ಅನ್ನ ದೇವರು
ಅನ್ನ ದೇವರಿಗಿಂತ ಇನ್ನ ದೇವರಿಲ್ಲ ಎಂಥಾ ಮಾತಿದು ನಿಜಕ್ಕೂ ಹಸಿದವನ ಬಾಯಿಯಿಂದ ಮಾತ್ರ ಇಂತಹ ಮಾತುಗಳು ಬರಲು ಸಾಧ್ಯ. ಹೊಟ್ಟೆ ತುಂಬಿದವರಿಗೆ ಕಿಸೆಯಲ್ಲಿ ಕಾಸು ಇಣುಕುವವರಿಗೆ ಈ ಮಾತುಗಳು ಕೇವಲ ಅಣುಕು ಸುಮ್ಮನೆ ಕುಲುಕಿ ಕುಲುಕಿ ನಕ್ಕು ಲೇವಡಿ ಮಾಡಿ ಮುಂದೆ ಹೋಗುವುದು ಅಕ್ಕು. ಎಷ್ಟೋ ಜನರು ಒಂದು ಹೊತ್ತಿನ ಕೂಳಿಗೆ ಅದೆಷ್ಟು ಕಷ್ಟಪಡುತ್ತಾರೆ ಎಂದರೆ ಅದನ್ನು ಅನುಭವಿಸಿದ ಅವರಿಗೆ ಮಾತ್ರ ಗೊತ್ತು.
ಅಷ್ಟೇ ಅಲ್ಲ ಜಾತಿ,ಮತ,ಕುಲ,ಗೋತ್ರ, ಧರ್ಮ, ದೌಲತ್ತು, ಗೌರವ, ಪ್ರತಿಷ್ಠೆ,, ಪ್ರಶಸ್ತಿ ಮಾನವ, ಪ್ರಾಣಿ, ಹಣ, ಗುಣ, ಅಧಿಕಾರ, ಜೀತ, ಅಹಂಕಾರ, ಹಮ್ಮು ಬಿಮ್ಮು, ಇವೆಲ್ಲವನ್ನೂ ಮೀರಿ ನಿಂತ ಒಂದು ವಿಚಾರ ಇದ್ದರೆ ಅದು ಹಸಿವು ಮಾತ್ರ. ಅದಕ್ಕೆ ಪರಿಹಾರ ಇದ್ದರೆ ಅದು ಆಹಾರ ಮಾತ್ರ. ಆಯಾ ವರ್ಗದ ಜೀವಿಗಳಿಗೆ ಅನುಗುಣವಾಗಿ ಆಹಾರದ ಶೈಲಿಗಳು ಬೇರೆ ಬೇರೆ ಇರಬಹುದು. ಆದರೆ ಆಹಾರವನ್ನು ಸೇವಿಸಿದೆ ಇರುವ ಪ್ರಾಣಿಗಳು ಮರಗಿಡಗಳು ಇಲ್ಲ ಎನ್ನುವ ಮಾತು ತಮಗೆಲ್ಲರಿಗೂ ತಿಳಿದ ವಿಚಾರ. ಅನ್ನ ಅಥವಾ ಆಹಾರದ ಮುಂದೆ ಮಿಕ್ಕೆಲ್ಲ ವಿಚಾರಗಳು ಗೌಣ. ಉದರ ನಿಮಿತ್ತಂ ಬಹುಕೃತ ವೇಷಂ ಎಂಬುದು ಇನ್ನೊಂದು ಮಾತು ಮತ್ತು ಸತ್ಯ ಕೂಡ ಹೌದು ನನ್ನದೇ ವಿಚಾರ ನಿಮ್ಮ ಮುಂದೆ ೧೯೭೬ ಪೆಬ್ರವರಿ ೧೮ ಬುಧವಾರ ರಾತ್ರಿ ಎಂಟು ಗಂಟೆಗೆ ಊಟ ಮಾಡಿ ಎದೆನೋವು ವಾಂತಿ ಬರುತ್ತಿದೆ ಎಂದು ಎದೆ ಹಿಡಿದುಕೊಂಡು ನಡುಮನೆಯಿಂದ ಜಗಲಿಗೆ ಬಂದ ನಮ್ಮ ತಂದೆಯವರು ಮತ್ತೆ ಮನೆಯೊಳಗಡೆ ಬರದೆ ಹೊಳೆಯ ದಡದ ಉಸುಕು ಮಿಶ್ರಿತ ಮಣ್ಣಿನಲ್ಲಿ ಬೆರೆತು ಹೋದದು ಮತ್ತೆ ಅವರು ತಿರುಗಿ ಬರಲಾರರೆಂಬ ಸತ್ಯ ಕೂಡ ನನಗೆ ಒಂದೆರಡು ವರ್ಷಗಳ ಮುನ್ನ ನಮ್ಮ ಅಜ್ಜಿಯ ಮರಣದಿಂದ ಮನದಟ್ಟಾಗಿತ್ತು.
ಈ ನೆಲದ ಮಣ್ಣಿನಲ್ಲಿ ಬಿತ್ತಿದ ಬೀಜವೆಂದು ಮೊಳೆಯದಿರದು. ಈ ನಾಡಿನ ನಿಜ ರೈತ ಬಿಸಿಲೋ ಮಳೆಯೋ ಎಂದಿಗೂ ಕೈಕಟ್ಟಿ ಕುಳಿತಿರನು. ಆದರೆ ಬಿತ್ತಿದ ಬೀಜ ಮೊಳೆಯಲು ರೈತ ಮೈಮುರಿದು ದುಡಿಯಲು ಗಾಳಿ ಬೆಳಕು ನೀರು ಹೇಗೆ ಅಗತ್ಯವಿದೆಯೋ ಹಾಗೆ ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಟ ಒಬ್ಬ ಗಾಡ್ ಫಾದರ್'ನ ಅಗತ್ಯವಿದೆ. ಆ ವ್ಯಕ್ತಿ ಅಪ್ಪನೇ ಆದರೆ ಅಪ್ಪನ ಮಾತನ್ನು ನಾವು ಕೇಳುವುದಾದರೆ ಅದಕ್ಕಿಂತ ಸೌಭಾಗ್ಯ ಬೇರಿಲ್ಲ. ನಮ್ಮಪ್ಪ ಅಪ್ಪಟ ರೈತ ಜೊತೆಗೆ ಕೊಡಗಿನ ಮೂರು ಪುಟ್ಟ ಪಟ್ಟಣಗಳಲ್ಲಿ ಮಂಡಕ್ಕಿ ವ್ಯಾಪಾರ ಮಾಡುತ್ತಿದ್ದರು. ಉತ್ತಮ ಬೇಟೆಗಾರರು ಆಗಿದ್ದ ಅಪ್ಪ ಯಾರ ಮುಂದೂ ಕೈಯೊಡ್ಡದೇ ಬದುಕುವ ಪಾಠವನ್ನು ನಮ್ಮೊಂದಿಗೆ ಅವರಿದ್ದ ಕೆಲವೇ ವರ್ಷಗಳಲ್ಲಿ ನಮಗೆ ಕಲಿಸಿದ್ದರು.
ಬದುಕಿನ ಬಗ್ಗೆ ಅದಮ್ಯ ಚೇತನ ಚಿಲುಮೆಯಂತಿದ್ದ ಅಪ್ಪ ಅವರ ಹತ್ತನೇ ವರ್ಷ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡು ಅತೀವ ಕಷ್ಟದಲ್ಲಿ ಕೇವಲ ಆರನೇ ಈಯತ್ತೆಯವರೆಗೆ ಓದಿ ನಂತರ ಕಾಯಕವೇ ಕೈಲಾಸ ಎಂಬುದನ್ನು ಮನಗಂಡು ದುಡಿಯುವ ದಾರಿ ಹಿಡಿದವರು. ಅದೇನು ಆ ದೇವನ ನಿಯಮಗಳೋ ನನ್ನ ಐದನೆಯ ತರಗತಿಯ ಪರೀಕ್ಷೆ ಬರೆಯುವ ಮುನ್ನವೇ ಬಾಳಿನ ಪರೀಕ್ಷೆಗೆ ನಮ್ಮನ್ನು ಗುರಿಪಡಿಸಿ ಅಪ್ಪ ನಮ್ಮನ್ನೆಲ್ಲಾ ತಬ್ಬಲಿ ಮಾಡಿ ನಡೆದೇ ಬಿಟ್ಟರು. ಅವರ ಆದರ್ಶ ನಮ್ಮ ಜೊತೆಗಿತ್ತು. ತನ್ನ ತಂದೆ ತಾಯಿಗಳಿಗೆ ಸರಿಯಾಗಿ ಉಣಲು ಉಡಲು ಇಲ್ಲದೇ ಇದ್ದಂತಹ ಪರಿಸ್ಥಿತಿಯನ್ನು ಹತ್ತಿರದಿಂದ ಬಲ್ಲ ನನ್ನ ತಂದೆಯವರು ನನ್ನ ಸತಿಸುತರು ಎಂದಿಗೂ ಹಸಿವೆ ಎಂಬ ನುಡಿಯಾಡಬಾರದು ಎಂಬ ಕಾರಣದಿಂದಾಗಿ ಕನಿಷ್ಠ ಎರಡರಿಂದ ಮೂರು ಗಾಡಿ (ಒಂದು ಗಾಡಿ ಹದಿನಾರು ಚೀಲ, ಒಂದು ಚೀಲ ಒಂಬತ್ತು ಪರೆ, ಒಂದು ಪರೆ ಒಂಬತ್ತು ಸೇರು) ಭತ್ತವನ್ನು ಅನವರತ ಮನೆಯಲ್ಲಿ ಇಟ್ಟಿರುತ್ತಿದ್ದರು.
ಒಕ್ಕಲುತನಕೆ ಬೇಕಾದ ಎಲ್ಲಾ ರೀತಿಯ ಹತ್ಯಾರುಗಳನ್ನು ಸ್ವತಃ ತಾವೇ ತಯಾರಿಸಿಕೊಳ್ಳುವ (ಉದಾಹರಣೆಗೆ ಮರದ ನೇಗಿಲು, ನೊಗ, ಮಂಚ, ಹಗ್ಗಗಳು, ಗುದ್ದಲಿ ಕಾವು, ಮರದ ಇನ್ನಿತರ ವಸ್ತುಗಳನ್ನು) ಕುಶಲತೆಯನ್ನು ನನ್ನ ಅಪ್ಪಾಜಿ ಹೊಂದಿದ್ದರು ಎನ್ನುವುದು ನನಗೆ ಹೆಮ್ಮೆಯ ವಿಚಾರ ೨೦೦೬ರವರೆಗೂ ಈ ಎಲ್ಲಾ ವಸ್ತುಗಳನ್ನು ಬಹಳ ಅಭಿಮಾನದಿಂದ ಅಟ್ಟದಲ್ಲಿ ಇಟ್ಟಿದ್ದೆವು. ನಮ್ಮ ವೃತ್ತಿಗೆ ಅವು ಉಪಯೋಗಕ್ಕೆ ಬಾರದಿದ್ದರೂ ಅಲ್ಲಿರಲಿ ಎಂದು ಇಟ್ಟಿದ್ದೆವು. ಮನೆಯ ಪುನರ್ನಿರ್ಮಾಣ ಕಾರ್ಯವನ್ನು ಕೈಗೊಂಡಾಗ ಇಡಲು ಸ್ಥಳವಿಲ್ಲದೇ ಹಾಗೂ ಅವಕ್ಕೆ ಸುಮಾರು ೩೦ ವರ್ಷಗಳ ಅಯಸ್ಸು ಸಂದಿದ್ದ ಕಾರಣದಿಂದಾಗಿ ಕೆಲವು ನೆನಪಿಗೂ ಕೂಡ ಇಟ್ಟುಕೊಳ್ಳಲು ಆಗದಂತಹ ಸ್ಥಿತಿ ತಲುಪಿದ್ದವು. ೨೦೦೮ ಏಪ್ರಿಲ್ ೧೪ ರಂದು ನಮ್ಮ ಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ಅನೇಕ ವಸ್ತುಗಳ ಜೊತೆಗೆ ಇವು ಕೂಡ ಕಾಣೆಯಾಗಿದ್ದವು.
ಸ್ನೇಹಿತರೇ ವಿಧಿ ನಿಯಮಗಳನ್ನು ನಮ್ಮ ಕರ್ಮಗಳನ್ನು ಜಯಿಸಿ ನಡೆಯಲು ನಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಕರ್ನಾಟಕದ ಕಣ್ಮಣಿ ನಟ ಸಾರ್ವಭೌಮ ಅಣ್ಣಾವ್ರು ಖ್ಯಾತನಾಮರಾದ ವರನಟ ಡಾ|| ರಾಜ್ ಕುಮಾರ್ ರವರ ವನವಾಸದಿಂದ ನಾವು ಅರಿಯಬೇಕಿದೆ. ನರಹಂತಕ ವೀರಪ್ಪನ್ ಅವನ ಸ್ವಾರ್ಥ ಸಾಧನೆಗಾಗಿಯೇ ಇವರನ್ನು ಹೊತ್ತೊಯ್ದು ಕಾಡಿನಲ್ಲಿ ಇಟ್ಟುಕೊಂಡರೂ ಸಹ ವರನಟ ಡಾ|| ರಾಜಕುಮಾರ್ ರವರ ವಿಧಿ ಲಿಖಿತ ಕೂಡ ಅದೇ ಇತ್ತೇನೋ ಎಂದರೆ ತಪ್ಪಾಗಲಾರದು. ಅವರವರ ವಿಧಿ ನಿಯಮಾನುಸಾರ ಏನೇನು ನಡೆಯಬೇಕಿದೆಯೋ ಅದು ನಡೆಯಲೇಬೇಕಲ್ಲವೆ.
ಪ್ರತಿ ಅನ್ನದ ಅಗುಳಿನಲ್ಲಿ ತಿನ್ನುವವನ ಹೆಸರು ಬರೆದಿರುತ್ತದೆಯೆಂದು ಬಲ್ಲವರು ನುಡಿಯುತ್ತಿದ್ದರು. ಸತ್ಯವೋ ಸುಳ್ಳೋ ನನಗೂ ಗೊತ್ತಿಲ್ಲ ಆದರೆ ನಮ್ಮ ಹಣೆಬರಹವೆಂಬುದು ಹೀಗಿದೆ ನೋಡಿ ಒಂದು ಹೊತ್ತಿನ ಊಟ ಮನೆಯಲ್ಲಿ ಆದರೆ ಮಧ್ಯಾಹ್ನದ ಊಟ ಮೈಸೂರು ಸಂಜೆಯ ಊಟ ಬೆಂಗಳೂರು ಕೆಲವೊಮ್ಮೆ ಅನಿರೀಕ್ಷಿತವಾಗಿ ಬೇರೆಲ್ಲೂ ಆಗಿರುತ್ತದೆ. ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಎಲ್ಲರೂ ಬಗೆಬಗೆಯ ಅಪರೂಪದ ಖಾದ್ಯಗಳನ್ನು ತಯಾರಿಸಿ ಮನೆಯ ಎಲ್ಲರೊಂದಿಗೆ ಸೇರಿ ತಿಂದುಂಡು ಹಾಯಾಗಿರುತ್ತಾರೆ. ನಮ್ಮ ಮನೆಯಲ್ಲಿ ನಮ್ಮ ಕರ್ತವ್ಯವನ್ನು ಗಮನದಲ್ಲಿಟ್ಟುಕೊಂಡು ಹಬ್ಬಗಳನ್ನು ಒಂದು ದಿನ ಹಿಂದೆ ಅಥವಾ ಮುಂದೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಇನ್ನೂ ಮುಂದೆ ಹೋಗಿ ಬೇರೆ ಬೇರೆ ಕಾರಣಗಳಿಂದ ಹೊರಗೆ ಇರುವ ಮಕ್ಕಳು ಮನೆಗೆ ಬಂದ ದಿನವೇ ಹಬ್ಬ ಎಂದುಕೊಂಡಿದ್ದೇವೆ.
ಅದೆಷ್ಟೋ ಸಲ ಹೀಗೂ ಆಗಿದೆ. ದಶಕದ ಹಿಂದೆ ಬಹುಶಃ ದೀಪಾವಳಿ ಹಬ್ಬದ ದಿನದಂದು ಮಡಿಕೇರಿಯಿಂದ ಹುಬ್ಬಳ್ಳಿಗೆ ಹೋಗುವ ಬಸ್ಸಿನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯ. ಹಬ್ಬದ ದಿನ ಆಗಿದುದರಿಂದ ಮನೆಯಲ್ಲಿ ಊಟ ಮುಗಿಸಿ ಮಲಗಿದವನಿಗೆ ಎಚ್ಚರವಾದಾಗ ಆಗಲೇ ಅರ್ಧ ಗಂಟೆ ತಡವಾಗಿತ್ತು. ಗಡಿಬಿಡಿಯಲ್ಲಿ ಹಬ್ಬ ಎಂಬುದನ್ನು ಮರೆತು ಸಿಕ್ಕಿದ ಬಸ್ ಹತ್ತಿ ಕರ್ತವ್ಯದ ಸ್ಥಳಕ್ಕೆ ತಲುಪಿದೆ. ಮನುಷ್ಯ ಎಷ್ಟೇ ಭರ್ಜರಿಯಾಗಿ ಊಟ ಮಾಡಿದರೂ ಒಂದು ಹೊತ್ತಿನ ಬಳಿಕ ತುತ್ತಿನ ಚೀಲ ಮತ್ತೆ ಬೇಡುವುದನ್ನು ತಪ್ಪಿಸಲಾಗದು ಅಲ್ವೇ. ಆದರೆ ಆ ದಿನ ಸಂಜೆ ೭:೩೦ ಕ್ಕೆ ಮಡಿಕೇರಿಯಿಂದ ಹೊರಟ ಬಸ್ಸು ಹುಬ್ಬಳ್ಳಿ ತಲುಪುವವರೆಗೂ ಹಬ್ಬದ ಕಾರಣದಿಂದಾಗಿ ಯಾವುದೇ ಹೋಟೆಲ್ ಕೂಡ ತೆರದಿರಲಿಲ್ಲ. ಕೇವಲ ಚಹ ಅಷ್ಟೇ ಕುಡಿದು ಬೆಳಗಿನವರೆಗೂ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿಯನ್ನು ಸ್ವತಃ ತಂದಿಟ್ಟುಕೊಂಡಂತಾಗಿತ್ತು. ಇನ್ನೊಮ್ಮೆ ಕರ್ನಾಟಕ ಬಂದ್ ಸಮಯದಲ್ಲಿ ಹಿಂದಿನ ದಿನವೇ ರಾತ್ರಿ ವೇಳೆ ಮಡಿಕೇರಿ ಬೆಂಗಳೂರು ಬಸ್ ಚಾಲಕನಾಗಿ ಬೆಂಗಳೂರು ಸೇರಿದೆ. ಬಲಾಢ್ಯ ಕಾರಣಕ್ಕಾಗಿ ಬಂದ್ ಇದ್ದ ಕಾರಣ ಬೆಂಗಳೂರು ನಗರದಲ್ಲಿ ಯಾವುದೇ ಹೋಟೆಲ್‌ಗಳು ತೆರೆದಿರಲಿಲ್ಲ. ಮಧ್ಯಾಹ್ನದ ವೇಳೆಗೆ ನಮ್ಮ ಮಡಿಕೇರಿಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡು ಬಂದಿದ್ದ ಚಾಲಕ ಸೋಮಶೇಖರ್ ಅವರು ಒಂದಷ್ಟು ಬಹುಶಃ ಚಿತ್ರಾನ್ನ (ಇರಬೇಕೆನಿಸುತ್ತದೆ) ಮನೆಯಿಂದ ತಯಾರಿಸಿಕೊಂಡು ಬರದೆ ಇದ್ದರೆ ನಾವು ಎಲ್ಲರೂ ಆ ದಿನ ಉಪವಾಸವನ್ನು ಆಚರಿಸಬೇಕಿತ್ತು. ಈಗ ಸೋಮಶೇಖರ್ ರವರು ನಿವೃತ್ತಿ ಹೊಂದಿದ್ದಾರೆ ಎನಿಸುತ್ತದೆ. ಅವರ ನಿವೃತ್ತಿ ಬದುಕು ಹಸನಾಗಲಿ.
೧೯೮೫ ನೆಯ ಇಸವಿಯಲ್ಲಿ ಮೈಸೂರಿನ ಒಂದು ಪ್ಲೈವುಡ್ ಕಂಪನಿಯ ಲಾರಿಯ ಕ್ಲೀನರ್ ಆಗಿ ಕೆಲಸಕ್ಕೆ ಸೇರಿದ ಹೊಸತು. ನಮ್ಮ ಚಾಲಕರಿಗೆ ಇಬ್ಬರು ಪತ್ನಿಯರು ಒಬ್ಬರು ದ.ಕ ಮತ್ತು ಕೊಡಗಿನ ಗಡಿಯಲ್ಲಿ ಮತ್ತೊಬ್ಬರು ಮೈಸೂರು ನಗರದಲ್ಲಿ. ಆ ದಿನ ಮೈಸೂರಿನ ಮನೆಗೆ ಹೋಗುವ ಗಡಿಬಿಡಿಯಲ್ಲಿ ಲಾರಿಯನ್ನು ಕೊಯನಾಡಿನ ಟಿಂಬರ್ ಕಾಟಿಂಗ್ ಯಾರ್ಡ್ ಬಳಿ ನಿಲ್ಲಿಸಿ ಬಸ್ ಹತ್ತಿಬಿಟ್ಟರು. ಲಾರಿ ನಿಲ್ಲಿಸಿದ ಸ್ಥಳಕ್ಕೂ ಕೊಯನಾಡಿಗೂ ಕನಿಷ್ಠ ಸುಮಾರು ಎರಡು ಕಿಮೀ ದೂರವಿದೆ. ಗುರುಗಳು ಲಾರಿ ಬಿಟ್ಟು ಹೋಗಬೇಡ ಎಂದಿದ್ದಾರೆ. ಹತ್ತಿರದಲ್ಲಿ ಎಲ್ಲಿಯೂ ಅಂಗಡಿ ಅಥವಾ ಹೋಟೆಲ್ ಇಲ್ಲ ನಮ್ಮ ಚಾಲಕರು ಮಾರನೆಯ ದಿನ ಮಧ್ಯಾಹ್ನದ ತನಕವೂ ಬರಲೇ ಇಲ್ಲ. ಅಂದರೆ ಅಲ್ಲಿಗೆ ಮೂರು ಹೊತ್ತು ಊಟವಿಲ್ಲದೆ ಮುಗಿದಿದೆ ಪಯಸ್ವಿನಿ ನದಿಯ ನೀರು ಕುಡಿದು ಮೂರು ಹೊತ್ತು ಕಳೆದ ಮೇಲೆ ಹಸಿವಿನಿಂದ ಜ್ಞಾನೋದಯವಾಗಿ ಎರಡು ಕಿಮೀ ದೂರದಲ್ಲಿರುವ ಕೊಯನಾಡಿಗೆ ಕಾಲೆಳೆದುಕೊಂಡು ಬಂದು ತಲುಪುವಷ್ಟರಲ್ಲಿ ಕಣ್ಣೀರು ತುಂಬಿ ಬಂದಿದೆ. ನೇರ ಬಂದವನೇ ಅಂದಿನ ದಿನಗಳಲ್ಲಿ ರೆಕ್ಸ್ ಹೋಟೆಲ್ ಇಟ್ಟಿದ್ದ ಇಬ್ರಾಹಿಮ್ ರವರ ಹೋಟೆಲ್‌ಗೆ ನುಗ್ಗಿದ್ದೇನೆ. ಇಬ್ರಾಹಿಮ್ ರವರು ನನ್ನನ್ನು ಕಂಡೊಡನೆ ನಿನ್ನೆಯಿಂದ ಊಟಕ್ಕೆ ಏಕೆ ಬರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. (ಕೊಯನಾಡಿನಲ್ಲಿ ಲಾರಿ ತಂಗಿದಾಗ ಅವರ ಹೋಟೆಲ್'ನಲ್ಲಿ ನಮ್ಮ ಊಟದ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವು.) ಸರಿ ಊಟ ಮಾಡಿ ವಾಪಸು ಲಾರಿಯಲ್ಲಿ ಬಂದು ಮಲಗಿದೆ. ಆದರೆ ಜಿಜ್ಞಾಸೆ ಈಗ ಆ ಮೂರು ಹೊತ್ತು ನನ್ನ ಹಣೆಬರಹದಲ್ಲಿ ಅನ್ನದ ಋಣ ಇರಲಿಲ್ಲವೆ ಅಥವಾ ನನ್ನ ಹೆಸರು ಬರೆದ ಅಕ್ಕಿ ಅಲ್ಲಿರಲಿಲ್ಲವೇ ಏನೋ ಒಂದು ಬಿಡಿ. ಈಗ ಇಬ್ರಾಹಿಮ್ ರವರು ಈ ಜಗದಲ್ಲಿ ಇಲ್ಲ ಅವರಿಗೆ ತುಂಬಾ ತಡವಾಗಿ ಗಂಡುಮಗ ಹುಟ್ಟಿದ ಆಗ ನಮ್ಮ ಲಾರಿಯಲ್ಲಿ ಅವರ ಮಗನಿಗೆಂದು ಮೈಸೂರಿನಿಂದ ತೊಟ್ಟಿಲು ತಂದು ಕೊಟ್ಟ ನೆನಪಿದೆ. ಅದೀಗ ೩೩-೩೪ ವರ್ಷಗಳ ಮಾತು.
ಆದರೆ ಇಂದಿನ ದಿನಗಳಲ್ಲಿ ಯಾವುದೇ ಸಮಾರಂಭದ ಸಂದರ್ಭಗಳಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಹಾಕಿಸಿಕೊಂಡು ಕಸದ ಬುಟ್ಟಿಗೆ ಸುರಿಯುವ ಅನೇಕರಿಗೆ ನನ್ನದೊಂದು ಮನವಿ ಇದೆ. ಅನ್ನ ಎಂಬುದು ನಿಜಕ್ಕೂ ದೇವರು ಅದೆಷ್ಟೋ ಜನರು ದಿನದಲ್ಲಿ ಒಂದು ಹೊತ್ತಿನ ಕೂಳಿಗೂ ಇಂದಿಗೂ ಕೂಡ ಪರದಾಡುತ್ತಿದ್ದಾರೆ ಅವರ ಕಷ್ಟಗಳನ್ನು ಅರಿಯಲು ಎಲ್ಲರಿಗೂ ಸಾಧ್ಯವಿಲ್ಲ ಏಕೆಂದರೆ ಅನ್ನವನ್ನು ಕಸದ ಬುಟ್ಡಿಗೆ ಸುರಿಯುವ ತಾವುಗಳು ನಿಜಕ್ಕೂ ಚಿನ್ನದ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿರುತ್ತೀರಿ. ಆದರೂ ಕೂಡ ಸಮಯ ಸಂದರ್ಭಗಳಲ್ಲಿ ಕೋಟಿ ರೂಪಾಯಿ ಕಿಸೆಯಲ್ಲಿ ಇದ್ದರೂ ಎಷ್ಟೇ ಹಣ ಕೊಟ್ಟಾದರೂ ಒಂದು ಹಿಡಿ ಅನ್ನ ಸಿಗದೇ ಇರಬಹುದಾದ ಸಂದರ್ಭವು ನಿಮಗೂ ಬರಬಹುದು. ಆ ದಿನ ನಿಮಗೆ ಈ ಬರಹದ ನೆನಪು ಬರಬಹುದು. ಆತ್ಮೀಯ ಬಂಧುಗಳೇ ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಹಾಕಿಸಿಕೊಂಡು ಕಸದ ಬುಟ್ಟಿಗೆ ಎಸೆಯದಿರಿ. ಹಾಂ ಆಹಾರ ಪದಾರ್ಥಗಳನ್ನು ತಯಾರಿಸಿದ ಬಳಿಕ ಬಳಕೆ ಮಾಡದೆ ಹೆಚ್ಚು ದಿನ ಇಡಲಾಗದು ಸಮಾರಂಭಗಳಲ್ಲಿ ಮಿಕ್ಕಿದ ಆಹಾರ ಪದಾರ್ಥಗಳನ್ನು ಕೊಂಡೊಯ್ದು ಅವಶ್ಯಕತೆ ಉಳ್ಳವರಿಗೆ ತಲುಪಿಸುವ ವ್ಯವಸ್ಥೆ ಬೆಂಗಳೂರು ಮೈಸೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಇದೆ. ತಮ್ಮ ಯಾವುದೇ ಸಮಾರಂಭದಲ್ಲಿ ಉಳಿದ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಅರ್ಹರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಿರಿ. ಆ ಮೂಲಕ ರೈತರ ದುಡಿಮೆಯ ಫಲ ವ್ಯರ್ಥವಾಗದಿರಲಿ.
ತಮ್ಮವ
ವೈ.ಕೊ.
ವೈಲೇಶ ಪಿ ಎಸ್. ಕೊಡಗು
೨೮/೧೨/೨೦೧೮
Comments
Post a Comment