ಪರ್ವಕಾಲ
ಪರ್ವಕಾಲ
~~~~~~
ಇನ್ನೇನು ಪರೀಕ್ಷೆಯ ಭರಾಟೆಗೆ ಎಲ್ಲವೂ ಸಿಲುಕಿ ಒಂದು ರೀತಿಯ ಸ್ವಯಂ ಘೋಷಿತ ನಿರ್ಬಂಧಗಳನ್ನು ನಮಗೆ ನಾವೇ ಹೇರಿಕೊಂಡಿದ್ದೇವೆ. ಪೋಷಕರು ಶಿಕ್ಷಕರಿಗೆ ಇದೊಂದು ರೀತಿಯ ಪರ್ವಕಾಲ ಎನ್ನಬಹುದು. ಈಗಂತು ಯಾವ ಪೋಷಕರು ಅಥವಾ ಶಿಕ್ಷಕರನ್ನು ಮಾತನಾಡಿಸಿದರೆ ಅಯ್ಯೋ ಪರೀಕ್ಷೆ ಎನ್ನುವ ಮಾತಿನ ಹೊರತಾಗಿ ಬೇರೆ ಹೊನ್ನುಡಿಗಳನ್ನು ಕೇಳಲು ಅಸಾಧ್ಯ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ ವರ್ಷವೆಲ್ಲ ಓದಿ ಬರೆದ ನೋಟ್ಸುಗಳನ್ನು ನಮ್ಮ ಶಿಕ್ಷಕರು ಕೊಟ್ಟ ಸಂಭಾವ್ಯ ಪ್ರಶ್ನೋತ್ತರಗಳನ್ನು ಮತ್ತೊಮ್ಮೆ ಓದಿ ಮನದಟ್ಟು ಮಾಡಿಕೊಳ್ಳಲು ಸಾಧ್ಯವಿರುವವರು ಮನದಟ್ಟು ಮಾಡಿಕೊಂಡು ತಂದೆ ತಾಯಿಯರ ಕಾಲು ಹಿಡಿದು ಪರೀಕ್ಷಾ ಕೊಠಡಿಗೆ ತೆರಳುತ್ತಿದ್ದೆವು ಮನದಟ್ಟಾಗದವರು ಮನೆಯಲ್ಲಿ ಹಿರಿಯರ ಮಾತಿಗೆ ಗೌರವ ಕೊಟ್ಟು ಪ್ರಶ್ನೋತ್ತರಗಳನ್ನು ಉರು ಹೊಡೆದು ಪರೀಕ್ಷಾ ಕೊಠಡಿಯಲ್ಲಿ ಕುಳಿತಲ್ಲೇ ಉರುಳಾಡಿ ಯಾವುದೋ ಪ್ರಶ್ನೆಗೆ ಮತ್ತಾವುದೋ ಉತ್ತರ ಬರೆದು ಪರೀಕ್ಷಾ ಕೊಠಡಿಯಿಂದ ಹೊರಬಂದ ಮೇಲೆ ಗೆಳೆಯರೊಡನೆ ಚರ್ಚಿಸುತ್ತಾ ತಪ್ಪಾದ ಉತ್ತರವನ್ನು ಬರೆದ ಕಾರಣಕ್ಕೆ ನಾಲಿಗೆ ಕಚ್ಚಿಕೊಂಡು ಮನೆಯ ಹಾದಿ ಹಿಡಿದಿರುತ್ತಿದ್ದೆವು. ಮನೆಗೆ ಬರುವ ಹಾದಿಯಲ್ಲಿ ಕಾಣಸಿಗುವ ಹಿರಿಯರ ಪ್ರಶ್ನೆಗಳು ಹೀಗಿರುತ್ತಿದ್ದವು.
ಏನಪ್ಪಾ ಪರೀಕ್ಷೆ ಬರೆದೆಯೇನೋ. ಅದಕ್ಕೆ ನಮ್ಮ ಉತ್ತರ ಕೂಡ ಹೀಗೆ ಇರುತ್ತಿತ್ತು.
ಓ... ಎಂದಷ್ಟೇ.
ಪ್ರ. ಪಾಸಾಗಬಹುದಾ
ಉ. ಓ....
ಪ್ರ. ನೀನೇನೋ ಓದಿದ್ದೀಯ ಆದರೆ ಅವನೇನಂತಾನೆ.
ಆಗ ಪಕ್ಕದವನು : ನೀವು ಸುಮ್ಮನಿರಿ ಮಾಮ
ಪ್ರ. ಅಂದರೆ ನೀನು ಪಾಸಾಗಲ್ವಾ
ಉ. ಆಗಬಹುದು ಎಂದು ಇನ್ನೂ ಇಲ್ಲಿ ಇದ್ದರೆ ತೊಂದರೆ ಎಂದು ತಿಳಿದು ಓಡಿ ಹೋಗುತ್ತಿದ್ದೆವು.
ಈಗಿನವರಿಗೆ ಆ ಕಷ್ಟ ಇಲ್ಲ ಬಿಡಿ ಒಂದೇ ಪೋಷಕರು ಜೊತೆಯಲ್ಲಿ ಇರುತ್ತಾರೆ ಅಥವಾ ಶಾಲೆಯ ವಾಹನಗಳ ವ್ಯವಸ್ಥೆ ಇರುತ್ತದೆ.
ನಮ್ಮನ್ನು ದಿನಾ ಬೆಳಿಗ್ಗೆ ಆರು ಗಂಟೆಗೆ ಬಲಾತ್ಕಾರವಾಗಿ ಎಬ್ಬಿಸಿ ಓದಲು ಕೂರಿಸುತ್ತಿದ್ದ ಅಮ್ಮ ಅಪ್ಪ ಅವರ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ನಮಗಿಷ್ಟ ಬಂದಷ್ಟು ಓದು ಮತ್ತೆ ಆಟ ಊಟ ಶಾಲೆಯೆಡೆಗೆ ಓಟ ಇಷ್ಟೇ ನಮ್ಮ ಪೋಷಕರಿಗೆ ನಮ್ಮ ವಿದ್ಯಾಭ್ಯಾಸದ ಬಗ್ಗೆ ಮುತುವರ್ಜಿ. ಆದರೆ ನಾವು ಶೇಕಡ ೪೦ ಅಂಕಗಳನ್ನು ಗಳಿಸಿ ಪಾಸಾಗುತ್ತಿದ್ದೆವು. ಫಲವತ್ತಾದ ದಿನ ಫಲಿತಾಂಶ ನೋಡಿ ಬರುವ ದಾರಿಯುದ್ದಕ್ಕೂ ಪಾಸ ಪೇಲ ಎಂಬುದೇ ಪ್ರಶ್ನೆ. ಕೆಲವರು ಮಾತ್ರ ನಮ್ಮ ಮುಖ ನೋಡಿ ಇವನು ಪಾಸಾಗಿದ್ದಾನೆ ಇವನು ಪೇಲಾಗಿದ್ದಾನೆ ಎನ್ನುತ್ತಿದ್ದರು. ಆದರೆ ಇಂದಿನ ಶಿಕ್ಷಕರು ಪೋಷಕರು ಶೇಕಡ ೯೯ ಅಂಕ ಪಡೆದರೂ ಸಹ ಇನ್ನೂ ಒಂದು ಅಂಕ ಕಡಿಮೆಯಾಯಿತು ಎನ್ನುವ ಮನಸ್ಥಿತಿಯವರು. ನೂರಕ್ಕೆ ನೂರು ಅಂಕ ಪಡೆಯದೇ ಇರುವುದಕ್ಕೆ ಕೊಂಕು ಮಾತುಗಳು.
ಎಲ್ಲರಿಗೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ತಮ್ಮ ಮಕ್ಕಳನ್ನು ವೈದ್ಯ ಅಭಿಯಂತರ ಇನ್ನೂ ದೊಡ್ಡ ದೊಡ್ಡ ಹುದ್ದೆಯನ್ನು ಕೊಡಿಸಿ ಹೊರದೇಶಗಳಿಗೆ ಕಳಿಸಿ ವಯಸ್ಸಾದ ಕಾಲಕ್ಕೆ ಹೊರದೇಶದಿಂದ ಬಾರದ ಮಕ್ಕಳನ್ನು ನಿಂದಿಸುತ್ತಾ ಅವರು ಕಳಿಸಿದ ನಿರ್ಜೀವ ನಿರ್ಭಾವದ ರೊಕ್ಕವನ್ನು ಎಣಿಸಿ ಅದನ್ನೆ ಮಗ ಅಥವಾ ಮಗಳು ಎಂದು ಸವರಿ ತೃಪ್ತಿ ಪಟ್ಟುಕೊಳ್ಳುವ ಆಸೆ. ಹುಟ್ಟಿದ ನಾಡಿನಲ್ಲಿ ಅಥವಾ ಹಳ್ಳಿಯಲ್ಲಿ ಇರುವ ಹೊಲ ಮನೆ ಗದ್ದೆಗಳೆಲ್ಲ ಪಾಳು ಬಿದ್ದು ಎಕ್ಕುಟ್ಟಿ ಹೋಗಿದೆ. ನಮಗೆ ದುಡಿಯುವ ವಯಸ್ಸು ದಾಟಿದೆ ಈಗಲಾದರೂ ಊರಿಗೆ ಬಂದು ಗದ್ದೆ ತೋಟ ಮನೆ ನೋಡಿಕೊಳ್ಳೋ ಮಗನೇ ಎಂದು ದೂರವಾಣಿ ಮುಖಾಂತರ ಮಗನಿಗೆ ತಿಳಿಸಿದರೆ ಅಪ್ಪ ಅಮ್ಮ ಕ್ಷಮಿಸಿ ಬಿಡಿ ನಿಮಗೆ ತಿಳಿಸದೆ ನಾನಿಲ್ಲಿ ಒಬ್ಬ ಸುಂದರ ಯುವತಿಯನ್ನು ಮದುವೆ ಮಾಡಿಕೊಂಡಿದ್ದೇನೆ. ಅವರ ಅಪ್ಪ ಅಮ್ಮ ಎಲ್ಲರೂ ತುಂಬಾ ಒಳ್ಳೆಯವರು ಅಪ್ಪ. ಅವರನ್ನು ಹಾಗೂ ನನ್ನ ಪತ್ನಿಯನ್ನು ಬಿಟ್ಟು ಆ ಹಾಳು ಕೊಂಪೆಗೆ ಹೇಗೆ ಬರಲಿ ನೀವೇ ಇಲ್ಲಿಗೆ ಬಂದು ಬಿಡಿ ನಿಮಗೆ ಇಲ್ಲಿ ಇವರ ಆಚಾರ ವಿಚಾರಗಳು ಸರಿಯಾಗದಿದ್ದರೆ ಬೇರೆಯೇ ಮನೆ ಮಾಡಿಕೊಡುವೆ ಎಂದು ಹೇಳಿಸಿಕೊಳ್ಳುವಾಸೆ.
ಅವರು ಹಾಗೇಯೇ ಇರಲಿ ಬನ್ನಿ ನಾವು ನಮ್ಮ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ಕೊಡಿಸೋಣ. ಇಂತಿಷ್ಟೇ ಶೇಕಡಾ ಅಂಕಗಳನ್ನು ತರಬೇಕೆಂದು ಒತ್ತಾಯಿಸಿ ವೈದ್ಯ ಅಭಿಯಂತರ ಆಗದಿದ್ದರೂ ಪರವಾಗಿಲ್ಲ. ವ್ಯವಹಾರ ಜ್ಞಾನ ಕಲಿಯಲು ಬೇಕಾದಷ್ಟು ಅಂದರೆ ಕನಿಷ್ಟ ಪದವಿ ಪಡೆದ ಬಳಿಕ ನಮ್ಮ ಮಹತ್ತರ ದೇಶದ ಹಳ್ಳಿಗಳಲ್ಲಿ ಉಳುಮೆ ಇಲ್ಲದೆ ಪಾಳು ಬಿದ್ದಿರುವ ಹೊಲ ಗದ್ದೆಗಳನ್ನು ವೈಜ್ಞಾನಿಕ ಅಧ್ಯಯನದ ಮುಖಾಂತರ ಉತ್ತಮ ರೀತಿಯ ವ್ಯವಸಾಯಕ್ಕೆ ಬೇಕಾದ ಎಲ್ಲಾ ಸರಕಾರಿ ಸೌಕರ್ಯಗಳನ್ನು ಪಡೆದು ರೈತನಾಗಿ ದುಡಿದು ಲೋಕಕ್ಕೆ ಅನ್ನ ಕೊಡುವವರಾಗಿಸುವ. ಕಾಣದ ದೇಶದ ಯಾವುದೋ ಮೂಲೆಯಲ್ಲಿ ಅನ್ಯರೆದುರು ಕೈಯೊಡ್ಡಿ ನಿಲ್ಲುವ ಬದಲು ನಾವೇ ಹತ್ತು ಜನರಿಗೆ ಕೆಲಸ ಕೊಡುವ ಪ್ರಯತ್ನವನ್ನು ಮಾಡೋಣ.
ಉನ್ನತ ಶಿಕ್ಷಣ ಎಂದರೆ ಕೇವಲ ಇಂಗ್ಲಿಷ್ ಭಾಷೆಯಲ್ಲಿ ಕಲಿಯುವುದು ಅಲ್ಲ. ಉತ್ತಮ ಕೆಲಸವೆಂದರೆ ಸತ್ಯವಾಗಿಯೂ ಸರಿಯಾದ ಸಮಯಕ್ಕೆ ಊಟ ತಿಂಡಿ ಇಲ್ಲದೇ ಯಾರದೋ ಮರ್ಜಿಗಾಗಿ ಮತ್ಯಾರದೋ ಹಸ್ತದಿಂದ ಉದುರುವ ಹಣವನ್ನು ಎದುರು ನೋಡುವ ಕೆಲಸವಲ್ಲ. ಯಾರದೋ ಮನ ಸಂತೋಷಕ್ಕಾಗಿ ನಮ್ಮ ಹೆತ್ತವರ ವಯೋಕಾಲದಲ್ಲಿ ಕೇವಲ ಹಣ ಕಳುಹಿಸಿ ಹೆಣ ಬಿದ್ದು ಸುಟ್ಟೋ ಅಥವಾ ಹೂತೋ ಹಾಕಿದ ಮೇಲೆ ಬಂದು ಅಳುತ್ತಾ ಕೂರುವುದಲ್ಲ. ಈ ದೇಶದ ಸಂಸ್ಕೃತಿಯನ್ನು ಕಲಿತು ಈ ಮಣ್ಣಿನ ಗುಣವನ್ನು ಅರಿತು ನಮ್ಮ ಆಹಾರವನ್ನು ನಾವೇ ಬೆಳೆದು ಇತರರಿಗೂ ಹಂಚುವ ರೈತರ ಕೆಲಸ ಎಲ್ಲಕಿಂತಲೂ ಮಿಗಿಲು. ಅನ್ನವನ್ನಾಗಲಿ ಅಕ್ಕಿಯನ್ನಾಗಲಿ ಗೂಗಲ್ ನಿಂದ ಅಥವಾ ಬೇರಾವುದೇ ಬಗೆಯಿಂದ ಬೆಳೆದು ತರಲು ಸಾಧ್ಯವಿಲ್ಲ. ಹೊರದೇಶದಿಂದ ತರಲು ಸಾಧ್ಯವಿಲ್ಲ.
ಈ ದೇಶದಲ್ಲಿ ನಮ್ಮ ಕರುನಾಡಿನಲ್ಲಿ ಸಾವಯುವ ಕೃಷಿಯನ್ನು ವೈಜ್ಞಾನಿಕವಾಗಿ ಕೃಷಿ ಮಾಡಿ ಬದುಕು ಕಂಡುಕೊಂಡ ಅದೆಷ್ಟೋ ಜನರು ಇದ್ದಾರೆ. ವ್ಯವಸಾಯ ಮನೆಯವರೆಲ್ಲಾ ಸಾಯ ಎಂಬುವಂತಹ ಪರಿಸ್ಥಿತಿಯನ್ನು ಇತ್ತೀಚೆಗೆ ಆಗಮಿಸಿದ ಕೆಲವು ಯಂತ್ರಗಳು ಅಲ್ಲಗಳೆದಿವೆ. ಆದರೆ ನಮ್ಮ ಮನಸ್ಥಿತಿ ಮಾತ್ರ ಕೇವಲ ಉನ್ನತ ವ್ಯಾಸಂಗ ಉನ್ನತ ನೌಕರಿ ಎಂಬುದರ ಹೊರತಾಗಿ ಬೇರೆ ಏನನ್ನೂ ಯೋಚಿಸದ ರೀತಿಯಲ್ಲಿ ನಮ್ಮ ಮನಸ್ಸನ್ನು ನಾವೇ ಕಟ್ಡಿಹಾಕಿಕೊಂಡಿದ್ದೇವೆ. ಈ ಪ್ರಪಂಚದಲ್ಲಿ ಎಲ್ಲರೂ ಮುಂದುವರಿಯಬೇಕು ನಿಜ. ಹಾಗೆಂದು ನಮ್ಮ ಮಿತಿ ಮೀರಿದ ಓದು ನಮ್ಮಿಂದ ಅಸಾಧ್ಯ ಎಂಬುದನ್ನು ಕೂಡ ನಾವು ಮನದಟ್ಟು ಮಾಡಿಕೊಳ್ಳಲೇಬೇಕಿದೆ. ಆದಕಾರಣ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಮುಂದೆ ಅನುತ್ತೀರ್ಣರಾದವರನ್ನು ತೆಗಳಿದಿರಿ ಪೋಷಕರೇ.
ಹಾಗೆ ಮುಂದೆ ಗುರಿ ಇರಲಿ ಹಿಂದೆ ಗುರುವಿರಲಿ ಎಂಬ ಮಾತಿನಂತೆ ಗಮನವಿಟ್ಟು ಓದಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ತಾವೆಲ್ಲರೂ ತಮ್ಮ ಗುರಿ ಮುಟ್ಟುವ ನಂಬಿಕೆ ನಮಗಿದೆ. ಅಕಸ್ಮಾತ್ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ ಎಂದಿಟ್ಡುಕೊಳ್ಳಿ. ಮರಳಿ ಯತ್ನವನ್ನು ಮಾಡಲು ಬಹಳಷ್ಟು ಅವಕಾಶಗಳಿವೆ. ಯಾವುದೇ ಕಾರಣದಿಂದಾಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ. ಜೀವನದಲ್ಲಿ ಉನ್ನತ ಹುದ್ದೆಯಲ್ಲದೇ ಬದುಕಲು ಬಹಳಷ್ಟು ದುಡಿಮೆಯ ಹಾದಿಗಳು ಇವೆ. ಆ ವಿಚಾರ ನಂತರ ಮಾತಾನಾಡುವ ಈಗ ಸಧ್ಯಕ್ಕೆ ನಿಮ್ಮ ಗುರಿ ಪರೀಕ್ಷೆಯೆಡೆಗೆ ಇರಲಿ.
ವೈಲೇಶ ಪಿ ಎಸ್ ಕೊಡಗು
೨೧/೩/೨೦೧೯
Comments
Post a Comment