ಆದಿ ಕುಲ ದೇವಿ ಕಾವೇರಿ
ಆದಿ ಕುಲದೇವಿ ಕಾವೇರಿ
~~~~~~~~~~~~~
ವಿಶಿಷ್ಟ ಜನಾಂಗದ ಅಮ್ಮೆ ಆದಿ ಕುಲ ದೇವಿ
ಕೊಡಗಿನ ಕೊಡವರ ಮಾತೆ ಶ್ರೀ ಆದಿ ಕಾವೇರಿ
ನಿನ್ನ ಮಹಿಮೆಯ ಕಣ್ಣಾರೆ ಕಾಣಲೆಂದು ಸೇರಿ
ಬಂದಿಹೆವು ನಾವೆಲ್ಲರೂ ನಾಡ ಜನಗಳು ಸೇರಿ
ಮುನಿ ಕವೇರನ ಮುದ್ದಿನ ಮಗಳೇ ಈ ಕಾವೇರಿ
ಮುನಿ ಅಗಸ್ತ್ಯರ ಮನದ ಮೆಚ್ಚಿನ ಮಡದಿ
ಮುನಿಗಳಿಂದ ಕೇವಲ ಒಂದೇ ಭಾಷೆ ಪಡೆದಿ
ಮಾತು ತಪ್ಪಿದ ಮುನಿಯ ಬಿಟ್ಟು ನೀ ನಡೆದಿ
ಲೋಕ ಕಲ್ಯಾಣದ ಕೈಂಕರ್ಯಕ್ಕೆ ನೀನೇ ಆದಿ
ಹಸಿರಾಯಿತು ಕೊಡವರು ನಡೆದಾಡಿದ ಹಾದಿ
ಹೋಗದಿರಲೆಂದು ತಡೆಯ ಬಂದ ಕೊಡವತಿ
ಸೀರೆಯ ಸೆರಗು ಮುಂದಿನಿಂದ ಹಿಂದೆ ತಿರುಗಿ
ಸಂಪ್ರದಾಯವಾಯಿತು ಹಿಂಬದಿಯ ನೆರಿಗೆ
ವರ ನೀಡಿದೆ ಹೆಮ್ಮೆಯ ಕೊಡವ ಕೊಡವತಿಗೆ
ಮನೆ ಮನೆತನದ ಹಿರಿಮೆ ಕೊಡವತಿಯ ಕೈಗೆ
ನಿಲುಕಿದಷ್ಟು ದೂರದ ಕಡೆಗೆ ಹರಿಯುತಲಿದ್ದೆ
ತುಂಬಿ ತುಳುಕಿದವು ಕರೆ ಬಾವಿ ತೋಟ ಗದ್ದೆ
ನಿನ್ನಯ ಹೆಸರಲ್ಲಿ ಎಲ್ಲೆಲ್ಲೂ ಹಸಿರು ಹೊನ್ನು
ಪೂಜಿಸಲು ಮರೆಯುವರೇ ತಾಯಿ ನಿನ್ನನ್ನು
ಕಾರುಣ್ಯದಿ ಹರಸು ಎಲ್ಲ ಜೀವಸಂಕುಲವನ್ನು
ನಡೆದ ಹಾದಿಯಲ್ಲಿ ಉಳಿಯಿತು ಹೆಜ್ಜೆಗುರತು
ಬರದಿರಲಿಲ್ಲ ತಲಕಾವೇರಿಗೆ ಪ್ರತಿವರ್ಷ ಮರೆತು
ಆಚರಿಸುವೆವು ಸಂಕ್ರಮಣ ಸಕಲರೂ ಕಲೆತು
ಕುಂಡಿಕೆಯಲಿ ಉದಿಸಿ ನಮ್ಮ ಬೇಡಿಕೆ ಅರಿತು
ಸಂಭ್ರಮದಿಂ ಉಧ್ಘೋಷಿಸಿದೆವು ಮೈ ಮರೆತು
ನವ ವಧುವರರಿಗೆ ಸಂಕ್ರಮಣ ಸ್ನಾನವೇ ಮೊದಲು
ಕೈಹಿಡಿದು ಮುಳುಗುತಿರೆ ಕಣ್ಣು ಸಾಲದು ಕಾಣಲು
ನವ ಜೀವನಕೆ ಬೇಕಿದೆ ನಿನ್ನಯ ಘನ ಆಶೀರ್ವಾದ
ಬಾರದಿರಲಿ ಬದುಕಿನಲ್ಲಿ ಎಂದೂ ಭಾವನೆಯ ಭೇದ
ನೀನಾಗಿಸು ದಂಪತಿಗಳ ಬಾಳು ಸಮರಸ ರಸಸ್ವಾದ
ಕರ ಮುಗಿಯುವೆ ತಾಯಿ ಕರುಣಿಸು ಸಕಲರನು
ಸಮಯದಲಿ ಸುರಿಸು ಮಾತೆ ಇಳೆಗೆ ಮಳೆಯನ್ನು
ಮಾನವ ಸಹಜ ಗುಣಗಳ ಕೊಚ್ಚಿ ಕೊಂಡು ಹೋಗು
ಹೆಸರಾಗಲಿ ನಾವು ಜನಿಸಿದ ಹೆಮ್ಮೆಯ ಈ ಕೊಡಗು
ಹೆಚ್ಚಲಿ ಅನುಪಮ ಸಿರಿಯು ಹಬ್ಬಲಿ ಎಂದೆಂದಿಗೂ
ದಿಕ್ಕು ದಿಕ್ಕುಗಳಲ್ಲಿ ಶ್ರೀ ಕಾವೇರಿ ಮಾತೆಯ ಗುನುಗು
*ಸಿಡಿಲು*
*ವೈಲೇಶ ಪಿ ಯೆಸ್ ಕೊಡಗು*
ಚಾಲಕ ಕರಾರಸಾಸಂಸ್ಥೆ ಮಡಿಕೇರಿ
೧೧/೧೦/೨೦೧೭
Comments
Post a Comment