ಈ ಪರಿಸ್ಥಿತಿ ಶತ್ರುವಿಗೂ ಬೇಡ

ಈ ಪರಿಸ್ಥಿತಿ ಶತ್ರುವಿಗೂ ಬೇಡ
~~~~~~~~~~~~~~~
ಈಗ್ಗೆ ಮೂವತ್ತು ವರ್ಷಗಳ ಮಾತು ನಮ್ಮೂರಿನ ಜನರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಒಂದು ಸ್ಥಳದಲ್ಲಿ ಬೋರ್ ವೆಲ್ ಕೊರೆಸಲಾಯಿತು. ಉತ್ತಮ ಗುಣಮಟ್ಟದ ಸಿಹಿ ನೀರಿನ ಬುಗ್ಗೆ ಇರುವ ಸ್ಥಳವಾಗಿತ್ತದು ಕನಿಷ್ಠ ಇಪ್ಪತ್ತೈದು ವರ್ಷಗಳ ಕಾಲ ಉತ್ತಮ ದರ್ಜೆಯ ನೀರನ್ನು ಸರಿಸುಮಾರು ಮುನ್ನೂರಕ್ಕೂ ಹೆಚ್ಚು ಮನೆಗಳಿಗೆ ತಲುಪಿಸುತ್ತಿತ್ತು ನಮಗೆ ಆಶ್ಚರ್ಯ ಎನಿಸುತ್ತಿತ್ತು. ಆಗ ಹಿರಿಯರು ಹೇಳಿದ ಮಾತುಗಳು ಈಗಲೂ ಆಶ್ಚರ್ಯಕರ ಎನಿಸುತ್ತದೆ. ಭೂಮಿಯ ಮೇಲ್ಗಡೆ ಹರಿಯುತ್ತಿರುವಂತೆ ಭೂಮಿಯ ಒಳಗಡೆ ಕೂಡ ಒಂದು ತೊರೆ ಹರಿಯುತ್ತಿದೆ. ಇರಬಹುದೇ ಎನಿಸಿತು. ಬೆಂಗಳೂರು ನಗರದ ಮೆಜೆಸ್ಟಿಕ್'ನಲ್ಲಿ ಬಸ್ ನಿಲ್ದಾಣದ ಕೆಳಗೆ ಸುರಂಗಮಾರ್ಗದಲ್ಲಿ ನಿಮಿಷ ನಿಮಿಷಕ್ಕೂ ಅದೆಷ್ಟೋ ಮೆಟ್ರೋ ರೈಲುಗಳು ಚಲಿಸುತ್ತಿರುತ್ತವೆ. ಆದರೆ ಬಸ್ ನಿಲ್ದಾಣದಲ್ಲಿ ಒಂದಿನಿತೂ ಅರಿವಿಗೆ ಬರುವುದಿಲ್ಲ ಎಂದರೆ ಭೂಮಿಯ ಒಳಗಡೆ ತಣ್ಣಗೆ ಇನ್ನೇನಿದೆಯೋ‌ ಬಲ್ಲವರಾರು ಅಲ್ಲವೆ.

ಹಾಗೆಯೇ ಕೊಡಗಿನ ಜೀವ ನದಿ ಕಾವೇರಿಯ ಇತಿಹಾಸ ಹೇಳುತ್ತದೆ ತಲಕಾವೇರಿಯ ಕುಂಡಿಕೆಯಲ್ಲಿ ಜನಿಸಿದ ಕಾವೇರಿ ನದಿಯು ಅಲ್ಲಿಂದ ಮುಂದೆ ಗುಪ್ತಗಾಮಿನಿಯಾಗಿ ಹರಿದು ನಂತರ ಪುಟ್ಟ ತೊರೆಯಂತೆ ಹರಿದು ಭಾಗಮಂಡಲದಲ್ಲಿ ಕಾವೇರಿ ಹಾಗೂ ಕನಿಕೆ ನದಿಗೆ ಸುಜ್ಯೋತಿ ಎಂಬ ನದಿಯು ಗುಪ್ತಗಾಮಿನಿಯಾಗಿ ಸೇರುತ್ತದೆ ಎನ್ನುವರು. ತಲಕಾವೇರಿಯಿಂದ ಕೇವಲ ಒಂಬತ್ತು ಕಿಮೀ ದೂರದಲ್ಲಿರುವ ಭಾಗಮಂಡಲದಲ್ಲಿ ಲೀನವಾಗುವ ಸಂಗಮಕ್ಕೆ ತಲುಪುವಷ್ಟರಲ್ಲಿ ಎರಡೂ ನದಿಗಳು ಗುಪ್ತಗಾಮಿನಿಯರಾಗಿ ಹರಿಯುತ್ತವೆ.

ಹಾಗಾದರೆ ಈ ಗುಪ್ತಗಾಮಿನಿ ಎಂದರೇನು ಅಂದರೆ ಯಾರ ಕಣ್ಣಗೂ ಬೀಳದಂತೆ ಬುವಿಯೊಳಗೆ ಹರಿಯುವುದು ಎಂದರ್ಥ. ಹಾಗಾದರೆ ಭೂಮಿಯ ಮೇಲೆ ಹರಿಯುವ ನದಿಯಂತೆ ಬುವಿಯ ಅಂತರಾಳದಲ್ಲೂ ಕೂಡ ನದಿ ತೊರೆ ಕೆರೆ ಇರಬಹುದು ಎಂದು ನಂಬಬಹುದು ಅಲ್ವೇ. ಬಂಧುಗಳೇ ಬ್ರಹ್ಮಗಿರಿ ಬೆಟ್ಟ ಶ್ರೇಣಿಯ ಮುಂದುವರಿದ ಭಾಗವಾಗಿ ಮಲೆನಾಡು ಸಂಪಾಜೆ ಮಡಿಕೇರಿ ಮಾದಾಪುರ ನಮ್ಮ ಕಾಲೂರು ಹೀಗೆ ಸಾಗಿ ಮುಂದೆ ಸೋಮವಾರಪೇಟೆಯ ಕಡೆಗೆ ಸಾಗಿದೆ.

ಹೀಗೆ ಸಾಗಿದ ಬೆಟ್ಟ ಪ್ರದೇಶಗಳಲ್ಲಿ ಸೋಮವಾರಪೇಟೆ ತಾಲೂಕಿನ ಕೆಲಭಾಗಗಳಲ್ಲಿ ಇತ್ತೀಚಿನ ವರ್ಷಗಳ ಹಿಂದೆ ಭೂಕಂಪದ ಅನುಭವ ಆಗಿದೆ ಮತ್ತು ಅದು ಮಡಿಕೇರಿ ತಾಲೂಕಿನ ಕೆಲವು ಕಡೆಗಳಲ್ಲಿ ಕೂಡ ಅನುಭವಕ್ಕೆ ಬಂದಿದೆ. ಕೊಡಗಿನ ಮಳೆಗಾಲದಲ್ಲಿ ಬೆಟ್ಟ ತಪ್ಪಲುಗಳಲ್ಲಿ ಗುಡ್ಡದ ಮೇಲಿನ ನೀರು ಹರಿದು ಜಲ ಇಳಿಯುವುದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಈ ಬಾರಿಯ ಮಹಾಮಳೆಯ ಸಂದರ್ಭದಲ್ಲಿ ಈ ರೀತಿಯ ಹಲವು ಹತ್ತು ಜಲದ ಕಣ್ಣುಗಳು ತೆರೆದುಕೊಂಡು ನೀರು ಒಸರುತ್ತಿದ್ದವು. ಮಳೆಯು ಮಾನವನ ನಿರೀಕ್ಷೆಗಳನ್ನು ಮೀರಿ ಸುರಿಯತೊಡಗಿದಾಗ ಇವುಗಳ ಗಾತ್ರ ಹೆಚ್ಚಾಗುವುದು ಸಹಜ. ಆದರೆ ಇಂತಹ ಸ್ಥಳಗಳಲ್ಲಿ ವಾಸವಾಗಿದ್ದ ಸ್ಥಳೀಯ ಜನರ ಪ್ರಕಾರ ಮಳೆ ಹೆಚ್ಚಾಗಿ ಸುರಿದ ದಿನಗಳಲ್ಲಿ ಭೂಮಿಯ ಒಳಗಡೆ ಭಾರಿ ಶಬ್ದವು ಬಂದ ನಂತರ ಜಲ ಇಳಿಯುತ್ತಿದ್ದ ಸ್ಥಳಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ( ಅಂದರೆ ದೊಡ್ಡ ತೊರೆಯ ಪ್ರಮಾಣದಲ್ಲಿ) ಹರಿಯಲು ಆರಂಭಿಸಿತು. ಹರಿಯುವ ನೀರಿನ ರಭಸಕೆ ಕಲ್ಲು ಮಣ್ಣಿನ ಸವಕಳಿ ಉಂಟಾಗಿ ನೀರಿನ ಜೊತೆಗೆ ಗಿರಿಗುಡ್ಡಗಳು ಕರಗತೊಡಗಿದವು. ನಮ್ಮೆದುರೇ ನಮ್ಮದೇ ಮನೆ ಬಿರಿದು ಸರಿಯತೊಡಗಿತು.

ಗದ್ದೆ ತೋಟಗಳನ್ನು ಮುಚ್ಚಿ ಮುಳುಗಿಸಿ ಹರಿದ ನೀರು ಹಾದಿ ತಪ್ಪಿ ತನ್ನದೇ ದಾರಿಯನ್ನು ಸೃಷ್ಟಿಸಿತು. ಜರಿದಿದ್ದ ಗುಡ್ಡದಲ್ಲಿ ಬೆಳೆದಿದ್ದ ಬೃಹತ್ ಮರಗಳು ಗಿಡಗಳು ತರಗೆಲೆಯಂತೆ ರಭಸದಿಂದ ತೇಲತೊಡಗಿದವು. ಗಿರಿಗಳ ನಡುವೆ ಸಮತಟ್ಟಾದ ಭೂಮಿಯಲ್ಲಿ ಬೆಳೆ ಬೆಳೆಯುವ ಉದ್ದೇಶದಿಂದ ನಿರ್ಮಿಸಿದ ಗದ್ದೆಗಳಲ್ಲಿ ಮಣ್ಣು ಮರ ಮರಳು ಎಲ್ಲವೂ ಸೇರಿ ಕೆಲವು ಕಡೆಗಳಲ್ಲಿ ಕೆಲವು ಅಡಿಗಳಷ್ಟು ರಾಶಿ ರಾಶಿಯಾಗಿ ಬಿದ್ದು ನಾಟಿ ಮಾಡಿದ ಬೆಳೆ ಕಾಫಿ ಗಿಡಗಳನ್ನು ಮುಚ್ಚಿ ಹಾಕಿತು ತೆಂಗಿನಮರ ಮತ್ತು ಅಡಿಕೆ ಮರಗಳು ಕಂಠದವರೆಗೆ ಮಣ್ಣು ಮುಚ್ಚಿ ನಲುಗತೊಡಗಿವೆ.

ಈ ಮಟ್ಟದಲ್ಲಿ ನೀರು ಹರಿಯಬೇಕೆಂದರೆ ಕೇವಲ ಮಳೆನೀರು ಮಾತ್ರದಿಂದ ಅಸಾಧ್ಯ ಎಂಬ ಭಾವನೆ ನನ್ನದು. ಅಂತರ್ಜಲದ ಜಲಸ್ಪೋಟದ ರೂಪದಲ್ಲಿ ಮಳೆಯ ನೀರಿನ ಜೊತೆಗೆ ಸೇರಿದಾಗ ಮಾತ್ರ ಇದು ಸಾಧ್ಯವಾಗಿದೆ ಎನಿಸುತ್ತದೆ.

ಏನೇ ಆಗಲಿ ಮಳೆ ಬಂತು ಮಳೆಯ ಜೊತೆಗೆ ಏನೇನು ಬೇಕು ಎಲ್ಲವೂ ಬಂತು. ಪ್ರಾಣಹಾನಿಗೆ ಒಳಗಾದವರಿಗೆ ಜಲಪ್ರಳಯ, ಮನೆ ಮಠ ತೋಟ ಕಳೆದುಕೊಂಡವರಿಗೆ ಭೂಕಂಪ, ಮಾತನಾಡುವವರಿಗೆ ಒಂದು ವಿಷಯ, ದೃಶ್ಯ ಮಾಧ್ಯಮದವರಿಗೆ ಕೆಲವು ದಿನಗಳ ಮಟ್ಟಿಗೆ ಸಂಪೂರ್ಣ ಕೊಡಗು ಮುಳುಗಿಹೋಗಿದೆ ಎಂಬುದು ಟಿಆರ್'ಪಿ ತಂದುಕೊಟ್ಟಿದೆ ಎಂದರೆ ತಪ್ಪಲ್ಲ‌. ಆದರೆ ಕೊಡಗಿನ ಅನೇಕರಿಗೆ ಟಿವಿ ನೋಡಿ ನೈಜ ವಿಷಯಗಳನ್ನು ಹೇಗೆ ತಿರುಚುತ್ತಿದ್ದಾರೆ ಎಂಬುದು ಅರಿಯದೇ ಹೋಯಿತಲ್ಲ. ಅಡಿಕೆ ಕಳೆದುಕೊಂಡವರು ಆನೆ ಕಳೆದುಕೊಂಡೆವೆಂದು ಹಲುಬಿದರು. ಪಾಪ ಇದರಲ್ಲಿ ಅವರ ತಪ್ಪಿಲ್ಲ. ಅವರು ಕೊನೆಯದಾಗಿ ಅವರ ಮನೆ ಮಠ ಆಸ್ತಿ ನೋಡಿದಾಗ ಇದ್ದ ಪರಿಸ್ಥಿತಿಯನ್ನು ನೆನೆಸಿಕೊಂಡು ಅದರ ರಭಸದ ಹೊಮ್ಮಿಕೆಯ ಆಧಾರದ ಮೇಲೆ ಎಲ್ಲವೂ ನಾಶವಾಯಿತು ಎಂದುಕೊಂಡಿರಬಹುದು.ಇವರ ಅಭಿಪ್ರಾಯ ಹಾಗೂ ಮಾತುಗಳನ್ನು ಕೇಳಿದ ದೃಶ್ಯ ಮಾಧ್ಯಮಗಳು ಕೂಡ ಅರಿತರಿಯದೆ ಕೊಡಗು ಸಂಪೂರ್ಣ ನಾಶವಾಯಿತು ಎಂದು ಬಿಂಬಿಸಿರಬಹುದು.

ಆದರೆ ಘಂಟಾಘೋಷವಾಗಿ ಹೇಳಬಲ್ಲೆ ಕೊಡಗಿನ ಕೇವಲ ಒಂದು ಪ್ರತಿಶತ ಭಾಗ ಮಾತ್ರ ಕುಸಿದಿದೆ. ಒಂದಷ್ಟು ಜನರ ಮಾನ ಪ್ರಾಣ ಅನ್ನ ಚಿನ್ನ ಕಸಿದಿದೆ. ಮಳೆ ನಿಂತು ತಿಂಗಳುಗಳು ಕಳೆದಿದೆ. ಇನ್ನೊಂದು ಎರಡು ರಸ್ತೆಗಳು ಭಾರಿ ವಾಹನಗಳ ಸಂಚಾರಕ್ಕೆ ತೆರೆದುಕೊಂಡರೆ ( ಈಗಾಗಲೇ ಇಲ್ಲಿ ಮದ್ಯಮ ಗಾತ್ರದ ವಾಹನಗಳು ಚಲಿಸುತ್ತಿವೆ ಹಾಗೂ ಯಾವುದೇ ಪ್ರಮುಖ ಪಟ್ಟಣಗಳ ಸಂಪರ್ಕವನ್ನು ಹೊಂದಬಹುದಾಗಿದೆ.) ಕೊಡಗು ಸಾಮಾನ್ಯ ಸ್ಥಿತಿಗೆ ಬಂದಂತೆ ಆದರೆ ಎಲ್ಲವೂ ಸರಿಹೋಯಿತೆನ್ನಲು ಅಸಾಧ್ಯ ಏಕೆಂದರೆ ಜರಿದುಹೋದ ರಸ್ತೆಯನ್ನು ತೋಟ ಮನೆ ಗದ್ದೆ ಎಲ್ಲವನ್ನೂ ಮತ್ತೆ ಎತ್ತಿ ನಿಲ್ಲಿಸಬಹುದು. ಆದರೆ ಕಳೆದುಕೊಂಡ ಜೀವಗಳನ್ನು ಮತ್ತೆ ಮರಳಿ ತರಲು ಸಾಧ್ಯವೇ. ಅಲ್ಲಿ ನೋಡಿ ಜೋಡುಪಾಲದಲ್ಲಿ ಕಳೆದುಕೊಂಡ ಮಗಳ ಪಾರ್ಥಿವ ಶರೀರ ದೊರಕದೇ ಸಾಂಕೇತಿಕವಾಗಿ ಮಗಳ ಬೊಂಬೆ ಮಾಡಿ ಶವ ಸಂಸ್ಕಾರ ಮಾಡುವ ಪ್ರಯತ್ನ ಮಾಡುತಿದ್ದಾರೆ ಯಾವ ತಂದೆ ತಾಯಿಗಳಿಗೂ ಈ ರೀತಿಯ ಪರಿಸ್ಥಿತಿ ಬರದಿರಲಿ.

*ವೈ.ಕೊ*
*ವೈಲೇಶ ಪಿ ಯೆಸ್ ಕೊಡಗು*
*೧೦/೧೦/೨೦೧೮*

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು