ದೇವಗೆ ಪತ್ರ

ದೇವಗೆ ಪತ್ರ
~~~~~~~

ಅರಿವು ನೀಡುವ ಮುನ್ನ ಮಕ್ಕಳಿಗೆ
ಅವನ ಕರೆಗೆ ಓ ಗೊಟ್ಟು ಇಕ್ಕಳಕೆ
ಅಮ್ಮನ ಜೊತೆಗೆ ಮಕ್ಕಳ ಸಿಕ್ಕಿಸಿ
ಅವನೆಡೆ ಮರು ನುಡಿಯದೆ ಬಿಕ್ಕಳಿಸಿ
ನಡೆದ ನನ್ನಪ್ಪನಿಗೆ ಪತ್ರ ಬರೆಯಲಾ

ಕರ್ತವ್ಯದ ಕರೆಗೆ ಓಗೊಟ್ಟು ತನ್ನ
ಬಯಕೆಗಳ ಬದಿಗಿಟ್ಟು ಸಮಾಜದ
ಕಿಡಿನುಡಿಗಳಿಗೆ ಬೆನ್ನನ್ನು ಬಿಡಿಸಿಟ್ಟು
ಬಾಳಿ ಬದುಕಿ ಕಣ್ಮುಂದೆ ಕಣ್ಮುಚ್ಚಿದ
ನಮ್ಮಮ್ಮನಿಗೆ ಪತ್ರ ಬರೆಯಲಾ

ಹುಟ್ಟಿದ ಕ್ಷಣವೇ ಅಣ್ಣನ ಪಟ್ಟ ನೀಡಿ
ಮುಟ್ಟಿದ ಮನದ ಕದವ ತೆರೆಯದೇ
ಚಟ್ಟಕ್ಕೆ ಏರಿದ ಸೋದರ ಸೋದರಿಗೆ
ಅಜ್ಜ ಅಜ್ಜಿಯರಿಗೆ ಅತ್ತೆ ಮಾವರಿಗೆ
ಇಳಿದು ಬನ್ನಿರೆಂದು ಪತ್ರ ಬರೆಯಲಾ

ಜಗದೊಳು ಎಲ್ಲರೂ ಬಂಧುಗಳು
ಬನ್ನಿ ಬೆರೆತು ಬಾಳುವ ನಾವುಗಳು
ಎಂದೆನ್ನುತಾ ಒಳಗೊಳಗೆ ಮಸಲತ್ತು
ಮಾಡುವ ನರಮನುಜರ ಸಲಹಿತ್ತು
ಕಾಯೋ ಎಂದು ದೇವಗೆ ಪತ್ರ ಬರೆಯಲಾ

*ವೈಲೇಶ ಪಿ ಯೆಸ್ ಕೊಡಗು*
*ಕರಾರಸಾಸಂಸ್ಥೆ ಮಡಿಕೇರಿ ಚಾಲಕ*
೧೬/೧೧/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು