ಕವಿ ಕಾವ್ಯ ಸಂಭ್ರಮ
ಬಹು ವರ್ಷಗಳ ನಿರೀಕ್ಷೆ ಒಂದಷ್ಟು ಪುಸ್ತಕಗಳನ್ನು ಮಸ್ತಕಕ್ಕೆ ಇಳಿಸಿ ಮತ್ತಷ್ಟು ಅಕ್ಷರಗಳ ಜೊತೆಗೆ ಆಟವಾಡುತ್ತಾ ಕಡಲೊಡಲಿನ ಜಲಸಂಪತ್ತಿನ ಹನಿಯಲ್ಲಿ ಒಂದು ಸೂಜಿಮೊನೆಯಷ್ಟು ಕವನಗಳನ್ನು ಮಸ್ತಕದಿಂದ ಪುಸ್ತಕಕ್ಕಿಳಿಸಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಪ್ರೋತ್ಸಾಹಿಸಿದ ಎಲ್ಲಾ ಮಿತ್ರವರ್ಗದವರಿಗೆ ಮೊದಲಿಗೆ ವಂದಿಸುತ್ತೇನೆ.
ಶಿಲ್ಪಕಲೆಗಳ ನಾಡು ಶಾಸನದ ತವರು ಮೇರು ಕವಿ ಬಳಗವನ್ನು ನೀಡಿದ ಇಂದಿಗೂ ಕೂಡ ಉತ್ಕೃಷ್ಟ ಮಟ್ಟದ ಹಿರಿಯ ಕವಿಗಳ ಜೊತೆಗೆ ನವ ಕವಿಗಳನ್ನು ನೀಡುತ್ತಿರುವ ಹಾಸನದ ಸುಮನಸ್ಸುಗಳೆದುರು ನನ್ನ ಚೊಚ್ಚಲ ಕೃತಿ "ಅಮ್ಮ ನಿಮಗಾಗಿ" ಲೋಕಾರ್ಪಣೆ ಮಾಡಲಾಯಿತು.
ಜೊತೆಗೆ ಗೆಳೆಯ ದೇಸು ಆಲೂರು ಅವರ "ಮೌನ ಸಂಗ್ರಾಮ" ಹಾಗೂ "ಪಮ್ಮಿ" ಹಾಗೆ ಮಿತ್ರರಾದ ವಿನಯ ಚಂದ್ರ ಇವರ "ಮೌನ ಗೀತೆ" ಕೂಡ ಕೃತಿಕಾರರ ಅನುಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿತು.
ಅದಕ್ಕೂ ಮುನ್ನ ಮೈಸೂರಿನ ಖ್ಯಾತ ಸಾಹಿತಿ ಜಯಕವಿ( ಜಯಪ್ಪ ಹೊನ್ನಾಳಿ) ಇವರ ಅಧ್ಯಕ್ಷತೆಯಲ್ಲಿ ರಾಜ್ಯಾದ್ಯಂತ ಹಾಗೂ ಹೊರ ರಾಜ್ಯವಾದ ಕಾಸರಗೋಡಿನ ಕವಯತ್ರಿ ಸೇರಿ ಒಟ್ಟು ೯ ಕವಯತ್ರಿ ಹಾಗೂ ಕವಿಗಳ ಆಯ್ದ ಕೃತಿಗಳಿಗೆ
ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಂತರ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಕವಿ ಕವಯತ್ರಿಯರಿಂದ ರಾಜ್ಯ ಮಟ್ಟದ ಕವಿಗೋಷ್ಟಿಯು ನಡೆಯಿತು.
ಹಾಸನದ ಖ್ಯಾತ ಮಾಣಿಕ್ಯ ಪ್ರಕಾಶನ ಸಂಸ್ಥೆ ಹಾಗೂ ಮನೆ ಮನೆ ಕವಿಗೋಷ್ಟಿ ಬಳಗದ ಮುಖ್ಯ ಸಂಚಾಲಕರು ಆದ ಕೊಟ್ರೇಶ್ ಉಪ್ಪಾರ್ ರವರ ಸಾಹಸ ಅದ್ಭುತ ಯಶಸ್ಸನ್ನು ಗಳಿಸಿತು.
ಆ ಮುಖಾಂತರ ನಮ್ಮ ಕವನ ಸಂಕಲನಗಳು ಲೋಕಾರ್ಪಣೆಗೊಂಡು ನಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಯಿತು.
ಅಂದಿನ ಕಾರ್ಯಕ್ರಮದಲ್ಲಿ ಕೈಜೋಡಿಸಿದ ಎಲ್ಲಾ ಸ್ಥಳೀಯ ಸಂಘ ಸಂಸ್ಥೆಗಳಿಗೆ ಧನ್ಯವಾದಗಳು.
ಮನೆ ಮನೆ ಕವಿಗೋಷ್ಟಿ ಬಳಗದ ಸರ್ವ ಸದಸ್ಯರಿಗೂ ಅನಂತ ಧನ್ಯವಾದಗಳು.
ದೂರದ ಊರುಗಳಿಂದ ಆಗಮಿಸಿ ತಮ್ಮ ಕವನಗಳನ್ನು ವಾಚಿಸಿದ ಎಲ್ಲಾ ಆತ್ಮೀಯ ಕವಿಮನಗಳಿಗೂ ಧನ್ಯವಾದಗಳು.
ಆತ್ಮೀಯ ಬಂಧುಗಳೇ
ಆ ದಿನ ನನ್ನ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದ ಶ್ರೀನಾಥ್ ಕೆ ಎ ರವರು ನನ್ನ ಕವನ ಸಂಕಲನದ ಲಘು ವಿಮರ್ಶೆ ಮಾಡಿದ್ದಾರೆ. ಓದಿ ತಮ್ಮ ಅಭಿಪ್ರಾಯ ತಿಳಿಸಿ
ಅಮ್ಮ ನಿಮಗಾಗಿ ಪುಸ್ತಕ ವಿಮರ್ಶೆ
~~~~~~~~~~~~~~~~~~
ಭಾವಪೂರ್ಣ ಕವಿತೆಗಳ ಹೂರಣ ‘ಅಮ್ಮ ನಿಮಗಾಗಿ” : ಅಕ್ಷರ ಬುಕ್‍ಹೌಸ್ ಹಾಸನದ ಮಾಲೀಕ ಶ್ರೀನಾಥ್'ರವರು ವಿಮರ್ಶೆ ಮಾಡಿದ್ದಾರೆ ಹಾಗೇಯೇ ಒಮ್ಮೆ ಕಣ್ಣಾಡಿಸಿ ಮಿತ್ರರೇ.
ಹಾಸನ : ಸಮಸ್ತ ಜೀವ ಸಂಕುಲಗಳ ಅಮ್ಮನ ಗಮ್ಯತೆಯನ್ನು "ಅಮ್ಮ ನಿಮಗಾಗಿ" ಕೃತಿಯಲ್ಲಿ ಕಾಣಬಹುದಾಗಿದೆ. ಇಲ್ಲಿ ಕವಿಗಳು ಬದುಕಿನ ವಿಸ್ತಾರತೆಯ ಓಘವನ್ನು ಓದುಗನೆದೆಗೆ ತಲುಪಿಸುವಲ್ಲಿ ಸಫಲತೆ ಪಡೆದಿವೆ. ಈ ದಿಸೆಯಲ್ಲಿ ವೈಲೇಶ್‍ರವರ ಬರವಣಿಗೆ ಸಾರ್ಥಕತೆ ಪಡೆದಿದೆ ಎಂದು ಅಕ್ಷರ ಬುಕ್‍ಹೌಸ್ ಹಾಸನದ ಮಾಲೀಕರಾದ ಶ್ರೀನಾಥ್ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ದಿನಾಂಕ ೧/೭/೨೦೧೮ ರಂದು ಮಾಣಿಕ್ಯ ಪ್ರಕಾಶನ (ರಿ), ಹಾಸನ ವತಿಯಿಂದ ನಡೆದ ೪ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಕವಿ ವೈಲೇಶ್ ಪಿ.ಎಸ್.ಕೊಡಗುರವರ “ಅಮ್ಮ ನಿಮಗಾಗಿ” ಚೊಚ್ಚಲ ಕವನ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿ ಕಾವ್ಯ ನಮ್ಮ ನಿತ್ಯದ ಬದುಕಿನಲ್ಲಿ ಸಮ್ಮಿಳಿತಗೊಂಡಿದೆ. ಪ್ರತಿಯೊಬ್ಬರಲ್ಲಿ ಭಾವನೆಗಳು ಹುದುಗಿದ್ದರೂ ಕವಿಯಾಗಲು ಸಾಧ್ಯವಿಲ್ಲ. ಅಂದರೆ ಬರವಣಿಗೆಯ ಚೌಕಟ್ಟಿನಲ್ಲಿ ಅದೂ ಕಾವ್ಯದಲ್ಲಿ ಹಿಡಿದಿಡುವುದು ಅಸಾಧ್ಯ. ಇದನ್ನು ಸಾಧ್ಯತೆಯ ಮಜಲಿನಲ್ಲಿ ತಂದು ನಿಲ್ಲಿಸಿರುವುದು ಕವಿ ವೈಲೇಶ್ ಪಿ.ಎಸ್.ಕೊಡಗುರವರು. ಇವರ ಕವಿತೆಗಳು ಅಪಾರ ಶ್ರದ್ಧೆ, ಸಾಮಾಜಿಕ ಕಳಕಳಿ, ಪ್ರಕೃತಿಯ ಕಾಳಜಿಯ ಬಗ್ಗೆ ಬೆಳಕು ಚೆಲ್ಲಿವೆ ಎಂದರು.
ಈ ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರವಿ ನಾಕಲಗೂಡು, ಸಾಹಿತಿಗಳಾದ ಜಯಕವಿ ಮೈಸೂರು, ಜಿಲ್ಲಾ ವಾರ್ತಾಧಿಕಾರಿ ವಿನೋದಚಂದ್ರ, ಖ್ಯಾತ ವೈದ್ಯರಾದ ಡಾ.ಎ.ಸಾವಿತ್ರಿ, ಕೊಟ್ರೇಶ ಎಸ್.ಉಪ್ಪಾರ್, ಎನ್.ಎಲ್.ಚನ್ನೇಗೌಡ, ಕ.ಸಾ.ಪ.ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಅಕ್ಷರ ಬುಕ್ ಹೌಸ್ ಮಾಲೀಕರಾದ ಶಿವಕುಮಾರ್, ಪತ್ರಕರ್ತರಾದ ಲೀಲಾವತಿ, ನಾಗರಾಜ್ ಹೆತ್ತೂರ್, ಸಮಾಜ ಸೇವಕರಾದ ತಮ್ಲಾಪುರ ಗಣೇಶ್, ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಜಿ.ಓ.ಮಹಾಂತಪ್ಪ, ಪ್ರಕಾಶಕಿ ದೀಪಾ ಉಪ್ಪಾರ್, ಕವಿಗಳಾದ ದೇಸು ಆಲೂರು, ವೈಲೇಶ್ ಪಿ.ಎಸ್.ಕೊಡಗು ಉಪಸ್ಥಿತರಿದ್ದರು.
ಡಿ.ಸುಜಲಾದೇವಿ, ವಾಣಿಮಹೇಶ್, ಜಯಂತಿ ಚಂದ್ರಶೇಖರ್, ದ್ಯಾವನೂರು ಮಂಜುನಾಥ, ವಾಸು ಸಮುದ್ರವಳ್ಳಿ ವೇದಿಕೆ ನಿರ್ವಹಣೆ ಮಾಡಿದರು.
ಶ್ರೀ ನಾಥ್
ಮಾಲೀಕರು
ಅಕ್ಷರ ಬುಕ್ ಹೌಸ್ ಹಾಸನ
Comments
Post a Comment