ವರದಿ ಮ ಮ ಕಾ ೦೧
ದಿನಾಂಕ ೧೧/೧೧/೨೦೧೮ ರಂದು ವಿರಾಜಪೇಟೆ ತಾಲ್ಲೂಕಿನ ಕೆ.ಬೋಯಿಕೇರಿ ಗ್ರಾಮದಲ್ಲಿ ನಡೆದ ಮನೆ ಮನೆ ಕಾವ್ಯಗೋಷ್ಠಿ ಉದ್ಘಾಟನೆ, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ,ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷರಾದ ಮಧೋಷ್ ಪೂವಯ್ಯನವರು ಮಾತನಾಡುತ್ತಾ ಇದೊಂದು ಮಹೋನ್ನತ ಆಶಯವನ್ನು ಹೊಂದಿರುವ ಬಳಗವಾಗಿದೆ ಅತ್ಯಂತ ಯಶಸ್ವಿಯಾಗಿ ಯುವ ಕವಿಗಳನ್ನು ಬೆಳಸುವಂತಹ ಕೆಲಸಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ತುಂಬು ಮನದ ಸಹಕಾರವನ್ನು ನೀಡುತ್ತೇನೆ. ಇಂತಹ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಹರಡುವ ಮುಖಾಂತರ ಮನೆ ಮನೆಯನ್ನು ತಲುಪಲಿ ಎಂದರು.
ಉದ್ಘಾಟಿಸಿದ ಮನೆ ಮನೆ ಕವಿಗೋಷ್ಠಿ ಪಿರಿಯಾಪಟ್ಟಣ ಖ್ಯಾತಿಯ ಮೋಹನ್ ಕಂಪ್ಲಾಪುರ ಇವರು ಮಾತನಾಡುತ್ತಾ ನಾವು ಹಿರಿಯರು ಮಕ್ಕಳಿಂದಲೂ ಕಲಿಯಬೇಕಾದ ವಿಷಯಗಳು ಅನೇಕ ಇವೆ ಕಲಿಕೆ ಎಂಬುದು ನಿತ್ಯ ನಿರಂತರ. ಇನ್ನು ಕೊಡಗಿನಲ್ಲಿ ಮನೆ ಮನೆ ಕಾವ್ಯಗೋಷ್ಠಿ ಬಳಗ ಯಶಸ್ವಿಯಾಗಿ ಮುನ್ನಡೆಯಲಿ ಇದು ಕೂಡ ನಮ್ಮದೇ ಬಳಗವೆಂದುಕೊಳ್ಳುವೆ. ಈ ಎರಡೂ ಬಳಗಗಳು ಸೇರಿ ಒಂದು ಉತ್ತಮ ಕಾರ್ಯಕ್ರಮವನ್ನು ಮಾಡುವಂತಹ ಯೋಜನೆ ಮುಂದೆ ಇದೆ ಎಂದರು.
ಲೇಖಕರ ಬಳಗದ ಅಧ್ಯಕ್ಷರಾದ ಕೇಶವ ಕಾಮತ್ ರವರು "ನೀರು ನುಗ್ಗಿದಾಗ" ಭಾರದ್ವಾಜ್ ಆನಂದ ತೀರ್ಥ ಕಣಿವೆ ಇವರ ಲಲಿತ ಪ್ರಬಂಧಗಳ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡುತ್ತಾ ಪ್ರತಿಯೊಬ್ಬ ಕವಿಗೂ ತನ್ನ ಬರಹ ಅಥವಾ ಕವಿತೆಯನ್ನು ಪ್ರಸ್ತುತ ಪಡಿಸಿದ ಬಳಿಕ ಸಿಗುವ ವಿಮರ್ಶೆ ಎಂಬುದು ಆತನ ಮನಸ್ಸಿಗೆ ಸಿಗುವ ಬಹುಮಾನ ಮತ್ಯಾವ ಪ್ರಶಸ್ತಿ ಕೂಡ ಇಂತಹ ನೆಮ್ಮದಿ ಸಂತಸ ಕೊಡಲಾಗದು ಇಂತಹ ಕೆಲಸವನ್ನು ಮಾಡ ಹೊರಟಿರುವ ಮನೆ ಮನೆ ಕಾವ್ಯಗೋಷ್ಠಿ ಬಳಗಕ್ಕೆ ಒಳಿತಾಗಲಿ ಎಂದರು.
ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ರವರು ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿಯ ಬಗ್ಗೆ ಸುಧೀರ್ಘ ವಿವರಣೆಯನ್ನು ನೀಡುತ್ತಾ ಕವನಗಳ ಬಗ್ಗೆ ಮಾತನಾಡಿದರು.
ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಮ್ಮಣಿಚಂಡ ರಾಜಾ ನಂಜಪ್ಪರವರು ಮಾತನಾಡಿ ಸಾಹಿತ್ಯ ರಚನೆಗೆ ವಿದ್ಯಾಭ್ಯಾಸವಷ್ಟೇ ಮಾನದಂಡ ಅಲ್ಲ. ಅನುಭವದ ಜೊತೆಗೆ ಭಾವನೆಗಳನ್ನು ಅಭಿವ್ಯಕ್ತಿಸುವ ಮೂಲಕ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಬರಹಗಳು ನಿಜವಾದ ಸಾಹಿತ್ಯ ಎಂದರು.
ಸರಸ್ವತಿ ಸ್ವಸಹಾಯ ಸಂಘದ ಅಧ್ಯಕ್ಷರಾದ ಸೌಜನ್ಯ ಸಿದ್ದಯ್ಯನವರು ಸಂಸ್ಥೆಯ ಆಶಯವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಪಿ.ಪಿ. ಸುರೇಶ್ ಶಿಕ್ಷಕರು ಮಾತನಾಡಿ ಇಂತಹ ಪುಟ್ಟ ಗ್ರಾಮದಲ್ಲಿ ಒಂದು ಉತ್ತಮ ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದೆ ಎಂಬುದು ನಮ್ಮ ಗ್ರಾಮಸ್ಥರ ಹೆಮ್ಮೆಯ ವಿಷಯ ಎಂದು ತಿಳಿಸುತ್ತಾ ಆಗಮಿಸಿದ ಎಲ್ಲಾ ಗಣ್ಯರಿಗೆ ನೆರೆದ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸಿ ಬಳಗಕ್ಕೆ ಶುಭ ಹಾರೈಸಿದರು.
ಆ ಬಳಿಕ ಗ್ರಾಮದ ಹಿರಿಯ ಮಹಿಳಾ ನಾಗರೀಕರಾದ ಶ್ರೀಮತಿ ಬೋರಮ್ಮ , ಹಿರಿಯ ನಾಗರೀಕರಾದ ಶ್ರೀ ಟಿ.ಡಿ. ಸೋಮಯ್ಯ, ಹಿರಿಯ ನಾಟಕ ಕಲಾವಿದರು ವಿಘ್ನೇಶ್ವರ ಸೇವ ಸಮಿತಿ ಸಂಸ್ಥಾಪಕರಾದ ಎಮ್ ಡಿ ಹಾಲಪ್ಪ, ಕೊಡಗಿನ ಹಾಕಿ ತರಬೇತುದಾರ ಕೊಡಗಿಗೆ ಪ್ರಪ್ರಥಮವಾಗಿ ಹಾಕಿಯಲ್ಲಿ ಬೆಳ್ಳಿ ಪದಕ ಗಳಿಸಿದ ಖ್ಯಾತಿಯ ವಿನೋದ್ ಕುಮಾರ್ (ಪ್ರದೀಪ್) ಹಾಗೂ ಗ್ರಾಮದ ಮತ್ತೋರ್ವ ನಾಟಕಕಾರ ಗ್ರಾಮದ ದೇವಸ್ಥಾನದ ಅರ್ಚಕರಾದ ಪಿ.ಕೆ. ಶಿವಪ್ಪನವರ ಜೊತೆಗೆ ಕೊಡಗಿನ ಕೆಲವು ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರನ್ನು ಮತ್ತು ಆರೋಗ್ಯದ ಕೊರತೆಯಿದ್ದರೂ ಆಗಮಿಸಿ ಸಂಭ್ರಮಿಸಿದ ಕಂಪ್ಲಾಪುರ ಮೋಹನ್ ಇವರನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ಸಂಗೀತ ಸಂಯೋಜನಾ ಸ್ಟುಡಿಯೋ ಹೊಂದಿರುವ ಮೋಹನ್ ರವರು ವೈಲೇಶ ಪಿ ಯೆಸ್ ಇವರು ಬರೆದ ಭಕ್ತಿಗೀತೆಗೆ ತಾವೇ ಸ್ವತಃ ಸಂಗೀತ ಸಂಯೋಜಿಸಿದ ಗೀತೆಯನ್ನು ಹಾಡುತ್ತಿರುವ ಸಮಯದಲ್ಲಿ ಸತೀಶ್ ಬಿ ಆರ್ ಚಿತ್ರ ಕಲಾವಿದರು ತಮ್ಮ ಕುಂಚದಿಂದ ಅದ್ಭುತ ಗಣಪನ ಚಿತ್ರ ಬಿಡಿಸಿ ಕುಂಚಗಾಯನವಾಗಿಸಿದರು.
ಗ್ರಾಮದ ಕವನ್ ಕುಮಾರ್ ಪಿ ವಿ ಸ್ವಾಗತಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ನಳಿನಾಕ್ಷಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮನೆ ಮನೆ ಕಾವ್ಯಗೋಷ್ಠಿ ಬಳಗದ ಸಂಚಾಲಕರು ವಂದನಾರ್ಪಣೆ ಸಲ್ಲಿಸಿದರು.
Comments
Post a Comment