ಯುಗಾದಿ ಚಿಗುರು
ಯುಗಾದಿ ಚಿಗುರು
============
ಮುತ್ತು ರತ್ನ ವಜ್ರ ವೈಢೂರ್ಯಗಳೆ ರಾಶಿಗೊಂಡಂತೆ
ದಡಂಮುಚ್ಚೆ ಸಾಲ್ಗೊಂಡಿಹವು ಮಾವು ಬೇವು
ಹೊಂಗೆ ತುಂಗೆಯ ಗಂಗೆಯಾ ತಟದೋಳ್
ಕನ್ನಡಿವಿಡಿದ ತೆರದಿನೆಸೆಯಲ್ಕೆ ಕಾಣ್ಪುದದೋ
ಮಿರಿಮಿರಿಯೆಲೆಯ ಚಿಗುರು ಮರಂಗಳ್
ಸರತಿಯಿಲ್ಲದ್ ರೆಂಬೆಕೊಂಬೆಂಗೆ ಟಿಸಿಲೋಡೆದ
ಹೊನ್ನಿನೋಕುಳಿಯಿಂ ಮೂಡಿರ್ದ ಚಿಗುರ್
ಕಾದಿರ್ಪುದೈ ಇಳೆಯೋಡಲ್ ಪಚ್ಚೆಪಸುರ್ಗೆ
ಅದೋ ನವಿಲೊಂದ ಕಾಣಿರೈ ಹೊಳೆಯ
ನೀರಿಂಗೆ ಬಾಗಿಹ ಟೊಂಗೆ ಮೇಲಿಹುದು.
ಹರಿವ ತಿಳಿ ಜಲದೊಳು ಬಿಂಬವ ಕಣ್ಬಿಟ್ಟು
ಕಣ್ಕಟ್ಟುವ ತೆರದಿ ದಿಟ್ಟಸಿ ನಲಿದಿಹುದು.
ಅಗೋ ನೋಡ್ ನೀರ್ವಕ್ಕಿಗಳ್ ಏಂ
ಜಲಕ್ರೀಡೆಯಿಂಚರ ಮೇಳೈಸಿ ಬಾನೆತ್ತರ
ರಮಣೀಯ ವೃಕ್ಷ ಸಂಕುಲ ವಸನ ಶೋಭೆಯಿಂ
ಕಮನೀಯ ಕುಸುಮ ಕಿಸಲಯರಾಜಿ ರಾರಾಜಿಪ
ದಿವ್ಯ ಸೌಂದರ್ಯದಿಂ ಸಕಲ ಪಕ್ಷಿ ಕಲಕಲ ತುಮುಲ
ಮಾಧುರ್ಯದಿಂ ವಸಂತನಾಗಮನ ಬಯಕೆಯಿಂ
ಕಾದಿರ್ಪುದೈ ಸಕಲ ಕಾನನ ಕುಕಿಲ ಕೂಜನಗಳುಂ
ಕಟ್ಟಿಹವೈ ನವ ಚಿಗುರುಂಗಳಿಂ ನವ ತೋರಣವಂ
ಗಿರಿಶಿಖರದಂಗುಲದಂಗುಲವು ಮಂಗಲ
ಕಾಡು ದೈವದಾಬೀಡು ಗಿರಿಮುಡಿ ಶಿವಗುಡಿ
ಏರಿಹುದು ಪ್ರಕೃತಿಮಾತೆಯ ದಿವ್ಯದಾ ಮುಡಿ
ವಸಂತನೊಲವಿಗಿಲ್ಲವೈ ಕಾಡುನಾಡಿನಾಗಡಿ
ಸಂತನಾಗಿಹನೈ ವಸಂತ ಪ್ರಕೃತಿಯೊಡಗೂಡಿ
ವೃಕ್ಷಗಳಿಂ ಕಳಚಿದೆಲೆಗಳ್ ಧರೆಗುರುಳಿ ಮಕ್ಕಳ್
ಹಕ್ಕಿಪಕ್ಕಿಗಳಿಗಾಶ್ರಯವಂ ಈಯಬಯಸಿದಾ
ಮಾತೆ ಮೇರುವೃಕ್ಷತಡಿಯಲ್ಲಡಗಿ ಮಳೆಜಲವಂ
ಕಾಯ್ಯುದೈ ರವಿಕಿರಣಕ್ಕೆದುರ್ನಿಂದು ತಾನರಿಯದೆಲೆ
ಕಾಯಕದಿ ಕರಗಿ ತಾಯಿಗಾಹಾರವಾದವಂ ತರಗೆಲೆಗಳ್
ಎನಿತು ಸೊಗಸಿರ್ಪ ವಸಂತನಾಗಮನವಂ
ಬಣ್ಣಿಸಲೆಂತು ಧರೆಯೊಳ್ ಯುಗಕ್ಕೊಂದು
ಜನನವಂ ಯುಗಕ್ಕೊಂದು ಮರಣವಂ ಪಡೆದು
ಯುಗ ಯುಗಾದಿಯಿಂ ನವಯುಗಾದಿಯಂ
ತರುತಿರ್ಪ ವಸಂತಗೆ ಜಯತು ಜಯವೆನ್ನಿರೈ.
ವೈಲೇಶ ಪಿ ಯೆಸ್ ಕೊಡಗು
26/03/2017.
Comments
Post a Comment