ನಿರೀಕ್ಷೆ ಬೇಕೆ ಬೇಡವೇ
ನಿರೀಕ್ಷೆ ಬೇಕೆ ಬೇಡವೇ
~~~~~~~~~~~
ನಿರೀಕ್ಷೆ ಇರಬಾರದು ಮನುಜನಿಗೆ. ನಿರೀಕ್ಷೆ ಇದ್ದರೂ ನಮ್ಮ ಯೋಗ್ಯತೆಗೆ ಮೀರಿ ನಿರೀಕ್ಷಿಸಬಾರದು. ಎರಡು ಉತ್ತಮ ಕವನಗಳನ್ನು ಬರೆದಾಕ್ಷಣ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಕವನ ವಾಚನಕ್ಕೆ ಅವಕಾಶ ಕೊಡಿಸಲಿಲ್ಲವೆಂದು ನಾವು ಚಿಂತಿಸಿದರೆ ನಿಜಕ್ಕೂ ಅದು ತಪ್ಪಾಗಿರುತ್ತದೆ. ಏಕೆಂದರೆ ಉತ್ತಮ ಗುಣಮಟ್ಟದ ಹತ್ತು ಪುಸ್ತಕಗಳನ್ನು ಬರೆದವರು ಇನ್ನೂ ಸಹ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಲು ನಿರೀಕ್ಷಿಸುತ್ತಾ ಇದ್ದಾರೆ. ಆದರೆ ಇನ್ನೊಬ್ಬ ಸಂಗೀತಕಾರ ಸಾಹಿತ್ಯ ಸೇವೆಯಲ್ಲಿ ತನ್ನ ಸಾಧನೆ ಏನೇನೂ ಇಲ್ಲದಿದ್ದರೂ ಸಹ ನನ್ನನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಿಲ್ಲ ಎಂದು ಬಾಯಿಗೆ ಬಂದಂತೆ ನಿಂದಿಸುತ್ತಾ ಅಕ್ಷರಶಃ ತಿರುಗುತ್ತಿರುತ್ತಾನೆ. ಅತ್ತ ನಿಜವಾದ ಸಾಹಿತ್ಯ ಸೇವೆ ಮಾಡಿದಾತ ಜಾತಿಯ ಕಾರಣದಿಂದಾಗಿ ಮೂಲೆಗುಂಪಾಗಿರುತ್ತಾನೆ. ಅಲ್ಲೊಬ್ಬ ಚಿತ್ರನಟ ಇಲ್ಲೊಬ್ಬ ದಿಗ್ಗಜರ ಅಭಿಮಾನಿ ಮತ್ತೊಬ್ಬ ವರನಟರ ಅಭಿಮಾನಿಗಳಧ್ಯಕ್ಷ ಹೀಗೆ ಸಾಹಿತಿಯೇತರರೆಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುತ್ತಿದ್ದರೆ ನಿಜವಾದ ಸಾಹಿತಿಗಳಿಗೆ ಪ್ರಾಧಾನ್ಯತೆ ಸಿಗುವುದು ಯಾವಾಗ ಎಂದು ಕೇಳಲಾಗದ ಕೇಳಿದರೆ ಇರುವ ಸ್ಥಾನವನ್ನು ಕಳೆದುಕೊಳ್ಳುವ ಭಯ ಸಾಹಿತಿಗಳಿಗೆ ಇದೆ ಎನಿಸುತ್ತಿದೆ. ಇಲ್ಲೊಬ್ಬ ಅಯ್ಯೋ ಎಲ್ಲರೂ ಸೇರಿ ನನ್ನನ್ನು ಹಿಂದಕ್ಕಟ್ಟಿಬಿಟ್ಟರೆಂದು ಕೊರಗುತ್ತಿರುತ್ತಾನೆ. ಕೊರಗಿ ಕೊರಗಿ ಕೊನೆಗೆ ಎಲ್ಲರಿಗಿಂತ ಕೊನೆಗೆ ಉಳಿದುಬಿಡುತ್ತಾನೆ. ಮತ್ತೊಬ್ಬರು ಹೇಳುತ್ತಾರೆ ಏನ್ರೀ ಈತ ಎಲ್ಲೆಲ್ಲೂ ಇರುತ್ತಾನೆ ಎಲ್ಲರೂ ಅವನನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ ನನಗಿಷ್ಟು ವಯಸ್ಸಾಗಿದೆ ಅಷ್ಟೊಂದು ಬರೆದಿದ್ದೇನೆ ಎಲ್ಲರೂ ಸೇರಿ ನನ್ನ ಗೌರವ ಹಾಳು ಮಾಡಿದರು ನನ್ನನ್ನು ಎಲ್ಲಿಯೂ ಯಾರೂ ಕೂಡ ಕರೆದು ಮಾತನಾಡಿಸುವವರು ಇಲ್ಲ ನಿನ್ನೆ ಮೊನ್ನೆ ಬಂದವನಿಗೆ ಮಣೆ ಹಾಕುತ್ತಿದ್ದಾರೆ ಎಂದು ಕೋಪ ಮಾಡಿಕೊಂಡು ಇದ್ದಕ್ಕಿದ್ದಂತೆ ಎದ್ದು ಹೊರಟುಬಿಡುತ್ತಾನೆ. ಅವಕಾಶ ಸಿಕ್ಕರೆ ಎದುರಿನವರನ್ನು ಹಣಿಯಲು ಹೋಗಿ ತಾನೇ ಇಂಗು ತಿಂದ ಮಂಗನಂತಾಗುತ್ತಾನೆ. ತಮ್ಮ ಸ್ವಾರ್ಥದ ಕಾರಣದಿಂದಾಗಿ ಅನಗತ್ಯ ಸುಳ್ಳು ದಾಖಲೆಗಳು ಒಂದಷ್ಟು ಸುಳ್ಳು ಹೇಳಿಕೆಗಳು ಮತ್ತಷ್ಟು ಅನಗತ್ಯ ವಿಚಾರಗಳನ್ನು ಅಟ್ಟಕ್ಕೇರಿಸುವ ಅವಕಾಶ ವಂಚಿತರು. ಅವಕಾಶಗಳನ್ನು ಪಡೆಯಲು ಕಾಲಿಗೆ ಬೀಳುವವರು ಅವಕಾಶಕ್ಕಾಗಿ ಏನೇನೂ ಮಾಡಲು ತಯಾರಿರುವ ಕೆಲವರು. ಇದು ಕೇವಲ ಸಾಹಿತ್ಯ ಕ್ಷೇತ್ರದ ವಿಚಾರವಷ್ಟೇ ಅಲ್ಲ ಜಗದ ಎಲ್ಲಾ ಕ್ಷೇತ್ರದಲ್ಲಿ ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ವಿಚಾರ.
ಮೊದಲಿಗೆ ಮಗುವ ಜನನಕ್ಕೂ ಮುನ್ನವೇ ಕಾನ್ವೆಂಟ್ ನಲ್ಲಿ ಸೀಟುಗಳನ್ನು ಕಾದಿರಿಸಿ ಕನಸು ಕಾಣುವ ದಂಪತಿಗಳಿಗೆ ಕೊರತೆ ಇಲ್ಲ. ಜನಿಸಿದ ಕಂದಮ್ಮಗಳಿಗೆ ನಮ್ಮದೇ ಆಸೆ ಆಕಾಂಕ್ಷೆಗಳನ್ನು ಬಲವಂತವಾಗಿ ಹೇರಿ ಆತನ/ಆಕೆಯ ವಯಸ್ಸಿನ ಮಿತಿ ಮೀರಿ ವಿದ್ಯಾಭ್ಯಾಸ ಹಾಗೂ ಇತರೆ ಚಟುವಟಿಕೆಗೆ ಪ್ರೋತ್ಸಾಹಿಸುವ ನಾವು ನಮ್ಮ ಮಕ್ಕಳಿಂದ ಅಪಾರವಾದ ನಿರೀಕ್ಷೆ ಇಟ್ಟುಕೊಂಡು ಮಗುವಿನ ಮನಸ್ಸನ್ನು ಅರಿಯದೆ ನಾವು ಪೂರೈಸದಿರುವ ಸಾಧನೆಯನ್ನು ಅವರಿಂದ ಬಯಸುತ್ತೇವೆ. ಇದು ಸರಿಯೋ ತಪ್ಪೋ ಅರಿಯದೆ ನಮ್ಮದೇ ಸ್ವಂತ ಅಭಿಪ್ರಾಯಗಳನ್ನು ಏಕಮುಖವಾಗಿ ಮಕ್ಕಳ ಮೇಲೆ ಹೇರಿ ಸವಾರಿ ಮಾಡುವ ಮೂಲಕ ಕೆಲವೊಮ್ಮೆ ಮಕ್ಕಳ ಮನಸ್ಸನ್ನು ಅರಿಯದೆ ಹೋಗುತ್ತೇವೆ. ಇದು ನನ್ನ ಸ್ವಂತ ಅನುಭವ ಕೂಡ ಹೌದು. ಮಕ್ಕಳ ಮನಸ್ಸನ್ನು ಅರಿತು ಅವರ ಇಚ್ಚೆಯನುಸಾರ ಮುನ್ನಡೆದರೆ ಮುಂದೆ ಮಕ್ಕಳಿಗೆ ಸ್ವತಃ ಅರಿವಾದಾಗ ಎಲ್ಲವೂ ಸರಿಹೋಗುವುದು ಎಂದು ನಂಬಿರುತ್ತೇನೆ. ಇನ್ನೂ ಮಕ್ಕಳು ಹೆತ್ತವರಿಂದ ಹೆಚ್ಚಿಗೆ ಏನನ್ನೂ ನಿರೀಕ್ಷಿಸಬಾರದು. ಅಜ್ಜಬಿಜ್ಜಂದೀರ ಆಸ್ತಿ ಸಾಕಷ್ಟಿಲ್ಲದ ಅದೆಷ್ಟೋ ಪೋಷಕರು ತಮ್ಮ ಮಕ್ಕಳು ನಮ್ಮಂತೆ ಕಷ್ಟ ಪಡಬಾರದು ಎನ್ನುವವರೇ ಹೆಚ್ಚು. ಸಣ್ಣ ಸಂಬಳದ ದೊಡ್ಡ ಜವಾಬ್ದಾರಿಯ ನೌಕರಿ ಮಾಡಿಕೊಂಡು ಅಕ್ಕ ತಂಗಿಯರ ಅಣ್ಣತಮ್ಮಂದೀರ ಜವಾಬ್ದಾರಿಯನ್ನು ವಹಿಸಿಕೊಂಡು ತನ್ನ ಮದುವೆ ಮಾಡಿಕೊಳ್ಳದೇ ಅಥವಾ ಮಾಡಿಕೊಂಡು ಸಂಸಾರದ ಮಹಾ ಬಾರವನ್ನು ಹೊತ್ತ ಅದೆಷ್ಟೋ ಗೆಳೆಯರನ್ನು ಕಣ್ಣಾರೆ ಕಂಡಿದ್ದೇನೆ. ಇನ್ನೂ ಕೆಲವರು ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳದೆ ತಮ್ಮ ಸತಿಸುತರ ಜವಾಬ್ದಾರಿಯನ್ನು ನೋಡಿಕೊಳ್ಳುವ ಸಲುವಾಗಿ ಎಲ್ಲರನ್ನೂ ನಿಷ್ಠೂರ ಮಾಡಿಕೊಂಡು ಮನೆಯಿಂದ ಮನಸ್ಸಿನಿಂದ ದೂರವಾದವರನ್ನು ಕಂಡಿದ್ದೇನೆ. ಇವರು ತಮ್ಮ ಕುಟುಂಬಕ್ಕೆ ಮಾಡಿದ ದ್ರೋಹವನ್ನು ತಮ್ಮದೇ ಸ್ವಂತ ಮಕ್ಕಳಿಂದ ಅನುಭವಿಸಿ ಕಣ್ಣೀರು ಹಾಕಿರುವುದನ್ನೂ ಕಂಡಿರುತ್ತೇನೆ. ಹಾಗಾಗಿ ಮಕ್ಕಳು ಪೋಷಕರಿಂದ ಅಥವಾ ಪೋಷಕರು ಮಕ್ಕಳಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಬಾರದು ಎಂಬ ಅನುಭವವನ್ನು ಕಂಡು ಕೇಳಿ ಅರಿತಿದ್ದೇನೆ.
ಇನ್ನು ಪೋಷಕರು ಸಹ ನಾವು ಕಷ್ಟಪಟ್ಟು ದುಡಿದು ಮಕ್ಕಳ ಭವಿಷ್ಯವು ಉತ್ತಮವಾಗಲೆಂದು ಓದಿಸಿದ್ದೇವೆ. ಅವರ ಸಂಪಾದನೆಯಲ್ಲಿ ಇನ್ನು ಮುಂದೆ ಹಾಯಾಗಿರಬಹುದು ಎಂದು ಕನಸಿನಲ್ಲಿ ಸಹ ಯೋಚನೆ ಮಾಡಬಾರದು. ನಾವು ನಮ್ಮ ಯೌವ್ವನದಲ್ಲಿ ಈಡೇರಿಸಲು ಸಾಧ್ಯವಾಗದ ಒಂದಷ್ಟು ಕನಸುಗಳನ್ನು ಮೂಟೆ ಕಟ್ಟಿ ತಲೆದಿಂಬಿನಡಿ ಇಟ್ಟುಕೊಂಡಂತೆ ನಮ್ಮ ಮಕ್ಕಳು ಮುಂದೆ ತಲೆದಿಂಬಿಗೆ ಮತ್ತಷ್ಟು ಗಂಟು ಕಟ್ಟಿಕೊಳ್ಳಲು ಅವಕಾಶ ನೀಡುವುದು ಬೇಡ ನಮ್ಮ ಜೀವಿತದ ಅವಧಿಯಲ್ಲಿ ದುಡಿದ ಸಂಪಾದನೆಯಲ್ಲಿ ಒಂದಷ್ಟು ಭಾಗವನ್ನು ಉಳಿಸಿಕೊಂಡು ನಮ್ಮದೇ ಖರ್ಚು ವೆಚ್ಚಗಳನ್ನು ನಾವೇ ಭರಿಸಿಕೊಳ್ಳುವಂತಿದ್ದರೆ ಎಷ್ಟು ಚಂದ ಅಲ್ವೇ. ಇನ್ನು ಅಪ್ಪ ಅಮ್ಮ ಉಣದೆ ಉಡದೆ ನಮ್ಮ ಅವಶ್ಯಕತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಪೂರೈಸಲು ಹೆಣಗುವ ಜೊತೆಗೆ ತಮ್ಮ ವಯೋಕಾಲದ ಖರ್ಚು ವೆಚ್ಚಗಳಿಗೆಂದು ಕೂಡಿಟ್ಟ ಹಣದಿಂದ ತನ್ನ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ ಸೋತು ಹೋಗಿ ಅತ್ತ ಪೋಷಕರ ಮನಸ್ಸನ್ನು ನೋಯಿಸಿ ತನ್ನ ವಿಫಲತೆಗೆ ಅದೃಷ್ಟವನ್ನು ಹಳಿಯುವುದನ್ನು ಬಿಟ್ಟು ತಮ್ಮ ವಿದ್ಯಾರ್ಜನೆಯಿಂದ ಗಳಿಸಿದ ಸಾಮರ್ಥ್ಯವನ್ನು ಬಳಸಿಕೊಂಡು ಕುಟುಂಬಕ್ಕೂ ನಾಡಿಗೂ ದೇಶಕ್ಕೂ ಹೆಸರು ತರುವ ಉತ್ತಮ ಪ್ರಜೆಯಾಗಿ ಬಾಳಿ ಬದುಕಿದರೆ ತಮ್ಮ ಪೋಷಕರ ಮನಸ್ಸಿಗೆ ಅದೆಷ್ಟು ಆನಂದ ಹೆಮ್ಮೆ ಆಗಬಹುದಲ್ಲವೆ.
ರಾಜ್ಯದ ರಾಜಕಾರಣವನ್ನು ತೆಗೆದುಕೊಂಡರೆ ಸಚಿವರಾಗದವರಿಗೆ ನಾವು ಸಚಿವರಾಗಬೇಕೆಂಬ ಆಸೆ . ಮುಖ್ಯಮಂತ್ರಿಯಾಗಲು ಅನೇಕರಿಗೆ ಆಸೆ ಮತ್ತೆ ಕೆಲವರಿಗೆ ನಿಗಮ ಮಂಡಳಿಯ ಮೇಲಾಸೆ ತಮ್ಮ ಆಸೆ ಈಡೇರಿಕೆಗೆ ನಿತ್ಯ ಹಲವಾರು ಚಿಂತೆಗಳ ಮಸಾಲೆ ದೋಸೆ. ಅಂದರೆ ಇವರದು ಕೂಡ ನಿರೀಕ್ಷೆ ಅಲ್ಲವೇ. ರೈತರಿಗೆ ಬಂಪರ್ ಬೆಳೆ ಬರಬಹುದೆಂಬ ಚಿಂತೆ ಬೆಳೆ ಬಂದ ಮೇಲೆ ದಲ್ಲಾಳಿಗಳದೆ ಸಂತೆ ಕೈಗೆ ಬಂದದ್ದು ಬಾಯಿಗೆ ಬರುವ ಮುನ್ನ ಬೆಳೆ ಸಾಲ, ಗೊಬ್ಬರ ಸಾಲ, ಮಗಳ ಮದುವೆಯ ಸಾಲ, ಜಮೀನಿನ ಹಕ್ಕುಪತ್ರವನ್ನು ಸರಿಪಡಿಸಲೆಂದು ಮಾಡಿದ ಸಾಲದ ಚಿಂತೆ ಎಲ್ಲಾ ಸರಿಯಾಯಿತೆಂದರೆ ಮಳೆಗಾಲವೇ ಸರಿಯಾಗಿಲ್ಲ ಮುಂದಿನ ವರ್ಷದ ಬೆಳೆ ಬೆಳೆದು ಸಾಲ ತೀರಿಸುವ ಚಿಂತೆ. ಈ ಎಲ್ಲಾ ಕಾರಣದಿಂದಾಗಿ ರೈತರು ತಮ್ಮ ಹಿರಿಯರು ನಡೆದಂತೆ ತಮ್ಮ ಪಾಡಿಗೆ ದುಡಿಯುವ ಹೊರತು ಸಾಲ ಸೋಲವೆಂದು ಬ್ಯಾಂಕುಗಳ ಬಾಗಿಲು ಕಾಯುವ ಕೆಲಸ ಮಾಡಿದರೆ ಇತ್ತ ಬೆಳೆಯಬಹುದಾದ ಬೆಳೆಯು ಬಾರದೆ ಅತ್ತ ಒದಗಬಹುದಾದ ಸಾಲವೂ ಒದಗದೆ ತಮ್ಮ ಎಲ್ಲಾ ನಿರೀಕ್ಷೆಗಳು ಸುಳ್ಳಾಗಿ ಬೆಳೆಗಳಿಗೆ ಸಿಂಪಡಿಸುವ ಸಲುವಾಗಿ ತಂದ ವಿಷವನ್ನು ಸೇವಿಸಿ ತಮ್ಮ ಸಂಸಾರ ತಮ್ಮಿಂದ ಬಯಸಿದ ನಿರೀಕ್ಷೆಗಳನ್ನು ಹುಸಿಗೊಳಿಸುವಂತಾಗಬಾರದು. ಯಥಾ ರಾಜ ತಥಾ ಪ್ರಜಾ ಎಂಬಂತೆ ಕೇವಲ ಮತ ಗಳಿಸುವ ಸಲುವಾಗಿ ರಾಜಕಾರಣಿಗಳು ನೀಡಿದ ಸುಳ್ಳು ಆಶ್ವಾಸನೆಯನ್ನು ನಂಬಿ ನಾವು ಕೂಡ ರಾಜಕಾರಣಿಗಳಂತೆ ಸುಳ್ಳಾಡುವ ಪ್ರಸಂಗಗಳನ್ನು ಸ್ವತಃ ತಂದುಕೊಳ್ಳಬಾರದು ಅಲ್ವೇ.
ಇನ್ನು ಸೈನಿಕರ ಪಾಡು ದೇವರಿಗೆ ಪ್ರೀತಿ. ಸಾಧಾರಣವಾಗಿ ಪ್ರತಿವರ್ಷವೂ ಜನವರಿ ೧೪ ರವರೆಗೆ ಅತ್ಯಂತ ಹೆಚ್ಚಿನ ಚಳಿ ಇರುವ ಕಾಲ. ನಾವು ನಾಲ್ಕು ಗೋಡೆಗಳ ಮಧ್ಯದಲ್ಲಿ ಸ್ವೆಟರ್, ಶಾಲು,ಕೋಟು,ಜರ್ಕಿನ್ ಎಲ್ಲವನ್ನೂ ಧರಿಸಿದರೂ ನಡುಗುತ್ತಿರುತ್ತೇವೆ. ಅದೇ ಚಳಿಯಲ್ಲಿ ಸಿಯಾಚಿನ್ ನಂತಹ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾಡು ನೆನೆದರೆ ಮೈ ಜುಂ ಎನ್ನುತ್ತದೆ. ಈ ವಿಚಾರ ಇನ್ನೊಮ್ಮೆ ಬರೆಯುವೆ. ಹಿಂದೆ ದೇಹದಾರ್ಢ್ಯ ಒಂದು ಚೆನ್ನಾಗಿ ಇದ್ದರೆ ಭಾರತೀಯ ಸೈನ್ಯದ ಸೇವೆ ಸಲ್ಲಿಸಬಹುದಿತ್ತು. ಈಗ ಅಲ್ಲಿ ಕೂಡ ವಿದ್ಯಾಭ್ಯಾಸ ಬೇಕೇ ಬೇಕು. ಅಪ್ಪ ಅಮ್ಮನಿಗೆ ಅಥವಾ ಶಾಲಾ ಶಿಕ್ಷಕರಿಗೆ ಹೆದರಿ ಶಾಲೆ ಬಿಟ್ಟು ಅಥವಾ ಮನೆ ಬಿಟ್ಟು ಹೋದವರು ಸಹ ಭಾರತೀಯ ಸೈನಿಕ ಸೇವೆಯಲ್ಲಿ ತೊಡಗಿದ ಉದಾಹರಣೆಗಳು ನಮ್ಮ ಕಣ್ಣಿನ ಮುಂದೆ ಬೇಕಾದಷ್ಟಿವೆ. ಕೇವಲ ದೇಶಭಕ್ತಿಯ ಒಂದೇ ಕಾರಣದಿಂದಾಗಿ ಸೈನ್ಯ ಸೇರಿದವರು ಇದ್ದಾರೆ. ಅದೊಂದು ಅಪರೂಪದ ಗೌರವ ಹಾಗೂ ಕೈ ತುಂಬಾ ಸಂಬಳ ಅನುಪಮ ಸವಲತ್ತುಗಳು ಒಂದಷ್ಟು ವರ್ಷಗಳ ಕಾಲ ಸೈನ್ಯದ ಸೇವೆ ಮಾಡಿದ ನಂತರ ವಾಪಾಸು ಬಂದು ಇಲ್ಲಿ ಅಂದರೆ ಪ್ರಸ್ತುತ ವಾಸದ ಸ್ಥಳದಲ್ಲಿ ಖಾಸಗಿ ಅರೆ ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಉದ್ಯೋಗಗಳಲ್ಲಿ ಮೀಸಲಾತಿ ದೊರತು ನೌಕರಿ ಸಿಗುವುದು ಎಂಬ ಕಾರಣದಿಂದ ಸೈನ್ಯ ಸೇರಬಹುದು ಎಂಬ ನಿರೀಕ್ಷಿತ ಮನಸ್ಸುಗಳು ಇದ್ದಾರೆ. ಸಕಲ ಜೀವಜಂತುಗಳಿಗೂ ಇರುವಂತೆ ಇಂತಹವರಿಗೂ ಸಹ ವಂಶ ವೃದ್ಧಿಸುವ ಸಲುವಾಗಿ ಸಂಗಾತಿಯನ್ನು ಅರಸುವ ಪ್ರಕ್ರಿಯೆ ಸಹಜವಾದುದು ಆದರೆ ನಿಜವಾದ ತೊಂದರೆ ಅಡಗಿರುವುದೇ ಇಲ್ಲಿ ಇದರ ಬಗ್ಗೆ ಸುಧೀರ್ಘ ಲೇಖನವನ್ನು ಮತ್ತೊಮ್ಮೆ ಬರೆಯುವೆ ಆದರೆ ಇಲ್ಲಿ ಸೈನಿಕರ ಕುಟುಂಬದ ನಿರೀಕ್ಷೆ ಕೆಲವೊಮ್ಮೆ ಕೈಗೂಡುವುದು ಹಲವೊಮ್ಮೆ ಮತ್ತೇನೋ ಆಗುವುದು. ಇಲ್ಲಿ ಎಲ್ಲವನ್ನೂ ಅವಲೋಕಿಸಿದಾಗ ನಿರೀಕ್ಷೆ ಇರದೇ ಬದುಕೇ ಇಲ್ಲ. ಕೆಲವರಿಗೆ ನಿರೀಕ್ಷೆಯೇ ಬದುಕೆಲ್ಲ. ಹಾಗಾಗಿ ನಿರೀಕ್ಷೆ ಸರಿಯೇ ತಪ್ಪೇ ನಿಮ್ಮ ಅಯ್ಕೆಗೆ ಬಿಟ್ಟಿದ್ದೇನೆ.
ನಿಮ್ಮವ
ವೈಲೇಶ ಪಿ ಎಸ್ ಕೊಡಗು
೯೪೮೧೮೮೩೧೯೪
Comments
Post a Comment