ಮನೆಯಾಕೆಗೆ ತಿಳಿದಿರಲಿ

ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ.

ಅದೊಂದು ಪುಟ್ಟ ಪಟ್ಟಣ ಒಂದು ಪುಟ್ಟ ಸಂಸಾರ ಎಲ್ಲರ ಕಣ್ಣು ಕುಕ್ಕುವ ಹಾಗಿದ್ದ ಜೋಡಿಗಳಿಗೆ ಚಿನ್ನದಂತಹ ಇಬ್ಬರು ಮಕ್ಕಳು. ಇವರದು ಪ್ರೇಮ ವಿವಾಹವಾದ ಕಾರಣ ಎರಡೂ ಕುಟುಂಬದಿಂದ ಹೊರಗಿದ್ದರೂ ಇವರು ರಾಜ ರಾಣಿಯರಂತೆಯೇ ಇದ್ದರು. ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮೂರು ವರ್ಷದ ಗಂಡು ಮಗುವಿಗೆ ಆರೋಗ್ಯ ಹದಗೆಟ್ಟಿತು. ಗಂಡ ಮನೆಯಿಂದ ದೂರದ ಊರಿಗೆ ಕರ್ತವ್ಯ ನಿಮಿತ್ತ ಹೋಗಿದ್ದಾನೆ. ಈಕೆಗೆ ನಾಲ್ಕು ವರ್ಷದ ಹೆಣ್ಣು ಮಗುವಿನೊಂದಿಗೆ ಅಳುವುದನ್ನು ಬಿಟ್ಟರೆ ಬೇರೇನೂ ಗೊತ್ತಾಗುತ್ತಿಲ್ಲ. ಮನದಲ್ಲಿ ಅಂದುಕೊಳ್ಳುತ್ತಾಳೆ ನನ್ನ ಗಂಡ ನನ್ನನ್ನು ಮನೆಯಿಂದ ಹೊರಗೆ ಕಾಲಿಡದಷ್ಟು ಪ್ರೀತಿಯಿಂದ ಸಾಕುತ್ತಿದ್ದಾರೆ.

ಆದರೆ ಈ ಮಗುವಿನ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಈ ಊರಿನಲ್ಲಿ ಆಸ್ಪತ್ರೆಗೆ ಹೋಗುವ ದಾರಿ ಯಾವುದು ನಿತ್ಯ ಮಗಳನ್ನು ಅಂಗನವಾಡಿಗೆ ಕರೆದೊಯ್ಯುವ ಆಟೋ ಚಾಲಕನ ದೂರವಾಣಿ ಸಂಖ್ಯೆ ಏನು ಯಾವುದು ಗೊತ್ತಿಲ್ಲ. ಹೋಗಲಿ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ಇಂದಿನವರೆಗೂ ನಾನು ಹೋಗಿ ನೋಡಿಲ್ಲ ಏನು ಮಾಡಲಿ ಎಂದು ಅಳುತ್ತಾ ಕುಳಿತಳು. ಅವಳ ಅಳುವನ್ನು ಕಂಡು ಪಕ್ಕದ ಮನೆಯ ರುಕ್ಮಿಣಿ ಆಂಟಿ ಏನಾಯಿತು ಎಂದು ಕೇಳಿ ಮುಂದಿನ ಕೆಲಸ ಕಾರ್ಯಗಳು ಸಾಂಗವಾಗಿ ನಡೆದು ಗಂಡ ಮನೆಗೆ ಬರುವಷ್ಟರಲ್ಲಿ ಎಲ್ಲವೂ ಸುಖಾಂತ್ಯವಾಗಿತ್ತು.  

ಬೆಂಗಳೂರಿನಲ್ಲಿ ನೌಕರಿ ಹಿಡಿದು ಸತಿಮಣಿಯೊಂದಿಗೆ  ಆಗಮಿಸಿದ ಧ್ಯಾನ್ ದೊಡ್ಡ ಅಪಾರ್ಟ್‌ಮೆಂಟ್'ನಲ್ಲಿ ಮನೆ ಮಾಡಿ ಅಲ್ಲಿಂದ ತನ್ನದೇ ಸ್ವಂತ ವಾಹನದಲ್ಲಿ ಓಡಾಡುತ್ತಾ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಒಂದು ದಿನ ತನ್ನ ವಾಹನವನ್ನು ಪಾಕ್ಕಿಂಗ್ ಲಾಟ್'ನಲ್ಲಿ ನಿಲ್ಲಿಸಿ ರಸ್ತೆ ದಾಟುವ ಭರದಲ್ಲಿ ಯಾವುದೋ ಸ್ಕೂಟರಿಗೆ ಅಡ್ಡ ಸಿಲುಕಿ ಕೆಳಗೆ ಬಿದ್ದ ರಭಸಕ್ಕೆ ತಪ್ಪಿದ ಪ್ರಜ್ಞೆ ಮೂರು ದಿನವಾದರೂ ವಾಪಸು ಪ್ರಜ್ಞೆ ಬರಲೇ ಇಲ್ಲ. ಈ ಅಚಾತುರ್ಯದಿಂದ ಆಸ್ಪತ್ರೆ ಸೇರಿದ ಧ್ಯಾನ್'ನ ಪತ್ನಿಗೆ ವಿಷಯವೇ ಗೊತ್ತಿಲ್ಲ. ಪಾರ್ಕಿಂಗ್ ಲಾಟ್ನಲ್ಲಿ ಲಾಕ್ ಆಗಿದ್ದ ಕಾರಿನೊಳಗೆ ಕುಳಿತಿದ್ದ ಮೊಬೈಲ್ ಪೋನ್ ಒಂದು ದಿನದ ಬಳಿಕ ಸದ್ದು ಮಾಡದೇ ಸುಮ್ಮನಾಯಿತು. ದಿವ್ಯಳಿಗೆ ಏನೂ ಮಾಡಲು ತೋಚದೆ ತಾಯಿ ಮನೆಗೆ ಪೋನ್ ಮಾಡಿದಳು. ಆಕೆಯ ಅಣ್ಣ ಬಂದು ಮನೆಗೆ ತಲುಪಿದ ನಂತರ ದಿನ ಪತ್ರಿಕೆಯಲ್ಲಿ ಕಂಡ ಧ್ಯಾನ್ ಪೋಟೋ ಮತ್ತು ವಿವರಗಳನ್ನು ನೋಡಿ ಆಸ್ಪತ್ರೆ ತಲುಪಿದಾಗ ಧ್ಯಾನ್'ಗೆ ತನಗೆ ಏನಾಗಿದೆ ಹಾಗೂ ಎಲ್ಲಿದ್ದೇನೆ ಎಂಬ ಅರಿವೇ ಇರಲಿಲ್ಲ.

ಬಂಧುಗಳೇ ಇಲ್ಲಿ ಬರೆದಿರುವ ಅಷ್ಟು ಸಂಗತಿಗಳನ್ನು ಓದಿದಾಗ ನಿಮಗೆ ಕಥೆಯಂತೆ ತೋರಿರಬಹುದು ಆದರೆ ವಾಸ್ತವವಾಗಿ ಇದು ನಡೆದ ನಿಜವಾದ ಘಟನೆಗಳು. ಇದಕ್ಕಿಂತ ಇನ್ನೊಂದು ಘಟನೆ ಹೇಳುವೆ ಕೇಳಿ ಹಾಸನದ ನಮ್ಮ ಕರಾರಸಾಸಂಸ್ಥೆಯ ಒಬ್ಬ ಚಾಲಕ  ಕರ್ತವ್ಯ ಮುಗಿಸಿ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಪುಟ್ಟ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಆತನ ಮನೆಗೆ ಪೋನ್ ಮಾಡಿದರೆ ಆತನ ಪತ್ನಿಗೆ ನಗರದಲ್ಲಿ ಯಾವುದೇ ಬೀದಿಯ ಪರಿಚಯ ಕೂಡ ಇಲ್ಲ. ಕಡೆಗೆ ದೂರದ ಊರಿನಿಂದ ಚಾಲಕನ ಮನೆಯವರು ಬಂದ ಬಳಿಕವೇ ಆತನ ಚಿಕಿತ್ಸೆಗೆ ಸಾಧ್ಯವಾಯಿತು.

ಈಗ ವಿಚಾರಕ್ಕೆ ಬರುವೆ ಏನಪ್ಪ ಇಷ್ಟೊಂದು ದೊಡ್ಡ ಪೀಠಿಕೆ ಎಂದುಕೊಳ್ಳದೆ ಮುಂದೆ ಓದಿ ಮೇಲ್ಕಂಡ ಎಲ್ಲರೂ ತಾವು ಯಾವುದೇ ರೀತಿಯ ದೊಡ್ಡ ಹಾಗೂ ಪುಟ್ಟ ಕೆಲಸದ ಮೇಲೆ ಇದ್ದರೂ ತಮ್ಮ ತಮ್ಮ ಪತ್ನಿಯರನ್ನು ಅತ್ಯಂತ ಉತ್ತಮ ರೀತಿಯಲ್ಲಿ ಸಾಕುತ್ತಿರುವುದು ತಮಗೆಲ್ಲರಿಗೂ ಅರಿವಾಗುತ್ತಿದೆ. ನಾನೂ ಕೂಡ ನನ್ನ ಮದುವೆಯಾಗುವ ನನ್ನ ಪತ್ನಿಯನ್ನು ಅವರ ಮನೆಯಲ್ಲಿ ಶಾಲೆಗೆ ಹೋಗುವಾಗ ಕೂಡ ಕರೆದುಕೊಂಡು ಹೋಗಿ ಮತ್ತೆ ಕರೆದುಕೊಂಡು ಬರತ್ತಿದ್ದರಂತೆ. ಮದುವೆಯ ನಂತರ ಆಕೆಯನ್ನು ಕರೆದುಕೊಂಡು ಹೋಗಲು ಮತ್ತು ಕರೆದುಕೊಂಡು ಬರಲು ಯಾರಾದರೊಬ್ಬರು ಆಕೆಯ ಜೊತೆಗೆ ಇರಲೇಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಆಕೆಯನ್ನು ಮದುವೆಯಾದ ನಾನು ನಮ್ಮ ಮನೆಯ ಕಾಂಪೌಂಡ್'ನಿಂದ ಆಚೆಗೆ ಕಳಿಸದಂತೆ ಅವಳನ್ನು ಸಾಕುತ್ತಿದ್ದೆ ಹಾಗೂ ಆಕೆ ನಮ್ಮ ಮನೆಯ ಕಾಂಪೌಂಡಿನಿಂದ ಹೊರಗಡೆ ಹೋದರೆ ಅದು ಎದುರುಗಡೆ ಇರುವ ಬಾವಿಯ ನೀರಿಗೆ ಮಾತ್ರ ಆಗಿರುತ್ತಿತ್ತು ಮತ್ತು ಬೇರೆ ಯಾವುದೇ ಕಾರಣಕ್ಕೆ ಮನೆಯಿಂದ ಹೊರ ಹೋಗುವುದು ಇದ್ದಲ್ಲಿ ಅವಳ ಜೊತೆಗೆ ಬೇರೆ ಯಾರಾದರೂ ಇರಲೇಬೇಕಿತ್ತು ಅದು ಅವಳ ತಂದೆಯ ಮನೆಯಿಂದ ಬಂದ ಬಳುವಳಿಯಾಗಿತ್ತು ಒಬ್ಬಳೇ ಪೇಟೆಗಾಗಲಿ ಅಥವಾ  ಅಂಗಡಿಯಿಂದ ಚಿಕ್ಕ ಪುಟ್ಟ ವಸ್ತುಗಳನ್ನು ಖರೀದಿಸಲು ಕೂಡ ಆಕೆ ಹೋಗುತ್ತಿರಲಿಲ್ಲ.

ಸಾವಿರದ ಒಂಬೈನೂರ ಎಂಬತ್ತೊಂಬತ್ತನೇ ಇಸವಿಯಲ್ಲಿ ನಮ್ಮ ಮದುವೆಯಾಯಿತು ಆನಂತರ ಸಾವಿರದ ಒಂಬೈನೂರ ತೊಂಬತ್ತಾರನೆಯ ಇಸವಿಯಲ್ಲಿ ನನಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸ ದೊರೆಯಿತು ಕೆಲಸ ದೊರೆತ ಹೊಸತರಲ್ಲಿ ಆರಂಭಿಕ ತರಬೇತಿ ಎಂಬ ಒಂದು ಚಿಕ್ಕ ತರಬೇತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರಿಗೂ ಕೊಡಲಾಗುತ್ತದೆ.  ನಮಗೆ ಮಂಗಳೂರಿನಲ್ಲಿ ಕೇವಲ ಪರಿಚಯ ತರಬೇತಿ ತಾತ್ಕಾಲಿಕವಾಗಿ ನೀಡಲಾಯಿತು ಆ ಬಳಿಕ ಮುಂದಿನ ತರಬೇತಿಯನ್ನು  ಹಾಸನದ ತರಬೇತಿ ಶಿಬಿರದಲ್ಲಿ ಎರಡು ವರ್ಷಗಳ ನಂತರ ನೀಡಲಾಯಿತು ನಮ್ಮ ಮನೆಯ ಸಂಪೂರ್ಣ ಮಾಹಿತಿಯನ್ನು ಪಡೆದು ಆ ಬಳಿಕ ಇಲ್ಲಿ ಮೇಲ್ಕಂಡ ವಿಷಯವನ್ನು ತಿಳಿಸಿ ಈ ರೀತಿ ನಿಮ್ಮ ಮನೆಯಲ್ಲಿ ಕೂಡ ಆಗಬಹುದು ಆದ್ದರಿಂದ ತಮ್ಮ ಮನೆಯಲ್ಲಿ ಮಡದಿ ಮತ್ತು ಮಕ್ಕಳಿಗೆ ಪ್ರತಿಯೊಂದು ವಿಷಯವನ್ನು ಕಲಿಸುವ ವ್ಯವಸ್ಥೆಯನ್ನು ನೀವು ಮಾಡಿಕೊಳ್ಳಬೇಕು ಎಂದು ಅತ್ಯಂತ ಖಡಾಖಂಡಿತವಾಗಿ ತಿಳಿಸಿದರು. 

ಆ ರೀತಿಯ ತರಬೇತಿಯನ್ನು ಪಡೆದು ಬಂದ ನಾನು ಮನೆಯಲ್ಲಿ ನಿಧಾನವಾಗಿ ಅವರಿಗೆ ಒಂದೊಂದೇ ವಿಷಯವನ್ನು ತಿಳಿಸುತ್ತಾ ಬಂದೆ. ಹೇಗೆಂದರೆ ಮೊದಲಿಗೆ ತಿಂಗಳಿಗೆ ಬೇಕಾದ ಮನೆಬಳಕೆಯ, ದಿನಬಳಕೆಯ ವಸ್ತುಗಳನ್ನು ತರಲು ಹಣ ಕೊಟ್ಟು ಅವಳ ಜೊತೆ ನಾನು ಸುಮ್ಮನೆ ನಿಲ್ಲುತ್ತಿದ್ದೆ ಮತ್ತು ಅವಳಿಂದಲೇ ಎಲ್ಲವನ್ನು ಖರೀದಿಸಿ ಅದನ್ನು ಮನೆಗೆ ತರುವ ವ್ಯವಸ್ಥೆಯನ್ನು ಅವಳಿಂದಲೇ ಮಾಡಿಸಿ ನಾನು ಏನು ಅರಿಯದವನಂತೆ ಜೊತೆಯಲ್ಲಿ ನಿಂತಿರುತ್ತಿದ್ದೆ.  ಬರುಬರುತ್ತಾ ನಿಧಾನವಾಗಿ ನಾನು ಹೋಗದೆ ಅವಳೊಬ್ಬಳನ್ನೇ ಕಳುಹಿಸಿ ಮನೆಗೆ ಬೇಕಾದ ವಸ್ತುಗಳನ್ನು ತರಲು ತಿಳಿಸುತ್ತಿದ್ದೆ.  ಮುಂದೆ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಮತ್ತು ಕರೆದುಕೊಂಡು ಬರುವ ಕೆಲಸವನ್ನು ಕೂಡ ಅವರಿಗೆ ಒಪ್ಪಿಸಿದೆ ಆನಂತರ ಮಕ್ಕಳನ್ನು  ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಬೇಕಾದ  ಸಂದರ್ಭಗಳಲ್ಲಿ ಕೂಡ ಅವಳನ್ನು ಮಕ್ಕಳ ಜೊತೆಗೂಡಿ ಕಳಿಸುವ ಅಭ್ಯಾಸ ಮಾಡಿಕೊಂಡೆ. 

