ಗಾಲಿ ಕಳಚಿದೆ
ಗಾಲಿ ಕಳಚಿದೆ
~~~~~~~~
ಬದುಕಿನ ಬಂಡಿಯ ಗಾಲಿ ಕಳಚಿದೆ
ಎತ್ತುವವರಿಲ್ಲ ಜೋಡಿಸಲಾಗದಲ್ಲ
ಹಿಂದು ಮುಂದು ಅಡಿಯಿಟ್ಟ ನುಡಿಯಿಂದು
ಆರು ಮೂರಡಿಯ ಖೋಲಿಯ ಬೇಡಿದೆ
ಅಕ್ಕಡಿಯ ಸಾಲಿನ ಫಲದಂತೆ ಬೆಳೆದ
ಬಾಳಿನ ಒಲುಮೆಗೆ ಸಿಲುಕಿದ ತುಕಡಿಗಳು
ತಕ್ಕಡಿಯ ತೆರದಿ ಉಯ್ಯಾಲೆಯಾಡುತಿರಲು
ಯಾರ ಹಾದಿಗೂ ಕಾಯದೇ ಸಾಗಬೇಕಿದೆ
ಮನ ಬಿರಿದಿದೆ ಬರಿದೇ ಮರುಗಿದೆಯಾದರೂ
ನಿಜವನರಿಯಬೇಕಿದೆ ಜಗವಿಂದು ಕರವ
ಜೋಡಿಸದೇ ತರ ತರದ ಚಿತ್ತಾರ ತೆಗೆದು
ಹಂಚಿಕೊಳಲು ತುದಿಗಾಲಲಿ ಕಾದು ನಿಂತಿದೆ
ಬರ ಬಾರದಿತ್ತು ನಾವು ನೋವಿಗೂ ಸಾವಿಗೂ
ಬಾರದ ಮಾನವೀಯತೆಯ ಬರದ ನಾಡಿಗೆ
ಬಂದಾಗಿದೆ ಕೊಡಲಾರದೇ ಬಾಡಿಗೆ ಬಾಡಿ
ಹೋದ ಬಳ್ಳಿಯು ಬಾಳ ಹಳಿಯಿಂದ ಜಾರಿದೆ
ಯಾರೇ ಬರಲಿ ಬರದಿರಲಿ ಜೊತೆ ಜೊತೆಗೆ
ನಡೆದ ಹೆಗಲಿದು ಹಗಲು ಮುಗಿವ ಮುನ್ನ
ಮುಗಿಸಬೇಕಿದೆ ಪಡೆದ ಸಕಲ ಋಣವನ್ನ
ಮುಚ್ಚಿಬಿಡುವೆನು ಈ ರಟ್ಟೆಯಿಂದಲಿ ಮಣ್ಣ
ವೈಲೇಶ ಪಿ ಯೆಸ್ ಕೊಡಗು
೭/೧೦/೨೦೧೮
Comments
Post a Comment