ಇಂತಹ ಸಂತತಿ ಬೆಳೆಯಲಿ

ಇಂತಹ ಸಂತತಿ ಹೆಚ್ಚಲಿ
~~~~~~~~~~~~

ಎಂದೋ ಬರೆಯಬೇಕಿದ್ದ ಬರಹವಿದು ಇದೀಗ ಬರೆಯಲು ಕುಳಿತೆ.

ಏನೂ ಕಳೆದುಕೊಳ್ಳದಿದ್ದರೂ ಎಲ್ಲಾ ಕಳೆದುಕೊಂಡೆ ನನಗೆ ಸರ್ಕಾರವೇ ಎಲ್ಲವನ್ನೂ ತಂದುಕೊಡಲಿ ಎಂದವರೊಬ್ಬರನ್ನು ನೋಡುತ್ತಾ ನಿಂತೆ. ಇದ್ದುದೆಲ್ಲಾವನ್ನು ಹೊತ್ತೊಯ್ದ ಮಳೆರಾಯ ನಾನೇನು ತರಲಿಲ್ಲ ಅಲ್ಲಿ ಇದ್ದುದನ್ನು ಇಲ್ಲಿ ಎತ್ತಿಟ್ಟೆ ಇಲ್ಲಿ ಇದ್ದ ಬೀಜಗಳನ್ನು ಅಲ್ಲಿ ನೆಟ್ಟೆ ಮರವಾಯಿತು ಫಲ ನೀಡಿತು ನಮ್ಮಪ್ಪ ಅಮ್ಮರನ್ನು ಸಾಕಿದ ಮರಗಿಡಗಳು ನನ್ನ ಕುಟುಂಬಕ್ಕೆ ಆಧಾರವಾಗಿತ್ತು ಅಂತಹ ಮರಗಿಡಗಳು ಕಣ್ಣೆದುರೇ ಆಧಾರವಿಲ್ಲದಂತೆ ಹೊಳೆಯೊಳಗಿಳಿದು ಅಳಿದು ಹೋಗಿದೆಯೆನ್ನುತಾ ನನ್ನನ್ನು ಸಾಕಿದ ಮೀಯಿಸಿದ ನನಗಾಗಿ ಮೂರ್ಹೊತ್ತು ಬೇಯಿಸಿದ ಅತ್ತಾಗ ರಮಿಸಿ ಸಂತಸದಿ ಕುಣಿಸಿ ಹೊತ್ತು ಹೊತ್ತಿಗೆ ತುತ್ತನಿತ್ತ ಅಮ್ಮ ಕಣ್ಣೆದುರೇ ಕಣ್ಮರೆಯಾದ ಕ್ಷಣಗಳನ್ನು ಕೈ ಕೈ ಹಿಸುಕುತ್ತಾ ನೆನೆಯುವವರನ್ನು ಕಣ್ಣಾರೆ ಕಂಡೆ.

ಹಾಲು ನೀಡಿ ಮಕ್ಕಳನ್ನು ಸಾಕಲು ನೆರವಾದ ಹಸು ಅಂಬಾ ಎನ್ನುತಾ ನದಿಯ ನೀರಲಿ ಸಿಲುಕಿ ದಡದ ಮೇಲೇರಲಾರದೆ ಹರಿದು ಹೋಗಿ ಮುಂದೆ ಮಣ್ಮರೆಯಾದ ಕತೆ ಹೇಳುವ ಗೋವಿಗನ ಕಂಡೆ. ಒಂದಿಡೀ ತಿಂಗಳು ಉತ್ತು ಬಿತ್ತಿ ನಾಟಿ ನೆಟ್ಟು ಕೈಲುಮುಹೂರ್ತ ಹಬ್ಬದ ಖರ್ಚಿಗೆ ಹಣ ಹೊಂದಿಸಲು ಹೋದವ ಹೆಣವಾಗಿ ಬಂದುದನು ಕೇಳಿದೆ. ಈ ಒಂದು ರಾತ್ರಿ ಒಂದೇ ಒಂದು ರಾತ್ರಿ ಕಳೆದುಬಿಡಲಿ ಮಗ ನಾಳೆ ಬೆಳಿಗ್ಗೆ ಚುಮು ಚುಮು ಬೆಳಕಿನಲ್ಲಿ ಪುತ್ತೂರಿನ ಬಂಧುಗಳ ಮನೆಗೆ ತೆರಳಿ ಮಳೆ ಮುಗಿದ ಮೇಲೆ ಬರುವ ಎಂದು ಮಲಗಿ ಕಣ್ಮುಚ್ಚಿದವರು ಕಣ್ತೆರೆಯದೇ ಕೊಳೆತ ಹೆಣವಾಗಿ ಸೈನಿಕರು ಬರಿಗೈಯಲಿ ಎಳೆದು ತಂದು  ಮಣ್ಣು ಮಾಡಿದ ಕಂಡೆ.