ಇಂತಹ ದಿನಗಳಲ್ಲಿ ಒಂದು ಸುಸಂದರ್ಭ ಎನ್ನುವಂತೆ ಗ್ರಾಮ ಪಂಚಾಯತಿ ಚುನಾವಣೆ ಬಂದಿತ್ತು ಆ ಸಂದರ್ಭದಲ್ಲಿ ಒಂದು ರಾಷ್ಟ್ರೀಯ ಪಕ್ಷದ ವತಿಯಿಂದ ಗ್ರಾಮ ಪಂಚಾಯತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗುವ ಸಂದರ್ಭ ಕೂಡ ಒದಗಿ ಬಂತು. ಬಳಿಕ ಗ್ರಾಮ ಪಂಚಾಯಿತಿಯ ಅರ್ಧ ಅವಧಿ ಮುಗಿದು ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಾದಿಗೆ ನಮ್ಮ ಕೆಟಗೆರಿಯ ಸರದಿಯೂ ಬಂತು.  ಅದರಲ್ಲಿ ಒಂದೇ ಕೆಟಗೆರಿಗೆ ಸೇರಿದ ಇಬ್ಬರು ಅಂದರೆ ಒಬ್ಬ ಪುರುಷ ಮತ್ತೊಬ್ಬರು ನನ್ನಾಕೆ. ಸರಿ ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಧ್ಯಕ್ಷರು ಕಾರ್ಯದರ್ಶಿಗಳು ಎಲ್ಲರೆದುರು ಒಪ್ಪಂದ ಮಾಡಿಕೊಂಡು ಮೊದಲ ಹನ್ನೆರಡು ಮಾಸ ಪುರುಷ ಅಭ್ಯರ್ಥಿಗೆ ಅವಕಾಶ ಹಾಗೂ ನಂತರದ ಹನ್ನೆರಡು ಮಾಸಗಳ ಅವಧಿಗೆ ನನ್ನ ಪತ್ನಿಗೆ ಅಧ್ಯಕ್ಷ ಗಾದಿ ಎಂದು ತೀರ್ಮಾನವಾಯಿತು.

ಹನ್ನೆರಡು ತಿಂಗಳ ನಂತರ ಮತ್ತೆ ಮೂರು ತಿಂಗಳಾದರೂ ಆ ಮಹಾಶಯ ಅಧ್ಯಕ್ಷ ಗಾದಿಗೆ ರಾಜಿನಾಮೆ ನೀಡುವುದಾಗಲಿ ನನ್ನಾಕೆಗೆ ಅಧಿಕಾರ ಹಸ್ತಾಂತರ ಮಾಡುವ ಯೋಚನೆ ಕೂಡ ಮಾಡಲಿಲ್ಲ. ನಾನೂ ಕೂಡ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಗ್ರಾಮ ಪಂಚಾಯತಿಯ ಕೆಲವು ಮಹಿಳಾ ಸದಸ್ಯರು ನನ್ನಾಕೆಯಲ್ಲಿ ಅಧಿಕಾರ ಹಸ್ತಾಂತರಕ್ಕೆ ಒತ್ತಾಯಿಸುವಂತೆ ತಿಳಿಸಿದ್ದಾರೆ. ಈಕೆ ನನ್ನ ಬಳಿ ಅಲವತ್ತುಕೊಂಡರು. ಹಾಲಿ ಅಧ್ಯಕ್ಷರ ಬಳಿ ಆ ಬಗ್ಗೆ ವಿಚಾರಿಸಿದಾಗ ಹಾರಿಕೆಯ ಉತ್ತರದ ಜೊತೆಗೆ

ಅವರಿಂದ ಅಧ್ಯಕ್ಷರ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಿಲ್ಲ. ಇನ್ನು ಕೆಲವೇ ತಿಂಗಳು ಅಲ್ವವೇ ನಾನೇ ನಿರ್ವಹಿಸುವೆ ಬಿಡಿ ಎಂದುಬಿಟ್ಟರು. ನನಗೆ ಕಸಿವಿಸಿಯಾಯಿತು ಬಲ್ಲವರ ಜೊತೆಗೆ ಈ ವಿಚಾರಗಳನ್ನು ಚರ್ಚಿಸಿದೆ. ಮೊದಲು ಅಧಿಕಾರ ಹಸ್ತಾಂತರ ಮಾಡಲು ತಿಳಿಸಿ ಅದಕ್ಕಿರುವ ವ್ಯವಸ್ಥೆ ಮಾಡಿಕೊಳ್ಳಲು ಹೇಳಿದರು. ಆ ಬಳಿಕ ಹಾಲಿ ಅಧ್ಯಕ್ಷರ ಬೆಂಬಲಿತ ಜಿಲ್ಲಾ ಮಟ್ಟದ ಪುಡಾರಿಯಿಂದ ಧಮಕಿ ಕೂಡ ಬಂತು. ಮರುವಾರವೇ ಕೆಲವು ಪುರುಷ ಸದಸ್ಯರು ಹಾಗೂ ಮಹಿಳಾ ಸದಸ್ಯರ ಬೆಂಬಲದೊಂದಿಗೆ ಅನಿರೀಕ್ಷಿತವಾಗಿ ಆತನನ್ನು ಎ ಸಿಯವರ ಮುಂದೆ ಹಾಜರು ಪಡಿಸಿ ರಾಜಿನಾಮೆ ಕೊಡಿಸಲು ಸಮರ್ಥರಾದೆವು. ಮುಂದಿನ ಎಂಟು ತಿಂಗಳಿಗೆ ನನ್ನಾಕೆಯೇ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಕಾರ್ಯಭಾರ ನಡೆಸಿ ಉತ್ತಮ ದರ್ಜೆಯ ಗ್ರಾಮ ಪಂಚಾಯತಿ ಅಧ್ಯಕ್ಷರು ಎಂಬ ಬಿರುದಿಗೆ ಬಾಜನರಾದರು.

ಏನೋ ಕಥೆ ಎಂದುಕೊಳ್ಳಬೇಡಿ. ಇದು ಸತ್ಯಾಂಶ ಕೇವಲ ಧಡೂತಿ ಶರೀರದ ವ್ಯಕ್ತಿಗಳು ಕಂಡರೂ ಭಯ ಮುಜುಗರ ಪಡುತ್ತಿದ್ದ ಪ್ರೌಢಶಾಲಾ ಶಿಕ್ಷಣವನ್ನಷ್ಟೇ ಮುಗಿಸಿದ ಅತ್ಯಂತ ಸಂಕೋಚ ಸ್ವಭಾವದ ನನ್ನಾಕೆ ಮನೆ ಬಿಟ್ಟು ಎಂದಿಗೂ ಹೊರ ಹೋಗದಿದ್ದಾಕೆ ಒಬ್ಬ ಸಮರ್ಥ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ  ಕೆಲಸ ಮಾಡುವ ಮಟ್ಟಿಗೆ ಬೆಳೆಸಿದೆಯೆಂದರೆ ನಮ್ಮ ಕರಾರಸಾಸಂಸ್ಥೆಯು ನಮಗೆ ತರಬೇತಿಯಲ್ಲಿ ತಿಳಿಸಿದ ನಡವಳಿಕೆಗಳನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಿರುವುದೇ ಆಗಿದೆ. ತಾವು ಕೂಡ ಈ ಬರಹವನ್ನು ಓದಿ ಅನುಸರಿಸಿ ತಮ್ಮ ಮನೆಯಲ್ಲಿ ಕೂಡ ಬದಲಾವಣೆಗಳನ್ನು ತಂದುಕೊಂಡಿರೆಂದರೆ ನನ್ನ ಈ ಲೇಖನ ಸಾರ್ಥಕವಾದಂತೆ. ಧನ್ಯವಾದಗಳು

ತಮ್ಮವ
ವೈಲೇಶ ಪಿ ಎಸ್ ಕೊಡಗು
೩೦/೦೧/೨೦೧೯

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು