ಗಝ಼ಲ್ : ೨೮
ಗಝ಼ಲ್ : ೨೮
~~~~~~~~
ಬಿಲ್ಲನೆತ್ತಿ ಎಲ್ಲವ ಗೆಲ್ಲಬಲ್ಲ ರಾಮನೇಕೋ ಇಂದು ಸುಮ್ಮನಾಗಿಹನೇ
ಸೀತಾಮಾತೆಯನು ಮಾರೀಚ ಮತ್ತೆ ಕೆಣಕಲೆಂದು ಕಾಯುತ್ತಿರುವನೇ
ಹೊತ್ತು ಹೊತ್ತಿಗೆ ನಮಾಜ್ ಮಾಡಿದರೂ ಅಲ್ಲಾ ನಮ್ಮವರ ಕಾಯಲಿಲ್ಲ
ಎಷ್ಟು ಕರೆದರೂ ಬರಲಾರದ ರಹೀಮ ಎಲ್ಲವನೂ ನೋಡುತ್ತಿರುವನೇ
ಗೊಮ್ಮಟೇಶ್ವರನ ಮಹಾ ಮಸ್ತಕಾಭಿಷೇಕ ಸಾಂಗಾವಾಗಿ ಮುಗಿದಿದೆ
ಜಳಕದಿಂದ ಪುಳಕಗೊಂಡ ಜಿನ ಹಗಲಿರುಳೆನ್ನದೇ ನಿದ್ರಿಸುತ್ತಿರುವನೇ
ನಿದ್ದೆಯಿಂದೆದ್ದ ಬುದ್ಧದೇವನ ನುಡಿಗಳು ಜಗವ ತಿದ್ದುವುದಾಗಲಿಲ್ಲವೇಕೆ
ತನ್ನ ಮಾತಿಗೆ ಬದ್ಧಗೊಳ್ಳದವರನು ಕಂಡ ಬುದ್ಧ ಕೋಪಗೊಂಡಿರುವನೇ
ಅದೆಷ್ಟು ಆಸ್ತಿ ಪಾಸ್ತಿ ಇದ್ದರೂ ಮನುಜ ಮನದ ದುರಾಸೆಗೆ ಮಿತಿಯಿಲ್ಲ
ನಮಗೆಂದು ಎಲ್ಲವ ಕೊಟ್ಟ ಶಿವ ಮಸಣದಲಿ ಬಿಮ್ಮನೆ ಮಲಗಿರುವನೇ
ಯೇಸುವಿಗೆ ಮೋಂಬತ್ತಿಯ ಬೆಳಕು ಕಣ್ಣು ಕೋರೈಸುವಂತಿದೆ ಅಲ್ಲವೇ
ತನ್ನವರ ಅನಾಚಾರಗಳನು ಕಂಡೂ ಕಾಣಿಸದಂತೆ ಕಣ್ಣು ಮುಚ್ಚಿರುವನೇ
ಧರ್ಮದ ತಿರುಳರಿಯದವರಿಂದ ಧರ್ಮದ ರಕ್ಷಣೆ ಸಾಧ್ಯವೆನಿಸುವುದೇ
ಸಕಲ ಧರ್ಮದ ಏಕೈಕ ಮಂತ್ರ ಶಾಂತಿ ಎಂದು ಮನುಜ ಅರಿಯದಾದನೇ
ಧರ್ಮ ಮರೆತು ಅಧರ್ಮದ ಹಾದಿಯ ನಡೆಯನು ಸಹಿಸಲಾರದಾಗಿದೆ
ಕಲಿಯು ಇದೆಲ್ಲಾ ಕಂಡು ಲೋಕ ನಿರ್ಮೂಲನಕೆ ಸಮಯ ಕಾದಿರುವನೇ
ಸಿಡಿಲನ ಮನದ ಭಾವನೆಯು ಧರ್ಮವಾವುದು ಮಿಗಿಲಲ್ಲ ಎಂಬುದಷ್ಟೇ
ಸಕಲ ಧರ್ಮಕೂ ಮಿಗಿಲಾದ ಧರ್ಮ ಮಾನವ ಧರ್ಮ ಎಂದೆಂಬುವವನೇ
ವೈಲೇಶ ಪಿ ಯೆಸ್ ಕೊಡಗು
೨/೪/೨೦೧೭
Comments
Post a Comment