಒದೆಯಬೇಕಾದ ಅಗತ್ಯವಿದೆಯೇ ಅದರಿಂದ ಮತ್ತು ಒಂದಷ್ಟು ಮಂದಿ ಮತ್ತೆ ಹತ್ತಿ ಮೇಲೆ ಬರಬಹುದಲ್ಲವೆ. ಆದರೆ ಇವರ ಮನದಲ್ಲಿ ಅಂತಹ ಭಾವನೆಗಳಿಗೆ ಬದಲಾಗಿ ತಾನೇರಿದ ಎತ್ತರವನ್ನು ಮತ್ತಾರೂ ಏರಬಾರದೆಂಬ ದುರಾಲೋಚನೆ ಇರಬಹುದೇ. ಯಾರಿಗೆ ಗೊತ್ತು ಏನೋ ಅವರವರ ಅನುಕೂಲಕ್ಕೆ ಅನುಗುಣವಾಗಿ ಅವರ ಆಲೋಚನಾ ಸಾಮರ್ಥ್ಯವನ್ನು ಅಳೆಯಬೇಕಾಗುತ್ತದೆ ಅಲ್ವೇ.
"ತಾ ಕಳ್ಳ ಪರರ ನಂಬ" ಎಂಬಂತೆ ಇಲ್ಲಿ ಎಲ್ಲರೂ ಸ್ವ ಹಿತ ಚಿಂತನೆಯನ್ನೇ ಮಾಡುವವರಾದರೂ ಸಹ ಅವರು ಇವರನ್ನು ಸ್ವಾರ್ಥಿಗಳೆಂದು ಇವರು ಅವರನ್ನು ಸ್ವಾರ್ಥಿಗಳೆಂದು ನುಡಿಯುತ್ತಾ ಪರಸ್ಪರ ಕೆಸರೆರಚಾಡುವ ರಾಜಕಾರಣಿಗಳಂತೆ ಆಗಿರುವುದುನ್ನು ಇಂದು ಎಲ್ಲಾ ರಂಗಗಳಲ್ಲಿ ಕಾಣಬಹುದು. ತಾನು ಇಂತಹ ಜಾತಿಯವನು ಎಂದು ಹೇಳುವ ಇವರು ಹೆಣ್ಣಿನ ಬಗ್ಗೆ ಬಾಯಿಗೆ ಬಂದಂತೆ ನುಡಿಯುವವರು ತಮ್ಮ ತಾಯಿ ಮಡದಿ ಮಕ್ಕಳು ಸಹ ಹೆಣ್ಣಾಗಿದ್ದಾರೆ ಎಂಬುದನ್ನು ಮರೆತ ಹಾಗೆ ಆಡುವ ಮಾತುಗಳನ್ನು ಕೇಳಿದಾಗ ನಿಜವಾಗಿ ಇವರು ಯಾವ ಯುಗದಲ್ಲಿ ಇದ್ದಾರೆ ಎಂಬ ಸಂಶಯ ಬಾರದೆ ಇರದು. ಅಂದು ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ರಾಜಕೀಯ ನಾಯಕರುಗಳು ಇದ್ದಾಗಿನ ರಾಜಕೀಯ ನಿಲುವುಗಳು ಬೇರೆ ಇಂದು ಕೇವಲ ಸಮಯೋಚಿತ ಸುಳ್ಳು ವಂಚನೆ ಮಾಡುತ್ತಾ ನಾವು ನಮ್ಮ ಕುಟುಂಬ ನಮ್ಮ ಜಾತಿ ಮತ ಎನ್ನುತ್ತಾ ಮೆರೆಯುವವರು ತಾವು ನಡೆದುಬಂದ ಹಾದಿಯನ್ನು ಮರೆಯುವವರು, ನಮ್ಮ ಏಳಿಗೆಗೆಂದು ತಮ್ಮ ಕೊರಳನ್ನು ಉರುಳಿಗೆ ನೀಡಿದ ರೀತಿಯಲ್ಲಿ ನಡೆದುಕೊಂಡ ಮಹನೀಯರು ನಾವಿರುವ ಸ್ಥಳದಲ್ಲಿ ಹಾಜರಿರುವರು ನಮ್ಮ ಮನದ ಮಾತುಗಳನ್ನು ಆಡುವ ಭರದಲ್ಲಿ ಅವರ ಮನಸ್ಸಿಗೆ ನೋವನ್ನುಂಟುಮಾಡಬಾರದು ಎಂಬ ಅರಿವಿರದ ಅರಿವುಗೇಡಿಗಳು ಹೆಚ್ಚಾಗಿದ್ದಾರೆ.
ನಾಯಕ ಎಂದೆನಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಒಂದು ಮನೆಯಲ್ಲಿ ಇರುವ ಸಹೋದರರು ಸಹೋದರಿಯರು ಸಹ ಒಂದೇ ರೀತಿಯ ಬುದ್ಧಿಮತ್ತೆಯನ್ನು, ಸಮಾಧಾನವನ್ನು ಹೊಂದಿರುವುದಿಲ್ಲ. ಅಲ್ಲಿ ಕೂಡ ಪರಸ್ಪರ ವಿರುಧ್ಧ ಭಾವದ ಗೋಜಲನ್ನು ಹೊಂದಿ ಹೊಂದಿಕೊಳ್ಳಲಾಗದೆ ಇರುವಂತಹ ಪ್ರಸಂಗಗಳನ್ನು ನಾವೆಲ್ಲರೂ ಇಂದಿನ ಹಿಂದಿನ ಕಾಲದಿಂದಲೂ ಈ ಸಮಾಜದಲ್ಲಿ ಕಾಣುತ್ತಿದ್ದೇವೆ. ಎಲ್ಲರನ್ನೂ ಸಂತೃಪ್ತಿ ಪಡಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ. ಆದರೆ ನಮ್ಮನ್ನು ನಾವು ಸಮಾಧಾನ ಪಡಿಸಿಕೊಳ್ಳಬಹುದು. ತುಂಬಾ ಜನರಿಗೆ ನನಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬ ಚಿಂತೆ.ಗುಂಪಿನಲ್ಲಿ ಎಲ್ಲರಿಗಿಂತಲೂ ಹೆಚ್ಚಿನ ಪ್ರಮಾಣದ ಚಟುವಟಿಕೆಗಳನ್ನು ಹಣಕಾಸಿನ ವಿಚಾರದಲ್ಲಿ ಎಲ್ಲರಿಗಿಂತ ಹೆಚ್ಚು ಹಣ ಹಾಕುತ್ತೇನೆ ಆದಾಗ್ಯೂ ನನಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎನ್ನುವವರಿಗೇನು ಕೊರತೆಯಿಲ್ಲ. ನೂರಾರು ಸಾಧಕರ ನಡುವೆ ನಾವು ನೂರಾರಲ್ಲಿ ನಾವು ಕೇವಲ ಒಬ್ಬ ಎಂಬ ಅರಿವು ಕೆಲವರಿಗೆ ಇರುವುದೇ ಇಲ್ಲ. ಭಗವದ್ಗೀತೆಯ ಸಾರದಂತೆ ಸುಮ್ಮನೆ ನಮ್ಮ ಕೆಲಸವನ್ನು ನಾವು ಮಾಡುತ್ತಾ ಸಾಗಬೇಕು. ಫಲಾಫಲಗಳನ್ನು ದೇವರಿಗೆ ಬಿಡಬೇಕು ಎಂಬ ನುಡಿಗಳನ್ನು ಅಕ್ಷರಶಃ ಪಾಲಿಸಿದವರಿಗೆ ಮಾತ್ರ ಈ ಯಾವ ರೀತಿಯ ಚಿಂತೆಗಳು ಕಾಡುವುದಿಲ್ಲ. ಒಂದೆರಡು ಕಾರ್ಯಕ್ರಮದ ಮೂಲಕ ನಮ್ಮನ್ನು ಕೆಲವರು ಗುರುತಿಸಲ್ಪಟ್ಟ ತಕ್ಷಣ ತಾವೇನೋ ಮಹತ್ತರವಾದ ಸಾಧನೆಯನ್ನು ಮಾಡಿದ ಹಾಗೆ ಅವರಿವರಿಂದ ಕಾಸು ಪೋಸು ಕೊಟ್ಟು ಹೊಗಳಿಸಿಕೊಳ್ಳುವವರಿಗೂ ಏನೂ ಕಡಿಮೆಯಿಲ್ಲ. ಕೆಲವರು ಏನು ಮಾಡಿದರೂ ನಾವು ನಮ್ಮ ಮಕ್ಕಳು ನಮ್ಮ ಜಾತಿ ನಮ್ಮ ಕುಲ ನಮ್ಮ ಊರಿನವರಿಗೆ ಮಾತ್ರ ಅವಕಾಶಗಳನ್ನು ಒದಗಿಸುವ ಬಗ್ಗೆ ಮಾತ್ರವೇ ಅಲೋಚಿಸುತ್ತಾರೆ. ಸಾರ್ವತ್ರಿಕವಾಗಿ ನೆರೆದಿದ್ದ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಬಗ್ಗೆ ಆಲೋಚನೆ ಕೂಡ ಮಾಡಲಾರರು.
ತಮ್ಮನ್ನು ತಾವು ಹೊಗಳಿಸಿಕೊಳ್ಳುವ ಭರದಲ್ಲಿ ಅನ್ಯರನ್ನು ಅನ್ಯಾಯವಾಗಿ ದೂಷಿಸುವ ಮುಖಾಂತರ ಅವರ ಸಾಮಾಜಿಕ ಬದುಕಿನಲ್ಲಿ ಅವರು ಇನ್ನು ಮೇಲೇಳದಂತೆ ತುಳಿಯುವ ಅಗತ್ಯವಿದೆ ಎಂದು ನನಗನಿಸುವುದಿಲ್ಲ. ಎಂದೋ ಮಾಡಿದ ಸಾಧನೆಯೊಂದನ್ನು ತಮ್ಮ ಬತ್ತಳಿಕೆಯಲ್ಲಿ ಜೋಪಾನವಾಗಿ ಇರಿಸಿಕೊಂಡು ಆಗಾಗ ಅದನ್ನು ಎತ್ತಿ ಒತ್ತಿ ತೋರಿಸುತ್ತಾ ನಾನೂ ಕೂಡ ಮಾನ್ಯ ಆದರೆ ನನಗೆ ಸಿಗುತ್ತಿಲ್ಲ ಸರಿಸಮಾನ ಗೌರವ ಎನ್ನುವ ಬದಲು ನಿಂತ ನೀರಾಗದೆ ಹರಿಯುವ ತೊರೆಯಾಗಬೇಕಿದೆ ನಾವುಗಳು. ತಾವು ಏನೇನೂ ಅಲ್ಲದಿದ್ದರೂ ಅನ್ಯರುನ್ನತಿಯು ತಮ್ಮ ಎದೆಯೊಳಗೆ ತಿದಿ ಒತ್ತುತ್ತಿರುವುದರಿಂದ ಸಮಯ ಸಿಕ್ಕಾಗ ಅವರನ್ನು ಹಣಿಯುವ ಬಗ್ಗೆ ಮಾತ್ರ ಆಲೋಚಿಸುವ ಹಿತಶತ್ರುಗಳಿಗೇನೂ ಕೊರತೆಯಿಲ್ಲ. ತಮ್ಮಿಂದ ಏನಾದರೂ ಸಹಾಯ ಮಾಡಲಾಗದಿದ್ದರೂ ಸಹ ಸಹಾಯ ಮಾಡುವ ಮನವಿರುವವರನ್ನು ತಮ್ಮ ಚಾಡಿ ಮಾತುಗಳಿಂದ ಅನ್ಯಮನಸ್ಕರನ್ನಾಗಿ ಮಾಡುವ ಹುನ್ನಾರದ ವಿಷಸರ್ಪಗಳು ತುಂಬಿರುವ ಈ ಜಗದಲ್ಲಿ ಒಳ್ಳೆಯ ಜನರಿಗೆ ಎಂದಿಗೂ ಕೇಡಾಗುವುದಿಲ್ಲ ಕೇಡು ಬಗೆಯುವ ಕಡು ಮೂರ್ಖರಿಗೆ ಕೊನೆಯವರೆಗೂ ಉಳಿಗಾಲವಿಲ್ಲ ಎಂಬುದು ಎಂಬುದು ಈ ಜಗತ್ತಿನ ಅತ್ಯಂತ ಪ್ರಾಚೀನ ಕಾಲದಿಂದಲೂ ಉಳಿದುಕೊಂಡು ಬಂದಿರುವ ನಂಬಿಕೆ.
"ಇಲ್ಲಿ ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ"
ಎಂಬ ಕುವೆಂಪುರವರ ನಾಣ್ಣುಡಿಯಂತೆ ಸರ್ವರನ್ನೂ ಸಮನಾಗಿ ಕಾಣುತ್ತಾ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು|
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ||
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ|
ಎಲ್ಲರೊಳಗೊಂದಾಗು- ಮಂಕುತಿಮ್ಮ||
ಎಂಬ ಭಾವದೊಡನೆ ಒಂದೇ ವೇದಿಕೆಯಡಿಯಲ್ಲಿ ಈ ಎಲ್ಲಾ ಅನ್ಯಮನಸ್ಕರೂ ಕುಳಿತು ಏಕ ಮನಸ್ಥಿತಿಯನ್ನು ಹೊಂದಿ ಕಾರ್ಯಕ್ರಮಗಳನ್ನು ನಡೆಸುವುದನ್ನು ಈ ಕಂಗಳು ತುಂಬಿಕೊಳ್ಳುವ ಕಾಲ ಅದೆಂದು ಬಂದೀತೋ ಎಂದು ಕಾಯುತ್ತಿರುವ
ನಿಮ್ಮವ
ವೈಲೇಶ ಪಿ ಎಸ್ ಕೊಡಗು
೨೫/೪/೨೦೧೯
Comments
Post a Comment