ಸಹಾಯ ಹಸ್ತ ಚಾಚಿರಿ

ಸಹಾಯ ಹಸ್ತ ಚಾಚಿರಿ
~~~~~~~~~~~~
ಸಾಕು ಎನ್ನುವನೆ ಸಾಹುಕಾರನು ಇನ್ನೂ ಬೇಕು ಎನ್ನುವವನೇ ಬಡವಾ ಭಿಕಾರಿ ತನಗೇ ಅಪಕಾರಿ ಸಿರಿವಂತನಾದರೇನು ಭಿಕ್ಷುಕನೇ ತಾನೆ. ಎಂಬಂತಹ ಸ್ಥಿತಿ ಇಂದು ನಮ್ಮದು. ಅಯ್ಯೋ ಮರೆತೇ ಬಿಟ್ಟೆ ನಾವೇನು ಮಳೆಯನ್ನು ಸಾಕು ಎನ್ನಲಿಲ್ಲವೇ ಎಂದೆವು. ಆದರೆ ನಮ್ಮ ಬದುಕಿನ ಬಯಕೆಗಳನ್ನು ಸಾಕು ಎನ್ನಲಿಲ್ಲ ಅಲ್ಲವೇ. ಹೋಗಲಿ ಈಗಲಾದರೂ ಸಾಕು ಎನ್ನುವೆವೆ ಇಲ್ಲ ಎನ್ನಲಾರೆವು. ಹಾಗೆ ಒಂದು ಸುತ್ತು ಕೊಡಗು ಮಹಾಮಳೆಯ ಸಂತ್ರಸ್ತರಿಗೆ ಕಲ್ಪಿಸಿರುವ ತಾತ್ಕಾಲಿಕ ವ್ಯವಸ್ಥೆಯ ಒಳ ಹೊಕ್ಕು ಬರೋಣ ಬನ್ನಿ. ಮಡಿಕೇರಿ ನಗರದ ವ್ಯಾಪ್ತಿಯ ಮೈತ್ರಿ ಭವನದ ಮುಂಬಾಗಿಲಿಗೆ ಬಂದೆವು. ಮುಂಬಾಗಿಲಿಗೆ ಅಡ್ಡಲಾಗಿ ಒಂದು ಪುಟ್ಟ ಮೇಜನ್ನು ಇಟ್ಟಿದ್ದಾರೆ ಅಲ್ಲಿ ಮಹಿಳಾ ಪೋಲಿಸ್ ಹಾಗೂ ಸಹಾಯಕ್ಕಾಗಿ ಮಹಿಳಾ ಹೋಮ್ ಗಾರ್ಡ್ ಒಬ್ಬ ಪುರುಷ ಪೋಲಿಸ್ ಕುಳಿತಿದ್ದಾರೆ. ಒಳಹೋಗುವ ಬರುವ ಸಂತ್ರಸ್ತರ ಕಾರಣ ಇತ್ಯಾದಿ ಬರೆದುಕೊಳ್ಳುತಿದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಹಾಕಲಾದ ಬೆಂಚಿನ ಮೇಲೆ ಕುಳಿತ ದಂಪತಿಗಳ ಮುಖ ಮ್ಲಾನವಾಗಿದೆ. ಅರಳು ಮಲ್ಲಿಗೆಯಂದದಿ ಮುಗುಳುನಗೆ ಚೆಲ್ಲಬೇಕಾದ ಮೊಗವು ನಗುವಿಲ್ಲದೆ ಬಾಡಿದಂತಿದೆ ಅವರನ್ನು ಮಾತನಾಡಿಸುವ ಮನಸ್ಸು ನಿಮಗೆ ಬಾರದು ಅಕಸ್ಮಾತ್ ಮಾತನಾಡಿಸಿದರೆ ಅವರ ಕಂಗಳಲ್ಲಿ ಕಾವೇರಿ ಉಕ್ಕಿ ಹರಿಯಬಹುದೇನೋ. ಬೇಡ ಬಿಡಿ ನಾವು ಒಳ ಹೋಗಲು ಯಾರು ಅಡ್ಡಿಪಡಿಸಲಾರರು ಒಳ ಹೊಕ್ಕೊಡನೇ ನಮಗೆ ಕಾಣಸಿಗುವುದು ಎಲ್ಲವನ್ನೂ ಕಳೆದುಕೊಂಡು ಆಗಸ ದಿಟ್ಟಿಸುತ್ತಾ ಚಾಪೆಯ ಮೇಲೆ ಮಲಗಿರುವ ಎಲ್ಲಾ ವಯಸ್ಸಿನ ಜನರು. ತಮ್ಮ ಸುತ್ತಲೂ ಅವರಿವರು ಕೊಟ್ಟ ಹಲಕೆಲವು ದಿನನಿತ್ಯದ ಬಳಕೆಯ ವಸ್ತುಗಳನ್ನು ಇಟ್ಟುಕೊಂಡು ಕಾವಲುಗಾರರಂತೆ ಮಲಗಿರುವವರು.

ಇದು ಸಾಮಾನ್ಯವಾಗಿ ಗಂಜಿ ಕೇಂದ್ರದ ನೋಟ ಅಲ್ಲಿ ಇನ್ನೊಂದು ನೋಟವಿದೆ ಬಹುಶಃ ಯಾರ ಕಣ್ಣಿಗೂ ಬೀಳದಂತೆ ಬರುವ ಹೋಗುವ ಜನರನ್ನು ನೋಟದಿಂದಲೇ ಎಕ್ಸರೆ ಮಾಡಿ ಏಕೆ ಬಂದಿರಬಹುದು  ಏನು ತಂದಿರಬಹುದು ಕೇವಲ ನೋಡಲು ಮಾತನಾಡಲು ಬರೆಯಲು ಬಂದವರೆ ಅಥವಾ ಹಣದ ರೂಪದಲ್ಲಿ/ವಸ್ತುಗಳನ್ನು ಹಂಚಲು ಬಂದಿರಬಹುದೇ ಎಂದು, ನೀಡಲು ಬಂದವರಾದರೆ ಪ್ರಭಾವ ಹೇಗೆ ಬೀರಬಹುದು ಎಂದು ಅವರೊಳಗೆ ಒಬ್ಬರಂತೆ ನಟಿಸಿ ಆದಷ್ಟೂ ಬಂಧು ಬಳಗದ ಕಡೆಗೆ, ತನ್ನ ಸತಿ ಸುತರನ್ನು ಬೇರೆ ಬೇರೆ ಎಂದು ಬಿಂಬಿಸುವ ಮುಖಾಂತರ ಅತಿ ಹೆಚ್ಚು ಗಿಟ್ಟಿಸಬಹುದೇ ಎಂದು ಉಹಿಸುವವರು ಇದ್ದಾರೆ.

ಸ್ವಾಮಿ ಕೆಲವರಿಗೆ ಕೇವಲ ತಮ್ಮ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿದೆ. ಜಿಲ್ಲಾಡಳಿತ ಒಂದಷ್ಟು ಜನರಿಗೆ ಮೂರು ಹೊತ್ತು  ಊಟದ ಜೊತೆಗೆ ಲಭ್ಯವಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಜೊತೆಗೆ ಕರ್ನಾಟಕದ ಮೂಲೆಮೂಲೆಗಳಿಂದ ಅಲ್ಲದೇ ಹೊರ ರಾಜ್ಯದಿಂದ ಕೂಡ ಸಹಾಯ ಸಹಕಾರ ದೊರಕಿದೆ. ದಾನಿಗಳು ನೀಡಿದ ವಸ್ತುಗಳಲ್ಲದೇ ಕೆಲವು ಮೂಲಭೂತವಾದ ಸೌಲಭ್ಯಗಳನ್ನು ಒದಗಿಸುವ ಕೈಂಕರ್ಯದ ಜೊತೆಗೆ ಮೂರು ಹೊತ್ತು ಊಟ ಹಾಕಬೇಕು. ಒಂದು ಮದುವೆ ಅಥವಾ ಒಂದು ಚಿಕ್ಕ ಕಾರ್ಯಕ್ರಮದಲ್ಲಿ ನೂರು ಜನರಿಗೆ ಒಂದು ಹೊತ್ತಿನ ಊಟ ಹಾಕಬೇಕು ಎಂದರೆ ಅದೆಷ್ಟು ತಯಾರಿ ಅದೆಷ್ಟು ಖರ್ಚು ವೆಚ್ಚ ಮಾಡಬೇಕೆಂದು ದೊಡ್ಡ ಪ್ರಮಾಣದ ಚಿಕ್ಕ ಪ್ರಮಾಣದ ಕಾರ್ಯಕ್ರಮಗಳನ್ನು ಮಾಡಿದ ನಿಮಗೆ  ನಮಗೆ ಅನುಭವ ಇದೆ. ಕಾರ್ಯಕ್ರಮ ಮುಗಿದ ಬಳಿಕ ಹೊಗಳಿ ಹೋಗುವವರು ಕೆಲವರಾದರೆ ಅದು ಸರಿಯಲ್ಲ ಇದು ಸರಿಯಿಲ್ಲ ಎಂದು ಉಂಡ ಹೊಟ್ಟೆ ಮುಂದಿಟ್ಟುಕೊಂಡು ತೆಗಳುವವರಿಗೇನು ಕೊರತೆಯಿಲ್ಲ. ಊಟ ಹಾಕಿದವನಿಗೆ ಅನ್ನಧಾತೋ‌ ಸುಖಃಭವ ಎಂದು ಹರಸುವವರಿಗೂ ಕೊರತೆ ಇಲ್ಲ. ಆಸರೆ ನೀಡಿ ಅಭಯ ನೀಡಿ ಹಸಿವು ನೀಗಿದ ಸರ್ಕಾರದ ಗಂಜಿ ಕೇಂದ್ರದ ಸಧ್ಯದ ಅವಲಂಬಿಗಳು ಉಂಡ ಮನೆಯ ಜಂತಿ ಎಣಿಸುವುದು ಅಲ್ಪ ಅಸಹ್ಯಕರ ಅಲ್ವೇ. ಅದು ಹೇಳಿ ಕೇಳಿ ಸರ್ಕಾರದ ವತಿಯಿಂದ ನಡೆಯುವ ಒಂದು ತಾತ್ಕಾಲಿಕ ವ್ಯವಸ್ಥೆ.
ಅಲ್ಲಿ ಪ್ರೀತಿಯ ಆರೈಕೆ ಅಥವಾ ನಾವು ಬಯಸುವ ಯಾವುದೇ ಪ್ರಾಧಾನ್ಯತೆ ನಮಗೆ ದುರ್ಲಭ. 

ಈಗಾಗಲೇ ಕೊಡಗಿನ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ವಾಸಯೋಗ್ಯ ಮನೆ ನಿವೇಶನದ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿದೆ. ಮತ್ತು ಪ್ರತಿಯೊಂದು ನಿಜ ಸಂತ್ರಸ್ತರಿಗೆ ಅಂದಾಜು ೯.೬ ಲಕ್ಷ ವೆಚ್ಚದ ಮನೆ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದೆ. ಇಂತಹ ಸಂದರ್ಭದಲ್ಲಿ ಅಪಸವ್ಯಗಳನ್ನು ಯಾಕೆ ಮಾಡಿಕೊಳ್ಳುತ್ತಾರೆ ಅರ್ಥ ಮಾಡಿಕೊಳ್ಳಲು ಕಷ್ಟ. ಸರ್ಕಾರದ ವತಿಯಿಂದ ೬ ಲಕ್ಷ ರೂಪಾಯಿ ಮತ್ತು ಇತರೆ ಸಂಘ ಸಂಸ್ಥೆಗಳ ಸಂಘಟನೆಗಳ ಮೂಲಕ ಇನ್ನುಳಿದ ೩.೬ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸುತಿದ್ದಾರೆ.

ದಯವಿಟ್ಟು ಕೊಡಗಿನ ಕೆಲವು ಹಳ್ಳಿಗಳನ್ನು ದತ್ತು‌ ತೆಗೆದುಕೊಳ್ಳುವವರಿದ್ದರೆ ಅಥವಾ ಮನೆಗಳನ್ನು ನಿರ್ಮಿಸಿಕೊಡುವವರಿದ್ದರೆ ಜಿಲ್ಲಾಡಳಿತದ ಗಮನಕ್ಕೆ ತಂದು  ಅವರ ಅನುಮತಿ ಪಡೆದು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಮುಂದುವರಿಯಬೇಕಾಗಿ ಈ ಮೂಲಕ ಸವಿನಯ ಕೋರಿಕೆ.

ವೈಲೇಶ ಪಿ ಯೆಸ್ ಕೊಡಗು
೨೪/೯/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು