ತವರ ನೆನಪು
ತವರ ನೆನಪು
~~~~~~~
ಈ ದಿನ ನಮಗೆ ಒಂದು ಹೊಸ ಅನುಭವ. ಮೊನ್ನೆ ೨೫/೯/೨೦೧೮ ರಂದು ಬೆಳಿಗ್ಗೆ ೭:೩೦ ಗಂಟೆಗೆ ಹಿರಿಯ ಬಹುಭಾಷಾ ಕವಿವರ್ಯರಾದ ನಾಗೇಶ್ ಕಾಲೂರು ಇವರ ಕರೆಗೆ ಕಿವಿಯಾದಾಗ ದಿನಾಂಕ ೩೦/೯/೨೦೧೮ ರಂದು ಇದುವರೆಗೂ ನಾವು ಅನುಭವಿಸಿದ ಕಷ್ಟ ನಷ್ಟಗಳಿಗೆ ಮುಕ್ತಿ ಕೋರಿ ಹಾಗೂ ನಮಗೆ ಸಕಾಲದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸಿದ ಎಲ್ಲವನ್ನೂ ಕಳೆದುಕೊಂಡು ಕತ್ತಲಿನಲ್ಲಿ ನಿಂತಾಗ ಕೈಹಿಡಿದು ಕಾಯಾ ವಾಚಾ ಮನಸ ವಸ್ತುಗಳ ರೂಪದಲ್ಲಿ ಮತ್ಯಾವುದೇ ರೂಪದಲ್ಲಿ ಸಹಾಯಹಸ್ತ ಚಾಚಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಲು ಕಾಲೂರಿನ ಭದ್ರಕಾಳಿ ದೇವಾಲಯದ ಆವರಣದಲ್ಲಿ ಒಂದು ಮಹಾ ಪೂಜೆ ಹಾಗೂ ಧನ್ಯವಾದ ಸಮರ್ಪಣಾ ಕಾರ್ಯಕ್ರಮವನ್ನು ಹಾಗೂ ಮುಂದಿನ ದಿನಗಳಲ್ಲಿ ಗ್ರಾಮಸ್ತರಾದ ನಾವುಗಳು ನಮ್ಮದೇ ಅಭಿವೃದ್ಧಿಗೆ ಏನೇನು ಮಾಡಬೇಕೆಂದು ನಿರ್ಧರಿಸಲು ಸಭೆ ಸೇರಲು ನಿರ್ಧರಿಸಿದ್ದೇವೆ. ತಾವು ಕೂಡ ಕ್ಲುಪ್ತ ಸಮಯಕ್ಕೆ ಆಗಮಿಸಬೇಕೆಂದು ಕೋರಿದರು.
ದಾವಣಗೆರೆಯ ಕವಿಮಿತ್ರ ಪಾಪು ಗುರು ಇವರ ಮುಳ್ಳೆಲೆಯ ಮದ್ದು ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಬೇಕೆಂದು ಅಂದುಕೊಂಡಿದ್ದ ನನಗೆ ನಾಗೇಶ್ ಕಾಲೂರು ಅವರ ಕರೆಗೆ ಸ್ಪಂದಿಸದೇ ಇರಲು ಸಾಧ್ಯವಾಗದೇ ಕಾಲೂರಿನ ಕಡೆಗೆ ದಂಪತಿಗಳು ಹೊರಟೆವು. ಸರಿಸುಮಾರು ಮೂರು ವರ್ಷಗಳ ಕಾಲ ಅದೇ ಊರಿನ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸಿದ ನನಗೆ ಊರಿನ ಬಹುತೇಕ ಜನರು ಪರಿಚಯಸ್ತರೇ ಆಗಿದ್ದರು. ದೇವಾಲಯದ ಬಳಿ ತಲುಪಲು ಇನ್ನೂ ಅರ್ಧ ಕಿಮೀ ದೂರದಲ್ಲಿರುವಾಗಲೇ ದಾರಿ ಸೂಚಿಸುವ ಸಲುವಾಗಿ ಅನೇಕರು ನಿಂತಿದ್ದರು. (ಮುಖ್ಯ ರಸ್ತೆ ಮಳೆಯ ಪ್ರಭಾವದಿಂದಾಗಿ ಕೊಚ್ಚಿ ಹೋಗಿದೆಯಾದ ಕಾರಣ)
ದೇವಾಲಯದ ಒಳಗೆ ಹೋದಂತೆ ಶ್ರೀಯುತ ನಾಗೇಶ್ ಕಾಲೂರು ಇವರು ಊರಿನ ಅನೇಕ ಪ್ರಮುಖರಿಗೆ ಪರಿಚಯಿಸಿದರು. ಅನೇಕ ಪರಿಚಯದವರು ಅವರಾಗಿಯೇ ಬಂಧುಗಳ ರೀತಿಯಲ್ಲಿ ಉಭಯಕುಶಲೋಪರಿ ವಿಚಾರ ವಿನಿಮಯ ಮಾಡಿಕೊಂಡೆವು. ನನ್ನಾಕೆಯಂತು ತವರುಮನೆಗೆ ಹೋದಂತಾಯಿತು ಎಂದರು.
ಮುಂದೆ ಮೈಸೂರಿನಿಂದ ಆಗಮಿಸಿದ ಕೆಲವು ಮಿತ್ರರು ಸ್ಥಳೀಯ ಗಣಪತಿಯವರ ಸಹಕಾರದ ಮೂಲಕ ನೊಂದವರಿಗೆ ಅವರವರ ನಷ್ಟದ ಆಧಾರದ ಮೇಲೆ ಐದು ಸಾವಿರ ಮೂರು ಸಾವಿರ ಎರಡು ಸಾವಿರ ಹೀಗೆ ಪುನರ್ನಿರ್ಮಾಣ ಕಾರ್ಯಕ್ಕಾಗಿ ಧನಸಹಾಯ ನೀಡಿದ ಕಾರ್ಯಕ್ರಮಕ್ಕೆ ನಾವು ಸಾಕ್ಷಿಯಾದೆವು. ಆ ಸಮಯದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀಯುತ ಕೆ ಜಿ ಬೋಪಯ್ಯನವರು ಹಾಗೂ ಮೈಸೂರಿನ ಶಾಸಕರಾದ ಶ್ರೀಯುತ ರಾಮದಾಸ್ ರವರು ಹಾಗೂ ಅನೇಕ ಸ್ಥಳೀಯ ಗಣ್ಯರು ಕೂಡ ಉಪಸ್ಥಿತರಿದ್ದರು.
ರಸ್ತೆ ಸರಿ ಇಲ್ಲದ ಕಾರಣ ಇಷ್ಟು ದಿನ ಆ ಕಡೆಗೆ ಪ್ರಯಾಣ ಅಸಾಧ್ಯವಾಗಿತ್ತು. ಆದರೆ ಇಂದು ಸ್ಥಳೀಯ ನಿವಾಸಿಗಳಿಗೆ ಉಂಟಾಗಿರುವ ನಷ್ಟದ ಪ್ರಮಾಣವನ್ನು ಕಣ್ಣಾರೆ ಕಂಡು ನಿಜಕ್ಕೂ ಸಂಕಟಕ್ಕೆ ಒಳಗಾದೆವು. ಭತ್ತದ ಗದ್ದೆಗಳು ಕಾಫಿ ತೋಟಗಳು ಕುಸಿದಿರುವ ರಸ್ತೆ ಕಂಠ ಮಟ್ಟ ಹೂತಂತಿರುವ ಅಡಿಕೆ ತೆಂಗು ಮುಚ್ಚಿ ಹೋದ ಬಾಳೆಯ ತೋಟ ನಿಜವಾಗಿಯೂ ಸ್ಥಳೀಯರ ಬಾಳನ್ನೇ ಹಾಳುಗೆಡವಿದೆ.
ನಿಮ್ಮವ
ವೈಲೇಶ ಪಿ ಯೆಸ್ ಕೊಡಗು
೩೦/೯/೨೦೧೮
Comments
Post a Comment