ನಮ್ಮ ಪ್ರತಿನಿಧಿಗಳಿಗೆ ಮನವಿ
ಪ್ರತಿನಿಧಿಗಳಿಗೊಂದು ಮನವಿ
~~~~~~~~~~~~~~~~
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಇಷ್ಟೊಂದು ಮಳೆ ಬಂದು ನೀರು ಹರಿದು ರಾಜ್ಯದ,ಹೊರ ರಾಜ್ಯದ ಅನೇಕ ಕಡೆಗಳಲ್ಲಿ ತನ್ನ ಮನ ಬಂದಂತೆ ವರ್ತಿಸಿ ಕಷ್ಟಗಳನ್ನು ವರ್ಧಿಸುವ ಮುಖಾಂತರ ಎಲ್ಲರ ಗಮನ ಸೆಳೆಯಿತು. ಆದರೆ ಯಾರ ಬಾಯಿಯಲ್ಲೂ ಒಳ್ಳೆಯ ಮಳೆ ಎಂದೆನಿಸಿಕೊಳ್ಳಲಿಲ್ಲ ಹತ್ತು ವರ್ಷಗಳ ಕಾಲ ಬತ್ತಿದ ಬಾವಿಯಲ್ಲಿ ಕೂಡ ಒಂದು ಸಣ್ಣ ಬಿಸಿಲಿಗೆ ಮೈಯೊಡ್ಡಿ ಆವಿ ಏಳುವಷ್ಟು ನೀರು ತುಂಬಿತು. ಆಗಸ್ಟ್ ೧೭,೧೮ರವರೆಗೂ ಚೆನ್ನಾಗಿ ಸುರಿದ ಮಳೆ ಈ ವರ್ಷ ಕುಡಿಯುವ ನೀರಿಗೆ ಕೊರತೆಯಿಲ್ಲ ಎನ್ನುವಂತಿದ್ದರೆ ನಂತರದ ದಿನಗಳಲ್ಲಿ ಕೆರೆ ಕಟ್ಟೆ ಬಾವಿ ಹೊಳೆ ಬತ್ತತೊಡಗಿತು ಕೊನೆಗೆ ಬಿರು ಬೇಸಿಗೆಯಲ್ಲಿ ಇದ್ದ ನೀರಿನ ಮಟ್ಟಕ್ಕೆ ಇಳಿದುಬಿಟ್ಟಿತು. ಹೊರ ಜಿಲ್ಲೆಯ ಅನೇಕರು ದೂರವಾಣಿ ಮುಖಾಂತರ ಕರೆ ಮಾಡಿ ಏನಾಗಿದೆ ಎಂದು ಕೇಳುವಂತಾಯಿತು ಏನೇ ಆದರೂ ಮಳೆ ಬಂತು ಹೊಳೆ ಬಂತು ಅದರ ಪಾಡಿಗೆ ಅದು ಹೋಯಿತು ಹೋಗುವಾಗ ಕೂಡ ಕೆಡುಕನ್ನು ಮಾಡಿಯೇ ಹೋಯಿತು ಅಥವಾ ನಮ್ಮ ಪೂರ್ವಾಗ್ರಹ ಪೀಡಿತ ಮನಸ್ಸು ಹೀಗೆ ಹೇಳುತ್ತದೆ ಎನಿಸಿತು.
