ಬಂದ್ ಬದುಕಿನಲ್ಲಿ ಬಂದ್
ಬಂದ್ ಬದುಕಿನಲ್ಲಿ ಬಂದ್
^^^^^^^^^^^^^^^^^^^^^^
ಬಂದ್ ತರುವುದು ಅನೇಕರಿಗೆ ಬದುಕಿಗೆ ಬಂದ್. ಬಂದ್'ಗೆ ಕರೆ ಕೊಡುವವರಿಗೆ ಇದು ಗೊತ್ತಿದೆಯಾ. ಕೋಟಿ ಕೋಟಿ ಕುಳದಂತಹ ಸಿರಿವಂತರ ಮನೆಗಳಲ್ಲಿಯೂ ಸಹ ಇದು ತನ್ನ ಕರಾಳ ಹಸ್ತವನ್ನು ಚಾಚುತ್ತದೆ ಎಂದ ಮೇಲೆ ಮಧ್ಯಮ ವರ್ಗದ ಜನರ ಹಾಗೂ ಕಡುಬಡವರನ್ನು ಬಿಟ್ಟೀತೆ. ನಾವೇನು ಎಂದುಕೊಳ್ಳುವೆವೆಂದರೆ ಸಿರಿವಂತರ ಬಳಿ ಹಣವಿದೆ ಏನು ಬೇಕಾದರೂ ಕೊಂಡುಕೊಳ್ಳುವ ಶಕ್ತಿ ಇದೆ ಎಂದು. ಆದರೆ ಬಂಧುಗಳೇ ಹಣ ಬದುಕಿನ ಬಹು ಮುಖ್ಯ ಅಗತ್ಯತೆ ನಿಜ ಆದರೆ ಹಣವಿದ್ದ ಮಾತ್ರಕ್ಕೆ ಎಲ್ಲವೂ ಅದಾಗಿಯೇ ಬರುವುದಿಲ್ಲ. ಹಿಂದೆ ನಾನೊಂದು ಕವಿತೆ ಬರೆದಿದ್ದೆ ಬಹುಶಃ ಯಾವುದೋ ಒಂದು ಜಲಪ್ರಳಯಕ್ಕೆ ಸಿಲುಕಿದ ಶ್ರೀಮಂತ ವ್ಯಕ್ತಿ ಬ್ಯಾಂಕಿನಲ್ಲಿ ಕೋಟ್ಯಂತರ ಹಣ ಇದೆ ಆಳುಕಾಳುಗಳು ಕೆಲಸ ಮುಗಿಸಿ ಮನೆಗೆ ಹೋದವರು ಇನ್ನೂ ಬಂದಿಲ್ಲ. ಬರುವುದು ಸಾಧ್ಯವೂ ಇಲ್ಲ. ನಮ್ಮ ಐದಂತಸ್ತಿನ ಬಂಗಲೆ ನಿಂತ ನೆಲದ ತುಂಬಾ ಕೆಸರು ರಾಡಿ. ನಗಲು ಅಳಲು ಬಾರದಂತಾಗಿದೆ ನನಗೆ ಅದನ್ನು ನೋಡಿ ಕೈಯಿಂದ ಮುಟ್ಟಲು ಆಗುತ್ತಿಲ್ಲ ಯಾರಿಗಾದರೂ ಹಣ ಕೊಟ್ಟು ನೀರು ಮಿಶ್ರಿತ ರಾಡಿಯನ್ನು ದಾಟಿಸಿಬಿಡುವ ಎಂದರೆ ಸುತ್ತಮುತ್ತೆಲ್ಲ ಅಲ್ಲಲ್ಲಿ ಚೆಲ್ಲಿವೆ ಹೆಣ. ಅದು ಬಿಟ್ಟರೆ ಪ್ರಕೃತಿಯು ಭಣ ಭಣ ಭಣ.
ಹೊಟ್ಟೆ ಹಸಿಯುತ್ತಿದೆಯಣ್ಣ ಒಂದು ಊಟಕ್ಕೆ ಲಕ್ಷ ರೂಪಾಯಿಯಾದರೂ ಸರಿಯೇ ಸಿಗಬಹುದೇ. ಯಾರಾದರೂ ತಂದು ಕೊಡಬಹುದೇ. ಅದೋ ಅಲ್ಲಿ ಆಗಸದಲ್ಲಿ ಹಾರುತ್ತಿದೆ ಹೆಲಿಕಾಪ್ಟರ್. ಒಮ್ಮೆ ಒಮ್ಮೆ ಇತ್ತ ನೋಡಿ ದಯಾಮಯಿಗಳೆ ಒಂದಗುಳು ಅನ್ನವನುಂಡು ಆಗಲೇ ಮೂರು ಹೊತ್ತಾಯಿತು. ನಿತ್ಯ ಹೊತ್ತು ಹೊತ್ತಿಗೆ ಉಂಡುಟ್ಟು ನೆಮ್ಮದಿಯಿಂದ ಇದ್ದ ಜೀವವಿದು. ತುತ್ತು ಕೂಳಿಗೆ ಕೈ ತೊತ್ತು ಬೇಡುವೆ ಅಣ್ಣಗಳಿರಾ ಹೆಲಿಕಾಪ್ಟರ್ ಒಳಗಿರುವ ಅನ್ನದೇವತೆಗಳಿರಾ. ನಾನಂದು ಒಗೆದ ಅನ್ನದ ಅಗುಳುಗಳೇ ಒಂದಾಗಿ ಇಂದು ಬನ್ನಿ ಎನ್ನನು ಕ್ಷಮಿಸಿ ಹಸಿವೆ ನೀಗಿಸಿ ಜೀವ ಉಳಿಸಿ ಎಂಬರ್ಥ ಬರುವ ಒಂದು ಕವಿತೆಯದು. ಈ ವಿಚಾರ ಅದೆಷ್ಟು ಸತ್ಯ ಅಲ್ವೇ. ಹಾಗೆ ಬಂದ್ ಆದಲ್ಲಿ ಜನಗಳು ವಾಹನಗಳು ಓಡಾಡದಿದ್ದಲ್ಲಿ ಹಣವಿದ್ದರೆ ಏನು ಗುಣವಿದ್ದರೆ ಏನು ಮುಕ್ತ ಸ್ವತಂತ್ರ ವಿಚಾರ ವಿಮರ್ಶೆ ಇಲ್ಲದ ಮೇಲೆ ಕೋಟಿ ಹಣದ ತೈಲಿ ಬ್ಯಾಂಕಿನಲ್ಲಿ ಇದ್ದರೇನು ಮನುಷ್ಯನಿಲ್ಲದೇ ಹಣ ಬರಿಯ ಹೆಣ ಅಲ್ಲವೇ.
ನನ್ನ ಜೀವನದ ಅನುಭವದಲ್ಲಿ ಹತ್ತಾರು ಹರತಾಳಗಳನ್ನು ಕಂಡಿರುವೆ ಒಂದು ಹೊತ್ತಿನ ಅನ್ನವಿರಲಿ ಗುಟುಕು ನೀರು ದೊರೆಯದೆ ತುಟಿ ಒಣಗಿಸಿಕೊಂಡು ದಾಹವನ್ನೂ ತಡೆಯಲಾಗದೆ ಅಕ್ಷರಶಃ ಸುಮ್ಮನೆ ಬಿದ್ದುಕೊಳ್ಳುವುದಲ್ಲದೆ ಬೇರೇನೂ ಮಾಡಲಾಗದ ಸ್ಥಿತಿಯಲ್ಲಿ ಕೂಡ ಇದ್ದೆ. ಅಕಸ್ಮಾತ್ ಒಂದು ಅಂಗಡಿ ಅಥವಾ ಹೊಟೇಲ್'ನ ಬಾಗಿಲು ತೆರೆದರೆ ಮುಚ್ಚಿಸಲು ನೂರಾರು ಮಂದಿ. ಕಲ್ಲು ಹೊಡೆಯಲು ಕಾಣದ ಕೈಗಳು ಬಹಳಷ್ಟು ಇದ್ದು ನಮ್ಮ ಸಮವಸ್ತ್ರ ಧರಿಸಿ ( ಪೋಲೀಸ್ ಎಂಬಂತೆ) ಓಡಾಡಿದ ಕ್ಷಣಗಳನ್ನು ಮರೆಯಲಾದೀತೆ.
ಇನ್ನು ಮಧ್ಯಮ ವರ್ಗದ ಜನರ ಪಾಡು ಹೀಗಿರುತ್ತದೆ. ತಿಂಗಳ ಸಂಬಳ ಪಡೆಯುವ ನಮ್ಮಂತಹ ಜನರ ಪಾಡು ನಮ್ಮ ಹಿರಿಯ ಅಧಿಕಾರಿಗಳ ಆಜ್ಞೆಯನ್ನು ಮೀರಲು ಅಸಾಧ್ಯ. ಹಾಗೆ ನಮ್ಮ ಕುಟುಂಬದ ಮಹಿಳಾಧಿಕಾರಿಗಳ ಮಾತು ಮೀರಲು ಅಸಾಧ್ಯ ಮಕ್ಕಳ ಕೀರಲು ಧ್ವನಿಗೆ ಉತ್ತರಿಸಲು ಅಸಾಧ್ಯ ಕಾರಣ ನಾವೂ ಮನುಜರೆ ಅಲ್ವೇ. ಆದರೆ ಕಚೇರಿಯ ಅಧಿಕಾರಿಗಳ ಮಾತು ಮೀರಿದರೆ ತಿಂಗಳ ಕೊನೆಗೆ ಸಂಬಳ ಖೋತಾ. ಮನೆಯವರ ಮಾತು ಕೇಳದಿದ್ದರೆ ಅವರಿಗೂ ಮತ್ತೆ ನಾವು ಮನೆ ತಲುಪುವವರೆಗೂ ಚಿಂತೆಯ ಲಾತಾ. ಅಂತೂ ಅನಿವಾರ್ಯವಾಗಿ ಕರ್ತವ್ಯ ಮತ್ತು ಮನೆಯವರ ಅಭಿಲಾಷೆಯನ್ನು ಪೂರೈಸುವ ಅಗತ್ಯವಿದೆ. ಅಂತೂ ಕರ್ತವ್ಯ ಮುಗಿಸಿ ಮನೆ ತಲುಪುವವರೆಗೂ ಯಾರಿಗೂ ನೆಮ್ಮದಿ ಇರುವುದಿಲ್ಲ. ಇದು ನಮ್ಮಂತಹ ಸಾರ್ವಜನಿಕ ಸೇವೆಗೆಂದು ಮೀಸಲಿಟ್ಟ ನೌಕರರ ಪಾಡು ಅದರಲ್ಲೂ ಸಾರಿಗೆ ನೌಕರರು, ಪೋಲೀಸ್, ಆಸ್ಪತ್ರೆ ಸಿಬ್ಬಂದಿ, ಇಂತಹವರ ಹಾಡು ಪಾಡು. ಇದರಲ್ಲಿ ಇನ್ನೊಂದು ವರ್ಗದವರು ಇದ್ದಾರೆ.
ಬೆಳಿಗ್ಗೆ ೯ ಗಂಟೆಗೆ ಮನೆಯಿಂದ ಹೊರಟು ೧೦ ಗಂಟೆಗೆ ಕಚೇರಿ ತಲುಪಿ ಹೇಗೊ ಸಂಜೆಯವರೆಗೆ ಕೆಲಸ ಮುಗಿಸಿ ಸಂಜೆ ೪:೩೦ರ ವೇಳೆಗೆ ಕೈ ತೊಳೆದು ಐದು ಗಂಟೆಯಾಗುವುದನ್ನು ಅತ್ಯಂತ ಶ್ರದ್ಧೆಯಿಂದ ಕಾಯುತ್ತಾ ಕಛೇರಿಯ ಗೇಟಿನ ಬಳಿ ನಿಲ್ಲುವವರು. ಬಹಳ ಬೇಗನೆ ಇಂತಹವರಿಗೆ ಬಂದ್'ನ ವಿಷಯ ತಿಳಿದು ಬಿಟ್ಟಿರುತ್ತದೆ. ಅದೆಷ್ಟು ಬೇಗನೆ ಇವರು ಆ ದಿನದ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡಿರುತ್ತಾರೆ ಎಂದರೆ ಆ ದಿನ ಬೆಳಗಾಗುವುದರೊಳಗಾಗಿ ಎಲ್ಲಾ ಕಾರ್ಯಕ್ರಮಕ್ಕೆ ಅಗತ್ಯವಾದ ವಸ್ತುಗಳನ್ನು ಜೋಡಿಸಿ ಬಿಡುತ್ತಾರೆ ಜೊತೆಗೆ ವಿಷಯ ತಲುಪಿಸುವವರಿಗೆ ತಲುಪಿಸಿ ಬಿಟ್ಟಿರುತ್ತಾರೆ ಆದರೆ ಆ ದಿನ ಬಂದ್ ಅಥವಾ ರಜೆ ಎಂದು ತಿಳಿಯದಂತೆ ಅವರ ಕಾರ್ಯಕ್ರಮಗಳು ನಿಗದಿಯಾಗಿಬಿಡುತ್ತವೆ. ಅದು ಎಂತಹ ಜಟಿಲ ವಿಷಯದ ಕುರಿತಾದ ಬಂದ್ ಆದರೂ ಸರಿಯೇ ಅಥವಾ ಅವರ ನೌಕರಿಗೆ ಸಂಬಂಧಿಸಿದ ವಿಷಯವಾದರೂ ಸರಿಯೇ ಅವರಿಗೆ ರಜೆಯ ಮಜಾ ಅನುಭವಿಸುವ ಕೌತುಕ ಅಷ್ಟೇ. ಬೇರೇನು ಬೇಕಿಲ್ಲ ಏನಾದರೂ ಆಗಲಿ ನಾವು ಮಾತ್ರ ಆರಾಮವಾಗಿ ಇದ್ದರೆ ಸಾಕು ಎನ್ನುವ ಮನಸ್ಸಿನವರು. ಪಾಪ ಅವರಾದರೂ ಮತ್ತೇನು ಮಾಡುವರು ಹೇಳಿ ದಿನ ಬೆಳಗೆದ್ದು ಅದೇ ತಿಂಡಿಯನ್ನು ಅವಸರವಸರವಾಗಿ ತಿಂದು ಮನೆಯ ಸಕಲ ಜವಾಬ್ದಾರಿಯನ್ನು ನೆತ್ತಿಯ ಮೇಲೆ ಹೊತ್ತುಕೊಂಡು ಕಛೇರಿಯನ್ನು ತಲುಪುವಾಗಲೇ ಅರ್ಧ ಹೈರಾಣಾಗಿರುತ್ತಾರೆ. ಇನ್ನು ಬಾಸ್'ರಿಂದ ದೊರೆತ ಮಂತ್ರಾಕ್ಷತೆಯೊಡನೆ ಮಕ್ಕಳ ಮಡದಿಯ ಸಹರ್ಸನಾಮಾರ್ಚನೆಯ ಗುಂಗಿಂದ ಹೊರ ಬಂದು ಊಟ ಮುಗಿಸುವಷ್ಟರಲ್ಲಿ ಮತ್ತೆ ದುತ್ತನೆ ನೆತ್ತಿ ಹತ್ತಿ ಕುಳಿತುಬಿಡುವ ಚಿಂತೆಯ ಸಂತೆ. ಹಾಗಾಗಿ ಸಿಗುವ ರಜೆ ಯಾವುದಾದರೇನು ಒಟ್ಟಿನಲ್ಲಿ ಮಜೆ ಅನುಭವಿಸಬೇಕು ಅಷ್ಟೇ ಎನ್ನುವವರು.
ಇನ್ನೊಂದು ವರ್ಗವಿದೆ ದುಡಿದ ಎಲ್ಲವನ್ನೂ ಬಡ್ಡಿ- ಚಕ್ರಬಡ್ಡಿಗೆ ಕಟ್ಟಿ "ಸಾಲ ಮಾಡಿ ವಾಲೆ ತಂದರೆ ವಾಲೆ ಮಾರಿದರೂ ಸಾಲದ ಬಡ್ಡಿ ಮುಗಿಯಲಿಲ್ಲ" ಎಂಬಂತೆ ಮನೆಯ ಮೌಲ್ಯಕ್ಕಿಂತ ಹೆಚ್ಚಿನ ಸಾಲ ಹೊತ್ತು ಇಬ್ಬರೂ ದುಡಿದ ಗಳಿಕೆಯನ್ನು ದುಡಿದು ಕಟ್ಟಿದ ಮನೆಯೊಳಗೂ ತರಲಾಗದೆ ಅಳಿದುಳಿದ ಅಲ್ಪಸ್ವಲ್ಪ ಹಣದಲ್ಲಿ ಅತ್ತ ಬಡವರೂ ಅಲ್ಲ ಇತ್ತ ಸಿರಿವಂತರೂ ಅಲ್ಲದೇ ನೋಡಲು ದೊಡ್ಡ ಮನೆ ಅಡುಗೆ ಮನೆಯಲ್ಲಿ ಡಬ್ಬಿಗಳೆಲ್ಲಾ ಖಾಲಿ ಖಾಲಿ ಎಂದು ಬದುಕುವವರು. ಪಾಪ ಹೇಳಿಕೊಳ್ಳಲು ನಾಚಿಕೆ, ಪ್ರತಿಷ್ಠೆ. ಹೇಳಿದರೆ ನಂಬುವವರ ಕೊರತೆ ಆದರೂ ಏನಾದರಾಗಲಿ ಒಳ್ಳೆಯ ಒಂದು ಮನೆ ಕಟ್ಟಿಸಿದೆ ನಮ್ಮ ಮನೆಯಲ್ಲಿ ನಾವು ಹಸಿದಿದ್ದರೂ ಕೇಳುವವರಿಲ್ಲ ಎಂಬ ಸಿನಿಕತನಕೆ ಒಳಗಾದವರು. ಒಂದು ದಿನ ಕಛೇರಿಗೆ ಹೋಗದಿದ್ದರೂ ಅದೇನೋ ಕಳೆದುಕೊಂಡಂತೆ ನೋಯುವವರು. ಯಾಕಾದರೂ ಬಂದ್ ಬಂತೋ ಎಂದು ಕೊರಗುವವರು. ಮರುದಿನ ಬೆಳಗ್ಗೆ ಎದ್ದು ಎಂದಿನಂತೆ ಕಛೇರಿಗೆ ನಡೆವಾಗ ಎಲ್ಲವನ್ನೂ ಮರೆತುಬಿಡುವವರು. ಇಂತಹವರಿಂದಲೇ ಈ ಜಗತ್ತು ನಡೆಯುತ್ತಿದೆ ಎನ್ನಬಹುದು. ಸಾಲ ಕೊಟ್ಟವರು ನಿಶ್ಚಿಂತೆಯಿಂದ ವಸೂಲಿ ಮಾಡಬಹುದು ಕಷ್ಟವನ್ನು ಮರೆಯದೇ ಅಹಂಗೆ ಸಿಲುಕದೆ ಎಲ್ಲರೊಂದಿಗೂ ಒಂದಾಗಿ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುವವರು.
ಇನ್ನೊಂದು ವರ್ಗವಿದೆ ನಿತ್ಯ ಮನೆ ಮನೆಗೆ ಹಣ್ಣು ತರಕಾರಿ ಸೊಪ್ಪುಗಳು ಇತ್ಯಾದಿಗಳನ್ನು ಹೊತ್ತು ತಿರುಗಿ ವ್ಯಾಪಾರ ಮಾಡುವವರು ಅಥವಾ ಪರ ಊರಿನಿಂದ ತಂದು ತಮ್ಮೂರಲ್ಲಿ ವಿಂಗಡಿಸಿ ಮುಂದಿನೂರಿಗೆ ಕೊಂಡೊಯ್ದು ಒಂದಷ್ಟು ಪ್ರಮಾಣದ ಹೆಚ್ಚಿನ ಲಾಭ ಗಳಿಸಲು ಹಗಲೆಲ್ಲಾ ಗಂಡ ಹಳ್ಳಿಗಳಲ್ಲಿ ತಿರುಗಿ ಸೊಪ್ಪುಸದೆ ಇತ್ಯಾದಿಗಳನ್ನು ಬೆಳದವರ ಬಳಿ ಕೊಂಡು ಮನೆಗೆ ತಂದು ಹಾಕುವನು. ಸತಿಮಣಿ ವ್ಯಾಪಾರ ಮುಗಿಸಿ ಬರುವಾಗಲೇ ತಡರಾತ್ರಿಯಾಗಿರುತ್ತದೆ. ಅಡಿಗೆ ಯಾವಾಗ ಮಾಡುವರೋ ಊಟ ಯಾವಾಗ ಮಾಡುವರೋ ಬೆಳಗಿನ ಜಾವ ೩ ಗಂಟೆಗೆ ಮತ್ತೆ ಬಸ್ ನಿಲ್ದಾಣದಲ್ಲಿ ಬಂದು ಕುಳಿತಿರುತ್ತಾರೆ. ಅಲ್ಲಿಂದ ಕೈಗೆ ಸಿಕ್ಕ ಬಸ್ಸಿನಲ್ಲಿ ಅಥವಾ ಲಾರಿ, ಕಾರು ಏನೇ ಸಿಕ್ಕಿದರೂ ಅದರಲ್ಲಿ ಹತ್ತಿ ಮುಂದಿನ ಊರಿಗೆ ತಲುಪಿಬಿಡುತ್ತಾರೆ. ಮನೆಯಲ್ಲಿ ಮಕ್ಕಳು ಏನಾದರೂ ಪಾಪ ಇವರಿಗೆ ಗೊತ್ತಿಲ್ಲ. ಗಂಡನೆಂಬ ಪ್ರಾಣಿ ಕೂಡ ಮನೆಯಲ್ಲಿ ಇಲ್ಲ. ಆದರೆ ಇಂತಹವರ ಮಕ್ಕಳು ಕೂಡ ಉನ್ನತ ಶಿಕ್ಷಣ ಪಡೆದು ಉನ್ನತ ನೌಕರಿ ಹಿಡಿದವರಿದ್ದಾರೆ. ಇಂತಹ ಜನಗಳ ಜೊತೆಗೆ ಪೈಸೆ ಪೈಸೆಗೆ ಕಿತ್ತಾಡುವವರು ಇದ್ದಾರೆ. ಇವರದೊಂದು ರೀತಿಯಲ್ಲಿ ಗಡಿಯಾರದ ಓಟವನ್ನು ಮೀರಿಸುವ ಕೆಲಸ. ಬಂದ್ ಘೋಷಿಸಿಸುವ ಒಂದು ದಿನ ಮೊದಲಾದರೂ ಇವರಿಗೆ ತಿಳಿದರೆ ಸ್ವಲ್ಪಮಟ್ಟಿಗೆ ಉಪಕಾರವಾದೀತು. ನಾಳೆ ಬಂದ್ ಎಂದು ಇಂದು ಸಂಜೆ ತಿಳಿಸಿದರೆ ಮನೆಯಲ್ಲಿ ಸೊಪ್ಪುಗಳು ಕುಳಿತಲ್ಲೇ ಕೊಳೆಯುತ್ತಿರುತ್ತವೆ. ಹಣ ಪೋಲಾಗುವುದನ್ನು ಕಂಡು ಸತಿ ಪತಿಯರ ಪ್ರವರಗಳನ್ನು ಕೇಳಲು ಅಸಾಧ್ಯ. ವರ್ಷವೆಲ್ಲ ದುಡಿದಿದ್ದು ಕಣ್ಣೆದುರೇ ಕರಗಿ ನೀರಾಗುತ್ತಿರುತ್ತದೆ. ತರಕಾರಿ ಹಣ್ಣಿನ ವ್ಯಾಪಾರಿಗಳ, ಹೊಟೇಲುಗಳು, ಬೇಕರಿಗಳು, ಸಣ್ಣ ಪುಟ್ಟ ಕೈಗಾಡಿಗಳಲ್ಲಿ ವ್ಯಾಪಾರ ಮಾಡಿ ಬದುಕುವವರು ಕೂಡ ಈ ಸಾಲಿನಲ್ಲಿ ಬರುತ್ತಾರೆ.
ವೈ.ಕೊ
ವೈಲೇಶ ಪಿ ಎಸ್. ಕೊಡಗು
೨೪/೦೧/೨೦೧೯
Comments
Post a Comment