ಹರುಷ ಮಾಸಿದೆ
ಹರುಷ ಮಾಸಿದೆ
••••••••••••••••••
ಹದಿಹರೆಯವೀ ಹದಿನೆಂಟು ಹತ್ತೊಂಬತ್ತು
ಲಿಂಗಭೇದವಿಲ್ಲದೇ ಎಲ್ಲರಿಗೂ ತೊಂಬತ್ತು
ಸಂದಿಗೊಂದಿಯ ವಿನೋದ ಮೇರೆ ಮೀರಿದೆ
ಅರಿವು ಮೂಡಿದಾಗ ಮೆಲ್ಲನೆ ಚಡಪಡಿಸಿದ್ದಾರೆ
ಬಿಕ್ಕುತಲಿ ಕಕ್ಕುತಲಿ ಸಿಕ್ಕಿನೊಳು ಸಿಲುಕಿ
ನಿತ್ಯ ಕುಡುಕನೆ ಹೆಂಡದ್ಹಂಡೆಯ ಕೈ ಕುಲುಕಿ
ಸತ್ಯದ ನುಡಿಯದು ಯಾರಿಗೆ ಬೇಕಾಗಿದೆ
ಮಿಥ್ಯೆ ನಲಿಯುತ್ತಿದೆ ನಡುವ ಕುಲುಕಿ ಬಳುಕಿ
ಹೊಸದರ ನೆಪದಿ ಹಳತು ಮತ್ತೆ ಬಂದಿದೆ
ವಾರ ಮಾಸಗಳುರುಳಿ ವರುಷ ನಡೆದಿದೆ
ಚಿಂದಿ ಆಯುವ ಹುಡುಗರ್ಹಿಂಡು ಅಲ್ಲಿದೆ
ಕುಡಿತದ ಮೋಜಿಗೆ ಬಾಟಲಿ ಹೊಡೆದಿದ್ದಾರೆ
ಬೀದಿ ದೀಪವು ಕುರುಡಾಗಿ ಕಣ್ಮುಚ್ಚಿದೆ
ಕಣ್ಣಿದ್ದೂ ಕಾಣಿಸದೆ ಜನ ನಡೆದಿದ್ದಾರೆ
ಸೀಸದ ಹೊಗೆಯ ದುರ್ಗಂಧ ಹರಡಿದೆ
ಪಟಾಕಿಯ ಹೆಣಗಳನು ಗುಡಿಸಿದ್ದಾರೆ
ಗಾಂಧಿ ರೋಡು ಅಕ್ಷರಶಃ ಶಾಂತವಾಗಿದೆ
ರಾತ್ರಿ ಬಿಚ್ಚಿಟ್ಟ ಕನ್ನಡಕ ತಾತಾ ಏರಿಸಿದ್ದಾರೆ
ನಶೆ ಏರಿಸಿದ ಸ್ಕಾಚ್ ವಿಸ್ಕಿ ತಲೆಯ ಕೆಡವಿದೆ
ಹೊಸ ದಿನದ ಹರುಷವ ಚಿಂತೆ ಮರೆ ಮಾಚಿದೆ
*ವೈ.ಕೊ*
*ವೈಲೇಶ ಪಿ ಎಸ್ ಕೊಡಗು*
*೧/೧/೨೦೧೯*
Comments
Post a Comment