ಗಝಲ್ ೩೯

ಗಝಲ್ : ೩೯
~~~~~~~~
ನವ ಮಾಸ ನಲುಗಿ ಹೊತ್ತು ಹೆತ್ತು ಸಲಹಿದರೆ ತಾಯಿಯೆಂದು ಹೇಳುವಿರಾ
ಹೆರದೇ ಹೊರದೇ ತಳ ಬುಡಗಳ ತೊಳೆದಕ್ಕನನು ಮತ್ತೇನೆಂದು ಹೇಳುವಿರಾ

ಎಡವಿಬಿದ್ದು ಹೆಬ್ಬೆರಳು ಕಿತ್ತಾಗ ಅತ್ತು ಕರೆದು ಅಕ್ಕರೆಯಿಂದ ಗೋಳಾಡಿದಳು
ಮರೆಯದೇ ಮದ್ದು ಮುದ್ದು ಅರೆದ ತಂಗಿಯನು ಅಮ್ಮನೆಂದು ಹೇಳುವಿರಾ

ಕಷ್ಟ ಸುಖದ ಹಾದಿಯ ಇರುಳ ಕತ್ತಲನೆ ತೊಡೆದವರು ಹಾದಿ ದೀಪವಾದವರು
ಹೆತ್ತೊಡಲ ಒಡಹುಟ್ಟಿಗೆ ಚಿಕ್ಕ ದೊಡ್ಡಮ್ಮನೆಂದಲ್ಲದೇ ಯಾರೆಂದು ಹೇಳುವಿರಾ

ಬಾಳು ಬೆಳಕಾಗಲೆಂದು ಮನೆಗೆ ಬಂದು ಹಣತೆಯ ಹದವಿಟ್ಟು ಹಚ್ಚಿದಳವಳು
ಹೆಣ್ಣು ಹೊನ್ನು ಕಣ್ಣುಗಳ ಕೊಟ್ಟತ್ತೆಯವರನು ಮಾತೆಯಲ್ಲವೆಂದು ಹೇಳುವಿರಾ

ನಾಯಿಯಾದರೂ ನರಿಯಾದರೂ ಅದೊಂದು ತಾಯಿಯಲ್ಲವೇ ತನ್ನ ಮಗುವಿಗೆ
ಹೆತ್ತಮ್ಮ ಬಿಟ್ಟು ನಡೆದರೂ ತನ್ನೊಳಗೆ ಸೆಳೆದುಕೊಳ್ಳುವ ಧರೆಗೇನೆಂದು ಹೇಳುವಿರಾ 

ಹೆತ್ತವರಾರೋ ಹಾಲಿತ್ತವರಾರೋ "ಸಿಡಿಲ"ನ ಮಡಿಲಲ್ಲಿ ಮಲಗಿಸಿ ಕಾದವರಾರೋ
ಅಮ್ಮನಿದ್ದರೂ ಹೊತ್ತು ಹೊತ್ತಿಗೆ ತುತ್ತನಿತ್ತವರ ದೇವಮಾತೆಯೆಂದು ಹೇಳುವಿರಾ.

ವೈ.ಕೊ.
೧/೮/೨೦೧೮

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು