ಸೌಲಭ್ಯಗಳು

ಸೌಲಭ್ಯಗಳು
••••••••♪••••••
ಅದೊಂದು ಹಳ್ಳಿ ತುಂಬಾ ಚೆಂದದ ಹಳ್ಳಿ ಅಲ್ಲಿ ಎಲ್ಲಾ ಜನಾಂಗದ ಜನರು ವಾಸವಿದ್ದರು. ಹಳ್ಳಿಯ ತಲಬಾಗಿಲಲ್ಲಿ ಮಾರುತಿ ಗುಡಿ. ಊರಿನ ಕೊನೆಯ ಭಾಗದಲ್ಲಿ ಇನ್ನೊಂದು ಬಸವನ ಗುಡಿ ಅದರಾಚೆಗೆ ವಕೀಲ ವೆಂಕಟೇಶರಾಯರ ತೋಟದ ಮನೆ. ಮೊದಲು ಊರೊಳಗೆ ವಾಸವಿದ್ದ ರಾಯರು ತಮ್ಮ ವಕೀಲಿಗಿರಿಯಿಂದ ಸಂಪಾದನೆ ಹೆಚ್ಚಿದಂತೆ ಊರ ಹೊರಗಿನ ತಾತಾನ ಕಾಲದಿಂದಲೂ ಪಾಳು ಬಿದ್ದ ಜಮೀನನ್ನು ತೋಟವಾಗಿಸಲು ಹೊರಟಿದ್ದರು‌. ಅಂತೆಯೇ ತೋಟದ ಕಾವಲು ಮತ್ತಿತರ ಕೆಲಸಗಳಿಗೆಂದು ಒಂದು ಮನೆಯನ್ನು ಕಟ್ಟಿದರು ಮನೆ ಕಟ್ಟುವಾಗ ಆಧುನಿಕವಾದ ಮನೆಯನ್ನೆ ಕಟ್ಡಿಸಿ ತಮ್ಮ ವಾಸವನ್ನು ತೋಟದ ಮನೆಗೆ ಬದಲಾಯಿಸಿಬಿಟ್ಟರು. ಅತ್ಯಂತ ಶ್ರಮವಹಿಸಿ ಓದಿ ತಂದೆಯ ಆಸೆಯನ್ನು ಈಡೇರಿಸಿದ ರಾಯರಿಗೆ ತಮ್ಮ ಅಜ್ಜನೆಂದರೆ ಬಲು ಪ್ರೀತಿ.

ರಾಯರು ತನ್ನ ಸಂಸಾರ ತನ್ನ ಮನೆ ಎಂದಷ್ಟೇ ಇರದೆ ತಮ್ಮ ತಾತನ ಮಹದಾಸೆಯಂತೆ ಸಮಾಜ ಸೇವೆ ಮಾಡಬೇಕೆಂಬ ಹಂಬಲವನ್ನು ತುಂಬಿಕೊಂಡು ಬದುಕಿದವರು. ಸರಿ ಮೊದಲಿಗೆ ತಮ್ಮ ಊರಿನ ಶಾಲೆಗಳತ್ತ ಕಣ್ಣು ಹಾಯಿಸಿದವರಿಗೆ ಕೇವಲ ಪ್ರಾಥಮಿಕ ಶಿಕ್ಷಣವಷ್ಟೇ ಇರುವುದು ತಿಳಿದು ಬಂದಿದೆ. ಹಾಗೂ ತಮ್ಮ ಊರಿನಿಂದ ಕೇವಲ ಒಂದು ಕಿಮೀ ದೂರದಲ್ಲಿರುವ ಪುಟ್ಟ ಇನ್ನೊಂದು ಹಳ್ಳಿಯಲ್ಲಿ ಒಂಬತ್ತನೆಯ ಈಯತ್ತೆಯವರಗೆ ಮಾತ್ರ ಓದುವ ಅವಕಾಶ ಇದೆ. ಎನಿಸಿದೆ. ನಂತರ ಮುಂದೆ ಹತ್ತನೆಯ ತರಗತಿ ಓದಬೇಕೆಂದರೆ ಅಲ್ಲಿಂದ ಐದು ಕಿಮೀ ದೂರದಲ್ಲಿರುವ ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಹಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಇನ್ನು‌ ಕಾಲೇಜು ಶಿಕ್ಷಣ ಪಡೆಯಲು ಹತ್ತು ಮತ್ತು ಹನ್ನೆರಡು ಕಿಮೀ ದೂರದಲ್ಲಿರುವ ಎಡ ಮತ್ತು ಬಲಭಾಗದ ಪುಟ್ಟ ಪಟ್ಟಣಗಳಿಗೆ ಹೋಗಬೇಕಿತ್ತು. ಅದರೆ ಬಸ್ಸುಗಳ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಪಡಿಪಾಟಲು ಪಡುತ್ತಿದ್ದರು  ರಾಯರು ಚಿಂತೆಗೆ ಬಿದ್ದರು.

ಮೈಸೂರಿನಲ್ಲಿ ನಮ್ಮ ಬಂಧುಗಳು ಇದ್ದ‌ ಕಾರಣದಿಂದ ನನ್ನ ಓದು ಅನಾಯಾಸವಾಗಿ ಸಾಗಿ ನಾನೊಬ್ಬ ವಕೀಲ ಎಂದು ಕರೆಯಲ್ಪಡುವ ವ್ಯಕ್ತಿಯಾದೆ. ಆದರೆ ನನ್ನಂತಹ ಅದೆಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಓದಲು ಸರಿಯಾದ ವ್ಯವಸ್ಥೆ ಇಲ್ಲದೇ ಹಳ್ಳಿಯಲ್ಲಿ ಹೊಲಗದ್ದೆಗಳಲ್ಲಿ  ದುಡಿಯತ್ತಾ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಾಗದೆ ಕಮರಿಹೋಗಿವೆ. ಇಲ್ಲಿಯವರೆಗೆ ನಡೆದುದೇನೋ ಸರಿ ಇನ್ನು ಮುಂದಾದರು ನೈಜ ಪ್ರತಿಭೆಗಳಿಗೆ ಓದಿ ಉನ್ನತವಾದ ಸ್ಥಾನಮಾನವನ್ನು ಗಳಿಸಲು ನನ್ನಿಂದ ಸಾಧ್ಯವಾಗುವ ಸಹಾಯ ಮಾಡಿದರೆ ಅದಕ್ಕಿಂತ ದೊಡ್ಡ ಸಮಾಜ ಸೇವೆ ಬೇರಿಲ್ಲವೆಂದು ಮನಗಂಡ ರಾಯರು ಅಂದೇ ಮೈಸೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ತೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಕಂಡು  ವಸ್ತು ವಿಷಯವನ್ನು ಮನ ಮುಟ್ಟುವಂತೆ ತಿಳಿಸಿದರು.

ಅಂದು ಆ ಪುಟ್ಟ ಗ್ರಾಮಕ್ಕೆ ಅತಿ ಹತ್ತಿರದ ಕೃಷ್ಣರಾಜನಗರ ಘಟಕದಿಂದ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಎರಡು ಬಸ್ಸುಗಳು ಚಲಿಸುವಂತೆ ಮಾಡಿದರು. ಮುಂದೆ ಎರಡು ನಾಲ್ಕಾಯಿತು ಅದರ ಪ್ರಯೋಜನ ಪಡೆದ ಅದೆಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಶಿಕ್ಷಣ ಪಡೆದು ಉನ್ನತವಾದ ಹುದ್ದೆಗಳನ್ನು ಅಲಂಕರಿಸಿ ಅಂದು ಕರಾರಸಾಸಂಸ್ಥೆಯ ಬಸ್ಸುಗಳು ಈ ಹಳ್ಳಿಯ ಮುಖಾಂತರ ಸಂಚರಿಸಲು ಅನುವು ಮಾಡಿಕೊಟ್ಟಂತಹ ಕರಾರಸಾಸಂಸ್ಥೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವನ್ನು ಎಲ್ಲಕ್ಕಿಂತ ಮಿಗಿಲಾಗಿ ತಾವು ವಿದ್ಯೆಗಾಗಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ನೆನೆದು  ಸ್ವಯಂ ಇಚ್ಛೆಯಿಂದ ಗ್ರಾಮದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ ರಾಯರಿಗೆ ಕೃತಜ್ಞತೆ ಅರ್ಪಿಸುತ್ತಾರೆ.

ಇದೇ ರೀತಿಯಲ್ಲಿ ಕರ್ನಾಟಕದ ಮೂಲೆಮೂಲೆಗಳಲ್ಲಿ  ಸಂಪರ್ಕ ಸಿಗದೆ ದ್ವೀಪದ ಹಾಗಿರುವ ಅದೆಷ್ಟೋ ಹಳ್ಳಿಗಳಲ್ಲಿ ಇಂತಹ ವಕೀಲರು ಅಥವಾ ಶಿಕ್ಷಕರು ಇನ್ನಿತರ ಬುದ್ಧಿವಂತಿಕೆಯ ಜನರು ಇರುವುದರಿಂದ ಅವರ ಸದ್ಬುದ್ಧಿಯ ಪರಿಣಾಮದಿಂದ ಇಂದು ಹಳ್ಳಿಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಕರಾರಸಾಸಂಸ್ಥೆಯ ಬಸ್ಸುಗಳು ಓಡಾಡುತ್ತಾ ಸಹಾಯ ಮಾಡುತ್ತಿವೆ ಎನ್ನಬಹುದು.

ಕೊಡಗಿನ ಕೆಲವು ಹಳ್ಳಿಗಳಿಗೆ ಜೀಪು ಸಹ ಹೋಗಲು ಹಿಂಜರಿಯುತ್ತವೆ. ಆದರೆ ನಮ್ಮ ಕರಾರಸಾಸಂಸ್ಥೆಯ ಬಸ್ಸುಗಳು ಲೀಲಾಜಾಲವಾಗಿ ಹೋಗಿಬರುತ್ತಿವೆ ಅಂತೆಯೇ ಕರ್ನಾಟಕದ ಹಲವು ಭಾಗಗಳಲ್ಲಿ ಖಾಸಗಿ ಬಸ್ಸುಗಳು ಓಡಾಡುತ್ತವೆಯಾದರೂ ಲಾಭಾಂಶ ಗಮನಿಸಿದಾಗ ಆ ಮಾರ್ಗದಲ್ಲಿ ಚಲಿಸಿದರೆ ನಷ್ಟವುಂಟಾಗುತ್ತದೆಯೆಂದು ಖಾಸಗಿ ಬಸ್ಸುಗಳು ಓಡಾಟವನ್ನು‌ ನಿಲ್ಲಿಸಿಬಿಡುತ್ತಿವೆ ಅಂತಹ ಸಂದರ್ಭದಲ್ಲಿ ಸಹ ನಮ್ಮ ಕರಾರಸಾಸಂಸ್ಥೆಯ ಬಸ್ಸುಗಳು ಲಾಭ ನಷ್ಟದ ಸಂಭಾವ್ಯತೆ ಜೊತೆಗೆ ಸಾರ್ವಜನಿಕ ಪ್ರಯಾಣಿಕರ ಸೇವೆ ಸಲ್ಲಿಸಿದ ಉದಾಹರಣೆಗಳು ಸಾಕಷ್ಟಿವೆ.

ಇನ್ನು‌ ಕೊಡಗಿನ ಖಾಸಗಿ ಬಸ್ಸುಗಳು ಸಮಯ ಪಾಲನೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತವೆ ಎನ್ನಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನಾಗಿ ಇಪ್ಪತ್ತನಾಲ್ಕು ವರ್ಷಗಳ ಸೇವೆ ಸಲ್ಲಿಸಿರುವ ನನಗೆ ಖಾಸಗಿ ಬಸ್ಸುಗಳಿಂದಾಗಿ ಮನೆಯಿಂದ ಮತ್ತು ಮನೆಗೆ ಹೋಗಿ ಬರಲು ಅನುಕೂಲವಾಗಿದೆ ಎನ್ನಬಹುದು. ಮಡಿಕೇರಿಯಿಂದ ವಿರಾಜಪೇಟೆ ಕಡೆಗೆ ಕೇವಲ ಬೆರಳೆಣಿಕೆಯಷ್ಟು ಕರಾರಸಾಸಂಸ್ಥೆಯ ಬಸ್ಸುಗಳು ಮಾತ್ರ ಓಡಾಡುತ್ತಿವೆ ಎಂದರೆ ಅತಿಶಯೋಕ್ತಿಯಾಗದು.

ಆದರೆ ಕಳೆದ ಮಳೆ ಜಲಸ್ಪೋಟದ ಸಮಯದಲ್ಲಿ ಮಡಿಕೇರಿ ಹಾಗೂ ಮಂಗಳೂರು ರಸ್ತೆ ಸಂಪೂರ್ಣವಾಗಿ ಬಂದ್ ಆದ ಸಂದರ್ಭದಲ್ಲಿ ಖಾಸಗಿ ಬಸ್ಸುಗಳು ಸುಳ್ಯದ ಕಡೆಗೆ ಮುಖ ಮಾಡಿಯೂ ನಿಲ್ಲಿಸಲಿಲ್ಲ. ಅದೇ ಕೆಲವು ಕಾರು ಜೀಪು ಅಟೋ ಇತ್ಯಾದಿಗಳು ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚು ಹಣ ಪಡೆದು ಸಂಚಾರ ಮಾಡಿರುವುದು ಸುಳ್ಳಲ್ಲ. ಹಾಗೆ ನೋಡಿದರೆ ಇದರಲ್ಲಿ ಪ್ರಯಾಣಿಕರ ಪಾಲು ಕಡಿಮೆಯೇನಿಲ್ಲ. ಕೆಲ ದಿನಗಳ ನಂತರ ಕರಾರಸಾಸಂಸ್ಥೆಯ ಮಿನಿ ಬಸ್ಸುಗಳು ಚಲಿಸಲಾರಂಭಿಸಿದಾಗ ಮಡಿಕೇರಿಯಿಂದ ಸುಳ್ಯಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗುವ ಕಿಮೀನ ಆಧಾರದಲ್ಲಿ ಬಹುಶಃ ೮೦-೯೦ ರೂಪಾಯಿ ಟಿಕೇಟ್ ಅಳವಡಿಸಿದ್ದರು. ಮಾನ್ಯ ಸಾರಿಗೆ ಸಚಿವರು ವೀಕ್ಷಣೆಗೆ ಆಗಮಿಸಿದ ಸಂದರ್ಭದಲ್ಲಿ ಇದನ್ನು ವಿವರಿಸಿದ ಅಧಿಕಾರಿಗಳಿಗೆ ಟಿಕೇಟ್ ದರವನ್ನು ಕಡಿಮೆ ಮಾಡಲು ಸೂಚಿಸಿ ಅತಿ ದೂರದ ಪ್ರಯಾಣಕ್ಕೆ ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಪ್ರಯಾಣ ಮಾಡಲು ಅವಕಾಶ ಕೊಡಮಾಡಿದರು.

ಅಂತೆಯೇ ಪ್ರಯಾಣಿಕರು ಸಹ ಟಿಕೇಟ್ ಎಷ್ಟಾದರೂ ಪರವಾಗಿಲ್ಲ ಬಸ್ಸುಗಳನ್ನು ನಿಲ್ಲಿಸದೇ ಓಡಿಸಲು ಮನವಿ ಮಾಡುತ್ತಿದರು ಹೆಸರು ಹೇಳಲು ಇಚ್ಚಿಸದ ಪ್ರಯಾಣಿಕರೊಬ್ಬರು ಸರ್ ೯೦ ಸಾಲದೆಂದರೆ ನೂರು ರೂಪಾಯಿ ಮೌಲ್ಯದ ಟಿಕೇಟ್ ನೀಡಿದರೂ ನಮಗೆ ಬೇಸರವಿಲ್ಲ ಸರ್ ನಮ್ಮದೇ ಅಗತ್ಯವೆಂದು ಸಾವಿರ ರೂಪಾಯಿ ವೆಚ್ಚದಲ್ಲಿ ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡಿ ಕರ್ತವ್ಯ ನಿರ್ವಹಿಸಲು ಓಡಾಡುತ್ತದ್ದೆವು ಕರಾರಸಾಸಂಸ್ಥೆಯು ೧೦೦ ರೂಪಾಯಿ ಮೌಲ್ಯದ ಟಿಕೇಟ್ ನೀಡಿದರೂ ನಮಗೆ ಇನ್ನೂ ೯೦೦ ರೂಪಾಯಿ ಉಳಿಕೆ ಆದ ಹಾಗೆ ಆದರೆ ಬಸ್ಸುಗಳನ್ನು ಮಂಗಳೂರು ಮಡಿಕೇರಿ ರಸ್ತೆಯ ದುರಸ್ತಿ ಕಾರ್ಯ ಮುಗಿಯುವವರೆಗೂ ನಿಲ್ಲಿಸದಿರಿ ಎನ್ನುತ್ತಿದ್ದರು.

ಅದೊಂದು ಕಾಲವಿತ್ತು ಬಹುಶಃ ೧೯೯೦ ರ ದಶಕದ ಮಧ್ಯಭಾಗದಲ್ಲಿ ಈಗಿನ ಕರಾರಸಾಸಂಸ್ಥೆಯ ಬಸ್ಸುಗಳಿಗೆ ಹೋಲಿಸಿದರೆ ನಿರ್ವಹಣೆ ಹಾಗೂ ಬಸ್ಸುಗಳ ಗುಣಮಟ್ಟ ಕಡಿಮೆ ಇತ್ತು ಎನ್ನಬಹುದು. ಅಂದು ನೂರಾರು ಜನರಿಗೆ ಒಂದು ಬಸ್ಸು ಇದ್ದವು ಇಂದು ಹತ್ತು ಜನರಿಗೆ ಐದು ಬಸ್ಸುಗಳು ಓಡಾಡುತ್ತಿವೆ ಎನ್ನಬಹುದು, ಹಾಸನ ಮಡಿಕೇರಿ ಮಾರ್ಗದಲ್ಲಿ ಕೆಲವು ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟು ಬಸ್ಸಿಗೆ ಎಲ್ಲರೂ ಹತ್ತಿದ ಬಳಿಕ ಗ್ರಾಮದ ಜನತೆ ಕಲ್ಲನ್ನು ತೆಗೆದ ನಂತರ ಬಸ್ಸುಗಳು ಮುಂದಕ್ಕೆ ಚಲಿಸುವಂತಹ ಸಂಕಷ್ಟಗಳು ಇದ್ದವು. ಈಗ ಕರೆದರೂ ಬಾರದಾಗಿದ್ದಾರೆ ಪ್ರಯಾಣಿಕರು.

ಏನೇ ಅದರೂ ಕರಾರಸಾಸಂಸ್ಥೆಯ ಬಸ್ಸುಗಳು ಅಂತರರಾಜ್ಯ ಮತ್ತು ರಾಜಧಾನಿ ಅಥವಾ ಇನ್ಯಾವುದೇ ಹಳ್ಳಗಳಲ್ಲಿ ಕೂಡ ಸಾಧ್ಯವಾದಷ್ಟು ಮಟ್ಟಿಗೆ ಸಮಯಕ್ಕೆ ಸರಿಯಾಗಿ ಬಸ್ಸುಗಳನ್ನು ಓಡಿಸುವ ಸಾಹಸ ಮಾಡುತ್ತಿವೆ ಎನ್ನಬಹುದು. ಅಂದಿನಿಂದ ಇಂದಿನವರೆಗೂ ಕಾರ್ಮಿಕರ ಸಮಸ್ಯೆ ಬೇರೆ ರಾಜ್ಯ ಸರ್ಕಾರಿ ನೌಕರರ ಕೇಂದ್ರ ಸರ್ಕಾರಿ ನೌಕರರ ಸಂಬಳದ ಜೊತೆಗೆ ಕರಾರಸಾಸಂಸ್ಥೆಯ ನೌಕರರ ಸಂಬಳವನ್ನು ( ಮೊದಲನೇಯ ದರ್ಜೆಯ ಅಧಿಕಾರಿಗಳು ಹಾಗೂ ನಾಲ್ಕನೇ ದರ್ಜೆಯ ನೌಕರರು ಎಂಬ ಭೇಧ ಭಾವವಿಲ್ಲದೇ) ಅವಲೋಕಿಸಿದಾಗ ಮನಸ್ಸನ್ನು ಪಿಚ್ಚೆನಿಸದೇ ಇರದು.

ಆದರೆ ಸಾರ್ವಜನಿಕ ಸೇವೆಯಲ್ಲಿ ಕರಾರಸಾಸಂಸ್ಥೆಯು ಅತ್ಯಂತ ಉನ್ನತ ಮಟ್ಟದಲ್ಲಿ ಇದೆಯೆನ್ನಲು ಕರಾರಸಾಸಂಸ್ಥೆಗೆ ಪ್ರತಿವರ್ಷವೂ ದೊರೆಯುತ್ತಿರುವ ಪ್ರಶಸ್ತಿಗಳು ಸಾಕ್ಷಿ ಅಲ್ಲವೇ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಡೆಯಲು ನಮ್ಮ ಕರಾರಸಾಸಂಸ್ಥೆ ಬಳಸುವ ಅತ್ಯಂತ ಹೆಚ್ಚಿನ ಪ್ರಮಾಣದ ಇಂಧನ ಕೂಡ ಅತ್ಯಂತ ಹೆಚ್ಚಿನ ಪ್ರಮಾಣದ ಹಣಕಾಸನ್ನು ಇಂಧನ ತೆರಿಗೆಯ ರೂಪದಲ್ಲಿ ನೀಡಿದರೂ (ಬೇರಾವ ಸರ್ಕಾರ ಸ್ವಾಮ್ಯದ ನಿಗಮ ಮಂಡಳಿಗಳು‌ ಇಷ್ಟು ಮಟ್ಟದ ಇಂಧನ ತೆರಿಗೆ ಕಟ್ಟುವುದಿಲ್ಲ.) ಸಂಸ್ಥೆಯ ನೌಕರರಿಗೆ ಸಂಬಳ ರೂಪದಲ್ಲಿ ದೊರೆಯುವಾಗ ನಿಜಕ್ಕೂ ಈಗಿನ ಕಾಲದಲ್ಲಿ ಇಷ್ಟು ಕಡಿಮೆ ಸಂಬಳದಲ್ಲಿ ಜೀವನ ಸಾಗಿಸುವುದು ಹೇಗೆಂದು ಆಲೋಚಿಸುವಂತಾಗಿದೆ.

   ಹಿಂದಿನ ಮುಖ್ಯ ಮಂತ್ರಿಗಳು ಕರಾರಸಾಸಂಸ್ಥೆಯ ನೌಕರರಿಗೆ ಕೇವಲ ೧೨.೫೦ % ಹೆಚ್ಚಿನ ಪ್ರಮಾಣದ ಕಾರ್ಖಾನೆ ಒಪ್ಪಂದಕ್ಕೆ ಸಹಿ ಹಾಕಲು ಮೀನ ಮೇಷ ಎಣಿಸಿದರು ಮುಂದಿನ ಸರಧಿ ಯಾರದು ಎಂಬುದನ್ನು ರಾಜಕೀಯದ ವರ್ತಮಾನದ ಸ್ಥಿತಿಯನ್ನು ಆಧರಿಸಿ ಹೇಳುವುದಾದರೂ ಹೇಗೆ ಒಟ್ಟಿನಲ್ಲಿ ಎಲ್ಲರನ್ನೂ ಅವರವರ ಮನ ತಲುಪಿಸುವ  ಕರಾರಸಾಸಂಸ್ಥೆಯ ನೌಕರರು ಮನೆಗೆ ಹೋಗಲು‌ ಹಿಂದೇಟು ಹಾಕುವಂತ ಪರಿಸ್ಥಿತಿಯನ್ನು ಸುಧಾರಿಸುವ ಹರಿಕಾರರು ಯಾರೋ ಆ ಶಿವನೇ ಬಲ್ಲ. ಇದೇ ಕಾರಣದಿಂದಾಗಿ ನಾವು ಯಾವುದೇ ರೀತಿಯ ಪ್ರತಿಭಟನೆ ಅಥವಾ ಮುಷ್ಕರ ಮಾಡಿ ಸಾರ್ವಜನಿಕ ಬಂಧುಗಳಿಗೆ ತೊಂದರೆ ಕೊಡುವ ಅಗತ್ಯ ನಮಗಿಲ್ಲ. ನಮಗೂ ಪ್ರತಿ ಸರ್ಕಾರಿ ನೌಕರರಿಗೆ ಕೊಡುವಂತೆ ಸಂಬಳ ಸೌಲಭ್ಯಗಳನ್ನು ಒದಗಿಸಿ‌ಕೊಡಿ ಎಂದು ಕರಾರಸಾಸಂಸ್ಥೆಯ ಎಲ್ಲಾ ಕಾರ್ಮಿಕ ಸಂಘಟನೆಗಳು ಸರ್ಕಾರದ ಮುಂದೆ ಕೋರಿಕೆ ಸಲ್ಲಿಸುತ್ತಿವೆ.ಇನ್ನಾದರೂ ಸಂಬಂಧಿಸಿದವರು ಸೂಕ್ತ ಕ್ರಮಗಳನ್ನು ಕೈಗೊಂಡು ಸಾರ್ವಜನಿಕ ಬಂಧುಗಳಿಗೆ ನೌಕರ ಬಾಂಧವರಿಗೆ ತೊಂದರೆಯಾಗದಂತೆ ನಿರ್ಣಯವನ್ನು ತೆಗೆದುಕೊಳ್ಳುವರೇ ಎಂದು ಕಾಯುವುದು ಕರಾರಸಾಸಂಸ್ಥೆ ನೌಕರರ ಹಣೆಬರಹವಾಗಿದೆ.

ವೈ. ಕೊ
೧೮/೧೩/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು