ಪ್ರಾಣವಾಯು
ಪ್ರಾಣವಾಯು
~~~~~~~~
ಗಾಳಿಯು ತಂಗಾಳಿಯಾಗಿ ಬಂಗಾಳ ಕೊಲ್ಲಿಯ
ಬಳಸಿ ಕಡಲ ಅಲೆಗಳಲಿ ನಲಿವ ಕಿರಣಗಳ ಬಳಿ
ಸುಳಿವ ಸುಂದರ ಹೊಂಬಣ್ಣದ ಮೀನ ಮೈಯ
ಸವರಿ ಹಡಗಿನೊಳು ಅರೆಜೀವವಾದ ಜೀವಿಯ
ತಲುಪಲಾರದೇ ಬಂದು ನಮ್ಮ ಪುಪ್ಪುಸವ ಸೋಕಿತೇ
ಪ್ರಕೃತಿ ವಾತಾವರಣವ ಪ್ರೀತಿಸುವ ಗುಂಗಿನಲಿ
ಬೆಟ್ಟ ಹತ್ತಿ ಗುಡ್ಡ ಇಳಿದು ಗಿಡಮರಗಳ ಮಡಿಲಿಂದ
ತರಗೆಲೆಗಳ ತಡಿಯಿಂದ ಕರಿ ಗುಹೆಯ ಕೊನೆಯಲಿ
ಅಡಗಿದ ತನ್ನವರನು ವನಸುಮಗಳ ಘಮಲಿಗೆಂದೇ
ಕರೆತಂದು ಆಘ್ರಾಣಿಸಿ ನಾಡಿನೆಡೆಗೆ ತೇಲುತಿಹುದೇ
ನಾವಿಲ್ಲಿ ಕವಿಗೋಷ್ಠಿ ಲಸಾಹಿತ್ಯ ಸಾಧನೆಗೆ ಸೇರಿದ
ಸಭೆಯ ಜಾತಿ ಮತ ಧಾರ್ಮಿಕ ಪಂಥಗಳ ಭೇದವಿಲ್ಲದೆ
ಹಿರಿ ಕಿರಿಯರ ಅರಿವಿಲ್ಲದೆ ಅವರ ಉಸಿರನು ಇವರಿಗೆ
ಇವರ ಘಮಲನು ಅವರಿಗಿತ್ತು ಮತ್ತೆ ಇಲ್ಲಿಂದತ್ತ
ವನ್ಯಜೀವಿ, ಬಾನಾಡಿಗಳೆಡೆ ಹಾರಿ ಹೋಗುತಿಹುದೇ
ಪ್ರಾಣ ಇರುವವರೆಗಷ್ಟೇ ನಮಗೆ ಪ್ರಾಣವಾಯು
ವಾಯುವಿನ ನಡುವೆ ನಾವಿದ್ದರೂ ನಮ್ಮೊಳಗೆ
ವಾಯುವಿಗೆಡೆಯಿಲ್ಲದಿರೆ ಮುಗಿಯಿತು ನಮ್ಮಾಯು
ಇದನರಿಯದ ನರಮಾನವ ಜಾತಿ ಮತ ಪಂಥಗಳ
ಜೊತೆಗೆ ನಾನು ನನದೆಂದು ಮೆರೆಯುತ್ತಿರುವನೇ
ವೈಲೇಶ ಪಿ ಯೆಸ್ ಕೊಡಗು
೧/೨/೨೦೧೮
Comments
Post a Comment