ಈ ಶಿಕ್ಷಣದ ಅಗತ್ಯವಿದೆ
ಈ ಶಿಕ್ಷಣದ ಅಗತ್ಯವಿದೆ
~~~~~~~~~~~~
ಶಿಕ್ಷಣ ಎಂಬುದು ಇಂದು ವ್ಯಾಪಾರವಾಗಿ ವ್ಯಾಪಕವಾಗಿ ವಿಸ್ತಾರವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಅದೇನೋ ಸರಿ ಆದರೆ ಶಿಕ್ಷಣ ಎಂಬುದು ಸರಿಯಾದ ಮಾರ್ಗದಲ್ಲಿ ಸರಿಯಾದವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆಯಾ ಎಂದು ನಾವು ನೋಡ ಹೊರಟರೆ ಕಾಣುವ ಕೆಲವು ಚಿತ್ರಣಗಳನ್ನು ತಮ್ಮ ಮುಂದೆ ಇಡುವ ಒಂದು ಪುಟ್ಟ ಪ್ರಯತ್ನವನ್ನು ಮಾಡುವ ಹಂಬಲ ಅನೇಕ ದಿನಗಳಿಂದಲೂ ನನ್ನನ್ನು ಕಾಡುತ್ತಿತ್ತು. ಅದರೆ ವೇದಿಕೆ ಇಂದು ಒದಗಿದೆ ಎನ್ನಲಡ್ಡಿಯಿಲ್ಲ
ಪ್ರಾಚೀನ ಕಾಲದಿಂದಲೂ ಗುರುಕುಲ ಪದ್ದತಿ ಅದರಲ್ಲಿ ಸೀಮಿತ ವರ್ಗಕ್ಕೆ, ಸೀಮಿತ ವರ್ಣದ ಜನಗಳಿಗೆ ಓದಲು ಬರೆಯಲು ಕಲಿಯಲು ಆ ಮೂಲಕ ನಲಿಯಲು ಬೆಳೆಯಲು ಅವಕಾಶ ಇತ್ತು. ಒಂದಷ್ಟು ಮೇಲ್ವರ್ಗದ (ಜಾತಿಯ ಆಧಾರದ ಮೇಲೆ ಅವರು ಕಂಡುಕೊಂಡಂತೆ) ಮತ್ತೊಂದಷ್ಟು ಹಣ ಜನ ಇತ್ಯಾದಿಯಾಗಿ ಬಲವಿದ್ದ ವರ್ಗಕ್ಕೆ (ಅಂದರೆ ರಾಜರು ಸಾಮಂತರು ಮಂತ್ರಿ ಮಾಗಧರು ಇವರಿಗಷ್ಟೇ) ಮೀಸಲಾಗಿತ್ತು ಈ ವಿದ್ಯೆ. ಆದರೆ ಇಂದು ಜಾತಿ ಮತ ಬೇದವಿರದೆ ಎಲ್ಲರೂ ಅವರವರ ಕಾಂಚಾಣದ ಅನುಕೂಲತೆಗೆ ತಕ್ಕಂತೆ ಶಾಲೆಗಳನ್ನು ಆರಿಸಿಕೊಂಡು ವಿದ್ಯೆ ಕಲಿಯಬಹುದಾಗಿದೆ. ಆದರೆ ನಿಜಕ್ಕೂ ಅದು ಸರಿಯಾದ ವಿದ್ಯೆಯಾ ಅಥವಾ ಕೇವಲ ಉರು ಹೊಡೆದು ಕಾಗದದಲ್ಲಿ ಭಟ್ಟಿ ಇಳಿಸುವ ಕ್ರಿಯೆಯಾ ಎಂಬುದು ಸಾಧಾರಣವಾಗಿ ಎಲ್ಲರಿಗೂ ಅನುಮಾನವೆ. ಅಂದು ಮಕ್ಕಳ ಮನದಲ್ಲಿ ಶಿಕ್ಷಕರ ಬಗ್ಗೆ ಭಯ, ಭಕ್ತಿ, ಗೌರವ ಇತ್ತು. ಈಗ ಶಿಕ್ಷಕರ ವೃತ್ತಿ ಎಂಬುದು ರೌರವ ನರಕ ಎಂಬಂತಾಗಿದೆ. ಆ ಬಗ್ಗೆ ಇನ್ನೊಮ್ಮೆ ಬರೆಯುವೆ.
