ಸರ್ಕಾರಿ ಕನ್ನಡ ಶಾಲೆ ಉಳಿಸಿ
ಸರ್ಕಾರಿ ಕನ್ನಡ ಶಾಲೆ ಉಳಿಸಿ
~~~~~~~~~~~~~~~
ಭಯಾನಕ ಅವರ ಪೀಸು ಪೋಸು ಮೇಳ
ಲಕ್ಷ ಲಕ್ಷ ಕಟ್ಟಿಸಿಲು ಮಿಥ್ಯೆಯ ಮುತ್ತುಗಳ
ಪೋಣಿಸಿ. ಬಿಕ್ಷೆ ಎತ್ತಿದಂತೆ ಬರೆಸಿದ ಬಿಲ್ಲುಗಳು
ಸಾವಿಗೂ ಭಯ ಖಾಸಗಿಯವರ ಶಾಲೆಗಳು
ನೋಟ್ಸ್ ಪೆನ್ಸಿಲ್ ಪೆನ್ನು ವಾಹನ ಸಿಂಗಾರ
ಸಮವಸ್ತ್ರ ಬೂಟು ಬ್ಯಾಗು ಟ್ಯಾಗು ಚೌರ
ಊಟ ತಿಂಡಿ ವಸತಿ ಎಲ್ಲಾ ಇಲ್ಲಿ ವ್ಯಾಪಾರ
ಬದುಕಬಾರದು ತಾವಲ್ಲದೆ ಎಂಬ ಹುನ್ನಾರ
ದೋಚಿ ಬಾಚಿದ ಕಂತೆ ಕಂತೆ ಗರಿಗರಿ ಹಣ
ಅದನ್ನೇ ಬಳಸುವರೇನು ಸುಡಲಿವರ ಹೆಣ
ಸ್ವಂತ ಆಸ್ತಿಯೇನೋ ಎಂಬಂಥ ನೌಕರರು
ನಿಂತರು ಕೂತರು ಇವರ ದೊಡ್ಡ ತಕರಾರು
ಕೋಟಿ ಕೊಟ್ಟು ವಿದ್ಯೆ ಕಲಿಸಿ ಬಂದುದೇನು
ಎಲ್ಲವನು ಉರು ಹೊಡೆದು rank ಅಲ್ವೇನು
ಬಾಯಲ್ಲಿ ಎಲ್ಲಾ ಗೊತ್ತು ಕೃತಿಯಲಿ ಸೊನ್ನೆ
ವ್ಯವಹಾರ ಜ್ಞಾನವಿಲ್ಲದ ವಿದ್ಯೆ ಇರದಿದ್ದರೇನು
ನಮ್ಮ ಶಾಲೆ ಅದು ಸರಕಾರಿ ಕನ್ನಡ ಶಾಲೆ
ನಮ್ಮ ಕ್ಲಾಸಿಗೆ ಬಾಲಕರಿಪ್ಪತ್ತು ಆರೇ ಬಾಲೆ
ಎರಡು ಕೊಠಡಿ ನಾಲ್ಕು ತರಗತಿ ಒಟ್ಟು ತಲೆ
ನೂರಿಪ್ಪತೈದು ಮತ್ತೆ ಉಪಾಧ್ಯಾಯರ ಬಲೆ
ಕಸ ಕಿತ್ತೆಸೆದು ನೆಲಬಾವಿಯ ನೀರು ತಂದು
ನಾವೇ ಮಾಡಿದ ಗೋಧಿ ಉಪ್ಪಿಟ್ಟು ತಿಂದು
ಮನೆಗೆಲಸವದು ಅಮ್ಮನ ಸಹಾಯವಿಲ್ಲದ್ದು
ಅದೇನಚ್ಚರಿಯೋ ಐದಕ್ಕೆ ಪಾಸಾಗಿ ಬಂದಿದ್ದು
ಟೀಚರ್ ಜೊತೆ ಜೊತೆಗೆ ಅವರ ಮಕ್ಕಳು
ನಮಗಂತು ಅವರೇ ಸಕಲಕೂ ಸಹಪಾಠಿಗಳು
ಅವರ ನೆಪದಲಿ ನಮಗೂ ಎರಡೆರಡು ಪಾಠ
ತಪ್ಪಿಸಿಕೊಂಡು ಹೋಗಲಿಲ್ಲ ನಾವಾಡಲು ಆಟ
ಶೂಟು ಬೂಟಿಲ್ಲದೆ ಪ್ರಾಥಮಿಕ ಮಾದರಿ
ಪ್ರೌಢಶಾಲೆ ಅದ್ಹೇಗೆ ಮುಗಿದು ಹೋಯಿತು
ಸರಕಾರಿ ಶಾಲೆಯ ಕಲಿಕೆ ನೌಕರಿ ತಂದಿತು
ಅದೇಕೊ ಇಂದೆಲ್ಲಾ ಹಾಗೇಯೇ ನೆನಪಾಯ್ತು
ಕಾನ್ವೆಂಟ್ ವ್ಯಾಮೋಹ ಆಚೆಗೆ ಇಟ್ಟು ಬಿಡಿ
ಮಕ್ಕಳೇ ಸರ್ಕಾರಿ ಕನ್ನಡ ಶಾಲೆಗೆ ಹೆಜ್ಜೆಯಿಡಿ
ಸಿರಿಗನ್ನಡವಾಗಲಿ ನಮ್ಮ ನಿಮ್ಮೆಲ್ಲರ ನುಡಿ
ಸರ್ಕಾರದ ಕನ್ನಡ ಶಾಲೆಗಳನು ಉಳಿಸಿಬಿಡಿ
ವೈಲೇಶ ಪಿ ಯೆಸ್ ಕೊಡಗು
೧೮/೭/೨೦೧೮
Comments
Post a Comment