ಗಝ಼ಲ್ : ೨೩
ಮತ್ಲಾಗಳನ್ನು ಸೇರಿಸಿ ಮಾಡಿದ ಗಝ಼ಲ್ ಈ ರೀತಿಯ ಗಝ಼ಲ್ ಒಂದನ್ನು ನನ್ನ ಗಝ಼ಲ್ ಗುರುಗಳಾದ ಗೋವಿಂದ ಹೆಗಡೆಯವರು ಈ ಹಿಂದೆ ಬರೆದಿದ್ದರು.
ನನ್ನ ಪುಟ್ಟ ಪ್ರಯತ್ನವಿದು. ಹೇಗೆ ಸ್ವೀಕರಿಸಿದರೂ ಓದುಗ ಮನಕ್ಕೆ ಅರ್ಪಣೆ.
ಗಝ಼ಲ್ : ೨೩
ಎಲ್ಲಿ ಅಡಗಿತ್ತಿದು ಕಣ್ಣು ಕಟ್ಟಿ ಕತ್ತಲೆಗೆ ಬಿಟ್ಟಂತೆ ಸುರಿದ ಮಳೆ
ನವ ನಲ್ಲೆಗೆ ನವ ನಲ್ಲ ಬಯಸಿ ಸಿಹಿ ಮುತ್ತನಿತ್ತಂತೆ ಸುರಿದ ಮಳೆ
ಕನಸಲೂ ಕಾಣದ ಭಾವನೆಗಳು ನನಸಾಗಿ ಹರಿದಂತೆ ಸುರಿದ ಮಳೆ
ಅಕಾಲಿಕವೇ ಆದರೂ ಇಳೆಯ ತಣಿಸುವ ವರದಂತೆ ಸುರಿದ ಮಳೆ
ಬೆರಗಿನ ಬದುಕಿದು ಅರಗಿಸುವ ಮುನ್ನ ಕನಸಂತೆ ಸುರಿದ ಮಳೆ
ಮುಂಜಾನೆ ಮಂಜಿಗೆ ಉದುರಿದ ಮಲ್ಲಿಗೆಯಂತೆ ಸುರಿದ ಮಳೆ
ಕವಿ ಮನ ಸವಿ ಸಮಯದಿ ಭಾವನೆಗಳ ಎರಚಿದಂತೆ ಸುರಿದ ಮಳೆ
ಒಲುಮೆಯ ಮನದೊಳಗೆ ಸರಸಮಯ ನುಡಿಯಂತೆ ಸುರಿದ ಮಳೆ
ಸಕಾಲಿಕವೇ ಆದರೂ ಜಗವ ಕೊಚ್ಚಿ ಕೊಂಡೊಯ್ದಂತೆ ಸುರಿದ ಮಳೆ
ನೆನಪುಗಳ ಮೆರವಣಿಗೆಯು ಆಷಾಢದ ಸೋನೆಯಂತೆ ಸುರಿದ ಮಳೆ
"ಸಿಡಿಲನ" ಮನಕೆ ಹೂಮುತ್ತನಿತ್ತ ಮಗುವ ಮನದಂತೆ ಸುರಿದ ಮಳೆ
ಬಾಳ ಹಾದಿಯಲಿ ಸಿಹಿ ತುಂತುರು ಹನಿ ಸಿಂಚನದಂತೆ ಸುರಿದ ಮಳೆ
ಸಿಡಿಲು
ವೈಲೇಶ ಪಿ ಯೆಸ್ ಕೊಡಗು
೧೯/೩/೨೦೧೮
Comments
Post a Comment