ಇದಕ್ಕೆಲ್ಲ ಕಾರಣ ಏನು ಎಂಬುದನ್ನು ಹುಡುಕುತ್ತಾ ಹೊರಟರೆ ಸರಕಾರದ ಕೆಲವು ನೀತಿಗಳು. ಅದು ಸಂತಾನ ನಿಯಂತ್ರಣ ವ್ಯವಸ್ಥೆಯಿಂದ ಕುಟುಂಬದೊಳಗೆ ವಿರಳಗೊಂಡ ಮಕ್ಕಳ ಸಂಖ್ಯೆ ಇರಬಹುದು. ಇರುವ ಒಂದು ಮಗುವನ್ನು ಶಿಕ್ಷಿಸಿ ಸನ್ನಡತೆ ಕಲಿಸಲಾಗದ ಪೋಷಕರ ಕೆಲವು ಅಮಾಯಕ ನಿಲುವುಗಳು ತಮ್ಮ ಹೆಸರನ್ನು ಉಳಿಸಬೇಕಾದ ಮಕ್ಕಳ ಮೇಲೆ ಅತಿಯಾದ ಮಮತೆ ಹುಚ್ಚು ಪ್ರೀತಿ ಮತ್ತು ನಾವೇ ಅರಿಯದೆ ನಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವ ನಮ್ಮ ನಡೆ ನುಡಿಗಳು ನಮ್ಮದೇ ಕೆಲವು ಅಪಸವ್ಯಗಳು ಕೆಲವು ಅಪಹಾಸ್ಯಗಳು ಇನ್ನೊಂದಷ್ಟು ಅಪರಾಧಗಳು ಅದನ್ನು ಮರೆಮಾಚಲು ಬಣ್ಣವನ್ನು ಕೂಡ ಹಚ್ಚದೇ ನಾವಾಡುವ ಕೆಲವು ನಾಟಕಗಳು. ಅಲ್ವೇ. ತುಂಬಾ ಜನರಿಗೆ ಗೊತ್ತಿದೆ ಮಕ್ಕಳು ನಮ್ಮನ್ನು ಅನುಸರಿಸುತ್ತಿರುತ್ತಾರೆ ಎಂದು. ಹಾಗಾಗಿ ಮಕ್ಕಳಿಗೆ ಶಿಕ್ಷಣವನ್ನು ನಮ್ಮ ಉತ್ತಮ ನಡತೆ, ಹವ್ಯಾಸ, ಹಾವಭಾವಗಳು, ಸಮಾಜದ ಬಗ್ಗೆ ನಮ್ಮ ನಿಲುವುಗಳು ಬಡಜನರ ಬಗ್ಗೆ ನೊಂದವರ, ಶೋಷಿತರ ಬದುಕಿನ ಬಗ್ಗೆ, ನಮ್ಮ ನಿಲುಮೆಗಳು, ನಾವು ಧರಿಸುವ ಉಡುಪಿನ ಬಗ್ಗೆ ಕೂಡ ಎಚ್ಚರ ವಹಿಸಬೇಕಾದ ಅಗತ್ಯ ಇಂದಿನ ದಿನಮಾನಗಳಲ್ಲಿ ನಮ್ಮ ಆಧ್ಯ ಕರ್ತವ್ಯ ಆಗಬೇಕಾಗಿದೆ. ನಾವೇ ಸರಿ ಇಲ್ಲದ ಮೇಲೆ ನಮ್ಮ ಮಕ್ಕಳಿಂದ ಸರಿಯಾದ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವೇ.
ಆದರೆ ಶಾಲೆಗಳಲ್ಲಿ ಇಂದು ನಡೆಯುತ್ತಿರುವುದು ಶಿಸ್ತಿನ ನೆಪದಲ್ಲಿ ವಿಪರೀತವಾದ ಆದರೆ ಉಪಯೋಗಕ್ಕೆ ಬರದ ಕೆಲವು ಆಚರಣೆಗಳು. ಇದರಿಂದಾಗಿ ಮಕ್ಕಳಿಗೆ ಹರೆಯಕ್ಕೆ ಬಂದೊಡನೆ ಅಥವಾ ಪ್ರೌಢಶಾಲಾ ಶಿಕ್ಷಣ ಮುಗಿಸುವ ಮುನ್ನವೇ ಶಾಲೆಗಳಲ್ಲಿ ಕಲಿತ ಶಿಸ್ತು ಕೇವಲ ಡಂಭಾಚಾರ ಅಥವಾ ಶಿಸ್ತಿನ ಆಡಂಬರ ಎಂಬುದು ಅರಿವಿಗೆ ಬರುತ್ತದೆ. ಯಾಕೆಂದರೆ ಶಾಲೆಯಲ್ಲಿ ಕಲಿಸುವ ಶಿಸ್ತು ಹೊರ ಪ್ರಪಂಚದಲ್ಲಿ ಕೆಲಸಕ್ಕೆ ಬರದು ಎನ್ನುವ ಸತ್ಯ ಆದಷ್ಟು ಬೇಗನೆ ಮಕ್ಕಳಿಗೆ ಅರಿವಾಗಿಬಿಡುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ಮಕ್ಕಳು ಖಾಸಗಿಯಾಗಿ ಆಡುವ ಮಾತುಗಳನ್ನು ಕೂಡ ಅಂಗ್ರೇಜಿ ಭಾಷೆಯಲ್ಲಿಯೇ ಆಡಬೇಕೆಂಬ ನಿಯಮಗಳನ್ನು ಮುದ್ದಾಂ ಹೇರಿಬಿಡುತ್ತಾರೆ. ಕೆಲವು ಶಾಲೆಗಳಲ್ಲಿ ಪ್ರಾರ್ಥನೆಗೆ ರಾಷ್ಟ್ರಗೀತೆಯನ್ನು ಬಳಸುವ ಬದಲಿಗೆ ತಾವು ನಂಬುವ ತಮ್ಮ ದೇವರ ಭಕ್ತಿಗೀತೆಯನ್ನು ಅತ್ಯಂತ ಭಕ್ತಿಯಿಂದ ಆ ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳಿಗೆ ಕಲಿಸಿಬಿಡುತ್ತಾರೆ. ಹೀಗಾದರೆ ರಾಷ್ಟ್ರಭಕ್ತಿ, ದೇಶಭಕ್ತಿ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿಗಳ ಬಗ್ಗೆ ಗೌರವ ಮೂಡಲು ಸಾಧ್ಯವೇ ನಮ್ಮ ರಾಷ್ಟ್ರಗೀತೆಯ ಬಗ್ಗೆ ಅರಿವು ಗೌರವ ಮೂಡಲು ಸಾಧ್ಯವೇ.
ಭಾರತೀಯ ಸಂಸ್ಕೃತಿಯ ಬಗ್ಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಒಲವು ಮೂಡುತ್ತಿರುವುದು ಹೆಮ್ಮೆಯ ವಿಷಯ. ಆದರೆ ನಮ್ಮ ಶಾಲೆಗಳಲ್ಲಿ ಓದುತ್ತಿರುವ ನಮ್ಮದೇ ಮಕ್ಕಳನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. (ಉದಾಹರಣೆಗೆ ಕೈಯಲ್ಲಿ ಬಳೆ ಧರಿಸುವಂತಿಲ್ಲ, ಹಣೆಗೆ ಕುಂಕುಮ ಧರಿಸುವಂತಿಲ್ಲ, ಮೈಮುಚ್ಚುವಂತೆ ನಮ್ಮ ಸಂಸ್ಕೃತಿಯ ಬಟ್ಟೆಗಳನ್ನು ಧರಿಸಬಹುದಾದರೂ ಪಾಶ್ಚಿಮಾತ್ಯರ ಉಡುಗೆ ತೊಡುಗೆಗಳನ್ನು ಅನಧಿಕೃತವಾಗಿ ಹೇರಿ ಒತ್ತಾಯಪೂರ್ವಕವಾಗಿ ಪೋಷಕರ ಆರ್ಥಿಕ ಪರಿಸ್ಥಿತಿಯನ್ನು ಕೂಡ ಅವಲೋಕಿಸದೇ ಸೂಟ್ ಬೂಟು ಧರಿಸಿಯೇ ಬರಬೇಕೆಂಬ ನಿಯಮಗಳು) ಭಾರತೀಯ ಸಂಸ್ಕೃತಿಯ ಪ್ರತೀಕವಾದ ಉಡುಪು ಉಡುಗೆ ತೊಡುಗೆಗಳನ್ನು ಧರಿಸಿ ಬಂದರೂ ಸಹ ಅದೇ ವಿದ್ಯೆ ಪಾಶ್ಚಿಮಾತ್ಯ ಉಡುಗೆ ತೊಡುಗೆಗಳನ್ನು ಧರಿಸಿ ಬಂದರೂ ಸಹ ಅದೆ ವಿದ್ಯೆ ಕಲಿಯಲು ಸಾಧ್ಯ. ಉಡುಗೆ ತೊಡುಗೆಗಳಿಂದ ವಿದ್ಯೆ ಕಲಿಯಲು ಅಸಾಧ್ಯ. ಕೇವಲ ಏಕಾಗ್ರತೆಯಿಂದ ಮಾತ್ರ ವಿದ್ಯೆ ಕಲಿಯಲು ಸಾಧ್ಯ ಎಂಬ ಅರಿವು ನಮ್ಮ ದೇಶದ ಶಾಲಾ ಕಾಲೇಜುಗಳ ಆಡಳಿತ ವರ್ಗಕ್ಕೆ ಅರಿವಾಗುವುದು ಯಾವಾಗ ಅಲ್ವೇ.
ಇಂದಿನ ನಮ್ಮ ಮಕ್ಕಳಿಗೆ ನಿಜವಾಗಿ ಬೇಕಾದ ಶಿಕ್ಷಣ ಎಂದರೆ ಕೇವಲ ಪುಸ್ತಕದ ಪಠ್ಯಗಳು ಮಾತ್ರ ಅಲ್ಲ. ಅವುಗಳ ಜೊತೆಗೆ ಇಡೀ ಜಗತ್ತಿನ ಜನರು ಮೆಚ್ಚುವ ನಮ್ಮ ಸಂಸ್ಕೃತಿ,ಗುರುಹಿರಿಯರನ್ನು ಗೌರವಿಸುವ ಜೊತೆಗೆ ಜಾತಿ ಪದ್ದತಿಯ ಮತ ಧರ್ಮದ ನಿಜವಾದ ಅರ್ಥವನ್ನು, ದೇವನೊಬ್ಬ ನಾಮ ಹಲವು ಎಂಬ ಸತ್ಯವನ್ನು, ಬಡತನ ಸಿರಿತನವೆಂಬುದು ಕೇವಲ ಐಷಾರಾಮಿ ಜೀವನವಲ್ಲವೆಂದು, ಬಡತನ ಸಿರಿತನವೆಂಬುದು ನಮ್ಮ ಹೃದಯ ಶ್ರೀಮಂತಿಕೆಯ ಮೇಲೆ ಅವಲಂಬಿಸಿರುತ್ತದೆ ಎಂಬುದನ್ನು, ದೊಡ್ಡ ದೊಡ್ಡ ಪದವಿ ಪಡೆಯಲು ಶ್ರಮ ವಹಿಸಿದ ತಮ್ಮ ತಂದೆ ತಾಯಿಯರನ್ನು ವೃದ್ಧಾಪ್ಯದಲ್ಲಿ ಅನಾಥರನ್ನಾಗಿ ಮಾಡಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ವಿದೇಶಗಳಿಗೆ ಹೋಗಿ ಅಲ್ಲಿಯೇ ದೊಡ್ಡ ಹುದ್ದೆ ಪಡೆದು ದಡ್ಡ ಹುಡುಗಿಯರನ್ನು ಮದುವೆಯಾಗಿ ಅತ್ತ ಅಲ್ಲಿಯೂ ಇರಲಾರದೆ ಇತ್ತ ಭಾರತಕ್ಕೆ ಬರಲಾಗದೆ ನಮ್ಮ ಏಳಿಗೆಗೆಂದೇ ಹಗಲಿರುಳು ಶ್ರಮಿಸಿದ ತಂದೆ ತಾಯಿಯರ ಆರೋಗ್ಯ ಅದಕ್ಕಿಂತ ಹೆಚ್ಚಾಗಿ ಅವರ ಮನಃಶಾಂತಿಗೆ ಪೂರಕವಾಗಿ ನಮ್ಮ ನಡೆ ನುಡಿಗಳು ಬದುಕು ಇದ್ದ ಪಕ್ಷದಲ್ಲಿ ನಾವು ಕೂಡ ನಮ್ಮ ಮಕ್ಕಳಿಂದ ಇದನ್ನು ನಿರೀಕ್ಷಿಸಬಹುದೆಂಬ ನಿಷ್ಠುರ ಸತ್ಯದ ಶಿಕ್ಷಣವನ್ನು ನೀಡುವ ಅಗತ್ಯವಿದೆ.
ಉನ್ನತವಾದ ಶಿಕ್ಷಣ ಪಡೆದ ಅನೇಕರು ತಮ್ಮ ಹಿರಿಯರು ಉಳಿಸಿ ಬೆಳಸಿದ ಸಂಸ್ಕೃತಿಯ ಜೊತೆಗೆ ಪಾರಂಪರಿಕವಾಗಿ ಬಂದ ತಮ್ಮ ಆಸ್ತಿ ಪಾಸ್ತಿಗಳನ್ನು ಉಳಿಸಿ ಬೆಳೆಸುವ ಮಹತ್ತರವಾದ ಸಾಧನೆಯನ್ನು ಮಾಡಿ ಇಂದಿನ ಪೀಳಿಗೆಗೆ ದಾರಿ ದೀಪವಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳು ನಮ್ಮ ದೇಶದ ಐಕಾನ್ ಆಗಬೇಕಿದೆ ಅವರ ಶ್ರಮವನ್ನು ಅವರ ಸಾಮರ್ಥ್ಯವನ್ನು ನಮ್ಮ ಪ್ರಾಥಮಿಕ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕಿದೆ. ಉನ್ನತ ಪದವಿ ಶಿಕ್ಷಣದ ಪಠ್ಯಗಳಲ್ಲಿ ಸಹ ಇವರ ಬಗ್ಗೆ ನಮ್ಮ ದೇಶದ ಇಂದಿನ ಅಗತ್ಯತೆಯ ಬಗ್ಗೆ ಪ್ರಬುದ್ಧ ಯುವ ಜನತೆಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕಿದೆ. ಕೇವಲ ಹಣ ಗಳಿಕೆಯೊಂದೇ ವಿದ್ಯೆಯ ಮೂಲ ಮಂತ್ರವಲ್ಲವೆಂದೂ ವಿದ್ಯಾಭ್ಯಾಸ ಮುಗಿದೊಡನೆ ಅನ್ಯ ದೇಶಕ್ಕೆ ಪಲಾಯನವಾದದಿಂದ ಈ ದೇಶದ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಯುವಜನತೆಗೆ ಮನಗಾಣಿಸಬೇಕಿದೆ. ಇಂದು ಅದೆಷ್ಟೋ ದೇಶಗಳಿಂದ ನಮ್ಮ ದೇಶ, ರಾಜ್ಯದ ಕಾಲೇಜುಗಳಲ್ಲಿ ಓದಲೆಂದು ಬರಿವ ವಿದೇಶಿ ವಿದ್ಯಾರ್ಥಿಗಳನ್ನು ನಾವು ಕಾಣಬಹುದಾಗಿದೆ.
ಇಂದಿನ ದಿನಮಾನಗಳಲ್ಲಿ ನಿಜಕ್ಕೂ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ನೈತಿಕತೆಯ ಶಿಕ್ಷಣ ಆರೋಗ್ಯಕರ ಅಭ್ಯಾಸಗಳು. ಗುರು ಹಿರಿಯರ ಬಗ್ಗೆ ಭಯ ಭಕ್ತಿ ಗೌರವ ಅಕ್ಕರೆ. ಕೇವಲ ಹಣದ ಹೊರತಾಗಿಯೂ ಸಂಬಂಧಗಳ ಮೌಲ್ಯದ ಕುರಿತ ಪಾಠವನ್ನು ಹೇಳಿಕೊಡಬೇಕಾಗಿದೆ. ಹಿರಿಯರು ಬಾಳಿ ಬದುಕಿದ ಈ ನೆಲವನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಏನೇನು ಮಾಡಬಹುದೆಂಬ ಅರಿವು ನೀಡಬೇಕಾಗಿದೆ.
ವೈ.ಕೊ
ವೈಲೇಶ ಪಿ ಎಸ್ ಕೊಡಗು
೫/೩/೨೦೧೯
Comments
Post a Comment