ಮಳೆಯನ್ನೇ ಅವಲಂಭಿಸಿ ಭತ್ತ ಬೆಳೆಯುವ ಕಾಲ ತುಂಬಾ ಹಿಂದೆ ಸರಿದಿದೆ ಹಿಂದಿನ ಪೀಳಿಗೆಯ ರೈತರಂತೆ ಮಳೆ, ಕಾಡು, ರಾಸುಗಳ ಹಾಗೂ ಊರಿನ ರೈತರ ಪರಸ್ಪರ ಸಹಕಾರವನ್ನು ತೊರೆದು ನೀರಿನ ಮೋಟಾರು ಟ್ರ್ಯಾಕ್ಟರ್ ಟಿಲ್ಲರ್ ಕೂಲಿಯಾಳುಗಳನ್ನು ನಂಬಿ ವ್ಯವಸಾಯ ಮಾಡಹೋಗಿ ಕೈಸುಟ್ಟಕೊಂಡು ರೈತರು ಅಪಹಾಸ್ಯಕ್ಕೆ ಗುರಿಯಾಗಿ ಆತ್ಮಹತ್ಯೆಯ ಅಪಾಯವನ್ನು ಮೈಮೇಲೆ ಎಳೆದುಕೊಂಡು ಭತ್ತದ ಗದ್ದೆಗಳನ್ನು ಪಾಳು ಬಿಡುವುದು ಅಥವಾ ವಾಣಿಜ್ಯ ಬೆಳೆಗಳಾದ ಕಾಫಿ ಅಡಕೆ ತೆಂಗು ಶುಂಠಿ ಬೆಳೆ ಬಾಳೆ ತೋಟಗಳನ್ನಾಗಿ ಪರಿವರ್ತಿಸುವ ಪರಿ ಕಂಡಾಗ ಇದು ನಿಜಕ್ಕೂ ನಮ್ಮ ಕೊಡಗಾ? ಅಥವಾ ಅಪ್ಪಿತಪ್ಪಿ ಬೇರೆ ಊರಿಗೆ ಬಂದು ಬಿಟ್ಟೆವಾ? ಎನಿಸುತ್ತದೆ.
ಈ ಅನಿಸಿಕೆ ಈಗ ಅಲ್ಲ ಸುಮಾರು ೧೯೮೦ ರ ದಶಕದಲ್ಲಿ ಇರಬೇಕು. ನಾನಾಗ ಕಾರಣಾಂತರಗಳಿಂದ ಮೈಸೂರಿನಲ್ಲಿ ಇದ್ದೆ. ಊರಿಗೆ ಹೋಗುವುದೆಂದರೆ ನನ್ನ ಪಾಲಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂದ ಹಾಗೆ. ಆದರೆ ಎರಡು ದಿನಗಳಲ್ಲಿ ವಾಪಸ್ ಬರಲೇಬೇಕು. ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಅಪಾಯವಿತ್ತು. ಹಾಗೊಮ್ಮೆ ಜುಲೈ ತಿಂಗಳಿನ ಮೊದಲ ವಾರದಲ್ಲಿ ಊರಿಗೆ ಹೋಗಿದ್ದೆ. ಬಸ್ಸಿಳಿದರೆ ನಿರೀಕ್ಷಿಸಿದ್ದ ಮಳೆ ಇಲ್ಲ ಸರಿ ಆಗ ಆಟೋಗಳು ಇದ್ದರೂ ನಮ್ಮ ಸಂಬಳಕ್ಕೆ ಆಟೋರಿಕ್ಷಾವನ್ನು ಹತ್ತುವಷ್ಟು ಬಲವಿರಲಿಲ್ಲ. ಕೇವಲ ಮೂರು ಕಿಮೀ ಅರ್ಧ ಗಂಟೆಯ ಸಮಯದಲ್ಲಿ ನಡೆದು ಮನೆ ತಲುಪಬಹುದಿತ್ತು. ನಾವು ಒಳಹಾದಿಯಲ್ಲಿ ನಡೆದು ಹದಿನೈದು ನಿಮಿಷಗಳ ಅವಧಿಯಲ್ಲಿ ಮನೆ ತಲುಪುತ್ತದ್ದೆವು.
ಈಗಿನಂತೆ ತೋಟಗಳು ಬೇಲಿಗಳು ಇರಲಿಲ್ಲ ಬದಲಾಗಿ ಗದ್ದೆಯ ಮಧ್ಯೆ, ಕಾಡಿನ ಮಧ್ಯೆ ಹತ್ತಿರದ ಒಳದಾರಿಗಳು ಇದ್ದವು. ಹಾಗೆ ನಡೆದು ಸಾಗುವ ದಾರಿ ಮಧ್ಯೆ ಅಕ್ಕಪಕ್ಕದ ಗದ್ದೆಗಳು ಹಡ್ಲು ಕಿತ್ತ (ಮೊದಲ ಉಳುಮೆ) ನಂತರ ಮಳೆ ಬಾರದೆ ನೀರಿಲ್ಲದೆ ಆಟದ ಮೈದಾನ ಆಗಿದ್ದವು. ಆಗೆಲ್ಲಾ ಕುಡಿಯುವ ನೀರಿಗೆ ತೊಂದರೆ. ನಮ್ಮ ಮನೆಯಲ್ಲಿ ಮಾತ್ರವಲ್ಲದೆ ಊರಿನ ಯಾರ ಮನೆಗೂ ಕರೆಂಟ್ ಬಂದಿರಲಿಲ್ಲ ಈಗ ಟಾರ್ ಆಗಿರುವ ರಸ್ತೆ ಅಂದು ಕ್ಯಾಸರೆ ಮಣ್ಣಿನಿಂದ ಕೂಡಿದ್ದು ಮಳೆಗಾಲದಲ್ಲಿ ಮೊಣಕಾಲಿನವರೆಗೆ ಪ್ಯಾಂಟನ್ನು ಎತ್ತಿ ಸಿಕ್ಕಿಸಿಕೊಂಡು ಕಾಲಿನ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ಟಾರು ರಸ್ತೆ ತಲುಪಿದ ನಂತರ ಎಲ್ಲಿಯಾದರೂ ನೀರು ಸಿಕ್ಕರೆ ಕಾಲು ತೊಳೆದು ಚಪ್ಪಲಿ ಧರಿಸಿ ಪೇಟೆ ಕಡೆಗೆ ತೆರಳಬೇಕಿತ್ತು.
ಕಾಲಕ್ರಮೇಣ ಊರಿಗೆ ಕರೆಂಟ್ ಬಂತು ರೇಡಿಯೋ ಟೇಪ್ ರೆಕಾರ್ಡರ್ ಹಾವಳಿ ಹೆಚ್ಚಿತು. ಜೊತೆಗೆ ಅಲ್ಲೊಂದು ಇಲ್ಲೊಂದು ಕೊಳವೆ ಬಾವಿಗಳು ಉದ್ಭವಿಸಿ ನಿಂತವು. ಊರಿಗೆ ಇದ್ದ ಒಂದೇ ತೆರೆದ ಬಾವಿ ಊರಿಗೆಲ್ಲಾ ಮಾರ್ಚ್ ತಿಂಗಳವರೆಗೆ ನೀರು ಕೊಡುತ್ತಿತ್ತು. ಯಾಕೋ ಅದು ಮೆಲ್ಲಗೆ ಯುಗಾದಿ ಹಬ್ಬ ಬರುವ ಮುನ್ನವೇ ಬತ್ತತೊಡಗಿತು. ಕೊಳವೆ ಬಾವಿಯಿಂದ ಬಂದ ನೀರು ಕಬ್ಬಿಣದ ವಾಸನೆಯಿಂದಾಗಿ ಪಶುಪಕ್ಷಿಗಳಿಗೂ ಬೇಡವಾಯಿತು. ೧೯೮೦ರ ಸುಮಾರಿಗೆ ನಮ್ಮೂರಿಗೆ ಮೂರು ಸಾರ್ವಜನಿಕ ನಲ್ಲಿಗಳು ಬಂದೇಬಿಟ್ಟವು. ಜೊತೆಗೆ ಹಲವರ ಮನೆಯೊಳಗೆ ಹರಿದಾಡಿದ ಕಾವೇರಿ ನಿಧಾನವಾಗಿ ಗ್ರಾಮದ ಎಲ್ಲರ ಮನೆ ಮನೆಯ ಮನಗಳ ಗೆದ್ದು ಬಿಟ್ಡಳು. ಇದ್ದಾಗ ವಾಹನ ತೊಳೆಯಲು ಬಟ್ಟೆಗಳನ್ನು ಒಗೆಯಲು ಮನೆ ಶುದ್ಧೀಕರಿಸಲು ತೊಳೆದ ಪಾತ್ರೆಗಳನ್ನು ಮತ್ತೆ ತೊಳೆಯಲು, ಮಡಿ,ಮೈಲಿಗೆ, ಮನೆ ನಿರ್ಮಾಣ, ಕೈತೋಟ ಎಂದೆಲ್ಲಾ ಚೆಲ್ಲಾಡಿ ಇಲ್ಲದಾಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ಸರಿಸುಮಾರು ಮೂರು ದಶಕಗಳ ಕಾಲ ನಮ್ಮ ಗ್ರಾಮದ ಜನರಿಗಲ್ಲದೇ ಪಕ್ಕದ ಗ್ರಾಮದ ಒಂದಷ್ಟು ಜನರ ಮನೆಯ ಒಳಗೆ ಹರಿದ ಕೊಳವೆ ಬಾವಿಯ ಕಾವೇರಿ ಈಗ ಐದಾರು ವರ್ಷಗಳಿಂದ ಮಳೆಗಾಲದಲ್ಲಿ ಮಾತ್ರ ಹರಿದಾಡಿ ಬೇಸಿಗೆ ಬರುವ ಮುನ್ನ ಚಳಿಗಾಲದಲ್ಲಿ ಮೆಟ್ಟಲು ಏರಲಾರದ ಹಿರಿಯ ನಾಗರೀಕರಂತಾಗಿ ತಿಂಗಳಲ್ಲಿ ಮೂರು ದಿನ ಕಷ್ಟದ ದರ್ಶನ ನೀಡುತ್ತಿದ್ದಾಳೆ. ಈಗಿನ ಹೊಸ ನೀರಗಂಟಿ ಬಂದ ಬಳಿಕ ವಾರದಲ್ಲಿ ಮೂರು ಬಾರಿ ದರ್ಶನ ನೀಡುತ್ತಿದ್ದಾಳೆ. ಬೇಸಿಗೆಯಲ್ಲಂತೂ ಬೆಂಗಳೂರು, ಮೈಸೂರು,ತಮಿಳುನಾಡಿನ ಪಟ್ಟಣಗಳಲ್ಲಿ ಮಾತ್ರ ಕಾವೇರಿ ಹರಿದಾಡುತ್ತಾಳೆ. ಕೊಡಗಿನ ಕೆಲವು ಉಳ್ಳವರ ತೋಟದಲ್ಲಿ ಚೆಲ್ಲಾಡಿ ವನ್ಯಜೀವಿಗಳಿಗೆ ಅಭಯಾರಣ್ಯ ವಾಸಿಗಳಿಗೆ ಮರೀಚಿಕೆಯಾಗುತ್ತಾಳೆ. ಬಾವಿಗಳು ನದಿಗಳು ಕೆರೆಗಳು ತಳ ಕಂಡಿರುತ್ತವೆ. ಕುಡಿಯುವ ನೀರಿಗೆ ಮಡಿಕೇರಿ ವಿರಾಜಪೇಟೆ ಸೋಮವಾರ ಪೇಟೆ ಮೂರೂ ತಾಲ್ಲೂಕಿನಲ್ಲಿಯೂ ಸಹ ತಾಪತ್ರಯ ತಪ್ಪಿದ್ದಲ್ಲ.
ನಮಗೆಲ್ಲ ಬೇಸಿಗೆಯಲ್ಲಿ ಮಳೆ ಬಂದರೆ ಮರಳುಗಾಡಿನ ಓಯಸ್ಸೀಸ್ ಕಂಡಂತಾಗುತ್ತದೆ. ಅದು ಬಿಡದೇ ಎರಡು ಮೂರು ದಿನ ಅಥವಾ ವಾರದೊಳಗೆ ಮೂರು ಮಳೆ ಬಂದರೆ ಬಾವಿಯಲ್ಲಿ, ಕೆರೆಕಟ್ಟೆಗಳಲ್ಲಿ ನದಿಯಲ್ಲಿ ನೀರು ಇರುತ್ತದೆ ಕೇವಲ ಒಂದು ಮಳೆ ಬಂದು ಒಂದೆರಡು ವಾರ ಮಳೆ ಬಾರದೇ ಇದ್ದರೆ ಇದ್ದ ನೀರು ಬಿಸಿಲಿಗೆ ಆವಿಯಾಗಿ ಅಥವಾ ಭೂಮಿ ಕುಡಿದು ಖಾಲಿಯಾಗುತ್ತದೆ. ನಾವೆಲ್ಲರೂ ಮಳೆರಾಯನಿಗೆ ಬಂದರೆ ವಾರದೊಳಗೆ ಮೂರು ಬಾರಿ ಬಾ ಇಲ್ಲದಿದ್ದರೆ ತಡವಾದರೂ ಪರವಾಗಿಲ್ಲ ನಿಧಾನವಾಗಿ ಬಾ ಎಂದು ಅರ್ಜಿ ಹಾಕಬೇಕೆಂದಿದ್ದೇವೆ. "
ದೀಪದ ಬುಡದಲ್ಲಿ ಕತ್ತಲೆ
ಸತ್ಯ ಎಂದಿಗೂ ಬೆತ್ತಲೆ
ಸುಳ್ಳಿಗೆ ಬಣ್ಣದ ಬಟ್ಟೆಗಳ ಸುತ್ತಲೆ"
ಎಂಬಂತೆ ಈ ವರ್ಷ ಮನೆ ಮಠ ತೋಟ ತುಡಿಕೆ ಜನ ಜಾನುವಾರುಗಳನ್ನೆಲ್ಲ ಕೊಚ್ಚಿಕೊಂಡು ಹೋಗುವಂತೆ ಸುರಿದ ಮಳೆ ಕೊಡಗಿನ ಜನರಿಗೆ ನಷ್ಟವನ್ನಲ್ಲದೇ ಬೇರೇನೂ ಕೊಡಲಿಲ್ಲ. ಜೊತೆಗೆ ಕುಡಿಯುವ ನೀರಿನ ಅಭಾವ ತಪ್ಪಲಿಲ್ಲ
ಇನ್ನು ಕೊಡಗಿನ ಹೊರ ಪ್ರದೇಶಗಳಿಗೆ ಅತ್ಯಂತ ಅನುಕೂಲವನ್ನೇ ಮಾಡಿಕೊಟ್ಟಿರುವುದು ಸುಳ್ಳಲ್ಲ . ಕನ್ನಂಬಾಡಿ ಅಣೆಕಟ್ಟು ತುಂಬಿ ತುಳುಕಾಡಿದೆ. ನೀರು ನೀರೆಂದು ಊರು ಕೇರಿಗಳ ಒಂದು ಮಾಡುತ್ತಿದ್ದ ತಮಿಳುನಾಡು ಒಮ್ಮೆ ನೀರು ನಿಲ್ಲಿಸಿರೋ ಎಂದು ಅಕ್ಷರಶಃ ಬೊಬ್ಬೆ ಹೊಡೆದಿದೆ. ಕೇರಳವಂತೂ ಎಣ್ಣೆ ಬಾಂಡ್ಲಿಯಲ್ಲಿ ಬಿದ್ದ ಅಂಬೊಡೆಯಂತಾಗಿತ್ತು ಇಷ್ಟೆಲ್ಲಾ ಆದರೂ ತುಮಕೂರುಅರಸೀಕೆರೆ ಮುಂತಾದೆಡೆಗಳಲ್ಲಿ ಹನಿ ಕೂಡ ಬೀಳಲಿಲ್ಲ ಎಂಬುದು ಅಷ್ಟೇ ಸತ್ಯ ಅಲ್ಲವೇ. ಸರಿ ಕೊಡಗಿನಿಂದ ಹೊರ ಜಿಲ್ಲೆ ರಾಜ್ಯದ ಜನರಿಗಾದರೂ ಉಪಯೋಗವಾಯಿತಲ್ಲ ಎಂದು ನಿಟ್ಟುಸಿರು ಬಿಟ್ಟು ಕಷ್ಟ ಕೋಟಲೆಗಳ ಅನುಭವಿಸುವುದು ನಮ್ಮ ಹಣೆಬರಹವೆಂದು ಗೊಣಗುವುದನ್ನು ಕೊಡಗಿನ ಜನತೆ ಗಾಯತ್ರಿ ಮಂತ್ರ ಎಂದು ತಿಳಿದಂತಿದೆ.
ಇರಲಿ ಜನ ಪ್ರತಿನಿಧಿಗಳಲ್ಲಿ ಹಾಗೂ ಸರಕಾರದಲ್ಲಿ ನನ್ನದೊಂದು ಪುಟ್ಟ ಕೋರಿಕೆ ಇದೆ. ಕೊಡಗಿನಿಂದ ಹೊರದಾಟಿದ ನದಿಗಳಿಗೆ ಅಲ್ಲಲ್ಲಿ ಪುಟ್ಟ ಚೆಕ್ ಡ್ಯಾಂ ಕಟ್ಟಿ ಒಂದಷ್ಟು ಹೊಲ ಗದ್ದೆ ತೋಟ ಪ್ರಾಣಿ ಪಕ್ಷಿಗಳಿಗೆ ಅನುಕೂಲ ಹೆಚ್ಚುವಂತೆ ಮಾಡಿರುವುದು ನಿಜಕ್ಕೂ ಸ್ತುತ್ಯಾರ್ಹ. ಆದರೆ ಅದೇ ಕೆಲಸವನ್ನು ಅತ್ಯಂತ ಕಡಿಮೆ ಅಂತರಗಳಲ್ಲಿ ಕೊಡಗಿನ ಎಲ್ಲಾ ನದಿ ತೊರೆ ಹಳ್ಳಗಳಿಗೆ ಚಿಕ್ಕ ಚೊಕ್ಕ ಚೆಕ್ ಡ್ಯಾಮ್ ನಿರ್ಮಿಸಿ ಅವುಗಳನ್ನು ಮಳೆಗಾಲದ ಹೊರತಾಗಿ ನೀರು ಬತ್ತದಂತೆ ಗಮನವಿರಿಸಿಕೊಂಡು ಕೊಡಗಿನ ಜನತೆಯ ಕೃಷಿ ಹಾಗೂ ಕುಡಿಯುವ ನೀರಿನ ಸರಬರಾಜು ಮಾಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಅನುವಾಗುವಂತೆ ಕೊಡಗಿನ ಪ್ರತಿ ಗ್ರಾಮ ಪಂಚಾಯತಿಯ ನೆರವಿನೊಂದಿಗೆ ಸಾಧ್ಯತೆ ಭಾದ್ಯತೆಗಳನ್ನು ಗಮನಿಸಿ ಕೊಡಗಿನ ನದಿ ತೋಡುಗಳ ನೀರು ವೃಥಾ ಹರಿದು ಹೋಗದೇ ಕೊಡಗಿನ ಜನರ ಬವಣೆಗಳು ಕಳೆದು ನಮ್ಮ ಜನರಿಗೂ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದಲ್ಲಿ ಕೊಡಗಿನ ನೀರು ಕೊಡಗಿನ ಜನತೆಯ ಉಪಯೋಗಕ್ಕೆ ಬಂದಂತಾಗುವುದು. ಹಿಂದೆಲ್ಲಾ ಈ ರೀತಿಯ ವ್ಯವಸ್ಥೆ ಇದ್ದಿತು ಎನಿಸುತ್ತದೆ ಏಕೆಂದರೆ ನಾವು ಚಿಕ್ಕವರಿರುವಾಗ ಅಜ್ಜಿಯ ಮನೆಗೆ ಗದ್ದೆಯ ಮಧ್ಯಭಾಗದಲ್ಲಿದ್ದ ರಸ್ತೆ ಮೂಲಕ ನಡೆದುಕೊಂಡು ಹೋಗಬೇಕಿತ್ತು ಆಗ ಇಂತಹ ಚಿಕ್ಕ ಅಡ್ಡಗಟ್ಟೆಗಳಿಗೆ ಮರದ ಹಲಗೆಯ ಬಾಗಿಲುಮಾಡಿ ಮಳೆಗಾಲದಲ್ಲಿ ಆ ಹಲಗೆಯನ್ನು ತೆಗೆದಿರಿಸುತ್ತಿದ್ದರು. ನಮ್ಮ ಗಡವ ಅಣ್ಣಂದೀರು (ದೊಡ್ಡಮ್ಮನ ಮಕ್ಕಳು) ಅವರ ಅಟಾಟೋಪಗಳನ್ನು ಮನೆಯಲ್ಲಿ ಹೇಳದಂತೆ ನಮ್ಮನ್ನು ಹೆದರಿಸಲೆಂದು ಉದ್ದೇಶ ಪೂರ್ವಕವಾಗಿ ಇಂತಹ ಚೆಕ್ ಡ್ಯಾಂಗಳ ಬಳಿ ಮುಂದೆ ನಡೆದು ಬಿಡುತ್ತಿದ್ದರು. ಆಗ ನಾವು ಅತ್ತು ಕರೆದು ಮನೆಯಲ್ಲಿ ಏನೂ ಹೇಳುವುದಿಲ್ಲ ಎಂದು ಆಣೆ ಪ್ರಮಾಣ ಮಾಡಿದ ಮೇಲೆ ನಮ್ಮ ಕೈ ಹಿಡಿದು ದಾಟಿಸುತ್ತಿದ್ದರು. ಈಗಿನ ಮಕ್ಕಳಿಗೆ ಇದೆಲ್ಲವನ್ನು ಹೇಳಿದರೆ ನಂಬಲಾರರು ಅಲ್ವೇ??
ವೈಲೇಶ ಪಿ ಯೆಸ್ ಕೊಡಗು
೪/೧೨/೨೦೧೮
Comments
Post a Comment