ಬಹುಹಿತ ಜೀವನ
ಬಹುಹಿತ ಜೀವನ
~~~~~~~~~~
ಬಾಳ ಹಾದಿಯಲಿ ಬುತ್ತಿಯು ಜೊತೆಗಿರಲಿ
ಅಪ್ಪ ಅಮ್ಮನಿತ್ತ ಬಲವೂ ನಮಗಿರಲಿ
ಆರು ಏನು ಎನುವ ತಿಳಿವದು ತಿಳಿದಿರಲಿ
ಗುರು ಹಿರಿಯರು ತಂದ ಅಕ್ಕರೆ ನಗುತಿರಲಿ ||ಪ||
ಮುದ್ದಿನ ಮಾತುಗಳ ಮಧುರಸ ನಮದಿರಲಿ
ಸುಳ್ಳು ಪೊಳ್ಳುಗಳ ಮಾಲೆಯು ಹೊರಗಿರಲಿ
ಮೋಸ ವಂಚನೆಗಳ ಸಂಚದು ನಡುಗಿರಲಿ
ಸ್ವಂತ ಬುದ್ಧಿಯೆಂಬ ಹಣತೆಯು ಬೆಳಗಿರಲಿ ||೧||
ಎದುರೆ ಇರಿಯುವಂತ ನುಡಿಯದು ಕಡೆಗಿರಲಿ
ಮಧುವ ಬೆರಸುವಂತ ನಡತೆಯು ನಡೆದಿರಲಿ
ಎಲ್ಲರೊಳು ಬೆರೆವ ಮನವು ಮನೆಮಾಡಿರಲಿ
ಬರಿದೇ ಉಸುರುವ ಚಾಳಿಯದು ದೂರಿರಲಿ||೨||
ಸಕಲಕು ಸರ್ವರನು ಶೋಷಿಪುದು ತರವಲ್ಲ
ಸ್ವಹಿತದ ಸಾಧನೆಗೆ ದೂಷಿಪುದು ಅಳವಲ್ಲ
ಬಹುಹಿತ ಜೀವನ ತ್ಯಾಗಮಯ ಆಗುವುದಲ್ಲ
ಬಹು ಜನರ ಮನದಲಿ ನಿಜದ ಅರಿವಾಗಿಲ್ಲ
ವೈಲೇಶ ಪಿ ಯೆಸ್ ಕೊಡಗು
ಚಾಲಕರು ಕರಾರಸಾಸಂಸ್ಥೆ ಮಡಿಕೇರಿ
೨/೧/೨೦೧೮
Comments
Post a Comment