ವಿಗ್ರಹವಾಗು
ವಿಗ್ರಹವಾಗು
~~~~~~~
ಏಕದಿನ ಉತ್ಸವ ಮೂರ್ತಿ ಮೆರೆಯಿಸಿ
ಹಾರವ ಹೊತ್ತು ಕುಣಿದು ಕುಪ್ಪಳಿಸಿ
ಮರುದಿನ ಮರೆಯದೇ ಅಟ್ಟ ಸೇರಿಸಿ
ವರುಷವೆಲ್ಲಾ ಕೊರಗುವುದು ದೈನೇಸಿ
ರಂಗು ರಂಗಿನ ಅಲಂಕಾರದಿ ಕುಳಿತು
ತ್ರಿದಶ ಕಾಲ ವಿಜೃಂಭಣೆಯು ಬೆರೆತು
ಹನ್ನೊಂದಾದರೆ ಜಲತರಂಗದಿ ಕಲೆತು
ಮೆಲ್ಲನೆ ಜಲದ ಪಂಕದೊಳು ಎರಗಿತು
ನಿಜ ಮೃತ್ತಿಕೆಯಾದೊಡೆ ಮರು ವರ್ಷಕೆ
ಅವಗಾಹನೆಗೆ. ವಿಹೀನ ತ್ಯಾಜ್ಯವದೇತಕೆ
ಕೊಳೆತು ಆಸರೆಯಾದಂತೆ ಕ್ರಿಮಿಕೀಟಕೆ
ಸರ್ವವೂ ಇಂತೇ ನಿಂತಿದೆ ಅರಿಯೆ ಏಕೆ
ಸಾವಿರ ಉಳಿ ಪೆಟ್ಟು ತಿಂದು ವಿಗ್ರಹವಾದೆ
ತುಂಬಿದ ಕೊಡದಂತೆ ಮನ ಮೌನವಾಗಿದೆ
ಗರ್ಭಗುಡಿಯ ದೇವನೇ ನೀನೆಂಬಂತಿರದೆ
ಹುಲುಮಾನವ ಇನಿತು ಸುಮ್ಮಗಿರಬಾರದೆ
ವೈಲೇಶ ಪಿ ಯೆಸ್ ಕೊಡಗು
೨/೫/೨೦೧೮
Comments
Post a Comment