ಗಿರಿಜಮ್ಮ ಬುವಿಗೆ ಬಾರಮ್ಮ

ಗಿರಿಜಮ್ಮ ಬುವಿಗೆ ಬಾರಮ್ಮ
~~~~~~~~~~~~~~~

ಗಿರಿಜಮ್ಮ ಭೂಮಿಗೆ ಬಾರಮ್ಮ
ಜತೆಯಲಿ ಗಂಗೆಯು ಬರಲಮ್ಮ
ಅವನಿಗೆ ಬಾರದೆ ಗಂಗಮ್ಮ
ಬುವಿಯ ಹಸಿರು ಬಾಡಿಹುದಮ್ಮ ||ಪ||

ಮರೆತೆಯಾದರೆ ಗಣಪಗೆ ತಿಳಿಸಿ
ಶಿವನ ಬಳಿಗೆ ಬಸವನ ಕಳುಹಿಸಿ
ಗಂಗೆಯ ಜೊತೆಗೆ ಬರುವೆ ಎಂದ್ಹೆಳಿಸಿ
ಕರುಣಾ ಮೂರುತಿ ಪತಿ ಮನ ಒಲಿಸಿ ‌||೧||

ನದಿಗಳು ನಲಿದ ನುಲಿಯದೇ ಹೋದವು
ಕೆರೆಗಳು ಅರಿಯದೇ ಕರಗೇ ಹೋದವು
ಬೆಳೆಗಳು ಬೆಳೆಯದೇ ಒಣಗಿ ಮರುಗಿ
ಶಿವನ ವಾಹನ ಬಸವನ ಮರೆತವು ||೨||

ಅಮರರು ನಾವು ಎಂದೇ ತಿಳಿದು
ಶತಮಾನದ ಮರ ಬರಿದೇ ಕಡಿದು
ಭೋಗ ವೈಭೋಗಕೆ ತಿಂದು ಕುಡಿದು
ಅರಿಯದ ರೋಗಕೆ ಬಲಿ ಮಡಿದು   ||೩||

ಕಷ್ಟದಿ‌ ಕೆಲವರು ದುಡಿಯದೆ ಹೋದರು
ಏಳೇಳು ಜನುಮಕೂ‌ ಕೂಡಿಟ್ಟು ಕೆಟ್ಟರು
ಕಷ್ಟಕೆ ಹೋದರೆ ಏನೊಂದು ಕೇಳರು
ಮತದ ಬೇಟೆಗೆ ಬರಿದೇ ಬಿಸುಟರು ||೪||

ನೇಸರ ತಾಳದೆ ತನ್ನಯ ದಾಹವ
ಸುಡುತಿಹನಮ್ಮ ಜಗದ ಜಲವ
ಅರಿಯದೆ ಮಾನವ ಆಗಿ ದಾನವ
ಮುಗಿಸಿಹ ಕೇಳೇ ಅಂತರ್ಜಲವ ||೫||

ನಾವೇ ಮಾಡಿದ ತಪ್ಪನು‌ ಮನ್ನಿಸಿ
ನಿಮ್ಮಯ ಮಕ್ಕಳ ಏಳಿಗೆ ಗಮನಿಸಿ
ಮಿತಹಿತ ಹದದೀ ಮಳೆಯ ಸುರಿಸಿ
ಜಗವನು ಕಾಯೇ ಕರುಣೆಯ ತೋರಿಸಿ ||೬||

ವೈಲೇಶ ಪಿ ಯೆಸ್ ಕೊಡಗು
ಕರಾರಸಾಸಂಸ್ಥೆ ಮಡಿಕೇರಿ ಚಾಲಕ
೨೪/೮/೨೦೧೭

ಎಲ್ಲಾ ಮಿತ್ರಾತ್ಮೀಯರೆ ತಮಗೂ ತಮ್ಮ ಕುಟುಂಬ ವರ್ಗದವರಿಗೂ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ತಮ್ಮೆಲ್ಲರ ಪರವಾಗಿ ತಾಯಿ ಗಿರಿಜೆಯಲ್ಲಿ ನನ್ನ ಬೇಡಿಕೆ ಇಷ್ಟೇ. ಜಗವೆಲ್ಲ ನಗುತಿರಲಿ ಜಗದಳುವು ಎನಗಿರಲಿ‌  ಎಂಬಂತೆ ಮಳೆ ಬೆಳೆ ಹಸನಾಗಿರಲು ಹದವರಿತು ಮಳೆ ಬರಲಿ ಎಂದಷ್ಟೇ. ಕಳೆದ ಮೂರು ವರ್ಷಗಳ ಮಳೆಯ ಸ್ಥಿತಿ ಕರುಣಾಜನಕ ಮುಂದಾದರೂ ಕಾಯೋ ಜಗರಕ್ಷಕ  ಗೌರಿಸುತ ಗಣಪ.

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು