ಅಂದು-ಇಂದು-ಮುಂದು ಭಾಗ ೦೩

ಅಂದು-ಇಂದು -ಮುಂದು
~~~~~~~~~~~~~
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಆಹಾ ಈ ಮಾತುಗಳು ಅದೆಷ್ಟು ಸತ್ಯ ಎಂದು ಕೊಡಗಿನ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಎನಿಸುತ್ತದೆ.

ನಿಜ ಅಜ್ಜನ ಕಾಲದಿಂದಲೂ ಉಣಲು ಉಡಲು ಇಲ್ಲದೇ ಕೂಲಿ ಕೊಟ್ಟು ಕೆಲಸ ಮಾಡಿಸಲಾರದೇ ಅರೆಹೊಟ್ಟೆ ಉಂಡು ಹಾರೆಕೋಲಿನ ಜೊತೆಗೆ ಪತ್ನಿ ಮಕ್ಕಳ ಸಹಾಯದಿಂದ ಕಾಫಿಗಿಡಗಳನ್ನು ನೆಟ್ಟು ಫಸಲು ಬರಲು ಪ್ರಾರಂಭವಾಯಿತು ಎಂದಾಗ ನಿಟ್ಟುಸಿರು ಬಿಟ್ಟು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ ಅದೆಷ್ಟೋ ಮಂದಿ ಕೊಡಗಿನ ಕಾಫಿ ತೋಟದ ಮಾಲೀಕರಾಗಿದ್ದಾರೆ ಇಂದು. ಮುಂದೆ ಲಭ್ಯತೆಯ ಅನುಸಾರ ತೋಟವನ್ನು ಪೋಷಿಸಿ ಅಧಿಕ ಆವಕ ಗಳಿಸಿದರೂ ಸಹ ಹಿಂದೆ ತಾವು ಪಟ್ಟ ಕಷ್ಟಕರವಾದ ಜೀವನವನ್ನು ನೆನೆದು ಪೈಗೆ ಪೈ ಕೂಡಿಟ್ಟು ಕೋಟ್ಯಾಧಿಪತಿ ಎನಿಸಿಕೊಂಡ ಅನೇಕ ಮಂದಿ ಕೊಡಗಿನಲ್ಲಿ ಇದ್ದಾರೆ.

ಅದೇ ರೀತಿ ನಮ್ಮಂತೆ ಬಡವರು ಹೊಟ್ಟೆ ಬಟ್ಟೆಗೆ ಇಲ್ಲದವರು ಮಕ್ಕಳು ಮರಿ ಇರುವವರು ಎಂದು ತಿಳಿದಿರುವ ಕೆಲವರು ತಮ್ಮದೇ ಕೆಲಸದವರನ್ನು ತನ್ನ ಮಕ್ಕಳಂತೆ ಕಾಣುವ ಅಲ್ಲೊಂದು ಇಲ್ಲೊಂದು ಮಾಲೀಕರು ಇರುವುದು ಸುಳ್ಳಲ್ಲ. ಇತ್ತೀಚೆಗೆ ಕೊಡಗಿನ ಬುಡಕಟ್ಟು ಜನಾಂಗದವರು ಕೊಡಗು ಬಿಟ್ಟು ಕೇರಳದ ಕಡೆಗೆ ವಲಸೆ ಹೋಗಿರುವುದರಲ್ಲಿ ಸಂಶಯ ಕೂಡ ಇಲ್ಲ. ಕೇವಲ ೫೦೦ ಕ್ಕಿಂತ ಹೆಚ್ಚಿನ ಲೆಕ್ಕಾಚಾರ ಅರಿಯದ ಅದೆಷ್ಟೋ ಮಂದಿ ೫೦೦ರ ಎರಡು ನೋಟುಗಳನ್ನು ಕಂಡು ಮತಾಂತರ ಹೊಂದಿರುವುದರ ಕುರಿತು ಮುಂದೆ ಬರೆಯುವ ಪ್ರಯತ್ನ ಮಾಡುವೆ.

ಇನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿದ ಕೊಡಗಿನ ಸ್ಥಳೀಯ ನಿವಾಸಿಗಳು ಕೂಲಿ ಕಾರ್ಮಿಕರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನಲ್ಲಿ ಇಲ್ಲ ಎನ್ನಬಹುದು. ಹೊರ ರಾಜ್ಯದಿಂದ ಬಂದು ಇಲ್ಲಿ ನೆಲೆಸಿದವರು ಅಲ್ಲಿಯೂ ಅಲ್ಲ ಇಲ್ಲಿಯೂ ಅಲ್ಲ ಎಂಬಂತೆ ಎರಡು ದೋಣಿಯಲ್ಲಿ ಕಾಲಿಟ್ಟು ಅವರ ಸ್ವಂತ ಕೆಲಸ ಹಾಗೂ ಇಲ್ಲಿಯ ತೋಟದ ಕೆಲಸಗಳ ನಡುವೆ ಮಾಯವಾಗುವುದು ತಪ್ಪಿಲ್ಲ.

ಈ ಎಲ್ಲದರ ನಡುವೆ ಬಂದವರು ಅಸ್ಸಾಮೀ ಪಟ್ಟ ಹೊತ್ತ ಬಾಂಗ್ಲಾದೇಶದ ಪ್ರಜೆಗಳು ಅಥವಾ ನಿಜವಾದ ಅಸ್ಸಾಮಿಗರು. ಕೊಡಗಿನ ಪ್ರಕೃತಿಯ ಸಂಸ್ಕೃತಿಯ ಬಗ್ಗೆ ಹಾಗೂ ಇಲ್ಲಿಯ ಪರಿಸರದ ಬಗ್ಗೆ ಇಲ್ಲಿಯ ಮಳೆ ಬೆಳೆಯ ಬಗ್ಗೆ ಅರಿವಿಲ್ಲದೇ ಕಾಲಲ್ಲಿ ತೋರಿದುದನ್ನು ಕೈಯಲ್ಲಿ ಮಾಡುವ ಕೂಲಿಕಾರರೆಂದು ಹೆಸರಾದರೂ ಕೆಲಸದ ಬಗ್ಗೆ ಅರಿವಿನ ಕೊರತೆಯ ಕಾರಣದಿಂದಾಗಿ ಯಾವ ಕೆಲಸವಾದರೂ ಅಪೂರ್ಣ ಅಥವಾ ಪರಿಪೂರ್ಣವಾದ ಕೆಲಸವಾಯಿತು ಎನ್ನುವಂತಿಲ್ಲ. ಹೋಗಲಿ ಕೆಲಸ ಕಲಿಸಿದರೂ ಮುಂದಿನ ದಿನಗಳಲ್ಲಿ ನಮ್ಮದೇ ತೋಟದಲ್ಲಿ ಕೆಲಸಕ್ಕೆ ನಿಲ್ಲುವರೆಂಬ ನಂಬಿಕೆ ನಮಗಿಲ್ಲ‌. ನಮಗೆ ಅರಿಯದ ಅವರ ಭಾಷೆ ನಮ್ಮೊಳಗಿನ ಸಂವಹನಕೆ ಸರಿಯಾದ ರೀತಿಯಲ್ಲಿ ರಹದಾರಿಯು ಆಗುವುದಿಲ್ಲ.

