ನಾ ಕೆಂಪು ಬಸ್ಸು

ನಾ ಕೆಂಪು ಬಸ್ಸು
~~~~~~~~~
ದಿನ ದಿನವೂ ದುಡಿದು ಬಸವಳಿಯುತ್ತಿದ್ದೆ
ಕ್ಷಣ ಕ್ಷಣವೂ ನಡೆದು ನಲಿದಾಡುತ್ತಿದ್ದೆ
ಹೀಗೆ ಹೋಗಿ ಹಾಗೆ ಬಂದು ಮತ್ತೆ ಮತ್ತೆ
ಬಂದು ಹೋಗಿ ದುಡಿಮೆ ಮಾಡುತ್ತಿದ್ದೆ ||ಪ||

ಯಾರೋ ಮಾಡಿದ ತಪ್ಪಿಗೆ ಕಲ್ಲೇಟು ನನಗೆ
ಅವರಿವರ ಅವಸರಕೆ ಅವಮಾನ ಅವಗೆ (ಚಾ)
ಭರತ ಖಂಡದೊಳು ಓಟ ಎಲ್ಲಾದರೇನು
ಸೌಂದರ್ಯದ ಸಿಹಿ ನೋಟ ನಾ ಬಲ್ಲೆನೇನು |

ಮೆರುಗು ನೀಡಿ ಹೆಸರಿಟ್ಟು ಕಟ್ಟಿ ಹಣೆಪಟ್ಟಿ
ಪರವಾನಗಿ ಪಡೆದು ಘಟಕಕ್ಕೆ ವಹಿಸಿ ಅಟ್ಟಿ
ಅಟ್ಟಾಡಿಸಲು ಎನಗೋ ಹಲವಾರು ಚಾಲಕ
ಏರಿದರು ಮಹಿಳೆ ಪುರುಷ ಬಾಲಕಿ ಬಾಲಕ |

ಬೇದ ಭಾವ ಎನಗಿಲ್ಲ ಮನುಜ ಕುಲದೊಳಗೆ
ಎಲ್ಲರನು ಹೊತ್ತೊಯ್ಯುವೆ ಹತ್ತಿದರೆ ನನ್ನೊಳಗೆ
ಸೇವೆಯ ಹೊರತು ಚಿಂತೆಯ ಅರಿವಿಲ್ಲ ಮಿಗೆ
ಹತ್ತಿದ ಬಳಿಕ ಚೀಟಿ ಪಡೆಯಬೇಕೆಂಬೆ ತಮಗೆ

ವಯಸ್ಸು ಆಯಸ್ಸು ಮೀರಿ ನಿಂತಿರುವೆ
ಗತಿಸಿದ ವೈಭವ ಸದಾ ನೆನೆಸುತ್ತಲಿರುವೆ
ಉಪಕಾರ ಪಡೆದವರು ಕೇಳರು ಯಾರೂ
ಗುಜರಿ ಬಸ್ಸೆಂದು ಕರೆಯುವರು ಎಲ್ಲರೂ|

ವೈಲೇಶ ಪಿ ಯೆಸ್ ಕೊಡಗು
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೭/೯/೨೦೧೭

Comments

Popular posts from this blog

ನಾ ಕಂಡಂತೆ ಕವಿ ಸಾಹಿತಿಗಳು:- ಡಾಕೇಶ್ ತಾಳಗುಂದ

ನಾ ಕಂಡಂತೆ ಕವಿ ಸಾಹಿತಿಗಳು:- ಅನುಪಮಾ ಸುಲಾಖೆ.

ಗಝಲ್ ಎಂದರೇನು