ಎಲ್ಲರನ್ನೂ ಕರೆತಂದು ಸುರಕ್ಷಿತ ತಾಣದಲ್ಲಿ ಸೇರಿಸಿ ಇನ್ನೊಂದು ಕೆಲಸ ಬಾಕಿ ಇದೆ ಅದನ್ನು ಮುಗಿಸಿ ಬರುವೆ ಎಂದು ಹೋದವರು ಹೊಳೆಯೊಳಗಿನ ಕೆಸರು ಮಿಶ್ರಿತ ನೀರಿನಲ್ಲಿ ಉರುಳಿ ಬಂದ ಮರದ ಕೊಂಬೆಗೆ ತಾನುಟ್ಟ ಬಟ್ಟೆಯ ಒಂದು ಭಾಗ ಸಿಲುಕಿ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದೇ ಜೀವ ಕಳೆದುಕೊಂಡ ಸಹೃದಯಿಯನ್ನು ಕಂಡೆ ಜವರಾಯನ ಬಂಟರಿಗೆ ಕರುಣೆಯೆ ಇಲ್ಲವೆಂಬುದನ್ನು ಪ್ರತ್ಯಕ್ಷವಾಗಿ ಕಂಡಂತಾಯಿತು.

ಗಂಜಿ ಕೇಂದ್ರದಲ್ಲಿ ಸುಮ್ಮನೆ ಕುಳಿತು ಅಯ್ಯೋ ನನ್ನ
ಮನೆ ಮಠ ತೋಟ ತುಡಿಕೆ ಹಸು ನಾಯಿ ಕೋಳಿ ಹಂದಿ ಮುಳುಗಿ ಹೋಗಿದೆ ಮಗು ಅಮ್ಮ ತಮ್ಮ ಎಲ್ಲರೂ ಹೋದರು ಎಲ್ಲವನ್ನೂ ಸರ್ಕಾರ ತಂದು ಕೊಡಲಿ ನನ್ನ ಮೂಲ ವಾಸವಿದ್ದ ಸ್ಥಳವು ಈಗ ವಾಸಯೋಗ್ಯ ಅಲ್ಲವೆಂದೂ ನನಗೆ ಎನಿಸುತ್ತಿದೆ ಅದರ ಬೆಲೆಯ ದುಪ್ಪಟ್ಟು ಹಣ ಅಂದರೆ ಕನಿಷ್ಠ ಇಪ್ಪತ್ತು ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಹಲುಬುವವರು ಇದಾರೆ ಎಂಬುದು ಸತ್ಯ ಎನಿಸುತ್ತದೆ. ಆದರೆ ತಮ್ಮ ಅಜ್ಜ ಬಿಜ್ಜಂದೀರು ಬಾಳಿದ ಜಾಗೆಯಿದು ಅವರು ಕಟ್ಟಿದ ಮನೆಯಿದು ಕೊಚ್ಚಿ ಹೋದರೇನಾಯಿತು ನನಗಿನ್ನು ರಟ್ಟೆಯಲಿ ಬಲವಿದೆ ಹುಟ್ಟುವ ಮುಂಚೆ ಏನೂ ಇರಲಿಲ್ಲ.

ಅಂದಿಗಿಂತ ಹೆಚ್ಚಿನ ಪ್ರಮಾಣದ ಸೌಕರ್ಯಗಳು ಈಗ ಇವೆ ಸರ್ಕಾರದ ಸಹಾಯ ದೊರೆಯುವ ತನಕ ಕಾಯುವ ಬದಲಿಗೆ ಅರೆಬಿದ್ದ ಗಿಡಗಳನ್ನು ಎತ್ತಿ ನಿಲ್ಲಿಸುವೆ ಅಪ್ಪ ಕಟ್ಟಿದ ಮನೆ ಹಾವು ಚೇಳುಗಳ ಆವಾಸಸ್ಥಾನ ಆಗದಂತೆ ಕಾಪಾಡಿಕೊಳ್ಳುವೆ ಎಂದು ಗಂಜಿ ಕೇಂದ್ರದ ಹಂಗನ್ನು ತೊರೆದು ಕುಲ ಪರಂಪರೆಯ ತಾಣದ ಕಡೆಗೆ ನಡೆದವರ ಕಂಡೆ.

ತಾವೇ ಕಷ್ಟಕರ ಪರಿಸ್ಥಿತಿ ಹೊಂದಿದ್ದರೂ ಅನ್ಯರ ಕಷ್ಟಕ್ಕೆ ಮರುಗುವವರ ಕಂಡೆ ಅಂತಹ ಜನಗಳ ಬಗ್ಗೆ ಒಂದೆರಡು ಮಾತು ಬರೆಯಬೇಕಿದೆ. ಸರಿಸುಮಾರು ಅರವತ್ತು ವರ್ಷಗಳ ಕಾಲ ಕೊಡಗಿನ ಪತ್ರಿಕೋದ್ಯಮದಲ್ಲಿ ತಾನು ಬೆಳೆದು ಅನ್ಯರನ್ನು ಪತ್ರಕರ್ತರನ್ನಾಗಿ ಬೆಳೆಸಿದ ಶಕ್ತಿ ಪತ್ರಿಕೆಯು ಮಾಹಾಮಳೆಯ ದಿಕ್ಕು ತಪ್ಪಿದ ಜಲದ ಜಾಲಕ್ಕೆ ಸಿಲುಕಿ ೫೦ ಲಕ್ಷ ಬೆಲೆ ಬಾಳುವ ನವೀನ ಮಾದರಿಯ ಯಂತ್ರದ ಸಮೇತ ಸುಮಾರು ೯೦ ರಿಂದ ೯೫ ಲಕ್ಷದಷ್ಟೂ ನಷ್ಟಕ್ಕೆ ತುತ್ತಾಗಿದೆಯಾದರೂ ರೋಟರಿ  ಕ್ಲಬ್ ಜೊತೆಗೂಡಿ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.

ಇನ್ನೂ ಮುಂದೆ ಹೋದರೆ ಮಾದಾಪುರ ಮಡಿಕೇರಿ ರಸ್ತೆಯ ಪುನರ್ನಿರ್ಮಾಣ ಕಾರ್ಯಕ್ಕಾಗಿ ತಮ್ಮ ಎಸ್ಟೇಟ್'ನ ರಸ್ತೆ ಬದಿಯ ಮೂರು ಏಕರೆ ಜಾಗವನ್ನು ಬಿಟ್ಟು ಕೊಟ್ಟ ಸಿಂಕೋನ ಹಾಗೂ ಬಾಲಾಜಿ ಎಸ್ಟೇಟ್ ಮಾಲೀಕರಾದ ಅಶೋಕ್ ಕುಮಾರ್ ಶೆಟ್ಟಿಯವರು ಉಳ್ಳವರಿಗೆ ದಾರಿದೀಪವಾಗಿದ್ದಾರೆ. ತಮಗೆ ಇರುವ ಮೂರು ಏಕರೆ ಜಾಗದಲ್ಲಿ ಎರಡು ಏಕರೆ ಜಾಗವನ್ನು ಸಂತ್ರಸ್ತರಿಗೆ ಮನೆ ಕಟ್ಟಿಕೊಂಡು ವಾಸವಾಗಿರಲು  ಬಿಟ್ಟು ಕೊಡುವೆ ಎಂದು ಮಲೆ ಕುಡಿಯರ ಪೂಣಚ್ಚ ಮತ್ತು ರತಿ ದಂಪತಿಗಳು ಹೇಳುವ ಜೊತೆಗೆ ಯಾರಾದರೂ ಸರಿಯೇ ನಮಗೊಂದು ಹೆಣ್ಣು ಮಗುವನ್ನು ದತ್ತು ನೀಡಿರಿ ನಾವು ಆ ಮಗುವನ್ನು ಉತ್ತಮ ಪ್ರಜೆಯಾಗಿಸುತ್ತೇವೆ ಎನ್ನುವ ಇವರನ್ನು ಏನೆಂದು ಕರೆಯಬಹುದು ಅಲ್ಲವೇ. ಇಂತಹ ಸಂತತಿ ಹೆಚ್ಚಾಗಲಿ ಎನ್ನುವ ಹೊರತು ಬೇರೆ ಮಾತುಗಳು ಬಾರದಾಗಿದೆ.

ತಮಗೆ ಲಭ್ಯವಿರುವ ಹತ್ತಿರದ ಗಂಜಿ ಕೇಂದ್ರದಲ್ಲಿ ಆ ಕ್ಷಣದಲ್ಲಿ ಅಗತ್ಯವಿರುವ ಸೇವೆಯನ್ನು ಮಾಡುತ್ತಾ ಗಂಜಿ ಕೇಂದ್ರದಲ್ಲಿ ಇದ್ದ ಜನರಿಗೆ ಸಾಂತ್ವನ ಹೇಳುತ್ತಾ ಮನಸ್ಸು ಮುದುಡಿದ ಮಕ್ಕಳಿಗೆ ಉತ್ಸಾಹ ತುಂಬುತ್ತಾ   ಅಲ್ಲಿನ ಸಂತ್ರಸ್ತರನ್ನು ತಮ್ಮ ಕೈಲಾದ ಮಟ್ಟಿಗೆ ಸಂತೈಸಿದ ಅನೇಕ ಸ್ವಯಂ ಸೇವಕ ವರ್ಗ, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕ ಬಂಧುಗಳು, ರಜೆಗೆಂದು ಬಂದ ವೀರ ಯೋಧರು, ರಾಜ್ಯದ, ದೇಶದ ಮೂಲೆಮೂಲೆಗಳಿಂದ ಸಹಾಯ ಹಸ್ತ ಚಾಚಿದ ಎಲ್ಲಾ ಸಹೃದಯಿ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರುವೆ. ಅಂತಹ ಜನಗಳ ನಡುವೆ ಶಿಕ್ಷಕರಲ್ಲಿ ಒಬ್ಬರಾದ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೊಡಗು ಜಿಲ್ಲೆಯ ಸಮರ್ಥ ಕನ್ನಡಿಗರು ಸಂಚಾಲಕರು ಆದ ಶ್ರೀಮತಿ ಜಯಲಕ್ಷ್ಮಿ ಕುಮಾರ್ ಇವರನ್ನು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವರು ರೋಟರಿ ಕ್ಲಬ್ ನ ಅತ್ಯಂತ ಹೆಮ್ಮೆಯ ಪ್ರಶಸ್ತಿಯಾದ ನೇಷನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಿದೆ. ಇವರಗೂ ಕೂಡ ನನ್ನ ಮನಃಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ.

ಇನ್ನೂ ಇಂತಹ ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಣಿಗೆ ಕಾಣದೇ ಕಿವಿಗೆ ಕೇಳದೆ ದೃಷ್ಟಿಯಿಂದ ಹೊರಗೆ ನಡೆದಿವೆ ನಡೆಯುತ್ತಿವೆ ಉತ್ತಮ ಕಾರ್ಯಗಳನ್ನು ನಿರ್ವಹಿಸಿದ ಇವರಿಗೆಲ್ಲಾ ನನ್ನ ಮನಃಪೂರ್ವಕವಾದ ವಂದನೆಗಳು ಅಭಿನಂದನೆಗಳು ಅಭಿವಂದನೆಗಳು.
ಈ ಪುಟ್ಟ ಬರಹಕ್ಕೆ ಸಹಾಯ ನೀಡಿದ ಎಲ್ಲರಿಗೂ ಧನ್ಯವಾದಗಳು

ತಮ್ಮವ
ವೈಲೇಶ ಪಿ ಯೆಸ್ ಕೊಡಗು
೨೭/೯/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು