ತೆರೆ ಎಳೆದಿದೆ

ಚಿತ್ರ ಕವಿತೆ ಸ್ಪರ್ಧೆಗಾಗಿ

ತೆರೆ ಎಳೆದಿದೆ.
~~~~~~~

ಊಹೆಗೂ ನಿಲುಕದೆ ಊರ್ಧ್ವಕ್ಕೇರಿದ ಸಿರಿತನದ
ಸಂಭ್ರಮದಾಸರೆಯು ಆಸೆಗಳಿಗೆ ತೆರೆ ಎಳೆದಿದೆ
ಬಳ್ಳ ತುಂಬಿದ ಬಳುಕುವ ಬಳ್ಳಿಗಳು ಅನುದಿನವೂ
ಅರಳಿ ನಗುವ ಸವಿಮೊಗ್ಗುಗಳ ಬಳಸಿ ಹೊಸಚಿಗುರು
ಹಳೇಬೇರುಗಳೆನೆದೇ ಹಳ್ಳ ಹಿಡಿದಿವೆ

ಆರೂ ಅಳುತಿರುವ ಸದ್ದು ನಮ್ಮೆದೆಗೆ ಗುದ್ದುತಿದೆ
ಕಣ್ಣಂಚಿಗೆ ಸರಿಯುವ ನೀರ ಹನಿಯ ಸದ್ದಡಗಿದೆ
ಪೈಪೋಟಿಗಿಳಿವ ನರರಾಕ್ಷಸರ ಕುಕೃತ್ಯಗಳ ಕಂಡ
ಭೂದೇವಿಯ ತನುವದು ನಡುಗಿ ಗುಡುಗಿ ಒಡಲು
ಬಿರಿದು ನೆತ್ತರ ನದಿ ಮೆಲ್ಲನೆ ಮೊಳಕೆಯೊಡೆದಿದೆ

ಅತ್ತಿತ್ತ ಸರಿಯದ ಬೆಟ್ಟಗಳ ಕೊರೆದಗೆದು ತೆಗೆದ
ಅದಿರುಗಳನೇ ಬಳಸಿ ಮಾಡಿದಾಯುಧಗಳಿಂದ
ಗಿರಿಗುಡ್ಡಗಳನಲುಗಾಡಿಸಿ ಅವಮಾನಿಸಿದ ಪ್ರೀತಿಗೆ
ನೀನಿಟ್ಟ ಹೆಜ್ಜೆಗಳದೇ ಜಾಡು ಹಾಡುತಲಿದೆ ಹಾಡು
ನಿನಗೆ ನೀನೇ ಮೀಸಲಿರಿಸಿದ ಅನುಪಮ ಪಾಡು

ಧರೆಯೊಡಲ ಹೊರಮೈಯ ತುಣುಕುಗಳ ಬಾಚಿ
ತಬ್ಬಿದ ಬುವಿಯು ಬೇರೆ ಮಾಡಿದ ಮಾನವರನು
ತನ್ನೆದೆಯೊಳಗೆ ಸೆಳೆದಿದೆ ಬಿಕ್ಕುಗಳು ದಿಕ್ಕುಗಳಲಿ
ಮಾರ್ದನಿಸಿ ಮುಂದಿನ ಹಾದಿಯಲಿ ಹಾಲಾಹಲವ
ಹರಿಸಿ ನಿನ್ನ ಮನೆಯ ನೀನೇ ಹಾಳುಗೆಡವದಿರೆಂದಿದೆ

ವೈ.ಕೊ.
ವೈಲೇಶ ಪಿ ಯೆಸ್ ಕೊಡಗು
೯/೧೦/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು