ಮುತೈದೆ ಮಡಿಲು
ಮುತೈದೆ ಮಡಿಲು
~~~~~~~~~~
ವಸಂತನೊಲುಮೆಗೆ ಉಲಿಯಿತು ಕೋಗಿಲೆ
ಭವ ಸಂತಸದಿ ಲತೆಗಳು ನುಲಿದವು ಆಗಲೇ
ಗಿರಿಶೃಂಗದ ಅಂಗಳದಲಿ ಭೃಂಗದ ಗಾಯನ
ವನಸುಮಗಳೆದೆಯಲಿ ಶೃಂಗಾರ ಶಯನ
ಮಾಮರದೊಳು ಹೊನ್ನಿನ ಬಣ್ಣದ ತೋರಣ
ಬೇವಿನ ಹೂವಿನೊಳು ಬೆಲ್ಲದ ಸಿಹಿಯಾಲಿಂಗನ
ಹೊಂಗೆಯ ನೆರಳಿಗೆ ಹೊಸ ತಂಪಿನ ಹೂರಣ
ಭೂದೇವಿಯೊಡಲಿಂದು ನವಚಿಗುರಿಗೆ ಕಾರಣ
ಹಸಿರು ಚಿಗುರು ಉಸಿರು ಬಿಗಿದು ನಿಂತಿರಲು
ಧರೆಗೆ ಇಳಿದ ಮಳೆಗೆ ಮತ್ತೆ ಕಳೆ ಕಟ್ಟುತಿರಲು
ವಸುಂಧರೆ ನಗುನಗುತಾ ಮೈಮನ ಮರೆತಿರಲು
ಜೀವ ಸಂಕುಲಕೆ ಬದುಕಿನಾಸೆ ಚಿಗುರುತಿರಲು
ಸೀಮಂತದ ಸಿರಿತನಕೆ ನಾಚಿ ನಿಂತವಳೆ ಇಳೆ
ಮುತೈದೆ ಮಡಿಲಲಿ ಹಲ ಬಗೆಯ ಕನಸುಗಳೆ
ಮೈ ತುಂಬಿದ ಬಸುರಿಯ ಬಯಕೆಯು ಧರೆಗೆ
ಚಿಂತೆಯ ಸಂತೆಯದು ಕೋಟಿ ಮಕ್ಕಳ ಒಳಿತಿಗೆ
ವೈಲೇಶ ಪಿ ಯೆಸ್ ಕೊಡಗು
೩/೪/೨೦೧೮
Comments
Post a Comment