ರಣಹದ್ದುಗಳು

ಹಾಕಿರಿ ನೇಣು
~~~~~~~~

ಹಸಿದಿದೆ ರಣಹದ್ದದು ದೇಗುಲದೊಳು
ದೇವರು ದಿಂಡಿರೆಲ್ಲಾ ಬರಿದೇ ಓಳು
ಹಣವಿದ್ದರಿಲ್ಲಿ ಎಲ್ಲಾರೂ ನಮ್ಮಾಳು
ಇಲ್ಲದಿರೆ ಕಿತ್ತಾಟವೆ ಅಧಿಕಾರದ ಗೀಳು

ಮಹದೇವನ ಹೆಸರು ಮನಸೆಲ್ಲಾ ಕೆಸರು
ಯಾರ ಸತಿಯೋ ಮತ್ತಾರದೋ ಬಸಿರು
ಯಾರದೋ ಕೃತ್ಯಕೆ ಇನ್ನಾರದೋ ಹೆಸರು
ಧನದಾಹಕೆ ಕಿತ್ತಿಹರು ಹಲವರ ಉಸಿರು

ಅಮಾಯಕರ ಕಾಯುವ ದೈವ ಕಾಣೆ
ಭಟ್ಟರ ಮಗಳು ಆಗಲಿಲ್ಲವಲ್ಲ ಜಾಣೆ
ಅರಿಯದೆ ಜವರಾಯ ಬೀಸಿದ ಕವಣೆ
ಭಕ್ತಜನಕೆ ತಂದೊಡ್ಡಿತು ಸಾವಿರ ಬವಣೆ

ಮಕ್ಕಳು ಮರಿಯೆನ್ನದೆ ವಿಷವಿಕ್ಕಿದವರ
ಕರುಳ ಬಳ್ಳಿಗಳಿಗೂ ಇವರು ಅಸಹ್ಯಕರ
ನ್ಯಾಯದೇವತೆಯ ಕಣ್ಣ ಪಟ್ಟಿಯ ಬಿಚ್ಚಿ
ಉಗ್ರ ಶಿಕ್ಷೆಯ ನೀಡಿದರೆ ಜಗಕೆ ಶುಭಕರ

ಸಾರ್ವಜನಿಕರೆದುರು ಹಾಕಿರಿ ನೇಣು
ಸಾಯುವ ಮುನ್ನ ಮುರಿದರೆ ಗೋಣು
ಉಳಿದ ಪಾಪಕೆ ನರಕ ಮೂರೇ ಗೇಣು
ಜಗ ತಾ ತಿದ್ದಿಕೊಳಲು ಬೇಕು ಇನ್ನೇನು

ವೈ.ಕೊ.
ವೈಲೇಶ ಪಿ ಎಸ್ ಕೊಡಗು
೧೬/೦೧/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು