ಭರದಿ ಬಾರಯ್ಯ
ಭರದಿ ಬಾರಯ್ಯ
~~~~~~~~~
ಸುರಿಯಿತು ಹರ್ಷದ ಮೊದಲ ಮಳೆ
ಅರಳಿತು ಘಮಘಮಿಸುತಲಿ ಇಳೆ
ನುಲಿಯುತ ಹರಿಯದಿರಲು ಹೊಳೆ
ಸಿಹಿನೀರ ಎರಚಿದಂತೆ ಧರೆಯ ಕಳೆ
ಕೆಲವೆಡೆ ತುಂತುರು ಹಲವೆಡೆ ಬಂಪರು
ಕಳೆಯಿತು ಭೂತಾಯಿಯ ಮಂಪರು
ತರಣಿ ತಂದನಾ ಧರೆಯೊಳಗ್ಹಸಿರು ಚಿಗುರು
ತೊಡಿಸಿ ತರುಣಿಗೆ ರಂಗು ರಂಗಿನ ಜಂಪರು
ಹಲವರ ಫಸಲು ಹಳ್ಳದೆಡೆಗೆ ನಡೆದಿರೆ
ಕೆಲವರ ಕಂಗಳು ಮೋಡದಿ ಬೆರೆತಿರೆ
ಹೇಗೊ ಏನೊ ಬಾರದಿರಲಿ ತೊಂದರೆ
ನಮ್ಮ ಮನದಂತೆ ಪ್ರಕೃತಿ ಮಾತೆ ನಡೆವರೆ
ಸಣ್ಣ ಮಳೆಯ ನೀರು ಬೆಣ್ಣೆಯಂತೆ ಕರಗಿ
ನಿಂತವು ವನಜೀವಿಗಳು ನೀರಿಲ್ಲದೆ ಕೊರಗಿ
ಹುಡುಕಲು ಆಹಾರವನು ತಾವು ಶಿರಬಾಗಿ
ಕಾಣದೆ ದಾರಿ ಬಿಸಿಲಿನ ತಾಪಕೆ ಶರಣಾಗಿ
ವರ್ಷಧಾರೆಯಿಂದು ಜರೂರಗತ್ಯವಿದೆ
ನೀನಿಲ್ಲದೇ ಧರೆಯು ಭಣಗುಡುತ್ತಿದೆ
ಭರದಿ ಬಾರಯ್ಯ ದೇವ ವರುಣರಾಯ
ತಂಪನೆರೆದು ಉಳಿಸು ಜೀವಿಗಳ ಕಾಯ
ವೈ.ಕೊ
ವೈಲೇಶ ಪಿ ಎಸ್ ಕೊಡಗು
೭/೩/೨೦೧೭
Comments
Post a Comment