ಹಾಗಾಗಿ ಮಣ್ಣಿನ ಕೆಲಸಗಳಿಗಾಗಿ ಕಂಡುಕೊಂಡ ಸುಲಭದ ಉಪಾಯ ಜೆ.ಸಿ.ಬಿ. ಯಂತಹ ಬೃಹತ್ ಯಂತ್ರಗಳು. ಹಿಂದೆಲ್ಲಾ ಮಣ್ಣಿನ ಕೆಲಸವನ್ನು ಹೊರ ಜಿಲ್ಲೆಯ ಕಡೆಗಿನ ಮಣ್ಣಿನ ಕೆಲಸಗಾರರು ವಲಸೆ ಬಂದು ಅಚ್ಚುಕಟ್ಟಾಗಿ ಪೂಜೆ ಪುನಸ್ಕಾರದೊಂದಿಗೆ ಮಾಡಿ ಒಂದು ರಾತ್ರಿ ಅದೇ ಜಾಗದಲ್ಲಿ ತಮ್ಮ ಮಕ್ಕಳು ಮರಿಯೊಂದಿಗೆ ತಂಗಿದ್ದು ಮಾರನೆಯ ದಿನ ತಮ್ಮಿಂದ ದೊರಕುವ ಇನಾಮು ಪಡೆದು ಹೋಗುತಿದ್ದರು. ಕೆಲವೊಮ್ಮೆ ಅವರ ಜೊತೆಗೆ ನಮಗರಿಯದೇ  ಅದೆಷ್ಟೋ ಪದಾರ್ಥಗಳು ಹೋದ ಅನುಭವ ಕೂಡ ನಮ್ಮವರಿಗಿದೆ.  ಹೆಚ್ಚಿನ ವೇಳೆಯಲ್ಲಿ ಅವರ ಕೆಲಸ ಕೂಡ ಪರಿಪೂರ್ಣ ಅಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇರಲಿ ಬಿಡಿ ಕೆಲಸದಲ್ಲಿ ಪರಿಪೂರ್ಣ ಎಂಬುದು ಯಾವುದೂ ಇಲ್ಲ ಅಲ್ವೇ. ಅದಕ್ಕೆ ಹಿರಿಯರು ಹೀಗೆ ಹೇಳಿದ್ದಾರೆ. ತಾನು ಮಾಡಿದ್ದು ಉತ್ತಮ ಮಗ ಮಾಡಿದ್ದು ಮಧ್ಯಮ ಆಳು ಮಾಡಿದ್ದು ಎಲ್ಲಾ ಹಾಳು ಎಂದು.

ವಿಷಯ ಎಲ್ಲೆಲ್ಲೋ ಹೋಯಿತು. ಹಿಂದೆ ತೋಟದ ಬೇಲಿಗಾಗಲಿ ಕೆರೆ ಕಟ್ಟೆ ಕಟ್ಟಡಗಳು ಬಾವಿ ಏರಿ (ತೆವರಿ) ರಸ್ತೆ ಇತ್ಯಾದಿ ಯಾವುದೇ ಕಾರಣದಿಂದ ಹುಲ್ಲು ಹಾಸಿನ ಮಣ್ಣನ್ನು ಅಗೆದು ತಮ್ಮ ಅವಶ್ಯಕತೆಯ ಕೆಲಸ ಮುಗಿದ ಕೂಡಲೇ ಮಣ್ಣು ಸವಕಳಿಯಾಗದಂತೆ ದೂರ ದೂರದಿಂದ ಸ್ಥಳೀಯ (ಗಮನಿಸಿ ಲಾನ್ ಗೆ ಬಳಸುವ ಹುಲ್ಲು ಹಾಸಲ್ಲ) ಜೋಂಡು ಹುಲ್ಲುಹಾಸಿನ ಹೆಪ್ಪುಗಳನ್ನು ತಂದು ಹೊಸ ಮಣ್ಣಿನ ಮೇಲೆ ಮುಚ್ಚಿ ಮಣ್ಣು ಸವಕಳಿಯ ಪ್ರಮಾಣವನ್ನು ಕಡಿಮೆಗೊಳಿಸುವ ಕೆಲಸ ಮಾಡುತಿದ್ದರು. ಇದು ಕೇವಲ ಮಣ್ಣು ಸವಕಳಿ ಮಾತ್ರವಲ್ಲ ಹುಲ್ಲು ಹಾಸಿನ ಹೆಪ್ಪುಗಳ ಮಧ್ಯೆ ಪರಸ್ಪರ ಬೇರು ಬಿಟ್ಟು ಮಣ್ಣು ಜರಿಯುವುದನ್ನು ಕೂಡ ತಡೆಯುತ್ತದೆ ಎಂಬುದು ಅಷ್ಟೇ ಸತ್ಯ.

ಈಗ ಜೇಸಿಬಿ ಅತ್ತ ಕಡೆಗೆ ಹೋದ ನಂತರ ಖರ್ಚು ವೆಚ್ಚ ಹಣ ಜೋಡಣೆಯ ಬಗ್ಗೆ ಚರ್ಚಿಸುತ್ತಾ ಮಣ್ಣಿನ ಸವಕಳಿಯ ಬಗ್ಗೆ ಅದನ್ನು ತಡೆಗಟ್ಟುವ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಈ ಬಗ್ಗೆ ಮಾಲೀಕನಲ್ಲದೇ ಜೇಸಿಬಿಯವರು ಚಿಂತಿಸಬೇಕಾದ ಅಗತ್ಯ ಕೂಡ ಇಲ್ಲ. ಮುಂದೆ ಮಣ್ಣು ಸವಕಳಿಯಾಗಿ ನಡೆಯುವ ಎಲ್ಲಾ ತೊಂದರೆಗಳಿಗೂ ಮಾಲೀಕರು ಜವಾಬ್ದಾರಿ ಎನ್ನುವ ಮಾತು ಸುಳ್ಳಲ್ಲ.

ಇನ್ನು ರಸ್ತೆಯ ವಿಸ್ತರಣೆಯ ಕಾರ್ಯದಲ್ಲಿ ಇದೆಲ್ಲವನ್ನು ನಿರೀಕ್ಷಿಸಲಾಗುವುದಿಲ್ಲ . ರಸ್ತೆಯ ಕೆಲಸ ಅರ್ಧದಷ್ಟು ಮುಗಿಯುವ ಮುನ್ನವೇ ರಾಜ್ಯಾಡಳಿತ ಹಾಗೂ ವಾಹನಗಳ ಚಾಲಕರು ಯಾವಾಗ ರಸ್ತೆಯ ಮೂಲಕ ಚಲಿಸುವ ಅವಕಾಶ ಮಾಡಿಕೊಡುತ್ತಾರೆಂದು ಕಾಯುತ್ತಿರುತ್ತಾರೆ. ರಸ್ತೆಯ ಕೆಲಸ ಮುಗಿಯುವ ಮುನ್ನವೇ ತಮ್ಮ ಸಮಯಾನುಸಾರ ರಸ್ತೆ ಉದ್ಘಾಟಿಸಿಲು ಆಡಳಿತದ ಅವಧಿಯಲ್ಲಿರುವ ಸಚಿವರು ತುದಿಗಾಲಲ್ಲಿ ನಿಂತಿರುತ್ತಾರೆ. ಹಾಗಾಗಿ ಇಲ್ಲಿ ಹುಲ್ಲೆಪ್ಪು ಸೊಪ್ಪು ಇವಕ್ಕೆಲ್ಲ ಸೊಪ್ಪು ಹಾಕುವವರು ಯಾರಿಲ್ಲ. ರಸ್ತೆಯ ಅಂಚು ಜರಿದಾಗಲೇ ಮತ್ತೆ ರಸ್ತೆಯ ಕೆಲಸ ಮಾಡಿದವರ ನೆನಪಾಗುವುದು.  ಆದರೆ ಈ ಬಾರಿಯ ಬರೆ ಕುಸಿತ ಸಾದಾರಣ ೬೦,೭೦ ವರ್ಷದಿಂದ ಚೆನ್ನಾಗಿದ್ದ ರಸ್ತೆಗೂ ವಿಸ್ತರಿಸಿದೆ. ಇತ್ತೀಚೆಗೆ ಕೆಲಸ ಪೂರ್ಣಗೊಂಡ ರಸ್ತೆಯ ಅಂಚು ಕೂಡ ಕುಸಿದಿದೆ. ಅದರಲ್ಲೂ ಮಡಿಕೇರಿ ಮಂಗಳೂರು ರಸ್ತೆಯ ಅಂಚು ಇಂದೂ ಕೂಡಾ ಕುಸಿಯುವುದನ್ನು‌ ಕಣ್ಣಾರೆ ಕಂಡಂತಾಯಿತು.

ಇಷ್ಟೆಲ್ಲಾ ಕಂಡ ಮೇಲೂ ಮಳೆಯ ಅರ್ಭಟದ ಜೊತೆಗೆ ಸಾಥ್ ನೀಡಿದ ಮೇಲ್ಕಂಡ ಎಲ್ಲರ ಪಾಲು ಇದೆಯೆನ್ನುವುದರಲ್ಲಿ ಅನುಮಾನ ನಿಮಗೇನಾದರೂ ಇದೆಯೇ. ನನಗಂತೂ ನಾವು ಪ್ರತಿಯೊಬ್ಬರೂ ಈ ದುರಂತಗಳಿಗೆ ಕಾರಣರು ಎಂದು ಖಡಾಖಂಡಿತವಾಗಿ ನಂಬಿರುತ್ತೇನೆ. ನಮ್ಮ ತಪ್ಪುಗಳನ್ನು ಎಣಿಸುವ ಮೂಲಕ ನಾವೇನೂ ಸಾಧಿಸಿದಂತಾಗದು. ನಡೆದುದು ನಡೆದಾಗಿದೆ ಅವಲೋಕನ ಕೂಡ ಅಗತ್ಯವಿರುವ ವಿಷಯವೆನಿಸಿತು. ಈಗ ಮುಂದೆ ನಡೆಯಬೇಕಾಗಿರುವ ವಿಷಯಗಳ ಬಗ್ಗೆ ಒಂದಷ್ಟು ಮಾತುಗಳನ್ನು ಆಡಲೇಬೇಕಾದ ಅನಿವಾರ್ಯತೆ ಇದೆ.

ಮೊದಲಿಗೆ ಕೊಡಗಿನ ಬಗ್ಗೆ ಕೊಡಗಿನ ದುರಂತದ ಬಗ್ಗೆ ಕರುಣಾಮಯಿ ಕರುನಾಡಿನ ಜನತೆ ಇಟ್ಟಿರುವ ಪ್ರೀತಿಗೆ ಕಾಳಜಿಗೆ ತಾವೆಲ್ಲರೂ ಜಾಲತಾಣದ ಮೂಲಕವಾಗಲಿ ( ಕೇವಲ ಒಂದು ಪೋನ್ ಸಂಖ್ಯೆಯನ್ನು ಒಂದಷ್ಟು ಜನರು ಅಲ್ಲೆಲ್ಲೋ ಸಿಕ್ಕು ಬಿದ್ದಿದ್ದಾರೆ ದಯವಿಟ್ಟು ಇದನ್ನು ಹಂಚಿಕೊಳ್ಳುವ ಮುಖಾಂತರ ಸಹಾಯ ಮಾಡಿ ಎಂದು ಫೇಸ್ ಬುಕ್ ನಲ್ಲಿ ಹಾಕಿದ ಮರುಕ್ಷಣ ಆ ಸುದ್ದಿ ಕಲ್ಬುರ್ಗಿ ಜಿಲ್ಲೆಯಲ್ಲಿರುವ ಸಿದ್ದರಾಮ ಹೊನ್ಕಲ್ ರವರು ತಮ್ಮ ಪರಿಚಯದ ಎಂಟ್ಹತ್ತು ಟಿವಿ ಚಾನಲ್ ಗೆ ಕಳುಹಿಸಿ ಅದನ್ನು ನಾವು ನೀವೆಲ್ಲರೂ ಕೇವಲ ಹತ್ತು ನಿಮಿಷಗಳ ಅವಧಿಯೊಳಗೆ ನಮ್ಮದೇ ಮನೆಯಲ್ಲಿ ಕುಳಿತು ನೋಡುವ ಮತ್ತು ಅದೇ ಸುದ್ದಿಯನ್ನು ಹಂಚಿಕೊಳ್ಳುವ ವ್ಯವಸ್ಥೆ. ಅದೇ ಸುದ್ದಿಯನ್ನು ತಿಳಿದ ಜಾಗ್ರತಾ ದಳದವರು ಗುರಿಯತ್ತ ಧಾವಿಸುವ ಪರಿ ಇವೆಲ್ಲವೂ ಜಾಲತಾಣದ ಮುಖಾಂತರ ಮಾತ್ರ ಸಾಧ್ಯವೆಂದು ನಾವೆಲ್ಲರೂ ಅರಿಯಬೇಕಾಗಿದೆ) ಅಲ್ಲದೇ  ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಪಂದಿಸಿದ ರೀತಿಗೆ ಕೊಡಗಿನ ಜನತೆಯ ಪರವಾಗಿ ಕೊಡಗಿನ ಜಿಲ್ಲಾಡಳಿತದ ಪರವಾಗಿ ನನ್ನ ವೈಯಕ್ತಿಕವಾಗಿ ನಿಮಗೆಲ್ಲರಿಗೂ ಧೀರ್ಘ ದಂಡ ನಮಸ್ಕಾರಗಳನ್ನು ಅರ್ಪಿಸಲೇಬೇಕಿದೆ.

ಹೊರಗಿನಿಂದ ಬಂದ ಆಹಾರ ಧಾನ್ಯ ಇನ್ನಿತರ ಪ್ರಮುಖ ದಿನಬಳಕೆಯ ವಸ್ತುಗಳ ನಿರ್ವಹಣೆಯಲ್ಲಿ ಹಲವಾರು ಅಪಸವ್ಯಗಳು ನಡೆದಿವೆ ಎಂದು ಹಾಗೂ ದಾನಿಗಳು ನೀಡುವ ವಸ್ತುಗಳನ್ನು ಕೇಂದ್ರ ಸ್ಥಾನ ತಲುಪುವ ಮೊದಲೇ ಅಪಹರಣ ಮಾಡಿ ತಮ್ಮ ಸ್ವಂತಕ್ಕೆ ಬಳಸುವ ಮೂಲಕ ದುರ್ಬಳಕೆ ಮಾಡಿಕೊಂಡಿರುವರು ಎಂದು ಜಾಲತಾಣದ ಮೂಲಕ ವಿಷಯಗಳು ಹರಿದಾಡುತ್ತಿವೆ. ಎಷ್ಟು ಸತ್ಯವೋ ಮತ್ತೆಷ್ಟು ಮಿಥ್ಯವೋ ತಿಳಿಯದಾಗಿದೆ.

ಮುಂದುವರಿದು ಈಗ ಕೊಡಗಿನ ಸಂತ್ರಸ್ತರಿಗೆ ನೆರವು ಬೇಕಾಗಿರುವುದು ಕೇವಲ ಆಹಾರ ಸಾಮಾಗ್ರಿಗಳು ಮಾತ್ರವಲ್ಲ. ಮುಂದುವರಿದು  ಅವರದೇ ಆಸ್ತಿಯನ್ನು ಮನೆಯನ್ನು ಕಳೆದುಕೊಂಡ ಊರು ಕೇರಿ ರಸ್ತೆಯಂತಹ ಮೂಲಭೂತ ಸೌಕರ್ಯಗಳ ಪುನರ್ನಿರ್ಮಾಣ ಕಾರ್ಯವನ್ನು ಮಾಡಬೇಕಾಗಿದೆ. ಅದಕ್ಕಾಗಿ ಅಪಾರವಾದ ಹಣಕಾಸಿನ ಅಗತ್ಯ ಕೂಡ ಇದೆ. ಹೊರ ಜಿಲ್ಲೆಯ ಜನರು ಕೊಡಗಿನ ಸಂತ್ರಸ್ತರಿಗೆ ನೆರವು ನೀಡಲು ಮನ ಮಿಡಿಯುತ್ತಿರುವುದು ನಮ್ಮ ಅರಿವಿಗೆ ಬರುತ್ತಿದೆ. ಆದರೆ ಉಹಾಪೊಹಗಳ ಮಹಾ ಪ್ರಚಾರದ ನಡುವೆ ನಾವು ಸಂತ್ರಸ್ತರಿಗೆ ನೇರವಾಗಿ ನೆರವು ನೀಡುತ್ತೇವೆ ಎಂದು ಆಲೋಚಿಸುವವರೂ ಇದ್ದಾರೆ. ಕೆಲವು ಕಂಪನಿಗಳು ತಾವು ಗ್ರಾಮವನ್ನು ದತ್ತು ತೆಗೆದುಕೊಳ್ಳುವ ನಿರ್ಧಾರವನ್ನು ಕೂಡ ಮಾಡುತ್ತಿದ್ದಾರೆ.

ಆದರೆ ಮಹಾಮಳೆಯು ಇನ್ನೂ ತನ್ನ ಕಾರ್ಯಾಚರಣೆಯನ್ನು ಮುಗಿಸಿರುವುದಿಲ್ಲ. ಕೊಡಗಿನ ವಾಡಿಕೆಯ ಮಳೆಗಾಲ ಇನ್ನೂ ಒಂದು ತಿಂಗಳ ಕಾಲದವರೆಗೂ ಮುಂದುವರಿಯುವ ಸಂಭವವಿದೆ. ಮಳೆ ನಿಂತು ಬಿಸಿಲಿನ ಆಗಮನದ ನಂತರದಲ್ಲಿ ಮಾತ್ರ ರಸ್ತೆಯ ಅಥವಾ ಬೇರಾವುದೇ ಪುನರ್ನಿರ್ಮಾಣ ಕಾರ್ಯವನ್ನು ಮಾಡಲು ಸಾಧ್ಯ.
ಹಾಗಾಗಿ ಇಂದು ಕೊಡುವೆ ನಾಳೆ ಕೊಡುವೆ ಎಂಬುವವರು ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಯ ಮೂಲಕ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಹಣ ಸಂದಾಯ ಮಾಡಬೇಕಾಗಿ ಕೋರಿಕೆ. ಮತ್ತು ತಾವೇ ನೇರವಾಗಿ ಸಂತ್ರಸ್ತರಿಗೆ ನೆರವು ನೀಡಲು ಅಥವಾ ಗ್ರಾಮದ ದತ್ತು ಸ್ವೀಕಾರ ಮಾಡುವ ಮನವಿರುವವರು ದಯವಿಟ್ಟು ಕನಿಷ್ಠ ಇನ್ನೂ ಒಂದು ತಿಂಗಳವರೆಗೆ ಮತ್ತಷ್ಟು ಹೆಚ್ಚಿನ ಪ್ರಮಾಣದ ಸಂಪತ್ತನ್ನು ಕ್ರೋಢೀಕರಿಸಿ ಸಿದ್ದಗೊಳ್ಳಲು ಈ ಮೂಲಕ ಕೋರಿಕೆ.

ಎಂದೆಂದಿಗೂ ತಮ್ಮವ
ವೈಲೇಶ ಪಿ ಯೆಸ್ ಕೊಡಗು
೨೫/೮/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು