ಮನೆ ಮನೆ ಕವಿಗೋಷ್ಟಿ
ಆತ್ಮೀಯ ಬಂಧುಗಳೇ
ಹಾಗೆ ನೋಡಿದರೆ ೨೫೩ ನೇಯ ಮನೆ ಮನೆ ಕವಿಗೋಷ್ಟಿ ಮಡಿಕೇರಿ ತಾಲೂಕಿನಲ್ಲಿರುವ ಅಭ್ಬಿಪಾಲ್ಸ್ ನಲ್ಲಿ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ನಡೆಯಬೇಕಿತ್ತು.
ಕಾರಣಾಂತರದಿಂದ ಮೇ ತಿಂಗಳಲ್ಲಿ ನಡೆಸುವುದು ಎಂದಾಯಿತು. ಚುನಾವಣಾ ದಿನಾಂಕ ನಿಗದಿಯಾಗುವ ಮುನ್ನವೇ ಕವಿಗೋಷ್ಟಿ ದಿನಾಂಕ ನಿಗದಿಯಾಯಿತು. ಚುನಾವಣಾ ಸಮಯವಾದ್ದರಿಂದ ಜೊತೆಗೆ ಮಳೆಯ ಪ್ರಾರಂಭದ ದಿನಗಳು ಆಗಿದ್ದರಿಂದ ನನ್ನ ಮನದಲ್ಲಿ ಹೆಮ್ಮೆಯ ಜೊತೆಗೆ ಒಂದು ಕಡೆ ಆತಂಕವಿತ್ತು. ಹಾಗಾಗಿ ರಾಜಾಸೀಟಿನಲ್ಲಿ ನಡೆಯಬೇಕಾದ ಕವಿಗೋಷ್ಟಿಯನ್ನು ಮಡಿಕೇರಿಯಲ್ಲಿ ೧೪೪ ನೇ ಸೆಕ್ಷನ್ ಜಾರಿ ಇರುವ ಕಾರಣದಿಂದಾಗಿ ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ಮೇಲೆ ನಡೆಸುವುದು ಎಂದು ತೀರ್ಮಾನ ಮಾಡಿದೆವು.
ನಿಗದಿತ ಸಮಯದಲ್ಲಿ ಎಲ್ಲರೂ ಒಟ್ಟು ಸೇರಿ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ದರ್ಶನದ ನಂತರ ಬ್ರಹ್ಮಗಿರಿ ಬೆಟ್ಟ ಹತ್ತತೊಡಗಿದೆವು. ಆದರೆ ಭಾನುವಾರ ಆದ ಕಾರಣ ಪ್ರವಾಸಿಗರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಸೇರಿದ್ದರು. ಬೆಟ್ಟ ಹತ್ತಲು ಮೆಟ್ಟಿಲುಗಳ ಮೇಲಿನಿಂದ ಇಳಿಯುವವರು ಹತ್ತುವವರ ನಡುವೆ ಪೈಪೋಟಿ ಏರ್ಪಟ್ಟಂತೆ ಇತ್ತು. ಹಾಗಾಗಿ ಕೆಲವರು ಬೆಟ್ಟದ ಮೇಲೆ ಹತ್ತಲಾಗದೇ ಕೆಳಗೆ ಉಳಿದರು. ಹತ್ತಿದವರು ಅಲ್ಲೊಂದು ಮನೆ ಮನೆ ಕವಿಗೋಷ್ಟಿ ಬಳಗದ ಕವಿಗೋಷ್ಟಿ ನಡೆಸಿ ಇತಿಹಾಸ ನಿರ್ಮಾಣ ಮಾಡಿದೆವು.
ನಂತರ ಮಡಿಕೇರಿಗೆ ತಲುಪುವ ಸಮಯದಲ್ಲಿ ಭಾರಿ ಭರ್ಜರಿ ಮಳೆಯ ಸ್ವಾಗತ ನಮಗೆ. ಊಟ ಮುಗಿಸಿ ರಾಜಾಸೀಟಿಗೆ ಆಗಮಿಸುವ ವೇಳೆಗೆ ಮತ್ತೆ ಆರ್ಭಟಿಸಿದ ಮಳೆಯನ್ನೇ ತಾಳ ಮೇಳವನ್ನಾಗಿಸಿಕೊಂಡು ಮರದ ಬುಡದಲ್ಲಿ ಕವಿಗೋಷ್ಟಿ ಮುಗಿಸಿದೆವು.
ಈ ಕವಿಗೋಷ್ಟಿಗೆ ಕೊಡಗಿನ ಕೆಲವು ಕವಿಗಳನ್ನು ಆಹ್ವಾನಿಸಿದ್ದೆವಾದರೂ ಮೇಲ್ಕಂಡ ಕೆಲವು ನ್ಯೂನತೆಯಿಂದಾಗಿ ಜೊತೆಗೆ ಕವಿಗೋಷ್ಟಿಯೊಂದಿಗೆ ಪ್ರವಾಸಿ ತಾಣಗಳ ವೀಕ್ಷಣೆ ಇದ್ದ ಕಾರಣ ಸರಿಯಾದ ಸಮಯ ಸರಿಯಾದ ಸ್ಥಳವನ್ನು ನಿಗದಿ ಮಾಡಲಾಗದೇ ಹೋದೆವು. ಅದಕ್ಕಾಗಿ ಕೊಡಗಿನ ಕವಿಮಿತ್ರರುಗಳನ್ನು ಕ್ಷಮೆ ಕೇಳುತ್ತಿರುವೆ. ಈ ನಡುವೆ ಭಾಗಮಂಡಲದ ಗೆಳೆಯ ಬಿಬಿಕೆ ತಾವೂರು ಇವರ ಸಹೋದರಿಯ ಮದುವೆ ಕಾರ್ಯಕ್ರಮಕ್ಕೆ ಬೇಟಿ ನೀಡಲು ಮರೆತು ಹೋದೆವು.
ಬೆಂಗಳೂರಿನ ಉದ್ಯಮಿಗಳು ನಮ್ಮ ಆತ್ಮೀಯ ಗೆಳೆಯರಾದ ನಾರಾಯಣರವರು ಹಾಗೂ ರಾಜೇಶ್ ಪಿ ಇವರು ಗೆಳೆಯ ದೇಸು ಆಲೂರು ಇವರೊಂದಿಗೆ ದಿನ ಮುಂದಾಗಿ ಆಗಮಿಸಿ ನಮ್ಮೆಲ್ಲರ ಜೊತೆಗೆ ಅತ್ಯಂತ ಉತ್ಸಾಹದಿಂದ ಉತ್ಸವ ಎಂಬಂತೆ ಜೊತೆಗೂಡಿ ಸಂಭ್ರಮಿಸಿದರು.
ರಾಜಾಸೀಟಿನಲ್ಲಿ ಕವಿಗೋಷ್ಟಿ ಸಮಯದಲ್ಲಿ ಮಳೆ ಬಂದ ಕಾರಣ ಮನೆ ಮನೆ ಕವಿಗೋಷ್ಟಿಯು ಮಳೆ ಮಳೆ ಕವಿಗೋಷ್ಟಿಯಾಗಿ ಮಾರ್ಪಾಡು ಹೊಂದಿ ಎಲ್ಲರೂ ಸಂತಸದಿಂದ ಕುಣಿದು ಕುಪ್ಪಳಿಸಿದರು ಮಿಕ್ಕುಳಿದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಮುಂದಿನ ದಿನಗಳಲ್ಲಿ ಆಗಮಿಸುವುದಾಗಿ ತಿಳಿಸುತ್ತಾ ಹಾಸನದ ಕಡೆಗೆ ಕವಿಮಿತ್ರರು ಮುಖ ಮಾಡಿದರು.
ಯಾರು ಈ ಗೆಳೆಯ ದೇಸು ಆಲೂರು ಎಂದರೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ದೇವಮ್ಮ ಸುತ = ದೇಸು
ಅದೊಂದು ಸುದಿನ ಗೆಳೆಯ ದೇಸುವಿನ ಪರಿಚಯವಾಯಿತು. ಆಗ ನಾವಿಬ್ಬರೂ ಪರಸ್ಪರ ಪರಿಚಯವಷ್ಟೇ ದಿನಗಳೆದಂತೆ ಗೆಳತನ ಗಾಢವಾಗುತ್ತಾ ಬಂತು. ಪರಸ್ಪರ ನಮ್ಮ ಕವಿತೆಗಳನ್ನು ತಿದ್ದಿಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳುತಿದ್ದೆವು. ಒಂದು ದಿನ ನಿವ್ಯಾಕೆ ಮನೆ ಮನೆ ಕವಿಗೋಷ್ಟಿ ಬಳಗ ಸೇರಬಾರದು ಎಂದು ಹೇಳಿದವರೇ ಸಂಚಾಲಕರಾದ ಕೊಟ್ರೇಶ್ ಉಪ್ಪಾರ್ ರವರ ಬಳಿ ಮಾತನಾಡಿ ಒಂದು ಅಮೂಲ್ಯವಾದ ಬಳಗಕ್ಕೆ ಸೇರಿಸಿದರು.
ಅಂತೂ ಪ್ರವಾಸ,ಕವಿಗೋಷ್ಟಿ ವಿಜೃಂಭಣೆಯಿಂದ ಜರುಗಿತು.
ವೈಲೇಶ ಪಿ ಯೆಸ್ ಕೊಡಗು
೧೫/೫/೨೦೧೮
Comments
Post a Comment