ಯುದ್ಧ ಮತ್ತು ನಾಗರೀಕತೆ

ಯುದ್ಧ ಮತ್ತು ನಾಗರೀಕತೆ
~~~~~~~~~~~~~~
ಈ ಜಗದ ಎಲ್ಲಾ ಜೀವಿಗಳಿಗೆ ಜೀವನವೆಂದರೆ ಯುದ್ಧ ಆದರೆ ಯುದ್ಧದ ನಿರೀಕ್ಷೆಯೇ ಜೀವನ ಎಂಬುದು ಯೋಧರಿಗೆ ಮಾತ್ರ ಅಲ್ಲವೇ. ಹಾಗೆ ಗಡಿ ಕಾವಲಿಗೆಂದು ತೆರಳಿದ ಯೋಧರ ಕುಟುಂಬ ವರ್ಗದವರಿಗೆ ಅವರು ಮರಳಿ ಬರುವವರೆಗೂ ಅವರ ನಿರೀಕ್ಷೆಯೊಂದಿಗೆ ಮನದ ತುಮುಲಗಳನ್ನು ಹತ್ತಿಕ್ಕಲಾರದ ಸಂಕಟ. ಯುದ್ಧದ ಸಮಯದಲ್ಲಿ ಆ ಸಂಕಟವು ಅತ್ಯಂತ ಹೆಚ್ಚಾಗುತ್ತದೆ ಎಂಬ ಅರಿವು ಎಲ್ಲರಿಗೂ ಇದೆ.

ಈಗ ವಿಚಾರ ನೋಡಿ "ಯುದ್ಧ ಮತ್ತು ನಾಗರೀಕತೆ" ಇವೆರಡೂ ಪರಸ್ಪರ ವಿರುದ್ಧ ಪದಗಳು ಎಂಬುದು ನನ್ನ ಅಭಿಪ್ರಾಯ. ಕೆಲವೊಮ್ಮೆ ನನಗೆ ನಾನೇ ಎಂದುಕೊಳ್ಳುವುದುಂಟು ನಾನಿನ್ನೂ ಉತ್ತಮ ನಾಗರೀಕ ಆಗಿಲ್ಲ ಎಂದು. ಏಕೆಂದರೆ ನನಗೂ ಕೂಡ ಕೋಪ ತಾಪಗಳನ್ನು ದಾಟಿ ಬರಲು ಇನ್ನೂ ಸಾಧ್ಯವಾಗಿಲ್ಲ. ಇರಲಿ ನಿಜ ಹೇಳಬೇಕೆಂದರೆ ಉತ್ತಮ ನಾಗರೀಕರು ತಮ್ಮ ಯಾವತ್ತೂ ಹಕ್ಕುಗಳನ್ನು ಪಡೆಯಲು ಶಾಂತಿಯುತ ಮಾರ್ಗವನ್ನೇ ಅನುಸರಿಸುತ್ತಾರೆ. ನಾವು ನೀವೆಲ್ಲರೂ ಕೇಳಿರಬಹುದು ಸಟಿಗೂ ಸುಟಿಗೂ ಪ್ರತಿಭಟನೆ ಮಾಡುವವರನ್ನು ಅನಾಗರೀಕರು ಎಂದು ಕರೆಯಲಾಗುತ್ತದೆ. ಹಾಗಾದರೆ ನಾಗರೀಕರು ಪ್ರತಿಭಟನೆ ಮಾಡಬಾರದು ಎಂದಿದೆಯೇ ಖಂಡಿತವಾಗಿ ಇಲ್ಲ.

ನುಡಿದರೆ ಮುತ್ತಿನ‌ ಹಾರದಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು 
ನುಡಿದರೆ ಶಿವ ಮೆಚ್ಚಿ ಅಹುದಹುದೆನಬೇಕು
ಎಂದು ಬಸವಣ್ಣನವರು ನುಡಿದಂತೆ ಉತ್ತಮ ನಾಗರೀಕರು ನುಡಿದರೆ ಹತ್ತು ಜನ ನಿಂತು ಸರಿಯಾಗಿ ಹೇಳಿದಿರಿ ಎನ್ನುವಂತಹ ಪ್ರತಿಭಟನೆ ಮಾಡುವರು.

ಇಂದಿನ ದಿನಗಳಲ್ಲಿ ಯುದ್ಧ ಎಂದರೆ ಸಾವು,ನೋವು, ರಕ್ತಪಾತ, ಮಗನನ್ನು, ಗಂಡನನ್ನು, ಅಪ್ಪನನ್ನು, ಸಹೋದರರನ್ನು ಕಳೆದುಕೊಳ್ಳುವುದು ಮಾತ್ರವಲ್ಲ ನಮ್ಮ ಜೀವಮಾನದ ಸಕಲ ಸಾಧನೆ ಸಂಪಾದನೆ ಎಲ್ಲವನ್ನೂ ಯುದ್ಧವೆಂಬ ಮಹಾಮಾರಿಗೆ ಒಪ್ಪಿಸಿ ಕೇವಲ ವೇದನೆಯನ್ನೂ ಸಂಕಟವನ್ನು ರೋಗ ರುಜಿನಗಳ ಜೊತೆಗೆ ಆರ್ಥಿಕ ದಿವಾಳಿತನವನ್ನು ಹೊಂದಿಕೊಳ್ಳುವ ಜೊತೆಗೆ ದೇಶದ ಆಸ್ತಿ ಪಾಸ್ತಿ, ಆರ್ಥಿಕ ವ್ಯವಸ್ಥೆ, ಸಾಮಾಜಿಕ ಸಾಂಸ್ಕೃತಿಕ ಉನ್ನತಿಯ ನಾಶ, ರಾಜಕೀಯ ದ್ವೇಷದ ಹೆಚ್ಚಳಿಕೆ ಮತ್ತಿತರ ಕಣ್ಣಿಗೆ ಕಾಣದ. ಮನಸ್ಸಿಗೆ ತೋಚದ  ವಿಷಯಗಳ ಅವನತಿಗೆ ಹಾದಿ ತೆರೆದು ಕೊಟ್ಟಂತೆ. ನಾಗರೀಕತೆಯ ಗಂಧ ಗಾಳಿ ಅರಿಯದೆ ಕೇವಲ ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸ ಮಾಡುತ್ತಿರುವ ಪಾಕಿಸ್ತಾನದ ನೆಲದಲ್ಲಿ ಯುದ್ಧ ಪಿಪಾಸುಗಳಂತೆ ಅನ್ಯ ಮಾನವರ ಹತ್ಯೆಯ ಜೊತೆಗೆ ತನ್ನ ಸ್ವಂತ ಪ್ರಾಣವನ್ನು ಕಳೆದುಕೊಂಡ ಉಗ್ರರು ಸಾಧಿಸಿದ ಮಹತ್ತರವಾದರೂ ಏನು.

ಸಾಮ್ರಾಟ್ ಅಶೋಕ ಚಕ್ರವರ್ತಿಯು ಸಹ ಒಂದು ಕಾಲದಲ್ಲಿ ತನ್ನ ಸಾಮ್ರಾಜ್ಯದ ವಿಸ್ತರಣೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಯುದ್ಧವೆಂಬ ಮಹಾಮಾರಿಯ ಹೆಗಲೇರಿ ಎಲ್ಲವನ್ನೂ ಗೆದ್ದು ಒಮ್ಮೆ ಅಚಾನಕ್ಕಾಗಿ ಹಿಂದಿರುಗಿ ನೋಡಿದಾಗ ತಾನು ಗಳಿಸಿರುವುದಕ್ಕಿಂತ ಕಳೆದುಕೊಂಡಿರುವುದೇ ಅಧಿಕ ಎನಿಸಿರುವುದು ಸುಳ್ಳಲ್ಲ ಅಲ್ಲವೇ. ಅಂತಹ ಸಾಮ್ರಾಜ್ಯದ ಒಡೆಯನಿಗೆ ಕೂಡ ತನ್ನ ತಪ್ಪುಗಳನ್ನು ಸರಿಪಡಿಸುವ ಅವಕಾಶವನ್ನು ಯುದ್ಧ ಮತ್ತೆ ಕೊಡುವುದಿಲ್ಲ ಎಂಬ ಅರಿವು ಮೂಡಿ ತನ್ನ ಮರಣದ ನಂತರ ತನ್ನ ಶವಯಾತ್ರೆಯಲ್ಲಿ ನನ್ನ ಕೈಗಳನ್ನು ಶವಪೆಟ್ಟಿಗೆಯಿಂದ ಹೊರಗೆ ಎಲ್ಲರಿಗೂ ಕಾಣುವಂತೆ ಇಡಬೇಕು ಇದು ನನ್ನ ಕೊನೆಯಾಸೆ. ಜಗತ್ತನ್ನೇ ಗೆದ್ದು ಸಾಮ್ರಾಟ್ ಎನಿಸಿಕೊಂಡರೂ ಒಂದೇ ಒಂದು ಬಿಡಿಗಾಸು, ಹಿಡಿಯನ್ನ ತೃಣಮಾತ್ರದ ಮಣ್ಣನ್ನು ಕೊಂಡೊಯ್ಯಲಾಗದೇ ಮಣ್ಣಿನೊಳು ಮಣ್ಣಾದನೆಂಬ ಅನುಪಮ ಸತ್ಯವನ್ನು ಜಗತ್ತಿಗೆ ಸಾರಿದ ಎಂದರೆ ತಪ್ಪಾಗಲಾರದು.

ಇಂದಿನ ಈ ಯುಗದಲ್ಲಿ ಜಗದ ಬಲಿಷ್ಠ ಬುದ್ಧಿವಂತ ರಾಷ್ಟ್ರಗಳ ಅಧಿಕಾರಾಷಾಹಿ ನೇತಾರರು ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳನ್ನು ಮೆಟ್ಟಿ ನಿಲ್ಲುವ ಹಾಗೂ ಎಂದೆಂದಿಗೂ ಮತ್ತೆ ತಲೆ ಎತ್ತದಂತೆ‌ ಸೆದೆ ಬಡಿಯುವ ಹುನ್ನಾರದ ಜೊತೆಗೆ ತಾವು ನಿರ್ಮಿಸಿದ ಯುದ್ಧ ಸಾಮಾಗ್ರಿಗಳನ್ನು ಪ್ರಯೋಗಿಸಲು ಒಂದು ವೇದಿಕೆಯನ್ನಾಗಿಸುವ ಮೂಲಕ ಮತ್ತು ತಮ್ಮ ನಿರ್ಮಿತಿಗಳಿಗೆ ಮಾರುಕಟ್ಟೆ ದೊರಕಿಸಿಕೊಳ್ಳಲು ಕಂಡುಕೊಂಡ ಅತಿ ಸುಲಭದ ಹಾದಿಯಾಗಿ ಬಡ ಹಾಗೂ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ರಾಷ್ಟ್ರಗಳ ನಡುವೆ ವೈಷಮ್ಯದ ಬೀಜ ಬಿತ್ತುವ ಕೆಲಸವನ್ನು ಅತ್ಯಂತ ಸಮರ್ಥವಾಗಿ ನಡೆಸಿಕೊಂಡು ಬರುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಹಿಂದೆ ಅಮೇರಿಕಾ ಭಾರತಕ್ಕೆ ಸಹಾಯಹಸ್ತ ಎಂದು ನೀಡುತ್ತಿದ್ದ ಗೋಧಿಯ ಜೊತೆಗೆ ಅಲ್ಲಿ ಹುಲುಸಾಗಿ ಬೆಳೆದಿದ್ದ ಪಾರ್ಥೇನಿಯಂ ಕೂಡ ಭಾರತದ ಒಳಗೆ ನುಸುಳಿತ್ತು ಎಂಬುದು ಸುಳ್ಳು ಅಥವಾ ಸತ್ಯ ಎಂಬುದು ನಮಗಿನ್ನೂ ಅರಿವಾಗಿಲ್ಲ. ಆದರೆ ಅದೆ ಗೋಧಿ ಸಹಾಯಹಸ್ತವನ್ನು ಒಂದು ಯುದ್ಧಕಾಲದ ಅತ್ಯಂತ ಜಟಿಲ ಆಹಾರ ಸಮಸ್ಯೆ ಇದ್ದ ಸಮಯದಲ್ಲಿ ಅಮೇರಿಕಾ ಹಿಂತೆಗೆದುಕೊಂಡಿತು ಎನ್ನುವುದು ಖಂಡಿತವಾಗಿ ಸುಳ್ಳಲ್ಲ. ಆದರೆ ಅಮೇರಿಕಾದ ಯಾವುದೇ ಬೆದರಿಕೆಗೂ ಬಗ್ಗದೇ ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಯುದ್ಧವನ್ನು ನಿಲ್ಲಿಸಲೂ ಆಗದೆ ತನ್ನ ಒಂದು ಹೊತ್ತಿನ ಊಟದ ಜೊತೆಗೆ ಎಲ್ಲಾ ಆಡಂಬರದ ಪ್ರದರ್ಶನಗಳನ್ನು ಬಿಟ್ಟು ದೇಶದ ಏಳಿಗೆಗಾಗಿ ದೇಶದ ಜನರ ಬಳಿ ಸಹಾಯ ಕೇಳಿದ ಕೆಲವು ನಾಯಕರುಗಳನ್ನು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗಳು ಹಾಗೂ ರಾಜಕಾರಣಿಗಳು ಅನುಸರಿಸುವಂತಾಗಬೇಕು.

ಇನ್ನು ಈ ಯುಗದ ಯುದ್ಧದ ಪರಿಣಾಮಗಳನ್ನು ಸುಮ್ಮನೆ ಹಾಗೊಮ್ಮೆ ನೆನೆಸಿಕೊಳ್ಳುವ. ಪಾಕಿಸ್ತಾನದ ಯುದ್ಧದ ದಾಹಕೆ ಸಿಲುಕಿ ಪಾಕಿಸ್ತಾನ ಎಂಬ ದೇಶ ಇಂದು ಪಾಪಿಸ್ತಾನವಾಗಿದೆ ಅಲ್ಲಿ ಬಡತನ ರೋಗ ರುಜಿನಗಳು ಹೆಚ್ಚಿವೆ. ಅಪಘಾನಿಸ್ಥಾನದಲ್ಲಿ ಸಹ ಸಧ್ಯದ ಪರಿಸ್ಥಿತಿಯು ಪಾಕಿಸ್ತಾನಕ್ಕಿಂತಲೂ ಹೀನಾಯವಾಗಿದೆ. ಅಮೇರಿಕಾ, ಚೀನಾ, ರಷ್ಯಾದಂತಹ ರಾಷ್ಟ್ರಗಳು ತಾವು ನಿರ್ಮಿಸಿದ ವಸ್ತುಗಳ ಮಾರುಕಟ್ಟೆಗಾಗಿ ದೇಶ ವಿದೇಶಗಳ ನಡುವಿನ ಸಂಬಂಧವನ್ನು ಹಾಳುಮಾಡುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿವೆ.

ವ್ಯಾಪಾರದ ಆಕಾಂಕ್ಷೆ ಹೊಂದಿ ಭಾರತಕ್ಕೆ ಬಂದ ಬ್ರಿಟಿಷರು ನಮ್ಮ ದೇಶದ ಜಾತಿ, ಧರ್ಮ, ಅಸೂಯೆ, ಸ್ವಜನ ಪಕ್ಷಪಾತ, ಅರಿವಿರದಿದ್ದ ಅರಸರ ಮೂಢತನ, ಮೂಢನಂಬಿಕೆ, ದೇಶೀಯ ರಾಜರುಗಳಿಗಿಂತ ವಿದೇಶಿ ಬ್ರಿಟಿಷ್ ಸರ್ಕಾರದ ಎಂಜಲು ಕಾಸಿಗೆ ಕೈಯೊಡ್ಡಿ (ಅದು ಸಹ ನಮ್ಮ ಭಾರತದ ಜನರಿಂದ‌ ಸುಲಿಗೆ ಮಾಡಿದ ಹಣ, ವಸ್ತುಗಳು) ದೇಶವನ್ನು ಅಡವಿಟ್ಟು ಅನಾಗರಿಕರಂತೆ ಬದುಕು ಸವೆಸಿದ್ದು ಸಾಕಾಗಿದೆ. ಈಗ ಭಾರತವು ಎಲ್ಲಾ ರೀತಿಯ ಭದ್ರತೆಯ ವಿಷಯದಲ್ಲಿ ಸಾಕಷ್ಟು ಬಲಗೊಂಡಿದೆ. ಹಾಗೂ ನಮ್ಮದೇ ಸ್ವಂತ ಪರಿಶ್ರಮದಿಂದ ವೈಜ್ಞಾನಿಕವಾಗಿಯೂ ಸಾಕಷ್ಟು ಮುಂದುವರಿದಿದೆ. ಇಷ್ಟೆಲ್ಲಾ ಪರಿಶ್ರಮದ ನಂತರವೂ ನಾವು ಯುದ್ಧ ಬೇಕೆ ಬೇಡವೇ ಎಂಬ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಮೂಲಕ ನಾಗರೀಕತೆಯ ಉತ್ತುಂಗವನ್ನು ತಲುಪುವ ಪ್ರಯತ್ನ ಮಾಡುವ.

ಸಾಮಾನ್ಯವಾಗಿ ಜನಸಾಮಾನ್ಯರ ಸಭ್ಯಗುಣಶೀಲಗಳ ವಿಶಿಷ್ಟ ರೂಪಕ್ಕೆ "ನಾಗರೀಕತೆ" ಎನ್ನಬಹುದು. ಅದು ಒಬ್ಬ ವ್ಯಕ್ತಿ ಅಥವಾ ಸಮುದಾಯ, ದೇಶ ನಮ್ಮದೇ ಪರಿಸರಗಳಿಂದ ನಮಗೆ ದೊರಕಿರುವ ಗುಣ ಶಕ್ತಿ ಸಂಪತ್ತನ್ನು ಅಥವಾ ಯಾವುದೇ ರೀತಿಯ ಸಂದರ್ಭಗಳನ್ನು ಇನ್ನಾವುದೇ ವ್ಯಕ್ತಿ, ಸಮುದಾಯ, ದೇಶಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ, ಹಾಗೂ ನಮ್ಮ ನಡವಳಿಕೆಗಳಿಂದ ಲೋಕಕ್ಕೆ ಹಿತವಾಗುವಂತೆ ನಡೆಸುವ ಸುಸಂಸ್ಕೃತ ಜೀವನ ಕ್ರಮವನ್ನು ನಾಗರೀಕತೆ ಎನ್ನಬಹುದು. ಎಲ್ಲವೂ ನನಗೇ ಇರಲಿ  ಎಲ್ಲವೂ ನನಗಾಗಿಯೇ ಇರಲಿ ನನ್ನದಲ್ಲದ ವಸ್ತು ದೇಶ, ಭೂಮಿಯ ಮೇಲೆ ಇರಬಾರದು ಎಂಬ ಹೋರಾಟಕ್ಕೆ ಯುದ್ಧ ಎಂದು ಹೆಸರು. ಅದು ದೇಶ ವಿದೇಶಗಳ ನಡುವೆ ನಡೆಯಬೇಕೆಂದೇನು ಇಲ್ಲ. ಮನುಜ ಮನುಜರ ನಡುವೆ ನಡೆದರೂ ಕೂಡ ಅದು ಒಂದು ರೀತಿಯಲ್ಲಿ ಯದ್ಧವೇ ಅಲ್ವೇ.

ಇನ್ನು ನಮ್ಮ ದೇಶದ ನಾಗರೀಕತೆಯನ್ನು ಅಥವಾ ನಮ್ಮ ಸಂಯಮವನ್ನು ನಮ್ಮ ಹೇಡಿತನ ಅಥವಾ ಅಸಹಾಯಕತೆ ಎಂದು ಭಾವಿಸಿ ನಮ್ಮ ವಿರುದ್ಧ ಷಡ್ಯಂತ್ರವನ್ನು ಹೂಡುವ ಯಾವುದೇ ವ್ಯಕ್ತಿ, ಸಮುದಾಯ, ಅಥವಾ ದೇಶವಾದರೂ ಸರಿಯೇ. ಅವರಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿರುವುದು ಕೂಡ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸ್ವಾರ್ಥದ ದುರಾಸೆಯಿಂದ ಯುದ್ಧದ ಹಂಬಲ ಮೆರೆದು, ಸ್ವಾರ್ಥದ ದುರಾಸೆಯಿಂದ ಶಕುನಿಗಳಂತೆ ದೇಶ ವಿದೇಶಗಳ ನಡುವೆ ವೈಷಮ್ಯದ ಬೆಂಕಿ ಹಚ್ಚುತ್ತಿರುವ ಮುಖ್ಯಸ್ಥರಿಗೆ, ಈ ಜಗದ ಎಲ್ಲಾ ಸಾಮಾನ್ಯ ಮನುಜರಿಗೂ  ನಾಗರೀಕತೆಯೆಂಬ ಸಂಯಮ ಮೆರೆದು ಯುದ್ಧದ ಅಭಿಲಾಷೆಯು ತೊಲಗಿ ಲೋಕಕ್ಕೆ ಒಳಿತಾಗಲೆಂದು ಎಂದೆಂದಿಗೂ ಬಯಸುವೆ.

ಲೋಕಾಸಮಸ್ತ ಸುಖಃನೋಭವಂತು

ಎಂದೆಂದಿಗೂ ತಮ್ಮವ
ವೈಲೇಶ ಪಿ ಎಸ್ ಕೊಡಗು
೧೮/೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು